ಚೆಕ್ಕಿಂಗ್​ ನೆಪದಲ್ಲಿ 50 ಕೆಜಿ ಬೆಳ್ಳಿ ಆಭರಣ ದೋಚಿದ ಪೊಲೀಸರು!

UP Police crime
Published on

ಲಖನೌ: ಕಳ್ಳ, ಕಾಕರಿಂದ ಜನರನನ್ಉ ರಕ್ಷಿಸಬೇಕಾಗಿರುವ ಪೊಲೀಸರು ಲೂಟಿಕೋರರಾದರೆ ಸಾರ್ವಜನಿಕರ ಗತಿಯೇನು ಎಂದು ಅನುಮಾನ ಮೂಡುವುದು ಸಹಜ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದ್ದು ಪೊಲೀಸ್​ ಇಲಾಖೆ ತೀವ್ರ ಮುಜುಗರಕ್ಕೀಡಾಗಿದೆ.

ಘಟನೆಯೂ ಉತ್ತರಪ್ರದೇಶದ ಔರೈಯಾದಲ್ಲಿ ನಡೆದಿದ್ದು ಪೊಲೀಸ್​ ಎಸ್​ಐ ಹಾಗೂ ಪೇದೆ ವ್ಯಾಪಾರಿ ಒಬ್ಬರಿಂದ ಸುಮಾರು 50 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ಕದ್ದು ಪರಾರಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.

ಘಟನೆಯ ಹಿನ್ನಲೆ?

ಜೂನ್​ 6ರಂದು ರಾತ್ರಿ ಭೋಗಾನಿಪುರ ಠಾಣೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಚಿಂತನ್​ ಕೌಶಿಕ್​ ಹಾಗೂ ಪೇದೆ ರಾಮ್​ಶಂಕರ್ ಯಾದವ್​ ಔರೈಯಾ ಗಡಿ ಭಾಗದಲ್ಲಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮನೀಶ್​ ಸೋನಿ ಎಂಬ ಉದ್ಯಮಿಯ ಕಾರನ್ನು ನಿಲ್ಲಿಸಿದ್ದ ಇಬ್ಬರು ಆರೋಪಿಗಳು ಚೆಕ್ಕಿಂಗ್​ ನೆಪದಲ್ಲಿ ಗಾಡಿಯಲ್ಲಿದ್ದ 50ಕೆಜಿ ತೂಕದ ಬೆಳ್ಳಿ ಆಭರಣವನ್ನು ಲಪಟಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

UP Police crime

ಜೂನ್​ 7ರಂದು ಕಾರನ್ನು ಪರಿಶೀಲಿಸಿದಾಗ ಆಭರಣಗಳು ಕಾಣದಿದ್ಧಾಗ ಉದ್ಯಮಿಗೆ ಅನುಮಾನ ಬಂದಿದ್ದು, ಈ ಕುರಿತು ಔರೈಯಾ ಹಾಗೂ ಕಾನ್ಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ವಿಷಯ ಕೇಳಿ ತಬ್ಬಿಬ್ಬಾದ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದಾರೆ.

ಸಿಕ್ಕಿಬಿದ್ದ ಖದೀಮರು

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಬ್​ಇನ್ಸ್​ಪೆಕ್ಟರ್​ನನ್ನು ಬಂಧಿಸಿ ಅವನ ಬಳಿಯಿದ್ದ 50 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ರಾಮ್​ಶಂಕರ್ ಯಾದವ್​ ತಲೆಮಾರಿಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಔರೈಯಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚಾರು ನಿಗಮ್​, ಕಾನ್ಪುರ ಎಸ್​ಪಿ ಬಿಬಿಜಿಟಿಎಸ್ ಮೂರ್ತಿ ಸಮ್ಮುಖದಲ್ಲಿ ಉದ್ಯಮಿ ಮನೀಶ್​ ಸೋನಿ ಅವರಿಗೆ ಬೆಳ್ಳಿ ಆಭರಣಗಳನ್ನು ಹಿಂತಿರುಗಿಸಲಾಗಿದೆ. ಆರೋಪಿ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net