

ಬೆಂಗಳೂರು:ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿಸಿಕೊಂಡಿರುವ ವಿವಿಧ ಕಾಮಗಾರಿಗಳ 30 ಸಾವಿರ ಕೋಟಿ ರೂ.ಗೂ ಅಧಿಕ ಬಿಲ್ ಪಾವತಿಸುವ ಸಂಬಂಧ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತರುವುದು ಹಾಗೂ ಸ್ಪಂದಿಸದ ಸಚಿವರಿಗೆ ಒಂದು ವಾರ ಕಾಲಾವಕಾಶ ನೀಡಲು ರಾಜ್ಯ ಗುತ್ತಿಗೆದಾರರ ಸಂಘ ತೀರ್ಮಾನ ತೆಗೆದುಕೊಂಡಿದೆ.
ಚಾಮರಾಜಪೇಟೆಯಲ್ಲಿರುವ ಗುತ್ತಿಗೆದಾರರ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚೆ ನಡೆಸಿದ ಗುತ್ತಿಗೆದಾರರು, ಆತುರಪಡದೆ ಇನ್ನಷ್ಟು ಸಮಯ ನೀಡಲು ತೀರ್ಮಾನ ಕೈಗೊಂಡರು.
ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ರ್ಖಗೆ, ಎನ್.ಎಸ್.ಬೋಸರಾಜು, ರಹೀಂಖಾನ್ ಈವರೆಗೆ ನಮ್ಮ ಜತೆ ನಡೆಸಿದ ಸಭೆಯಲ್ಲಿ ಬಾಕಿ ಉಳಿದಿರುವ ಒಟ್ಟು ಕಾಮಗಾರಿಗಳ ಬಿಲ್ಗಳ ಪೈಕಿ ಅರ್ಧ ಬಿಲ್ಗಳಿಗೆ ಮಾರ್ಚ್ನೊಳಗೆ ಹಣ ಪಾವತಿಸಲು ಹಾಗೂ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಸಚಿವರಾದ ಡಿಕೆಶಿ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಮತ್ತು ಮಹದೇವಪ್ಪ ಸಭೆ ನಡೆಸುವ ಮಾಹಿತಿ ಇದೆ ಎಂದು ಸಂಘದ ಪ್ರಭಾರ ಅಧ್ಯಕ್ಷ ಜಗನ್ನಾಥ್ ಬಿ.ಶೇಗಜಿ ಹೇಳಿದ್ದಾರೆ.
ಸರ್ಕಾರದ ಮೇಲೆ ಯಾವ ರೀತಿ ಒತ್ತಡ ಹೇರುವುದು? ಹಿಂದಿನ ಸರ್ಕಾರದ ಅವಧಿಯಲ್ಲಿ ಎಷ್ಟು ಬಿಲ್ಗಳಿಗೆ ಹಣ ಪಾವತಿಯಾಗಿರುವುದು? ಯಾವ್ಯಾವ ಇಲಾಖೆಗಳಲ್ಲಿ ಬಿಲ್ಗಳಿಗೆ ಬಾಕಿ ಉಳಿದಿರುವುದು? ಸರ್ಕಾರ ಸ್ಪಂದಿಸದಿದ್ದರೆ ಯಾವ ರೀತಿ ಹೋರಾಟ ಮಾಡಬೇಕು? ಎಂಬುದು ಸೇರಿ ಇತರ ವಿಚಾರಗಳ ಕುರಿತು ಕೆಲ ಗುತ್ತಿಗೆದಾರರು ಅಭಿಪ್ರಾಯ ನೀಡಿದರು. ಸಂಘದ ಅಧ್ಯಕ್ಷರ ಆಯ್ಕೆಗೆ ಫೆ.19ರಂದು ಚುನಾವಣೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಆರ್.ಮಂಜುನಾಥ್, ಕೆ.ರಾಧಾಕೃಷ್ಣ ನಾಯಕ್, ಎಂ.ಎಸ್. ಸಂಕಾಗೌಡಶಾನಿ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜೆ.ಎಂ.ನಂದಕುಮಾರ್ ಸೇರಿ ಅಂದಾಜು 40ಕ್ಕೂ ಅಧಿಕ ಗುತ್ತಿಗೆದಾರರು ಇದ್ದರು.
ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕೋಟ್ಯಂತರ ರೂ. ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಜ್ಯೇಷ್ಠತೆ ಆಧಾರದ ಮೇರೆಗೆ ಅನುದಾನ ಬಿಡುಗಡೆ ಮಾಡಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಸಭೆಯಲ್ಲಿ ಸಚಿವರ ಗಮನಕ್ಕೆ ತರಲಾಯಿತು. ಇದಕ್ಕೆ ಸ್ಪಂದಿಸಿದ ನಾಲ್ವರು ಸಚಿವರು, ಬಿಲ್ಗಳಿಗೆ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿ.ಎಂ. ರವೀಂದ್ರ, ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ.