

Bhoo Vandana 14 : ದೀಪಾವಳಿ ಹಬ್ಬ ಸಂಭ್ರಮದಿಂದ ಆಚರಿಸಿದ್ದಾಯ್ತು. ಶಬ್ಧ-ಬೆಳಕುಗಳ ಈ ಹಬ್ಬವನ್ನು ಪರಿಸರಕ್ಕೆ ಸ್ನೇಹಿಯಾಗುವಂತೆ ಆಚರಿಸುವುದು ಹೇಗೆನ್ನುವುದರ ಕುರಿತು ನಾವೀಗಾಗಲೇ ಚರ್ಚಿಸಿಯಾಗಿದೆ. ಎಣ್ಣೆ ಸ್ನಾನ,
ಸಿಹಿ ಊಟದ ಜೊತೆಗೆ ಹೊಸ ಬಟ್ಟೆಯನ್ನೂ ಧರಿಸಿ ಪಟಾಕಿಯನ್ನೂ ಸಿಡಿಸಿದ್ದಾಯ್ತು. ಪಟಾಕಿ ಹಚ್ಚಿದ ಮೇಲೆ ನರೆ ಮನೆಯವರ ಬಾಗಿಲಿನತ್ತ ತೂರಿ ಬಂದ ಪಟಾಕಿಯ ಕಾಗದದ ಚೂರುಗಳನ್ನು ಗುಡಿಸಿ ಕೊಟ್ಟಿರೋ ಅಥವಾ ಸಂಭ್ರಮಿಸುವುದು ನಮ್ಮ ಹಕ್ಕು, ಸ್ವಚ್ಛ ಮಾಡಿಸಿಕೊಳ್ಳುವುದು ನಿಮ್ಮ ಕರ್ಮವೆಂದಿರೋ ಹೇಗೆ? ಪಟಾಕಿಯಿಲ್ಲದ ದೀಪಾವಳಿ ಸಂಭ್ರಮವೆನಿಸುವುದಿಲ್ಲ ನಿಜ. ಆದರೆ, ಬೆಳಕಿನ ಜೊತೆಗೆ ಅತಿಯಾದ ಶಬ್ಧ ಸೇರಿದಾಗ ನಾವು ಶಬ್ಧ ಮಾಲಿನ್ಯದ ಸಮಸ್ಯೆಯೆನ್ನೆದುರಿಸುತ್ತೇವಲ್ಲ ಅದರ ಬಗ್ಗೆ ನಮಗೆ ಅರಿವಿದೆಯೇ? ‘ನಾನು ಮತ್ತು ನಾವು’ ಎಂದೇ ಭಾವಿಸಿ, ನಮ್ಮ ಸುತ್ತಲಿನ ಪ್ರಂಪಚದ ಶಬ್ಧ ಸೂಕ್ಷ್ಮತೆಗೆ ಕಿವಿಡಾಗಲು ಹೊರಟಿರುವ ಜೀವ ನಮ್ಮದು. ಇನ್ನು ನಾವು ಪಟಾಕಿ ಹೊಡೆಯುವುದರಿಂದ ಬೇರೆಯವರು ಅನುವಿಸಿರಬಹುದಾದ ಸಮಸ್ಯೆಗಳಿಗೆ ಕಣ್ಣಾಗುವ-ಕಿವಿಯಾಗುವ ಸಾಧ್ಯತೆ ತೀರ ಕಡಿಮೆ. ಆದರೆ, ನಮ್ಮ ಜೀವನ ಶೈಲಿಯಿಂದ ಜೀವನದ ಚಾಲನೆಗೆ ಅಗತ್ಯವಾದ ಶಬ್ಧಗ್ರಾಹಿಕೆಯ ಸೂಕ್ಷ್ಮತೆಯನ್ನೂ ಮಾಲಿನ್ಯವಾಗಿಸಿಕೊಳ್ಳುವತ್ತ ಸಾಗುತ್ತಿದ್ದೇವಲ್ಲ ಅದರ ಪರಿಣಾಮ ಭಯಂಕರ. ಕಾರಣ ಕುರಿತು ಒoದಿಷ್ಟು ಆಲೋಚಿಸೋಣ.
ಶಬ್ಧ ಮಾಲಿನ್ಯಕ್ಕೆ ಹಬ್ಬದಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ನಾವು ಸಿಡಿಸುವ ಪಟಾಕಿ ಮಾತ್ರ ಕಾರಣವಲ್ಲ. ಇಂದಿನ ತಾಂತ್ರಿಕ ಬದುಕಿನಲ್ಲಿ ವಾಹನಗಳು, ಕೈಗಾರಿಕೆಗಳು, ಯಂತ್ರಗಳು, ಧ್ವನಿವರ್ಧಕಗಳು ಎಲ್ಲವೂ ಶಬ್ದ ಮಾಲಿನ್ಯಕ್ಕೆ ದಾರಿ ಮಾಡಿಕೊಡುತ್ತವೆ. ಅತಿಯಾದ ಮತ್ತು ಅನಗತ್ಯವಾದ ಶಬ್ದದಿಂದ ಉಂಟಾಗುವ ತೊಂದರೆಯನ್ನು 'ಶಬ್ದ ಮಾಲಿನ್ಯ'ವೆನ್ನಬಹುದು. ಅಂದರೆ ಮನುಷ್ಯನ ಕಿವಿಗೆ ಸಹನೀಯವಾದ ಧ್ವನಿಯ ಮಟ್ಟ ಸುಮಾರು 60 ಡೆಸಿಬೆಲ್ (dB) ಆಗಿದ್ದು, ಅದಕ್ಕಿಂತ ಹೆಚ್ಚು ಶಬ್ದ ನಮ್ಮ ಕಿವಿಗಳನ್ನು ನಿರಂತರವಾಗಿ ತಲುಪಿದರೆ ಶ್ರವಣ ಶಕ್ತಿ ಕುಂಠಿತವಾಗುವ ಕಾರಣ, ಅಗತ್ಯಕ್ಕಿoತ ಹೆಚ್ಚು ಶಬ್ಧ ಮಾಲಿನ್ಯವಾಗಿ ಮಾರ್ಪಾಡಾಗುತ್ತದೆ. ಉದಾಹರಣೆಗೆ ನಾವು ಆಚರಿಸಿದ ದೀಪಾವಳಿ ಹಬ್ಬದಲ್ಲಿ ಸಿಡಿಸಿದ ಪಟಾಕಿಯ ಶಬ್ಧದ ತೀವ್ರತೆಯನ್ನು ಅಳೆದಾಗ, ಕಣ್ಣಿಗೆ ಆನಂದ ತರುವ ಸುರುಸುರು ಬತ್ತಿ 65–75 dB ಅಥವಾ ಫ್ಲವರ್ ಪಾಟ್ 85–95 dB ತೀವ್ರತೆಯಲ್ಲಿ ಶಬ್ಧವನ್ನು ನಮ್ಮ ಕಿವಿಗೆ ತಲುಪಿಸಿದರೆ, ಬಾಂಬ್ ಸೇರಿದoತೆ ಸಿಡಿವ ಎಲ್ಲ ಪಟಾಕಿಗಳೂ 120–140 dB ಅಥವಾ ಹೆಚ್ಚು ತೀವ್ರತೆಯಲ್ಲಿ ನಮ್ಮ ಕಿವಿಯನ್ನು ತಲುಪುತ್ತವೆ. ಈ ಶಬ್ಧ ತೀವ್ರತೆ ಮನುಷ್ಯನ ವಿಶೇಷವಾಗಿ ಮಕ್ಕಳು, ವಯೋವೃದ್ಧರ ಕಿವಿಗೆ ಅಪಾಯಕಾರಿಯಾಗಿದೆ. ನಮ್ಮ ಕಿವಿಗಳ ಮೇಲಾಗುವ ಪಟಾಕಿಯ ಪರಿಣಾಮವನ್ನು ಅತ್ತಲಿಡೋಣ, ಕಾರಣ ವರ್ಷಕ್ಕೊಮ್ಮೆ ಬರುವ ಹಬ್ಬ. ತಾಳಿಕೊಳ್ಳಲಾಗದವರು ಕಿವಿಯಲ್ಲಿ ಹತ್ತಿಯಿಟ್ಟುಕೊಂಡು ಸಮಯ ಕಳೆದಾರು! ಆದರೆ ಬೇರೆಯವರ ಬಗ್ಗೆಯಿರಲಿ ನಮ್ಮ ಬಗ್ಗೆಯೂ ಯೋಚಿಸುವ ವಿವೇಚನೆಯನ್ನು ನಾವು ಕಳೆದುಕೊಂಡಿದ್ದೇವೆ. ಹೇಗೆನ್ನಿವಿರೋ...
ನಮ್ಮ ಮೊಬೈಲ್ಗೆ ಅಂಟಿಸಿಕೊಂಡೇ ಬಳಸುವ ಬಗೆ ಬಗೆ ರೂಪದ ಇಯರ್ ಫೋನ್ಸ್ನತ್ತ ನೋಡಿ. ಅವುಗಳನ್ನು ಸದಾ ಕಿವಿಗೆ ಸಿಲುಕಿಸಿಯೇ ಜೀವಿಸುವ ನಾವು, ನಮ್ಮ ಕಿವಿಗಳ ರಕ್ಷಣೆಯತ್ತ ಕುರುಡರಾಗಿದ್ದೇವೆ. ಆಟೋ ವಾಹನ ಚಾಲಕ ವಾಹನ ದಟ್ಟನೆಯಲ್ಲಿ ವಾಹನ ಚಲಾಯಿಸುತ್ತ, ಇನ್ನೊಂದೆಡೆ ತನ್ನ ಮೊಬೈಲ್ನಲ್ಲಿ ಬರುವ ಕರೆಗಳನ್ನು ತನ್ನ ಇಯರ್ ಫೋನ್ ಬಳಸಿ ಉತ್ತರಿಸುತ್ತಾ ಇಲ್ಲವೇ ಸಂಗೀತವನ್ನು ಕೇಳುತ್ತಲೋ ಕಳೆವುದು ಇಂದಿನ ಸಾಮಾನ್ಯ ದೃಶ್ಯ. ಆತನ ಸೂಕ್ಷ್ಮ ಇಂದ್ರಿಯ ಕಿವಿಯ ಮೇಲಾಗುವ ಕನಿಷ್ಠ ದುಪ್ಪಟ್ಟು ( ವಾಹನ ಜನದಟ್ಟನೆಯ ಶಬ್ಧ ಮತ್ತು ಮೊಬೈಲ್ ಮೂಲಕ ಹರಿಯುವ ಧ್ವನಿಯ ಕಂಪನ) ಪರಿಣಾಮದ ಬಗ್ಗೆ ಯೋಚಿಸಿ -ಲೆಕ್ಕಹಾಕಿ! ಸಾಮಾನ್ಯವಾಗಿ ಮಾತುಕತೆಯಾಡುವಾಗ ಶಬ್ಧಗಳ ತರಂಗ 60 dB ತೀವ್ರತೆಯಲ್ಲಿ ನಮ್ಮ ಕಿವಿಯನ್ನು ತಲುಪುತ್ತದೆ. ಹಾಗೆಯೇ ನಗರದಲ್ಲಿನ ವಾಹನ ಸಂಚಾರದ ಸದ್ದು 80–90 dB. ಇನ್ನು ವಾಹನ ದಟ್ಟನೆಯಾದಾಗ ಮತ್ತು ಆ ಸಂದರ್ಭದಲ್ಲಿ ಪರಿಸ್ಥಿತಿಯ ಸೂಕ್ಮತೆಯಿಲ್ಲದೇ ನಾವು ಬಜಾಯಿಸುವ ವಾಹನಗಳ ಹಾನ್೯. ಒಟ್ಟು ಶಬ್ಧ ತೀವ್ರತೆ ಮನುಷ್ಯನೊಬ್ಬನ ಕಿವಿ ಅಪರೂಪಕ್ಕೆ ಸಹಿಸಬಹುದಾದ 120 dB ಶಬ್ಧದ ತೀವ್ರತೆಯನ್ನು ಪ್ರತಿನಿತ್ಯ, ಪ್ರತಿಕ್ಷಣ ಅನುಭವಿಸಿದಂತಾಯ್ತು. ಈ ತೀವ್ರತೆಗೆ ನಮ್ಮ ಇಂದ್ರಿಯಗಳನ್ನು ಒಡ್ಡಿದರೆ! ಅಂದಹಾಗೆ ಇಯರ್ ಫೋನ್ಗಳನ್ನು ಧರಿಸಿ ಮನೆಯಿಂದ ಹೊರನಡೆಯುವವರು ಕೇವಲ ವಾಹನ ಚಾಲಕರಷ್ಟೇ ಅಲ್ಲವಲ್ಲ! ನಾವೆಲ್ಲರೂ ನಮ್ಮ ಕಿವಿಗಳಲ್ಲಿ ಇಯರ್ ಫೋನ್ಗಳನ್ನು ಸದಾ ಕವಚಿ ಹಾಕಿರುತ್ತೇವೆ ಅಲ್ಲವೇ? ಏನಾಗುತ್ತಿರಬಹುದು ನಮ್ಮ ಕಿವಿಯ ಒಳಪದರಗಳಲ್ಲಿ?
ಯಾವದೇ ಶಬ್ಧ ಹೊರಕಿವಿಯ ಮೂಲಕ ಹಾದು ನಮ್ಮ ಕಿವಿಯ ಮೂರನೇ ಭಾಗ- ಒಳಕಿವಿಯನ್ನು ತಲುಪಿದಾಗ ಆ ಭಾಗದ ಸುತ್ತಲಿರುವ ಶ್ರವಣ ನರಕೋಶಗಳು (Hair Cells) ಶಬ್ದವನ್ನು ಮೆದುಳಿಗೆ ಕಳುಹಿಸುತ್ತವೆ, ಮೆದಳು ಶಬ್ಧದ ಅರ್ಥವನ್ನು ಗ್ರಹಿಸುತ್ತದೆ ಎಂದು ನಾವು ವಿಜ್ಞಾನದ ಪಾಠಗಳಲ್ಲಿ ತಿಳಿದಿದ್ದೇವೆ. ಆದರೆ ಯಾವುದೇ ಶಬ್ಧವನ್ನು ಸತತವಾಗಿ ಅಳತೆ ಮೀರಿ - ಅಂದರೆ 85 dB ಗಿಂತ ಮೇಲಿನ ಶಬ್ದವನ್ನು ನಿರಂತರವಾಗಿ ನಾವು ಕೇಳುತ್ತಿದ್ದರೆ ಕಿವಿಯ ಶ್ರವಣ ನರಕೋಶಗಳಿಗೆ ಶಾಶ್ವತ ಹಾನಿ ಉಂಟಾಗಬಹುದು. ಈ ಕೋಶಗಳು ಮತ್ತೆ ಮೂಡುವುದಿಲ್ಲವಾದ ಕಾರಣ ಅವುಗಳ ಹಾನಿ ನಮಗೆ ಶ್ರವಣ ದೋಷವನ್ನುಂಟುಮಾಡುತ್ತದೆ. ಇದಲ್ಲದೇ ಶಬ್ಧ ಮಾಲಿನ್ಯದಿಂದ ತಲೆನೋವು, ರಕ್ತದೊತ್ತಡ, ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳು ಕೂಡ ನಮ್ಮನ್ನು ಬಾಧಿಸಬಹುದು.
ಶಬ್ಧ ಮಾಲಿನ್ಯದ ಮೂಲಗಳಾದ ವಾಹನ ಸಂಚಾರ, ಮನೆಯ ಆಸುಪಾಸಿನಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾರ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುವ ಲೌಡ್ ಸ್ಪೀಕರ್, ಡಿಜೆ ಸ೦ಗೀತ, ಮನೆಯಲ್ಲಿ ನಾವು ಬಳಸುವ ಗೃಹೋಪಯೋಗಿ ಸಾಧನಗಳಿoದ ಹೊರಹೊಮ್ಮುವ ಶಬ್ಧವನ್ನು ತಡೆಯಲು ಅಥವಾ ಕಡಿಮೆ ಮಾಡುವುದು ನಮ್ಮ ಕೈಯಲ್ಲಿ ಸಾಧ್ಯವಿಲ್ಲ. ಆದರೆ, ಶಬ್ಧಮಾಲಿನ್ಯವನ್ನು ಕಡಿಮೆ ಮಾಡಲು ಅವಶ್ಯವಾದ ಸುತ್ತಲಿನ ಪರಿಸರದ ಕುರಿತು ಸೂಕ್ಷ್ಮತೆಯನ್ನು ನಾವು ಬೆಳಸಿಕೊಳ್ಳಬಹುದು. ಒಬ್ಬ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿ ವಾಹನದಲ್ಲಿ ಚಲಿಸುವಾಗ ಹಾರ್ನ್ ಬಳಕೆ ಕಡಿಮೆ ಮಾಡಬಹುದು ಅದರಲ್ಲೂ ದೇವಸ್ಥಾನ, ಶಾಲೆ, ಆಸ್ಪತ್ರೆಯಂತಹ ಜಾಗಗಳಲ್ಲಿ ವಾಹನ ಚಲಾಯಿಸುವಾಗ ಎಚ್ಚರದಲ್ಲಿರಬೇಕು. ಇನ್ನು ಸದಾ ಇಯರ್ ಫೋನನ್ನು ಕಿವಿಗೆ ಸಿಲುಕಿಕೊಳ್ಳುವಾಗ ಅತಿ ಹೆಚ್ಚು ವಾಲ್ಯುಮ್ನ್ನಿಟ್ಟು( 100 dB) 15 ನಿಮಿಷಕ್ಕೂ ಮೀರಿ ಸಂಗೀತ ಕೇಳಿದರೆ ಕಿವಿಗೆ ಹಾನಿಯಾಗುವುದು ಖಂಡಿತವೆಂದು ಅಧ್ಯಯನ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ ಹೆಡ್ ಫೋನುಗಳನ್ನು ಬಳಸುವಾಗ ಶಬ್ದದ ವಾಲ್ಯೂಮ್ ಪ್ರಮಾಣ 60% ಗಿಂತ ಹೆಚ್ಚಿರಬಾರದು ಮತ್ತು ನಿರಂತರವಾಗಿ 60 ನಿಮಿಷಕ್ಕಿಂತ ಹೆಚ್ಚು ಕೇಳಬಾರದು. ಹೆಡ್ ಫೋನುಗಳನ್ನು ಬಳಸುವುದು ವೃತ್ತಿಗೆ ಅಗತ್ಯವಿದ್ದಲ್ಲಿ, ಪ್ರತಿ 60 ನಿಮಿಷಕ್ಕೆ 5-10 ನಿಮಿಷಗಳ ಕಾಲದ ಬಿಡುವು ತೆಗೆದುಕೊಳ್ಳುವುದು ಸೂಕ್ತ. ಅಲ್ಲದೇ “Noise cancelling” ಹೆಡ್‌ಫೋನ್‌ಗಳನ್ನು ಬಳಕೆ ಮಾಡಿದರೆ ಹೊರಗಿನ ಗದ್ದಲ ಕಡಿಮೆ ಆಗಿ ವಾಲ್ಯೂಮ್ ಕೂಡ ಕಡಿಮೆ ಇಡಬಹುದು. ನಮ್ಮಲ್ಲಿ ಬಹುತೇಕರು ರಾತ್ರಿ ಮಲಗುವಾಗಲೂ ಸಂಗೀತ ಕೇಳುತ್ತಾ ಮಲಗುವುದನ್ನು ಅಭ್ಯಾಸಮಾಡಿಕೊಂಡು ರಾತ್ರಿಯಿಡೀ, ಹೆಡ್ಫೋನ್ನನ್ನು ಕಿವಿಯಲ್ಲಿ ಧರಿಸಿಯೇ ನಿದ್ದೆಹೋಗುವುದನ್ನು ರೂಢಿಸಿಕೊಂಡಿದ್ದೇವೆ. ಇದು ಕಿವುಡುತನಕ್ಕೆ ಬಹು ಬೇಗ ದಾರಿ ಮಾಡಿಕೊಡುತ್ತದೆ.
ನಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಲು ನಾವೇನು ಮಾಡಬಹುದು? ಹೊರಗಿನ ಗದ್ದಲದಲ್ಲಿರುವಾಗ ಸ್ವಯಂ ಶಬ್ಧ ಮಟ್ಟ ಹೆಚ್ಚಿಸುವ ಇಯರ್ ಫೋನ್ ಬಳಕೆ ಅಗತ್ಯವಿದ್ದಲ್ಲಿ ಮಾತ್ರ ಬಳಸೋಣ. ಅನವಶ್ಯಕ ಹಾರ್ನ್ ಮಾಡುವುದು, ವಾಹನದಲ್ಲಿ ಚಲಿಸುವಾಗ ಜೋರಾಗಿ ಸಂಗೀತ ಹಾಕುವುದು, ರಾತ್ರಿ ಇಯರ್ ಫೋನ್ ಹಾಕಿಕೊಂಡು ಮಲಗುವುದ ತಪ್ಪಿಸೋಣ. ವಾರಕ್ಕೆ ಒಂದು ದಿನ 'no headphone day' ಪಾಲಿಸಿದರೆ ಹೇಗೆ? ಬಹುಶಃ ನಾವು ನಮ್ಮ ಕಿವಿಗಳ ರಕ್ಷಣೆಗೆ ಅನುಸರಿಸಬಹುದಾದ ಮೊದಲ ಹೆಜ್ಜೆಗಳು. ಆರಂಭಿಸೋಣವೇ?
ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್ನ ಸಂಸ್ಥಾಪಕರು.