

ಬೆಂಗಳೂರು:ರಾಜ್ಯಾದ್ಯಂತ ಗಮನ ಸೆಳೆದಿದ್ದ ಅಬಕಾರಿ ಇಲಾಖೆ ವರ್ಗಾವಣೆ ದಂಧೆ ತಡೆಗೆ ಅಂಕುಶ ಹಾಕಿರುವ ಸರ್ಕಾರ, ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಸಿದ್ಧಪಡಿಸಿರುವ ಕರಡು ಅನ್ನು ಶುಕ್ರವಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ತರುವಾಯ ಕರಡುನ್ನು ಪರಿಗಣನೆ ತೆಗೆದುಕೊಳ್ಳಲಾಗುತ್ತದೆ. ರ್ನಿದಿಷ್ಟಪಡಿಸಿದ ಅವಧಿ ಮುನ್ನ ಕರಡಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ವಿಧಾನಸೌಧ, ಬೆಂಗಳೂರು&01ಗೆ ಕಳುಹಿಸಬಹುದು.
ಕರಡು ನಿಯಮದ ಅಧಿಸೂಚನೆ ಪ್ರತಿಯನ್ನು ಅಧಿಕಾರಿ, ಸಿಬ್ಬಂದಿ ಗಮನಕ್ಕೆ ತರಲು ಮತ್ತು ನಾಮಲದಲ್ಲಿ ಪ್ರಕಟಿಸುವಂತೆ ಇಲಾಖೆ ಆಯುಕ್ತರು ಅಪರ ಆಯುಕ್ತರು(ಜಾರಿ ಮತ್ತು ಅಪರಾಧ),ಅಬಕಾರಿ ಜಂಟಿ ಆಯುಕ್ತರಿಗೆ ಮತ್ತು ಅಬಕಾರಿ ಉಪ ಆಯುಕ್ತರಿಗೆ ಸೂಚಿಸಲಾಗಿದೆ. ವರ್ಗಾವಣೆಯಲ್ಲಿ ಸುಧಾರಣೆ ಮತ್ತು ನಿಯಮಾಧಾರಿತ ವರ್ಗಾವಣೆ ಮೂಲಕ ಪಾರದರ್ಶಕತೆ ತರಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಕರ್ನಾಟಕ ನಾಗರಿಕ ಸೇವೆಗಳು (ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು, 2025ಕ್ಕೆ ಒಪ್ಪಿಗೆ ನೀಡಲಾಗಿತ್ತು. ಇದೀಗ ಸರ್ಕಾರ, ಅಧಿಕೃತವಾಗಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.
ಇಲಾಖೆ ಹುದ್ದೆಗಳನ್ನು ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕೇತರ ಎಂದು ವಿಂಗಡಿಸಲಾಗಿದೆ. ಐದು ವರ್ಷಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ ಅಬಕಾರಿ ಜಂಟಿ ಆಯುಕ್ತರು, ಉಪ ಆಯುಕ್ತರು, ಅಧೀಕ್ಷಕರು, ನಿರೀಕ್ಷಕರು ಮತ್ತು ಉಪ ನಿರೀಕ್ಷಕರನ್ನು ಸದರಿ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವುದೂ ಸೇರಿ ಇತರೆ ನಿಯಮಗಳನ್ನು ಜಾರಿಗೆ ತರಲಾಗಿದೆ. ಇಲಾಖೆಯ ವಿವಿಧ ವೃಂದದ ಅಧಿಕಾರಿಗಳು ಮತ್ತು ನೌಕರರು ನಿಯೋಜಿಸಿರುವ ಹುದ್ದೆಯಲ್ಲಿ ಪೂರೈಸಬೇಕಾದ ಕನಿಷ್ಠ ಸೇವಾ ಅವಧಿಯನ್ನು ಉಲ್ಲೇಖಿಸಲಾಗಿದೆ.
ಹುದ್ದೆಗಳ ವಿಗಂಡನೆ:
ಕಾರ್ಯನಿರ್ವಾಹಕ ಹುದ್ದೆಗಳು: ಅಬಕಾರಿ ಉಪ ಆಯುಕ್ತರು ಕಚೇರಿ ಕೇಂದ್ರಸ್ಥಾನ ಬೆಳಗಾವಿ, ಅಬಕಾರಿ ವಿಭಾಗ ಕಚೇರಿ, ಜಿಲ್ಲಾ ಕಚೇರಿ, ವಲಯ ಕಚೇರಿ, ಅಬಕಾರಿ ತನಿಖಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ "ಎ', ವೃಂದದ ಉಪ ಆಯುಕ್ತರು, ಜಂಟಿ ಆಯುಕ್ತರು, ಅಧೀಕ್ಷಕರು, ಗ್ರೂಪ್ "ಬಿ' ವೃಂದದ ಉಪ ಅಧೀಕ್ಷಕರು, ಗ್ರೂಪ್ "ಸಿ' ವೃಂದದ ನಿರೀಕ್ಷಕರು, ಉಪ ನಿರೀಕ್ಷಕರು, ಮುಖ್ಯ ಪೇದೆ ಮತ್ತು ಅಬಕಾರಿ ಪೇದೆಗಳು.
ಕಾರ್ಯನಿರ್ವಾಹಕೇತರ ಹುದ್ದೆಗಳು: ಅಬಕಾರಿ ಇಲಾಖೆಯ ಕೇಂದ್ರ ಕಚೇರಿ, ಡಿಸ್ಟಿಲರಿಗಳು, ಬ್ರಿವರಿಗಳು, ವೈನರಿ ಟಕಗಳು, ಭದ್ರತಾ ಚೀಟಿ ವಿಭಾಗ, ಕರ್ನಾಟಕ ರಾಜ್ಯ ಪಾನೀಯ ನಿಗಮ(ಕೆಎಸ್ಬಿಸಿಎಲ್) ಡಿಪೋ, ಕೇಂದ್ರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ "ಎ' ವೃಂದದ ಅಬಕಾರಿ ಅಪರ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಅಧೀಕ್ಷಕರು, ಉಪ ಅಧೀಕ್ಷಕರು, ನಿರೀಕ್ಷಕರು, ಉಪ ನಿರೀಕ್ಷಕರು, ಮುಖ್ಯ ಪೇದೆ ಮತ್ತು ಅಬಕಾರಿಗಳು ಪೇದೆಗಳು.
ಕನಿಷ್ಠ ಸೇವಾವಧಿ
ವೃಂದ(ಗ್ರೂಪ್) ಕಾರ್ಯನಿರ್ವಾಹಕ( ವರ್ಷಗಳಲ್ಲಿ)
ಎ 2
ಬಿ 2
ಸಿ 3
ಸಿ 5
ವಿಜಯವಾಣಿ ಸರಣಿ ವರದಿ ಸಂಚಲನ
ಇಲಾಖೆಯಲ್ಲಿ "ಕಾಸಿಗಾಗಿ ಪೋಸ್ಟಿಂಗ್ ದಂಧೆ ಬಗ್ಗೆ ಬಯಲಿಗೆಳೆದ ವಿಜಯವಾಣಿ ಪ್ರಕಟಿಸಿದ್ದ ಸರಣಿ ವರದಿ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರದ ಕಾರ್ಯಕ್ರಮದಲ್ಲೂ ಪ್ರಧಾನಿ ನರೇಂದ್ರ ಇಲಾಖೆಯ ಅಕ್ರಮ ಬಗ್ಗೆ ಪ್ರಸ್ತಾಪಿಸಿ ವಿರೋಧಪಕ್ಷಗಳಿಗೆ ಚಾಟಿ ಬೀಸಿದ್ದರು.ಕೊನೆಗೂ ರಾಜ್ಯ ಸರ್ಕಾರ, ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಮುಂದಾಗಿರುವುದರಿಂದ ಇಲಾಖೆ ನೂರಾರು ಅಧಿಕಾರಿಗಳು, ಸಿಬ್ಬಂದಿಗೆ ಅನುಕೂಲವಾಗಲಿದೆ.