ಎರಡು ವರ್ಷಗಳ ಕನಸು ಸಾಕಾರ

byn-2
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಅಪಘಾತ ಸಂದರ್ಭದಲ್ಲಿ ಅಂಗವೈಕಲ್ಯತೆ ಹೊಂದಿ ನಿರಾಶಾ ಭಾವನೆ ಹೊಂದಿದವರಿಗೆ ಬದುಕುವ ಆಸೆ ಮೂಡಿಸುವ ಜತೆಗೆ ಅವರ ನೋವಿನಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪುನಃಶ್ಚೇತನ ಕೇಂದ್ರ ಆರಂಭಿಸಬೇಕೆಂಬ ಎರಡು ವರ್ಷದ ಕನಸು ಈಗ ಸಾಕಾರಗೊಂಡಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಬೈಂದೂರು ಹೇನ್‌ಬೇರು ಪ್ರದೇಶದಲ್ಲಿ ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾ ಸೇತು ಯೋಜನೆಯಡಿಯಲ್ಲಿ ಕನ್ಯಾಡಿ ಸೇವಾ ಭಾರತಿ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಾಣಗೊಳ್ಳುತ್ತಿರುವ ಪುನಃಶ್ಚೇತನ ಕೇಂದ್ರ ಸೇವಾಧಾಮದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈಗಾಗಲೇ ತನ್ನ ಕ್ಷೇತ್ರದಲ್ಲಿ ಅಪಘಾತದಿಂದ ವೈಕಲ್ಯತೆ ಇರುವ ಸುಮಾರು 37 ಜನರ ಪ್ರಸ್ತುತ ಸ್ಥಿತಿಗತಿಗಳನ್ನು ಖುದ್ದಾಗಿ ಹೋಗಿ ಪರಿಶೀಲಿಸಲಾಗಿದೆ. ಹೆಚ್ಚಿನವರು ಸೊಂಟದ ಕೆಳಗಿನ ಭಾಗದ ಸ್ವಾಧೀನ ಕಳೆದುಕೊಂಡು ಹಲವಾರು ವರ್ಷಗಳಿಂದ ಹಾಸಿಗೆಯಲ್ಲಿಯೇ ಮಲಗಿದ್ದಾರೆ. ಇವರ ಜತೆ ಸಮಾಜವೂ ನಿಲ್ಲುವ ಮೂಲಕ ಅವರ ಮುಖದಲ್ಲಿ ಭವಿಷ್ಯದ ಭರವಸೆಯ ಬೆಳಕು ಮೂಡಿಸಬೇಕು ಎಂದರು.

ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ, ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಆರೋಗ್ಯ ಭಾರತಿ ತಾಲೂಕು ಉಪಾಧ್ಯಕ್ಷ ಡಾ.ಎ.ಎಸ್.ಉಡುಪ, ಹಿರಿಯ ವೈದ್ಯ ಡಾ.ಕೆ. ಪಿ.ನಂಬಿಯಾರ್ ಇದ್ದರು. ಮಂಡಲ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಎಸ್.ಬೇಲೆಮನೆ ಸ್ವಾಗತಿಸಿದರು. ಸುಧಾಕರ ಪಿ. ವಂದಿಸಿದರು.

ರಾಜ್ಯದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬೆನ್ನುಹುರಿ ಅಪಘಾತಕ್ಕೊಳಗಾದವರಿದ್ದಾರೆ. ಸರ್ಕಾರಗಳೇ ಪುನಃಶ್ಚೇತನ ಕೇಂದ್ರಗಳನ್ನು ತೆರೆಯಬೇಕಿತ್ತು. ಸರ್ಕಾರ ವಿಕಲಾಂಗರಿಗೆ ಕೊಡುವ ಮಾಸಿಕ 1400 ರೂ. ಯಾವುದಕ್ಕೂ ಸಾಕಾಗುವುದಿಲ್ಲ. ಹೀಗಾಗಿ ನಮ್ಮ ಸಂಸ್ಥೆಯಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗುರುತಿಸ್ಪಟ್ಟ 700 ಜನರಲ್ಲಿ ತೀರಾ ಸಂಕಷ್ಟದಲ್ಲಿರುವ ಶೇ.20 ಜನರಿಗೆ ವೀಲ್‌ಚೇರ್ ಸಹಿತ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ. - ವಿನಾಯಕ ರಾವ್, ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ ಸಂಸ್ಥಾಪಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net