ತಾ.ಪಂ, ಜಿ.ಪಂಗೆ ಚುನಾವಣೆ ನಡೆಸುವಲ್ಲಿ ವಿಫಲತೆ

gan-3
Published on

ಕುಂದಾಪುರ: ರಾಜ್ಯದಲ್ಲಿ ತಾ.ಪಂ., ಜಿ.ಪಂ. ವ್ಯವಸ್ಥೆಗೆ ಚುನಾವಣೆ ಆಗದೆ ನಾಲ್ಕು ವರ್ಷಗಳೇ ಆಗಿವೆ. ಚುನಾವಣೆ ನಡೆಸುವಲ್ಲಿ ವಿಫಲತೆ ಕಾಣುತ್ತಿದ್ದೇವೆ ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಜನಪ್ರತಿನಿಧಿ ಪತ್ರಿಕೆ ಕುಂದಾಪುರ, ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ ಸಂಸ್ಥೆಗಳ ಸಹಯೋಗದಲ್ಲಿ ಕುಂದಾಪುರದಲ್ಲಿ ಭಾನುವಾರ ನಡೆದ ‘ಗ್ರಾಮ ಸ್ವರಾಜ್ಯ ಗತಿಸ್ಥಿತಿ ಚಿಂತನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲ ಕಾಲಕ್ಕೆ ಚುನಾವಣೆ ನಡೆಸುವುದು ಸರ್ಕಾರದ ಕರ್ತವ್ಯ. ಚುನಾವಣೆ ನಡೆಯದಿರುವುದು ಪಂಚಾಯತ್ ರಾಜ್ ವ್ಯವಸ್ಥೆಗೆ ಹಿನ್ನಡೆ. ನೇರ ಪರಿಣಾಮ ಅಭಿವೃದ್ಧಿ ಮೇಲೆ ಆಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಚುನಾವಣೆಗಳು ನಡೆಯಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕು. ಎಲ್ಲ ವ್ಯವಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ವ್ಯವಸ್ಥೆ ಇದ್ದರೆ ಮಾತ್ರ ಸರಿಯಾಗಿ ಕಾರ್ಯಗತಗೊಳ್ಳಲು ಅವಕಾಶ ಆಗುತ್ತದೆ. ಎಲ್ಲ ಜನಪ್ರತಿನಿಧಿಗಳಿಗೆ ಅನುಭವಿಗಳಿಂದ ಮಾರ್ಗದರ್ಶನ ನೀಡುತ್ತಿರುವುದು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಸ್ಥಿತಿಗತಿಗಳ ಚಿಂತನೆ, ಚರ್ಚೆ ನಡೆಸುತ್ತಿರುವುದು ಉತ್ತಮ ಕೆಲಸ ಎಂದರು.

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಿದರು. ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿದರು. ರಾಜ್ಯ, ಕೇಂದ್ರ ಪಂಚಾಯತ್ ರಾಜ್ ಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಟಿ.ಆರ್.ರಘುನಂದನ್ ದಿಕ್ಸೂಚಿ ಮಾತನಾಡಿ, ರಾಜ್ಯದ 6300 ಗ್ರಾಮ ಪಂಚಾಯಿತಿಗಳು ಗ್ರಾಮ ಸ್ವರಾಜ್ಯ ಬಲಿಷ್ಠ ಗಳಿಸುವಲ್ಲಿ ಒಂದಾಗಬೇಕು ಎಂದರು.

ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇದರ ಮಾಜಿ ತರಬೇತಿ ಸಂಯೋಜಕ ವಿಲ್ಫ್ರೆಡ್ ಡಿಸೋಜ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಗೌರವಾಧ್ಯಕ್ಷ ಎಸ್.ಜನಾರ್ದನ ಮರವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂವಾದ ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಒಕ್ಕೂಟದ ಗೌರವ ಸಲಹೆಗಾರ ಟಿ.ಬಿ ಶೆಟ್ಟಿ ನಿರ್ವಹಿಸಿದರು.

ಗಣೇಶ ಗಂಗೊಳ್ಳಿ ಜನಾಧಿಕಾರ ಗೀತೆ ಹಾಡಿದರು. ಹಕ್ಕೊತ್ತಾಯ ಆಂದೋಲನದ ಪ್ರಮುಖ ಶ್ರೀನಿವಾಸ ಗಾಣಿಗ ಸ್ವಾಗತಿಸಿದರು. ಜನಪ್ರತಿನಿಧಿ ಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಹಾಗೂ ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಸೂಲಿಯಣ್ಣ ಶೆಟ್ಟಿ ವಂದಿಸಿದರು

ಗ್ರಾಮ ಆಡಳಿತಕ್ಕೆ ವಿಶೇಷ ಮಹತ್ವ ಹಿಂದನಿಂದಲೂ ಇತ್ತು. ಇಂದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ವಿಕೇಂದ್ರೀಕರಣ ವ್ಯವಸ್ಥೆಯಾಗಿದೆ. ಈ ನಡುವೆ ಅಧಿಕಾರಿಗಳ ಹಸ್ತಕ್ಷೇಪ, ಪಂಚಾಯಿತಿಗಳ ಅಧಿಕಾರ ಕುಂಠಿತವಾಗುತ್ತಿವೆ ಇತ್ಯಾದಿ ವಿಚಾರಗಳು ಚರ್ಚೆಯಾಗುತ್ತಿವೆ. ಸಮಸ್ಯೆಗಳು ಕೂಡಾ ಹೆಚ್ಚಾಗುತ್ತಿವೆ. ಈಗಲೂ ಕೂಡಾ ಪಂಚಾಯಿತಿ ಆಡಳಿತ ನಿರ್ಣಯವಾಗಲೂ ವಿಕೇಂದ್ರೀಕರಣ ವ್ಯವಸ್ಥೆ ಬಲಗೊಳ್ಳಬೇಕು, ಪಂಚಾಯತಿಗಳಿಗೆ ಹೆಚ್ಚಿನ ಶಕ್ತಿ ಸಿಗುವಂತಾಗಬೇಕು. ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ https://www.vijayavani.net/a-friendly-reunion-of-gurus-disciples https://www.vijayavani.net/the-destruction-of-a-grieving-womans-house-is-condemnable

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net