

Thermocol : ಗೆಳೆಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಿ.ವಿ ಐಯ್ಯರ್ ರಚಿಸಿದ 'ಎಮ್ಮೆ ತಮ್ಮಣ್ಣ' ಚಿತ್ರದ 'ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು" ಹಾಡಿನ್ನು ಪ್ರಕಟಿಸಿದ್ದರು. ಗೋವನ್ನು ಪೂಜಿಸುವ ನಾವು ಗೋವಿನ ಕೆಚ್ಚಲ್ಲನ್ನೇ ಕತ್ತರಿಸುವ ಕ್ರೂರ ಭಾವವನ್ನೂ ಅರಗಿಸಿಕೊಂಡಿದ್ದೇವೆ. ಆದರೆ, ವಿಷಯವಿಲ್ಲಿ ಗೋವಿನದ್ದಲ್ಲ ನೀನಾರಿಗಾದೆಯೋ ಎಲೆ ಮಾನವನದ್ದು.
ಗೋವು ತನ್ನ ಪ್ರತಿಯೊಂದು ಭಾಗದ ಉಪಯೋಗವನ್ನೂ ಹೇಳಿದರೆ, ಮನುಷ್ಯರಾದ ನಮ್ಮ ಪ್ರತಿಯೊಂದು ಕೆಲಸವೂ ಭೂಮಿಗೆ ಭಾರವೇ! ಕಳೆದ ಸoಚಿಕೆಯಲ್ಲಿ ಭಕ್ತಿಯಿಂದ ನದಿಯ ತಟದಲ್ಲಿ ನಾವು ತ್ಯಜಿಸುವ ಬಟ್ಟೆಯನ್ನು ಸ್ವಯಂ ಸೇವಕರು/ಸಂಸ್ಥೆಯವರು ತೆಗೆದು ಹಾಕಿದರೂ ಬಟ್ಟೆಗಳು ಪುನರ್ಬಳಕೆಗೆ ಯೋಗ್ಯವಾಗಿಲ್ಲದಿರುವುದರಿಂದ ಅದು ಭೂಮಿಗೆ ಬೇಡದ ತ್ಯಾಜ್ಯವೇ. ಅದೇ ರೀತಿ ಭೂಮಿಗೆ ಬೇಡದ್ದು ಆದರೆ, ನಾವು ಒತ್ತಾಯದಿoದ ಭೂಮಿಯ ಒಡಲಿಗೆ ತುಂಬಿಸುವ ವಸ್ತು ಅತ್ಯಂತ ಹಗುರಾದ ಥರ್ಮೋಕೋಲ್.
ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಥವಾ ಗಾಜಿನ ಗೃಹಯುಪಯೋಗಿ ವಸ್ತುಗಳನ್ನು ಕೊಂಡಾಗ ಅಥವಾ ಮಕ್ಕಳ ಶಾಲಾ ಪ್ರಾಜೆಕ್ಟಗಳಿಗಾಗಿ, ನಾವು ಆರಾಮವಾಗಿ ಕುಳಿತುಕೊಳ್ಳುವ ಸಲುವಾಗಿ ಖರೀದಿಸುವ ಬೀನ್ ಬ್ಯಾಗ್ ಗಳಲ್ಲಿ, ನಮ್ಮ ಮನೆಯಲ್ಲಿನ ಸoಭ್ರಮಾಚರಣೆಯಲ್ಲಿ ತಟ್ಟೆ, ಕಪ್ ರೂಪದಲ್ಲಿ, ಸ್ಟೇಜ್ನ ಅಲಂಕಾರಕ್ಕಾಗಿ, ಗಣ್ಯರಿಗೆ-ಹಿರಿಯರಿಗೆ ಹಾಕುವ ಹಾರಗಳಲ್ಲಿ ಹೀಗೆ ನಾನಾ ರೂಪದಲ್ಲಿ ನಮ್ಮ ಮನೆಗೆ ಕಾಲಿಡುವ ಥರ್ಮೋಕೋಲ್ ತೂಗಲು ಅತ್ಯಂತ ಹಗುರ ಆದರೆ, ಭೂಮಿಗದು ಭಾರವೆಂದು ನಾವು ಅರಿತುಕೊಂಡಿಲ್ಲವೇಕೆ?
ಥರ್ಮೋಕೋಲ್ ಎನ್ನುವುದು ಪಾಲಿಸ್ಟೈರಿನ್ ಎಂಬ ಪ್ಲಾಸ್ಟಿಕ್‌ನ ಒಂದು ರೂಪ. ಇದನ್ನು ಸಿಂಥೆಟಿಕ್ ರಾಸಾಯನಿಕಗಳ ಬಳಸಿ ತಯಾರಿಸಲಾಗುತ್ತದೆ. ಪಾಲಿಸ್ಟೈರೀನ್‌ನ ಸಣ್ಣ ಮಣಿಗಳನ್ನು ಹಬೆಯಲ್ಲಿ ವಿಸ್ತರಿಸಿದಾಗ ಆ ಮಣಿಗಳು ಸುಮಾರು 98% ಗಾಳಿಯನ್ನು ಹಿಡಿದಿಟ್ಟುಕೊಂಡು ಥಮೋಕೋಲ್ ಮಣಿಗಾಳಗುತ್ತವೆ. ಪೆಟ್ರೋಲಿಯಂ ಆಧಾರಿತ ಉತ್ಪನ್ನವಾದ ಈ ಮಣಿಗಳನ್ನು ಬೇಕಾದ ರೂಪಕ್ಕೆ ಒತ್ತಡವನ್ನು ಹೇರಿ ಸಿದ್ದಪಡಿಸುತ್ತಾರೆ. ಇದು ಲಘುತೂಕ ಹೊಂದಿರುವುದರಿಂದ ಸುಲಭವಾಗಿ ಸಾಗಿಸಲು/ ಬಳಸಲು ಅನುಕೂಲ. ದುಬಾರಿ ಹಾಗೂ ಕೊಂಚ ಘರ್ಷಣೆಯಾದರೂ ಸುಲಭವಾಗಿ ಪುಡಿಯಾಗುವ ವಸ್ತುಗಳ ಸಾಗಾಣಿಕೆಯಲ್ಲಿ, ಅಲ್ಲದೇ ಸ್ಟೇಜ್ನ ಅಲಂಕಾರ ಮಾಡುವ ಪ್ರಕ್ರಿಯೆಯಲ್ಲೂ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಸಮಸ್ಯೆಯಾಗುವುದು ನಂತರದಲ್ಲಿ.
ಮನೆಗೆ ನಾವು ಅಪೇಕ್ಷಿಸಿದ ವಸ್ತು, ನಮ್ಮ ಕಾಯ೯ಕ್ರಮ, ಅಲoಕಾರ ಮುಗಿದ ನoತರ ನಾವು ಥರ್ಮೋಕೋಲ್ ಅನ್ನು ಏನು ಮಾಡುತ್ತೇವೆ? ನೆನಪು ಮಾಡಿಕೊಳ್ಳಿ. ಜಿರಳೆಗಳ ಆವಾಸವಾಗುವ ಭಯದ ಕಾರಣ ಮನೆಯಲ್ಲಂತೂ ಇಟ್ಟುಕೊಳ್ಳುವುದು ಕಡಿಮೆ. ಹೀಗಾಗಿ ಇದು ತ್ಯಾಜ್ಯವಾಗಿ ಭೂಮಿಯನ್ನು ಸೇರುವುದೇ ಹೆಚ್ಚು. ಆದರೆ, ಪೆಟ್ರೋಲಿಯಂ ಮೂಲದ ಥರ್ಮೋಕೋಲ್ ಪರಿಸರಕ್ಕೆ ತೀವ್ರ ರೀತಿಯಲ್ಲಿ ಮಾರಕವಲ್ಲದ್ದಿದ್ದರೂ ಪರಿಸರ ಸ್ನೇಹಿಯಂತೂ ಅಲ್ಲ. ಕಾರಣ ಅದು ಮಣ್ಣಿನಲ್ಲಿ ಜೈವಿಕವಾಗಿ ವಿಲೀನಗೊಳ್ಳುವ ವಸ್ತುವಲ್ಲ. ಹೀಗಾಗಿ ಮಣ್ಣಿನಲ್ಲಾಗಲೀ ನೀರಿನಲ್ಲಾಗಲೀ ಬಿಸಾಡಿದರೆ, ಮಣ್ಣು ಮತ್ತು ನೀರಿನ ಗುಣಮಟ್ಟು ಕಡಿಮೆಯಾಗುವುದೇ ಹೊರತು ಥರ್ಮೋಕೋಲ್ ಹಾಗೆಯೇ ಉಳಿಯುತ್ತದೆ.
ಇತ್ತೀಚೆಗೆ ಮನೆಯೊoದಕ್ಕೆ ಭೇಟಿ ನೀಡಿದಾಗ ಆ ಮನೆಯ ಮಗು ಥರ್ಮೋಕೋಲ್ ಅನ್ನು ಪುಡಿ ಮಾಡಿ ಅದರ ಕಾಳುಗಳು ಫ್ಯಾನಿನಡಿಯಲ್ಲಿ ಸುಂಟರಗಾಳಿಯ ರೂಪದಲ್ಲಿ ತಿರುಗುತ್ತಿದ್ದ ಕಂಡು ಖುಷಿ ಪಡುತ್ತಲಿತ್ತು. ಮಕ್ಕಳು ಸಂತೋಷ ಪಟ್ಟರೆ ಹಿರಿಯರಿಗೂ ಸಂತೋಷವೇ ಆದರೆ, ಅದರ ಚಿಕ್ಕ ತುಣುಕುಗಳು ಮೂಗಿನ ಮೂಲಕ ಅಥವಾ ಬಾಯ ಮೂಲಕ ಹೊಟ್ಟೆಯನ್ನು ಸೇರಿದರೆ ಅಪಾಯ. ಅದೇ ರೀತಿ ನದಿಗಳಲ್ಲಿ ಅಥವಾ ಸಮುದ್ರಗಳಲ್ಲಿ ಥರ್ಮೋಕೋಲನ್ನು ನಾವು ವಿಸರ್ಜಿಸಿದರೆ ಅವು ತೇಲುತ್ತ ಸಾಗಿ ಮೀನುಗಳು ಹಾಗೂ ಇತರ ಜಲಚರಗಳು ಇದನ್ನು ಆಹಾರ ಎಂದು ಭಾವಿಸಿ ನುಂಗಿದಾಗ ಅವುಗಳ ಹೊಟ್ಟೆಯಲ್ಲಿ ಸಂಗ್ರಹವಾಗುವ ಥರ್ಮೋಕೋಲ್ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಇನ್ನು ಸಭೆ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಥರ್ಮೋಕೋಲ್ ಅನ್ನು ಬಳಸುವಾಗ ಎಚ್ಚರದಿಂದಿರಬೇಕು. ಥರ್ಮೋಕೋಲ್ ಸುಲಭವಾಗಿ ಹೊತ್ತಿಕೊಳ್ಳುವುದರ ಕಾರಣ ಮತ್ತು ಹೊತ್ತಿದ ಬೆಂಕಿಯಿಂದ ಹೊರಬರುವ ಹೊಗೆಯೂ ಮಾನವನ ಶ್ವಾಸಕೋಶಕ್ಕೆ ಅಪಾಯಕಾರಿ.
ಥರ್ಮೋಕೋಲ್ ಬಳಕೆಯನ್ನು ಹಾಗಾದರೆ ಕಡಿಮೆಮಾಡಲು ನಾವದಕ್ಕೆ ಪರ್ಯಾಯವನ್ನು ಹುಡುಕುವುದು ಸೂಕ್ತ. ಥರ್ಮೋಕೋಲ್‌ಗೆ ಬದಲಾಗಿ ಅಣಬೆ ಆಧಾರಿತ ಪ್ಯಾಕೇಜಿಂಗ್ 100% ಜೈವಿಕ ವಿಘಟನೀಯವಾಗಿದ್ದು, ಇದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಹಾಗೆಯೇ ಶೋಲಾ ಎಂಬ ಸಸ್ಯದಿಂದ ತಯಾರಿಸಲಾದ ಶೋಲಾಪಿತ್. ಇದರ ಬಳಕೆಯನ್ನು ನಾವು ಬಂಗಾಲಿಗಳ ಸಾಂಪ್ರದಾಯಿಕ ಮದುವೆಯಲ್ಲಿ ಅವರು ಧರಿಸುವ ಶಿರಸ್ತ್ರಾಣ ಮತ್ತಿತರ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಮತ್ತು ಅಲಂಕಾರಗಳಲ್ಲಿ ಬಳಸುವುದನ್ನು ಕಾಣುತ್ತೇವೆ. ಜೇನುಗೂಡು ಮಾದರಿಯಲ್ಲಿ ಕತ್ತರಿಸಿದ ಕಾಗದವನ್ನು ಬಳಸಬಹುದು. ಇದೆಲ್ಲದರೊoದಿಗೆ ಹೂವಿನ ಮೃದು ಹಾಸಿಗೆಗಳು. ವಿಶೇಷವಾಗಿ ಫ್ಲೋರಾಫೊಮ್ ಅನ್ನು, ದೇವಾಲಯದಲ್ಲಿನ ವಿಸರ್ಜಿತ ಹೂವುಗಳಿಂದ ತಯಾರಿಸುತ್ತಾರೆ. ರಟ್ಟುಗಳು, ಮರು ಬಳಕೆ ಮಾಡಬಲ್ಲ ಹತ್ತಿಯ ಹಾಸಿಗೆಗಳ ಉಪಯೋಗ ನಮಗೆ ತಿಳಿದೇ ಇದೆ. ಈ ಪರಿಸರ ಸ್ನೇಹಿ ಪರ್ಯಾಯಗಳು ಸ್ಥಳೀಯ ಲಭ್ಯತೆಯ ಆಧಾರದಲ್ಲಿ ನಾವು ಥರ್ಮೋಕೋಲ್‌ಗೆ ಪರ್ಯಾಯವಾಗಿ ಬಳಸಬಹುದು.
ಆದರೆ ಥರ್ಮೋಕೋಲ್ ಅನ್ನು ನಾವು ಉತ್ಪನ್ನಗಳ ಸಂರಕ್ಷಣೆಗಾಗಿ ಬಳಸಬೇಕಾದ್ದರಿಂದ ಇದರ ಪುನರ್ ಬಳಕೆ ವಿಧಾನಗಳತ್ತಲೂ ಗಮನಹರಿಸಬೇಕು. ಮೊದಲನೆಯದಾಗಿ ಸ್ಥಳೀಯವಾಗಿ ಮರುಬಳಕೆ ಮಾಡುವವರಿದ್ದಾರೆಯೇ ಎಂದು ಹುಡುಕುವುದು. ಸ್ವೀಕರಿಸುವವರ ಲಭ್ಯತೆಯನ್ನು ನಾವಿರುವ ಪ್ರದೇಶದಲ್ಲಿ "ಥರ್ಮೋಕೋಲ್ ಮರುಬಳಕೆ" ಅಥವಾ "ಇಪಿಎಸ್ ಮರುಬಳಕೆ" ಕೇಂದ್ರಗಳಿವೆಯೇ ಎಂದು ಆನ್‌ಲೈನ್‌ನಲ್ಲಿ ಹುಡುಕಿ ಅವರಿಗೆ ನೀಡಬಹುದು. ಅದರ ಮೇಲೆ ಅಂಟಿಸಿರುವ ಬಣ್ಣದ ಮಿನುಗುವ ಪೇಪರ್, ಸ್ಟಿಕರ್ ಇತ್ಯಾದಿಗಳನ್ನು ತೆಗೆದು ಸ್ವಚ್ಛಗೊಳಿಸಿದ ನoತರ ಮರುಬಳಕೆ ಕೇಂದ್ರಗಳಿಗೆ ನೀಡಬೇಕು. ಎರಡನೆಯ ವಿಧಾನವಾಗಿ ಮನೆಗೆ ಬಂದ ಥರ್ಮೋಕೋಲ್ ಅನ್ನು ಜೋಪಾನಾವಾಗಿ ಎತ್ತಿಟ್ಟು ನಾವು ಸೃಜನಾತ್ಮಕವಾಗಿ ಮರುಬಳಕೆ ಮಾಡಬಹುದೇ ಯೋಚಿಸಬಹುದು. ಮನೆಯಿಂದ ನಾವು ಕಳಿಸಬಹುದಾದ ನಾಜೂಕು ವಸ್ತುಗಳ ಪ್ಯಾಕಿಂಗ್ಗಾಗಿ ಥರ್ಮೋಕೋಲ್ನ ತುಣುಕುಗಳನ್ನು ಉಪಯೋಗಿಸಬಹುದು, ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು, ಅದೆಷ್ಟೋ ಜನ ಇದನ್ನು ತೆಳು ಹಾಸಿಗೆಯಾಗಿ ಪರಿವರ್ತಿಸಲು ಬಳಸುತ್ತಾರೆ.
ಇನ್ನೊಂದು ಬಗೆಯಲ್ಲಿ ನೇಲ್ ಪಾಲಿಷ್ ತೆಗೆಯುವ ಅಸಿಟೋನ್ ಅನ್ನು ಥರ್ಮೋಕೋಲ್ ಮೇಲೆ ಸಿಂಪಡಿಸಿದರೆ ಕರಕುಶಲ ವಸ್ತುಗಳಿಗೆ ಜೇಡಿಮಣ್ಣಿನಂತಹ ವಸ್ತುವನ್ನು ರಚಿಸಬಹುದು ಎನ್ನುವ ಮಾಹಿತಿಯೂ ಲಭ್ಯವಿದೆ. ನೇಲ್ ಪಾಲಿಷ್ ರಿಮೂವರ್ನಲ್ಲಿರುವ ಅಸಿಟೋನ್, ಥರ್ಮೋಕೋಲ್ ಅನ್ನು ಕರಗಿಸುತ್ತದೆ ಮತ್ತು ವಿವಿಧ ಆಕಾರಗಳಲ್ಲಿ ಅಚ್ಚು ಮಾಡಬಹುದಾದ ಬಿಳಿ, ಜೇಡಿಮಣ್ಣಿನಂತಹ ವಸ್ತುವನ್ನು ರೂಪಿಸುತ್ತದೆ. ತಯಾರಿಸುವ ವಿಧಾನ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆಯಾದರೂ, ಈ ಕಾರ್ಯವನ್ನು ಹಿರಿಯರ ಸಮಕ್ಷಮದಲ್ಲಿ ಯೋಚಿಸಿ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಪ್ರಯತ್ನಿಸಿ ನಂತರ ಕೈಗೆತ್ತಿಕೊಳ್ಳುವುದು ಕ್ಷೇಮ. ಇದೊಂದು ರಾಸಾಯನಿಕವಾಗಿ ಸುಡುವ ಪ್ರಕ್ರಿಯೆಯಾದ್ದರಿಂದ ಎಚ್ಚರಿಕೆ ಅತ್ಯಗತ್ಯ.
ನೆನಪಿರಲಿ ಥರ್ಮೋಕೋಲ್ ಅತಿ ತಾತ್ಕಾಲಿಕವಾಗಿ ಉಪಯೋಗಕ್ಕೆ ಬಂದರೂ, ಅದರ ದೀರ್ಘಕಾಲದ ಪರಿಣಾಮಗಳು ಬಹಳ ಗoಭೀರವಾಗಿದೆ. ಮರುಬಳಕೆಗೆ ವಿವಿಧ ರೀತಿಯಲ್ಲಿ ಮಾಡಬಹುದಾದರೂ, ಥರ್ಮೋಕೋಲ್ ಸುಲಭವಾಗಿ ಜೈವಿಕ ವಿಘಟನೀಯವಲ್ಲದ ಕಾರಣ ಇದರ ಅವೈಜ್ಞಾನಿಕ ತ್ಯಾಜ್ಯ ಭೂಕುಸಿತಕ್ಕೆ ಕಾರಣವಾಗಬಹುದು ಎಂಬುದನ್ನು ನೆನಪಿಡೋಣ. ಸಾಧ್ಯವಾದಲ್ಲೆಲ್ಲಾ ಥರ್ಮೋಕೋಲ್ ಬಳಕೆಯನ್ನು ಕಡಿಮೆ ಮಾಡೋಣ, ಪರಿಸರ ಸ್ನೇಹಿ ಆಯ್ಕೆಗಳನ್ನು ಮಾಡಿಕೊಳ್ಳೋಣ.
ಲೇಖಕರು ನoದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್ನ ಸಂಸ್ಥಾಪಕರು.