

Eco Friendly Temple : ಭಾರತೀಯರಾದ ನಮಗೆ ದೇವಾಲಯಗಳಿಗೆ ಹೋಗುವುದು ದಿನಚರಿಯ ಒಂದು ಭಾಗ. ಅದರಲ್ಲೂ ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗಿ ಬರುವುದನ್ನು ಅಲಿಖಿತ ಕಾನೂನಿನಂತೆ ಪಾಲಿಸುತ್ತೇವೆ. ಭಕ್ತಿ ಮತ್ತು ಶ್ರದ್ಧೆಯ ಪವಿತ್ರ ತಾಣವಾದ ದೇವಾಲಯಗಳ ಸ್ವಚ್ಛ ಆವರಣದಲ್ಲಿ ಕುಳಿತಾಗ ಮನಸ್ಸಿಗೆ ಶಾಂತಿ ಆನಂದ ಸಿಗಬೇಕು. ವಿಶೇಷ ದಿನಗಳಲ್ಲಿ ತೀರ್ಥ ಕ್ಷೇತ್ರಗಳಲ್ಲಿ ಮಾತ್ರವಲ್ಲ ನಮ್ಮ ಬಡವಾಣೆಯ ದೇವಾಲಯದಲ್ಲೂ ಜನದಟ್ಟಣೆ ಇರುತ್ತದೆ. ಉದ್ದನೆಯ ಸಾಲುಗಳಲ್ಲಿ ನಿಂತು ದೇವರ ದರ್ಶನ ಪಡೆದು ಕೃತಾರ್ಥಭಾವದಿ ಮುಳಗೇಳುವ ನಾವು ದೇವಸ್ಥಾನಗಳನ್ನು ಸ್ವಚ್ಛವಾಗಿರಿಸುವತ್ತ, ಜನ ದಟ್ಟನೆಯನ್ನು ನಿಗ್ರಹಿಸುವತ್ತ ಗಮನಹರಿಸಬೇಕು. ಹೀಗಾಗಿ ದೇವಸ್ಥಾನಗಳನ್ನು ನಾವು ಹೇಗೆ ಪರಿಸರ ಸ್ನೇಹಿಯನ್ನಾಗಿಸಬಹುದು ಎನ್ನುವತ್ತ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ, ಸ್ವಯಂ ಸೇವಕರಾಗಿ ಅಥವಾ ದೇವಸ್ಥಾನಕ್ಕೆ ದರ್ಶನಾಪೇಕ್ಷೆಯಿಂದ ಬರುವವರ ಅಗತ್ಯಗಳನ್ನು ಪೂರೈಸುವ ವರ್ತಕರಾಗಿ ಚಿಂತಿಸೋಣ.
ಭಾರತದಲ್ಲಿ ಧಾರ್ಮಿಕ ವಾಸ್ತುಶಿಲ್ಪ ಮತ್ತು ಆಚಾರಗಳಲ್ಲಿ ಪ್ರಕೃತಿಯೊಂದಿಗೆ ಸಹಜ ಸಂಬಂಧವಿದೆ. ಹೀಗಾಗಿಯೇ ಪುರಾತನ ದೇವಾಲಯಗಳನ್ನು ವಾಸ್ತು ಶಾಸ್ತ್ರದ ಆಧಾರದಲ್ಲಿ ನಿರ್ಮಿಸಿರುವುದರ ಜೊತೆಗೆ ದೇವಸ್ಥಾನ ಸುತ್ತಲಿನ ಹಸಿರಿನ ಪರಿಸರಕ್ಕೂ ಆದ್ಯತೆ ನೀಡಿರುವುದು ನಮಗೆ ಕಾಣುತ್ತದೆ. ಶತಮಾನಗಳಷ್ಟು ಹಳೆಯದಾದ ದೇವಾಲಯಗಳ ಸುತ್ತಮುತ್ತ ಇರುವ ತೋಟಗಳು, ಹೂವನಗಳು, ಕೊಳಗಳು ಹಾಗೂ ಅರಣ್ಯ ಪ್ರದೇಶಗಳು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಮುಖ ಪಾತ್ರವಹಿಸುತ್ತಿದ್ದವು. ಆದರೆ, ಭೂಮಿಯ ಕೊರತೆ ಮತ್ತದರ ವಾಣಿಜ್ಯೀಕರಣದ ಹಿನ್ನಲೆಯಲ್ಲಿ ನಿರ್ಮಿಸಿರುವ ಇತ್ತೀಚಿನ ದಿನಗಳ ಅನೇಕ ದೇವಾಲಯಗಳ ಸುತ್ತಲಿನಲ್ಲಿ ಪ್ರಾಕೃತಿಕ ಪರಿಸರದ ಕೊರತೆ ನಮಗೆದ್ದು ಕಾಣುತ್ತದೆ. ಇದರೊoದಿಗೆ ನಮ್ಮ ಪರಿಸರ ಸ್ನೇಹಿಯಲ್ಲದ ನಡವಳಿಕೆ, ದೇವಾಲಯಗಳ ಪರಿಸರವನ್ನು ಅಂದಗೆಡಿಸಿದೆ ಎನ್ನುವುದು ಕೊಂಚ ಕಠಿಣದ ಮಾತೆನ್ನಿಸಿದರೂ ನಿಜವೆನ್ನುವುದನ್ನು ನಾವೆಲ್ಲ ಒಪ್ಪಲೇಬೇಕಿದೆ. ಹಾಗಿದ್ದರೆ ವಿವಿಧ ಹಂತಗಳಲ್ಲಿ ದೇವಸ್ಥಾನದ ಭಾಗವಾಗುವ ನಾವು ಅವುಗಳನ್ನು ಪರಿಸರ ಸ್ನೇಹಿಯನ್ನಾಗಿಸುವ ಕುರಿತು ನಾವಿಡಬೇಕಾದ ಹೆಜ್ಜೆಗಳ ಕುರಿತು ಚಿಂತಿಸೋಣ.
ಮೊದಲ ಹೆಜ್ಜೆಯಾಗಿ ದೇವರ ಪೂಜೆಗೆ ನಾವು ತೆಗೆದುಕೊಂಡು ಹೋಗುವ ಪ್ರತಿಯೊಂದು ವಸ್ತುವೂ ಪ್ಲಾಸ್ಟಿಕ್ ರಹಿತವೇ ಎಂದು ನಾವೇ ಸ್ವಯಂ ಪರೀಕ್ಷೆಗೊಳಪಡಿಸಿಕೊಳ್ಳೋಣ. ಊದಗಡ್ಡಿ ಮತ್ತು ಕರ್ಪೂರದ ಮೇಲಿನ ಪ್ಲಾಸ್ಟಿಕ್ ತೆಗೆದಿದ್ದೇವೆಯೇ, ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯುವ ಬುಟ್ಟಿ ಮರುಬಳಕೆ ಮಾಡಬಹುದಾದಂತಹದ್ದೇ, ಕೊಂಡ ಹೂವಿನ ಮಾಲೆಯಲ್ಲಿ ಬೆಂಡು, ಪ್ಲಾಸ್ಟಿಕ್ನ ಬೆರಕೆಯಾಗಿದೆಯೇ ಎಂದು ಪರೀಕ್ಷಿಸಿಯೇ ಪವಿತ್ರ ಸ್ಥಳವನ್ನು ಪ್ರವೇಶಿಸೋಣ. ಭಕ್ತಿಯಿ೦ದ ನಾವು ತೆರಳುವ ದೇವಾಲಯಗಳು ಯಾವ ಧರ್ಮಕ್ಕೇ ಸೇರಿದವಾದರೂ ಅವು ಪ್ಲಾಸ್ಟಿಕ್ ಮುಕ್ತವನ್ನಾಗಿಸುವುದು ನಮ್ಮ ಕರ್ತವ್ಯ.
ಎರಡನೇ ಹೆಜ್ಜೆಯಾಗಿ ದೇವಾಲಯಗಳಲ್ಲಿ ಸಾಮಾನ್ಯವಾಗಿ ನಾವು ತೀರ್ಥ ಸ್ಥಾನವಾಗಿ ಕಲ್ಯಾಣಿಗಳನ್ನು ಕಾಣುತ್ತೇವೆ. ದೇವಾಲಯದ ಎದುರಿಗೆ ಅಥವಾ ಪಕ್ಕದಲ್ಲಿರುವ ಈ ತೀರ್ಥಗಳು ಭೂಮಿಯ ಜಲಮಟ್ಟವನ್ನು ಕಾಪಾಡುತ್ತವೆ. ಇವುಗಳ ಸ್ವಚ್ಛತೆಯತ್ತ ನಮ್ಮ ಗಮನವಿರಲಿ. ಹಾಗೊಂದು ವೇಳೆ ಕಲ್ಯಾಣಿಯಿರದಿದ್ದರೂ ನಲ್ಲಿಗಳ ವ್ಯವಸ್ಥೆಯಿದ್ದು ನಾವು ಕಾಲು ತೊಳೆದುಕೊoಡು ದೇವಸ್ಥಾನಗಳ ಒಳಗೆ ಹೋಗುವುದು ಸಾಮಾನ್ಯ. ಈ ಸ್ಥಳ ಶುಭ್ರವಾಗಿರಬೇಕಲ್ಲವೇ? ನಾವು ಕೈ ಬಾಯಿ, ಕಾಲು ತೊಳೆದುಕೊಂಡ ನಂತರ ನಮ್ಮ ಹಿಂದಿನವರೂ ಸ್ಥಳವನ್ನು ಬಳಸಲು ಯೋಗ್ಯವಾಗುವ ರೀತಿ ನಾವು ವ್ಯವಸ್ಥೆಯನ್ನು ಬಳಸಿಕೊಳ್ಳುವುದ ಅಭ್ಯಾಸಿಸೋಣ. ದೇವಸ್ಥಾನಗಳಲ್ಲಿ ನಿರಂತರವಾಗಿ ಬಳಸುವ ನೀರಿನ ಸರಿಯಾದ ಬಳಕೆಗೆ ಸುತ್ತಲೂ ಹಸಿರವಾತಾವರಣ ನಿರ್ಮಿಸಬಹುದು. ಹಸಿರು ಬೆಳಸಲು ಭೂಮಿಯ ಸೌಲಭ್ಯವಿಲ್ಲದಿದ್ದರೆ, ಕುಂಡಗಳಲ್ಲಿ ಸ್ಥಳೀಯ ಜಾತಿಯ ಸಸಿಯ ನಡುವ ಮೂಲಕ ಹಸಿರನ್ನು ಕಾಪಾಡಿಕೊಳ್ಳಬಹುದು. ಮಳೆನೀರ ಕೊಯ್ಲಿನ ವ್ಯವಸ್ಥೆ ಮತ್ತು ತೀರ್ಥ ಕೊಳಗಳ ಸುತ್ತಲ ಪ್ರದೇಶವನ್ನು ಶುದ್ಧವಾಗಿಟ್ಟುಕೊಳ್ಳುವ ಪ್ರಯತ್ನವೂ ಆರಂಭವಾಗಬೇಕು.
ದೇವರ ದರ್ಶನದ ನಂತರ ಪ್ರಸಾದ ಸ್ವೀಕರಿಸುವುದು ಸಾಮಾನ್ಯ. ಪ್ರಸಾದ ದೊನ್ನೆಯಲ್ಲೂ, ಕಲ್ಲು ಸಕ್ಕರೆ ಅಥವಾ ಇನ್ನಾವುದೇ ರೀತಿಯ ಪ್ರಸಾದವನ್ನು ಪ್ಲಾಸ್ಟಿಕ್ ಕವರುಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವಿತರಣೆಗೆ ವ್ಯವಸ್ಥೆ ಮಾಡುವುದು ಸಾಮಾನ್ಯ. ಬಳಸುವ ದೊನ್ನೆಗೆ ಅಲ್ಯುಮಿನಿಯಂ ಲೇಪನವಾಗಿದ್ದರೆ ಅದರಲ್ಲಿ ಪ್ಲಾಸ್ಟಿಕ್ ಅಂಶವೂ ಸೇರಿರುತ್ತದೆ ಎನ್ನುವುದು ನಮಗೀಗ ಗೊತ್ತಿದೆ. ಹೀಗಾಗಿ ದೇವಸ್ಥಾನಗಳಲ್ಲಿ ಈ ರೀತಿಯ ದೊನ್ನೆಗಳ ಬದಲಿಗೆ ಬಾಳೆಲೆಯನ್ನೋ ಅಥವಾ ಬಾಳೆಲೆಯಿ೦ದ ಮಾಡಿದ ಕಪ್ಗಳನ್ನೋ ವ್ಯವಸ್ಥೆ ಮಾಡುವುದು ಸೂಕ್ತ. ಹಾಗೆಯೇ ಕಲ್ಲುಸಕ್ಕರೆ/ಲಡ್ಡುವನ್ನೂ ಪೇಪರ್ ಕವರ್ಗಳಲ್ಲಿ ಹಾಕಿ ವಿತರಿಸಬಹುದು. ದೇವಸ್ಥಾನದ ಹೊರಗಿನ ಆವರಣದಲ್ಲಿ ಕುಳಿತು ಪ್ರಸಾದ ಸ್ವೀಕರಿಸುವ ನಾವು ದೊನ್ನೆಗಳನ್ನು, ಪ್ರಸಾದದ ಪ್ಲಾಸ್ಟಿಕ್ ಕವರುಗಳನ್ನು ವಿಂಗಡಿಸಿ ಕಸದ ಬುಟ್ಟಿಗೆ ಹಾಕಿದರೆ ದೇವರಿಗೆ ಹೆಚ್ಚು ಪ್ರಿಯರಾದೇವು. ಹಾಗೊಂದು ವೇಳೆ ಕಸದ ಬುಟ್ಟಿಯ ವ್ಯವಸ್ಥೆಯಿರದಿದ್ದರೆ, ನಮ್ಮ ಬಳಿಗೆ ಬಂದ ತ್ಯಾಜ್ಯವನ್ನು ಅಲ್ಲಿಯೇ ಬಿಸಾಡದೇ ಮನೆಗೆ ತಂದು ವಿಂಗಡಿಸಿ ಬಿಸುಡುವುದು ಉತ್ತಮವಲ್ಲವೇ? ಪ್ರಸಾದ ಸ್ವೀಕರಿಸಿದ ನಂತರದ ತ್ಯಾಜ್ಯ ಕುರಿತಾದ ಸವಾಲುಗಳನ್ನು ಎದುರಿಸಲು ಮನೆಯಿ೦ದಲೇ ನಾವು ವ್ಯವಸ್ಥೆ ಮಾಡಿಕೊಂಡು ಹೋದರೆ ಬಹಳ ಉತ್ತಮ. ಇದು ನಾವು ಪರಿಸರ ಸ್ನೇಹಿ ದೇವಾಲಯ ಕುರಿತಾಗಿಡುವತ್ತದ ಮೂರನೇ ಹೆಜ್ಜೆ. ನಿತ್ಯದ ವಿದ್ಯುತ್ ಬಳಕೆಗೆ ಹಾಗೂ ವಿಶೇಷ ದಿನಗಳ ದೀಪಾಲಂಕಾರಕ್ಕಾಗಿ ಸೌರ ಶಕ್ತಿ ಬಳಕೆಯ ವ್ಯವಸ್ಥೆಯನ್ನು ಅಳವಡಿಸಿದರೆ ಅದು ನಮ್ಮ ನಾಲ್ಕನೆಯ ಹೆಜ್ಜೆ.
ನೆನಪಿಡೋಣ ಪವಿತ್ರ ಸ್ಥಳಗಳು ಕೇವಲ ಧಾರ್ಮಿಕ ಪ್ರದರ್ಶನದ ಸ್ಥಳವಲ್ಲ. ದೇಹವನ್ನೇ ದೇಗುಲವೆಂಬ ಭಾವವನ್ನು ನಮ್ಮಲ್ಲಿ ಸ್ಪುರಿಸುವ ಗುರು ಪರಂಪರೆ ಭಾರತೀಯರಿಗೆ ಲಭ್ಯವಿದೆ. ಬಸವಣ್ಣನವರು ಈ ಭಾವನೆಯನ್ನು ಜನರಿಗೆ ಸರಳವಾಗಿ "ನಾನೇನ ಮಾಡುವೆ ? ಬಡವನಯ್ಯ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ! ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ" ವೆಂದು ತಮ್ಮ ವಚನದಲ್ಲಿ ತಿಳಿಯಪಡಿಸಿದ್ದಾರೆ. ಅದೇ ರೀತಿ 'ಸ್ವಚ್ಛತೆಯೇ ದೇವರು' ಎಂದು ಮಾಹಾತ್ಮ ಗಾಂಧೀಜಿ ನುಡಿದಿರುವುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಇಂದಿನ ಶಾಲೆಗಳಿಗೆ ಕಟ್ಟಡಗಳ ಸ್ವರೂಪ ದೊರಕುವ ಮೊದಲು ಗುಡಿಗಳು ಮತ್ತು ಮಠಗಳೇ ಶಾಲೆಗಳಾಗಿದ್ದವು ಎನ್ನುವುದನ್ನು ಶಿಕ್ಷಣದ ಇತಿಹಾಸ ನಮಗೆ ತಿಳಿಸುತ್ತದೆ. ಹೀಗಾಗಿ ದೇವಾಲಯಗಳು ಸಮುದಾಯದ ಸಾಂಸ್ಕೃತಿಕ ಹೃದಯದಂತೆ ಕಾರ್ಯನಿರ್ವಹಿಸುತ್ತವೆ. ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಯನ್ನು ಅದೆಷ್ಟು ಶ್ರದ್ಧೆಯಿಂದ ಪಾಲಿಸುತ್ತೇವೆಯೋ ಅಷ್ಟೇ ಶ್ರದ್ಧೆಯಿ೦ದ ಭಕ್ತರಿಗೆ ಪರಿಸರ ಸ್ನೇಹಿ ಆಚರಣೆಗಳ ಕುರಿತು ಅರಿವು ಮೂಡಿಸುವುದು ದೇವಸ್ಥಾನದ ನಿವ೯ಹಣೆಯ ಭಾಗವಾಗಬೇಕು. ದೇವಾಲಯ ನಿರ್ವಹಣಾ ಸಮಿತಿಗಳು, ಭಕ್ತರು ಮತ್ತು ಸ್ಥಳೀಯ ಆಡಳಿತ ಎಲ್ಲರೂ ಸೇರಿ ದೇವಾಲಯಗಳ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು. ಇದು ಕೇವಲ ಧಾರ್ಮಿಕ ಕರ್ಮ ಮಾತ್ರವಲ್ಲ, ಭೂಮಿಯ ಮೇಲಿನ ನಮ್ಮ ನೈತಿಕ ಹೊಣೆಗಾರಿಕೆಯೂ ಆಗಿದೆ.
ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್ನ ಸಂಸ್ಥಾಪಕರು.