

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನಭಾಗ್ಯ ಯೋಜನೆಗೆ ಜುಲೈ 1ರಂದು ಮೈಸೂರಿನಲ್ಲಿ, ಕಲಬುರಗಿಯಲ್ಲಿ ಗೃಹಜ್ಯೋತಿಗೆ ಚಾಲನೆ ಕೊಡಲಾಗುವುದು. ಜುಲೈ 16ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ಸುತ್ತೂರು ಹೆಲಿಪ್ಯಾಡ್ನಲ್ಲಿ ಈ ಕುರಿತು ಮಾತನಾಡಿದ ಸಿಎಂ ಜೂನ್ 11ರಂದು ವಿಧಾನಸೌಧ ಮುಂಭಾಗ ಸ್ತ್ರೀ ಶಕ್ತಿ ಯೋಜನೆಗೆ ಚಾಲನೆ ಕೊಡಲಾಗುವುದು. ನಾಳ ಮಧ್ಯಾಹ್ನ 1 ಘಂಟೆ ನಂತರ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿರುತ್ತದೆ ಎಂದು ಹೇಳಿದ್ಧಾರೆ.
ರಾಜ್ಯದ ಎಲ್ಲಾ ಮಹಿಳೆಯರಿಗೆ ವೋಲ್ವೊ, ಎಸಿ, ಸ್ಲೀಪರ್, ರಾಜಹಂಸ ಹೊರತುಪಡಿಸಿ ಬೇರೆ ಎಲ್ಲಾ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಹೊರರಾಜ್ಯಕ್ಕೆ ಪ್ರಯಾಣಿಸುವವರು ರಾಜ್ಯದ ಗಡಿ ಭಾಗದವರೆಗೂ ಉಚಿತವಾಗಿ ಪ್ರಯಾಣಿಸಿ ಆ ನಂತರ ಟಿಕೆಟ್ ಪಡೆದುಕೊಳ್ಳಬೇಕು ಎಂದು ಸ್ತ್ರೀ ಶಕ್ತಿ ಯೋಜನೆ ಕುರಿತು ಮಾಹಿತಿ ನೀಡಿದ್ಧಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ, ವಿದ್ಯುತ್ ದರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸರ್ಕಾರದ ತಲೆನೋವು ನಿಮಗ್ಯಾಕೆ ನಾವು ಹೇಳಿದಂತೆ ಯೋಜನೆ ಜಾರಿ ಮಾಡುತ್ತೇವೆ. ವಿದ್ಯುತ್ ದರವನ್ನ ಪ್ರತಿ ವರ್ಷ ರೆಗ್ಯುಲೇಟರಿ ಕಮಿಷನ್ ದರ ಪರಿಷ್ಕರಣೆ ಮಾಡುತ್ತೆ. ಜೂನ್ 1 ರಿಂದ ಜಾರಿ ಮಾಡುತ್ತಾರೆ.
ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ. ಚುನಾವಣೆ ನೀತಿ ಸಂಹಿತೆಯಿಂದ ತಡೆ ಆಗಿತ್ತು. ಜೂನ್ ತಿಂಗಳಿಂದ ಅದು ಜಾರಿ ಆಗಿದೆ. ವಿರೋಧ ಪಕ್ಷಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.