ಹೇಮನಾಥ್ ಪಡುಬಿದ್ರಿ

ಕಾಪು ತಾಲೂಕು 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇನ್ನೂ ಉಪನೋಂದಣಾಧಿಕಾರಿ ಕಚೇರಿ (ಸಬ್‌ರಿಜಿಸ್ಟ್ರಾರ್ ಕಚೇರಿ) ಮಂಜೂರಾಗದೆ ತಾಲೂಕಿನ 30 ಕಂದಾಯ ಗ್ರಾಮಗಳ ಜನತೆ ದೂರದ ಮೂಲ್ಕಿ ಇಲ್ಲವೇ ಉಡುಪಿ ಕಚೇರಿಯನ್ನು ಆಶ್ರಯಿಸುವಂತಾಗಿದೆ.
ಕಾಪು ಪುರಸಭೆ ಸಹಿತ ತಾಲೂಕಿನ 30 ಕಂದಾಯ ಗ್ರಾಮಗಳ ಜನತೆ ವಿವಾಹ ನೋಂದಣಿ, ಆಸ್ತಿ ನೋಂದಣಿ, ದಸ್ತಾವೇಜು ನೋಂದಣಿ, ಮರಣ ಶಾಸನ ನೋಂದಣಿ, ಋಣಭಾರ ದೃಢಪತ್ರ, ಹಿಂದಿನ ದಸ್ತಾವೇಜುಗಳ ನಕಲು ಪ್ರತಿ, ಅಡಮಾನಗಳು, ಗುತ್ತಿಗೆ ಒಪ್ಪಂದ, ಉಡುಗೊರೆಗಳ ನೋಂದಣಿ ಇತ್ಯಾದಿ ದಾಖಲೆಗಳಿಗಾಗಿ ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಕಚೇರಿಗೆ ಅಲೆಯಬೇಕಾಗಿದೆ.
26 ಗ್ರಾಮದವರಿಗೆ ತೊಂದರೆ
ಕಾಪು ತಾಲೂಕಿನ ಉಳಿಯಾರಗೋಳಿ, ಪಡು ಕಾಪು, ಮೂಳೂರು, ಮಲ್ಲಾರು ಗ್ರಾಮಗಳನ್ನೊಳಗೊಂಡ ಒಂದು ಪುರಸಭೆ, ಏಣಗುಡ್ಡೆ, ಕುರ್ಕಾಲು, ಬೆಳ್ಳೆ, ಕಟ್ಟಿಂಗೇರಿ, ಶಿರ್ವ, 92 ಹೇರೂರು, ಮಜೂರು, ಇನ್ನಂಜೆ, ಪಾಂಗಾಳ, ಮೂಡಬೆಟ್ಟು, ಕೋಟೆ, ಮಟ್ಟು ಕಂದಾಯ ಗ್ರಾಮಗಳ ಜನತೆ ಉಡುಪಿ ಜಿಲ್ಲಾ ಕೆಂದ್ರಕ್ಕೆ ಅಲೆದಾಡಿದರೆ, ದಕ್ಷಿಣ ಭಾಗದ ಬಡಾ, ತೆಂಕ, ಎಲ್ಲೂರು, ಬೆಳಪು, ಪಾದೂರು, ಕಳತ್ತೂರು, ಕುತ್ಯಾರು, ಪಿಲಾರು, ಸಾಂತೂರು, ನಂದಿಕೂರು, ಪಾದೆಬೆಟ್ಟು, ನಡ್ಸಾಲು, ಪಲಿಮಾರು ಮತ್ತು ಹೆಜಮಾಡಿ ಕಂದಾಯ ಗ್ರಾಮಗಳ ಜನತೆ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಉಪನೋಂದಣಾಧಿಕಾರಿ ಕಚೇರಿ ಅವಲಂಬಿಸಬೇಕಿದೆ.
ಸಾರಿಗೆ ವ್ಯವಸ್ಥೆ ಬೇಡಿಕೆ
ನೋಂದಣಿ ಕಚೇರಿ ಆರಂಭವಾದಲ್ಲಿ ಕಾಪು ತಾಲೂಕು ಕೇಂದ್ರಕ್ಕಿಂತ ಪೂರ್ವ ಭಾಗದಲ್ಲಿರುವ ಬೆಳ್ಳೆ, ಕಟ್ಟಿಂಗೇರಿ, ಶಿರ್ವ, ಪಿಲಾರು, ಸಾಂತೂರು, ಎಲ್ಲೂರು, ಬೆಳಪು, ಕುತ್ಯಾರು, ಕಳತ್ತೂರು, ನಂದಿಕೂರು, ಪಲಿಮಾರು ಗ್ರಾಮಗಳ ಜನತೆಗೆ ತಾಲೂಕು ಕೇಂದ್ರಕ್ಕೆ ಆಗಮಿಸಲು ಸಮರ್ಪಕ ಸಾರಿಗೆ ಸಂಪರ್ಕ ವ್ಯವಸ್ಥೆಯ ಕೊರತೆಯಿದೆ. ಸೂಕ್ತ ಬಸ್ ಸೌಲಭ್ಯವನ್ನೂ ಒದಗಿಸಿದರೆ ಉತ್ತಮ ಎನ್ನುವ ಬೇಡಿಕೆಯನ್ನು ಗ್ರಾಮೀಣ ಭಾಗದ ಜನ ಸರ್ಕಾರದ ಮುಂದಿರಿಸಿದ್ದಾರೆ.
ಸರ್ಕಾರದ ಮಂಜೂರಾತಿ ನನೆಗುದಿಗೆ
ಬಿಜೆಪಿ ಸರ್ಕಾರ 2022ರಲ್ಲಿ ರಾಜ್ಯದ ಹೊಸ 50 ತಾಲೂಕುಗಳಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊಸ ಉಪನೋಂದಣಾಧಿಕಾರಿ ಕಚೇರಿ (ಸಬ್‌ರಿಜಿಸ್ಟ್ರಾರ್ ಕಚೇರಿ) ಮಂಜೂರಾತಿಗೊಳಿಸಿತ್ತು. ಅದರಲ್ಲಿ ಕಾಪು ತಾಲೂಕು ಒಳಗೊಂಡಿದ್ದು, ಸಬ್‌ರಿಜಿಸ್ಟ್ರಾರ್ ಕಚೇರಿಗೆ ಅಗತ್ಯವಿರುವ 8 ಹುದ್ದೆಗಳ ಪೈಕಿ 4 ಹುದ್ದೆಗಳಾದ ಉಪ ನೋಂದಣಾಧಿಕಾರಿ 1, ಪ್ರಥಮ ದರ್ಜೆ ಸಹಾಯಕ 1, ಡಾಟಾ ಎಂಟ್ರಿ ಆಪರೇಟರ್ 1 ಮತ್ತು ಡಿ ಗ್ರೂಪ್ 1 ಹುದ್ದೆಗಳನ್ನೂ ಮಂಜೂರು ಮಾಡಿತ್ತು. ಆದರೆ ನಂತರ ಬಂದ ಸರ್ಕಾರದ ಅವಧಿಯಲ್ಲಿ ಅದು ಕಾರ್ಯಗತವಾಗದೆ ತಾಲೂಕಿನ ಜನರ ನಿರೀಕ್ಷೆ ಹುಸಿಯಾಯಿತು.
ಕಾಪು ತಾಲೂಕಿನ ಜನರು ಮೂಲ್ಕಿ ಮತ್ತು ಉಡುಪಿ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿಯನ್ನೇ ಅವಲಂಬಿಸುವ ಪರಿಸ್ಥಿತಿ ಇದೆ. ತಾಲೂಕಿನ ಜನರ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಉಪನೋಂದಣಾಧಿಕಾರಿ ಕಚೇರಿ ಮಂಜೂರುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಸಕಾರಾತ್ಕಮಕ ಸಂ್ಪದನೆ ದೊರೆತಿದೆ.
– ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕರು.ನೂತನವಾಗಿ ರಚನೆಯಾಗಿರುವ ಕಾಪು ತಾಲೂಕಿಗೆ ಉಪನೋಂದಣಾಧಿಕಾರಿ ಕಚೇರಿ ಅಗತ್ಯತೆಯಿದ್ದು, ತಾಲೂಕಿನ ಜನರು ಜಮೀನು ಸಹಿತ ಯಾವುದೇ ರೀತಿಯ ನೋಂದಣಿಗೆ ಈಗಲೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮತ್ತು ಉಡುಪಿ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿಯನ್ನೇ ಆಶ್ರಯಿಸಬೇಕಿದೆ. ಕಾಪು ತಾಲೂಕು ಆಡಳಿತ ಸೌಧದಲ್ಲಿ ಉಪನೋಂದಣಾಧಿಕಾರಿ ಕಚೇರಿ ನಿರ್ಮಾಣಕ್ಕೆ ಸ್ಥಳವಕಾಶ ಕಾಯ್ದಿರಿಸಲಾಗಿದ್ದು, ಸರ್ಕಾರ ಮಂಜೂರಾತಿಗೊಳಿಸಿದಲ್ಲಿ ಈ ಭಾಗದ ಜನರಿಗೆ ಅನುಕೂಲಕರವಾಗಲಿದೆ.
– ಪ್ರತಿಭಾ ಆರ್., ತಹಸೀಲ್ದಾರರು.https://www.vijayavani.net/a-friendly-reunion-of-gurus-disciples