ಭೂ ವಂದನ-5 | ಮಳೆ ನೀರು ಕೊಯ್ಲು : ಜೀವ ಜಲ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆ…! Rainwater harvesting

Rainwater harvesting

Rainwater harvesting : ಅಸಂಭಾಧಂ ಬಧ್ಯತೋ ಮಾನವಾನಾಂ ಯಸ್ಯಾ ಉದ್ವತ: ಪ್ರವತ: ಸಮಂ

ಭೂ ವಂದನ-5 | ಮಳೆ ನೀರು ಕೊಯ್ಲು : ಜೀವ ಜಲ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆ...! Rainwater harvesting
ಪ್ರೊ. ನಂದಿನಿ ಲಕ್ಷ್ಮಿಕಾಂತ

ಬಹು|| ನಾನಾವೀರ್ಯಾ ಔಷಧೀರ್ಯಾ ಭಿಭರ್ತಿ ಪೃಥ್ವೀ ನ: ಪ್ರಥತಾಂ ರಾಧ್ಯತಾಂ ನ: || ಭೂಮಿ ಸೂಕ್ತದ ಎರಡನೇ ಶ್ಲೋಕವಿದು. ಮಾನವನ ಆಂತರಿಕ ಮತ್ತು ಬಾಹ್ಯ ಶಕ್ತಿಯನ್ನು ವೃದ್ಧಿಸಲು ತನ್ನ ಪರ್ವತ ಶ್ರೇಣಿಗಳಲ್ಲಿ, ಬೆಟ್ಟಗುಡ್ಡಗಳ ಇಳಿಜಾರಿನಲ್ಲಿ, ತಪ್ಪಲುಗಳಲ್ಲಿ ಅನೇಕ ಮಹತ್ವವಾದ ಮತ್ತು ಔಷಧೀಯ ಗುಣವುಳ್ಳ ಸಸ್ಯ ಸಂಪತ್ತನ್ನು ಹೊoದಿರುವ ಭೂ ತಾಯಿ ತನ್ನ ಸಸ್ಯ ಸಂಪತ್ತಿನಿಂದ ನಮ್ಮ ಆರೋಗ್ಯವನ್ನು ಕಾಪಾಡಲಿ ಎ೦ದು ಅರ್ಥಮಾಡಿಕೊಳ್ಳಬಹುದು.

ಬೇಸಿಗೆಯಲ್ಲಿ ನಾವು ನೀರಿಗಾಗಿ ತತ್ವಾರ ಪಟ್ಟೆವು. ಸುಡು ಬೇಸಿಗೆಯ ದಣಿವಾರಿಸಲೋ ಎಂಬಂತೆ ಮಳೆಗಾಲವದಾಗಲೇ ಆರಂಭವಾಗಿದೆ. ನೀರು ಎಲ್ಲರ ಅವಶ್ಯಕತೆ. ಮಳೆ ನೀರಿನ ಮುಖ್ಯ ಆಧಾರ. ಎಲ್ಲರಿಗೂ ಬೇಕು. ಆದರೆ, ಮಳೆಗಾಲ ಆರಂಭವಾದರೆ ತಳವಳದ ಆರಂಭ. ಕಾರಣ ನದಿಗಳು ಉಕ್ಕಿ ಹರಿದು, ಭೂಭಾಗವನ್ನು ಕೊಚ್ಚಿಕೊಂಡು ಹೋಗುವುದು, ಪರ್ವತಗಳು ಕುಸಿಯುವ ವರದಿ ಸಮಾನ್ಯವಾಗಿರುವಂತೆ, ರಸ್ತೆಗಳೆಲ್ಲ ಕೊಚ್ಚೆಗುಂಡಿಗಳಾಗಿ, ರಾಜಾ ಕಾಲುವೆಗಳು ಮತ್ತು ಚರಂಡಿಗಳು ತುಂಬಿ ಅತಿ ಬಡವ – ಶ್ರೀಮಂತರ ಬಡಾವಣೆಗಳ ಎನ್ನುವ ಭೇದ ತೋರದೇ ಎಲ್ಲರ ಮನೆಗಳಿಗೂ ನುಗ್ಗಿ ಜೀವನವನ್ನೇ ಅಸ್ತವ್ಯಸ್ತಗೊಳಿಸುವ ಸಮಯವೂ ಹೌದು. ಹವಾಮಾನದ ಬದಲಾವಣೆಯ ಜೊತೆಗೆ ಶುಚಿಯಾಗಿಲ್ಲದ ಪರಿಸರ ಮತ್ತು ಅಶುಚಿಯಾದ ನೀರಿನ ಸೇವನೆಯಿ೦ದ ಹರಡುವ ಸoಕ್ರಾಮಿಕ ರೋಗಗಳು ಹಬ್ಬುವ ಸಮಯವಿದು. ಧಾರಾಕಾರವಾಗಿ ಸುರಿವ ಮಳೆಯನ್ನು ನೋಡುತ್ತಾ ಘಟ್ಟ ಪ್ರದೇಶದಲ್ಲೆಲ್ಲೋ ಕವಿ ಹೃದಯ ಹಾಡಿದರೆ, ಸಾಮಾನ್ಯರಾದ ನಾವು ಸರ್ಕಾರವನ್ನು, ರಾಜಕಾರಣಿಗಳನ್ನೂ ಮನಬಂದಂತೆ ಬೈದು, ಸುಸ್ತಾಗಿ ವ್ಯವಸ್ಥೆಯೊಂದಿಗೆ ಹೊಂದಾಣಿಕೆಮಾಡಿಕೊಳ್ಳುತ್ತೇವೆ. ಮಳೆಗಾಲ ಮುಗಿದೊಡನೆ ಮತ್ತೆ ಮಳೆಗಾಲ ಬರುವವರೆಗೆ ನೋವನ್ನೆಲ್ಲಾ ಮರೆತು, ಆ ಕುರಿತು ಯೋಚನೆಯನ್ನೇ ಮಾಡದೇ ನಿಶ್ಚಿಂತರಾಗುತ್ತೇವೆ. ಇದೊಂದು ತರಹ ‘ನಾನು ಬೈದ ಹಾಗೆ ಮಾಡುವೆ ನೀ ಅತ್ತ ಹಾಗೆ ನಟಿಸು’ ಎನ್ನುವ ಹಾಗೆ. ವ್ಯವಸ್ಥೆಯ ಕುರಿತು ನಿಜವಾದ ಕಾಳಜಿ ಇಬ್ಬಗೆಯಲ್ಲೂ ಇಲ್ಲ. ಜನ ಜಾಗೃತರಾಗಿದ್ದರೆ! ಜನಪ್ರತಿನಿಧಿಗಳು ನಿಜಾರ್ಥದಲ್ಲಿ ಜನಪರ ಕಾಳಜಿ ಹೊಂದಿದವರಾಗಿದ್ದರೆ ಕಳಪೆ ಕಾಮಗಾರಿಗಳು ನಡೆಯಲು ಸಾಧ್ಯವೇ? ನಮ್ಮದು ಹೇಗೆ ದಪ್ಪ ಚರ್ಮವೋ ನಾವಾರಿಸುವ ಜನಪ್ರತಿನಿಧಿಯೂ ಅಂತೆಯೇ, ಅಲ್ಲವೇ? ಮಳೆಗಾಲಕ್ಕಾಗಿ, ಭುವಿಯ ತಂಪಿಗಾಗಿ ಕಾತರಿಸಿದ ನಾವು, ಮಳೆ ಆರಂಭವಾಗಿ ಭುವಿಯ ಮೇಲೆ ಬಿದ್ದ ನೀರು ಚರಂಡಿಗಳಲ್ಲಿ ಸೇರಿ ಕೊಳಚೆ ನೀರಾಗಿ ಪರಿವರ್ತಿತವಾಗುವಾಗ ನಮ್ಮ ಮನ ಮಿಡಿದರೆ! ಮಳೆಯ ನೀರಿನ ಕೊಯ್ಲನ್ನು ನಮ್ಮ ಮನೆಗಳಲ್ಲಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ನಾವು ಜವಾಬ್ದಾರಿಯಲ್ಲಿ ಮಾಡಿಕೊಂಡರೇ!

ಕೆರೆಗಳ ಹೊಳೆತ್ತಿ ಮಳೆಗಾಲಕ್ಕಾಗಿ ಚೊಕ್ಕ ಮಾಡಿಕೊಳ್ಳುವ ಪದ್ಧತಿಯ ಚಿಕ್ಕ ರೂಪ ಮಳೆನೀರು ಕೊಯ್ಲು. ಮಳೆನೀರನ್ನು ಒಟ್ಟುಗೂಡಿಸುವ ಮತ್ತು ಶೇಖರಿಸಿಟ್ಟುಕೊಳ್ಳುವ ಪದ್ಧತಿ ಅಥವಾ ವಿಧಾನ. ನಗರಗಳಲ್ಲಿ ಭೂಮಿಯ ಪ್ರತಿ ಅಂಗಲವನ್ನೂ ಬಿಡದೆ ಬಳಸುವ ನಾವು ಕೂಡ ಮಳೆನೀರ ಕೊಯ್ಲು ಮಾಡಿ, ಗಟಾರಗಳಲ್ಲಿ ಹರಿಯವ ಜೀವ ಜಲವನ್ನು ಸಂರಕ್ಷಿಸುವ ಪ್ರಯತ್ನಮಾಡಬಹುದು. ಮನೆಗಳ ಛಾವಣಿಗಳ ಮೇಲೆ ಬಿದ್ದನೀರನ್ನು ವಿಶೇಷವಾಗಿ ಸಿದ್ಧಗೊಳಿಸಲಾದ ನೆಲದ ಪ್ರದೇಶದಲ್ಲಿ ಅಥವಾ ಭೂಮಿಯನ್ನು ಅಗೆಯಲು ಸ್ಥಳವಿಲ್ಲದಿದ್ದರೆ, ಡ್ರಂಗಳಲ್ಲಿ ಶೇಖರಿಸಬಹುದು. ಹೀಗೆ ಸoಗ್ರಹಿಸಿದ ಮಳೆಯ ನೀರನ್ನು ಮನೆಯ ಹಲವಾರು ಅಗತ್ಯತೆಗಳಿಗೆ ಅಂದರೆ ಮನೆ, ವಾಹನ ಸ್ವಚ್ಛಗೊಳಿಸಲು, ಜಾನುವಾರುಗಳಿಗೆ, ಪಾತ್ರೆ ತೊಳೆಯಲು, ಕೈತೋಟದ ಬಳಕೆಗೆ, ಶೌಚಾಲಯಕ್ಕೆ, ಸ್ನಾನಕ್ಕೆ ಹೀಗೆ ಅನೇಕ ಕೆಲಸಗಳಿಗೆ ಬಳಸಬಹುದು. ಮಳೆನೀರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ್ದಾಗಿರುತ್ತದೆಯಾದ್ದರಿಂದ, ಬಳಕೆಗೆ ಮೊದಲು ಅದನ್ನು ಸಂಸ್ಕರಿಸುವ ಅಗತ್ಯವಿಲ್ಲವಾದರೂ ಕುಡಿಯುವ ಮುನ್ನ ಸಂಸ್ಕರಿಸಿ ಕುಡಿಯಬೇಕೆನ್ನುವುದು ಸಾಮಾನ್ಯ ಜ್ಞಾನ.

ಸಾಧಾರಣದಿಂದ ಉತ್ತಮವಾಗಿ ಅಂದರೆ ವಾರ್ಷಿಕವಾಗಿ 200 ಮಿಮೀಗಳಷ್ಟು ಮಳೆಯಾಗುವ ಸ್ಥಳಗಳಲ್ಲಿ ಮಳೆಯ ಜಲಸಂಗ್ರಹಣಾ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಕೇವಲ ಮನೆಯ ಅಗತ್ಯಗಳಿಗೆ ಮಾತ್ರವಲ್ಲದೇ, ಕೃಷಿ ಮತ್ತು ಕೈಗಾರಿಕಾ ವ್ಯವಸ್ಥೆಗಳಿಗೂ ಮಳೆನೀರಿನ ಕೊಯ್ಲನ್ನು ಬಳಸಬಹುದು. ಈ ವ್ಯವಸ್ಥೆ ಸಮುದಾಯದಲ್ಲಿ ವಾಸಿಸುವವರಿಗೆ ಹೆಚ್ಚು ಅನುಕೂಲವಾಗುವುದರಿಂದ ನಗರಗಳ ಅಪಾರ್ಟ್​ಮೆಂಟ್​ಗಳಲ್ಲಿ ವಾಸಿಸುವವರು ಈ ವ್ಯವಸ್ಥೆಗೆ ತಮ್ಮ ಸಂಕೀರ್ಣದಲ್ಲಿ ವಾಸಿಸುವ ಇತರರನ್ನು ಹುರಿದುಂಬಿಸಬಹುದು. ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ವ್ಯವಸ್ಥೆಯಿರುವಲ್ಲಿ ಮೊದಲ ಮಳೆಯ ನೀರು ಹವಾ ಮಾಲಿನ್ಯ, ತಾರಸಿಯ ಧೂಳು ಮತ್ತಿತರ ಕಾರಣಗಳಿಂದ ಕಲು‍ಷಿತವಾಗಿರುವುದರಿಂದ ಎರಡನೇ ಮಳೆಯಿಂದ ನೀರನ್ನು ಸಂಗ್ರಹಿಸುವುದು ಹೆಚ್ಚು ಸೂಕ್ತ. ಸೊಳ್ಳೆಯ ಉತ್ಪತ್ತಿ ಮತ್ತು ಪಾಚಿ ಶೇಖರಿಸಿದ ನೀರಿನಲ್ಲಿ ಸಾಮಾನ್ಯ ಸಮಸ್ಯೆಯಾದ್ದರಿಂದ ಭೂಮಿಯಲ್ಲಿ ಹುದುಗಿಸಿದ ತೊಟ್ಟಿಗಳಲ್ಲಿ/ ಟ್ಯಾಂಕ್​ಗಳಲ್ಲಿ ಶೇಖರಿಸುವ ಮುನ್ನ ಫಿಲ್ಟರ್ ವ್ಯವಸ್ಥೆಯನ್ನು ಅಳವಡಿಸುವುದು ಹೆಚ್ಚು ಸೂಕ್ತ.

ವಿಶ್ವದ ಹಲವಾರು ದೇಶಗಳು ಅದಾಗಲೇ ಮಳೆಕೊಯ್ಲನ್ನು ಅಭ್ಯಾಸಿಸಿಕೊಂಡಿವೆ. ಭಾರತದ ನೆರೆ ರಾಷ್ಟ್ರಗಳಾದ ಚೀನಾ ಮತ್ತು ಶ್ರೀಲಂಕಾಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಚಾಲ್ತಿಯಲ್ಲಿದೆ. ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪೂರ್, ಜಪಾನ್, ನ್ಯೂಜಿಲೆಂಡ್​ ಹಾಗೂ ಇನ್ನಿತರ ಅನೇಕ ದೇಶಗಳಲ್ಲಿ ಮಳೆ ನೀರ ಕೊಯ್ಲು ಪ್ರಗತಿಯಲ್ಲಿದೆ. ಭಾರತದಲ್ಲಿ ಥಾರ್ ಮರಭೂಮಿಯೂ ಸೇರಿದಂತೆ ಹಲವೆಡೆ ಮಳೆಯ ನೀರಿನ ಸಂಗ್ರಹ ಮತ್ತು ಬಳಕೆ ಮುನ್ನಲೆಗೆ ಬಂದಿದೆ. ಕರ್ನಾಟಕ ರಾಜ್ಯ ಮಳೆನೀರು ಕೊಯ್ಲನ್ನು ಮನೆಗಳಲ್ಲಿ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಅದರಲ್ಲೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗವು ಮಳೆ ನೀರು ಕೊಯ್ಲು ಮಾಡದ ಕಟ್ಟಡಗಳಿಗೆ ದಂಡವನ್ನೂ ವಿಧಿಸುತ್ತಲಿದೆ.

2009ಕ್ಕೂ ಹಿಂದೆ ನಿರ್ಮಿತ 2400 ಚದರ ಅಡಿಗಳ ಕಟ್ಟಡಗಳಲ್ಲಿ ಹಾಗೂ ನಂತರದ 1200 ಚದರ ಅಡಿ ಕಟ್ಟಡಗಳಲ್ಲಿ ಪ್ರತಿ ಚದರ ಅಡಿಗೆ ಕನಿಷ್ಠ 10ಲೀ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡುವುದು ಕಡ್ಡಾಯವಾಗಿದೆ. ನೂತನ ಕಟ್ಟಡಗಳ ಕಟ್ಟುವಾಗ ಪಡೆವ ನೀಲ ನಕ್ಷೆಯಲ್ಲಿ ಮಳೆ ನೀರು ಕೋಯ್ಲು ಅಳವಡಿಸುವುದೂ ಕಡ್ಡಾಯವಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮಳೆನೀರು ಕೊಯ್ಲು ಪ್ರಕ್ರಿಯೆ ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಗಡಸು ನೀರಿನ ಪ್ರದೇಶಗಳಲ್ಲೂ ಕೊಯ್ಲು ಮಾಡಿದ ಮಳೆಯ ನೀರು ಹೆಚ್ಚು ಉತ್ತಮ.

ಭಾರತದಲ್ಲಿನ್ನೂ ನೀರಿನ ಪುನರ್ ಸಂಸ್ಕರಣಾ ಘಟಕಗಳು ಪ್ರಭಾವೀ ಸ್ಥಿತಿಯಲ್ಲಿಲ್ಲದಿರುವುದರಿಂದಲೂ, ಮಳೆಯ ನೀರು ಚರಂಡಿ ಸೇರಿ ಕೊಳಚೆ ನೀರಾಗಿ ಪರಿವರ್ತಿತವಾಗುವ ಮುನ್ನ ಎಚ್ಚರವಾಗುವುದು ನಮ್ಮೆಲರ ಜವಾಬ್ದಾರಿ. ಕಳಪೆ ಕಾಮಗಾರಿಗಳ ಕಾರಣ ರಸ್ತೆಗಳಲ್ಲಿ ಗುಂಡಿಗಳು ಕಾರಣವಾಗುವಂತೆ, ನಮ್ಮ ಮನೆಗಳ ಮೇಲೆ ಬಿದ್ದ ನೀರು ಮೋರಿಗಳಲ್ಲಿ ಹರಿದು ಚರಂಡಿಯ ನೀರಾಗಲು ಕಾರಣ ನಾವೇ. ಚರಂಡಿಗಳ ಒತ್ತರಿಸಿ ಮನೆಯನ್ನು ಕಟ್ಟಿಕೊಂಡಿರುವವರೂ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರೂ, ಪ್ಲಾಸ್ಟಿಕ್ ಕವರುಗಳನ್ನೂ ಬಾಟಲಿಗಳನ್ನೂ ಎಲ್ಲೆಂದರಲ್ಲಿ ಬಿಸಾಡಿ, ರಸ್ತೆಗಳ ಮೇಲೆ ಬಿದ್ದ ನೀರು ಸರಾಗವಾಗಿ ಹರಿಯದಂತೆ ಮಾಡುವವರು ನಾವೇ. ನಾವು ಬದಲಾಗಬೇಕು.

ಲೇಖಕರು: ಪ್ರೊ. ನಂದಿನಿ ಲಕ್ಷ್ಮಿಕಾಂತ. ಪಿಎಚ್‌ಡಿ
ಪ್ರಾಧ್ಯಾಪಕರು, ಲೇಖಕರು ಮತ್ತು ಸಂಶೋಧಕರು, ICSSR ಹಿರಿಯ ಸಹೋದ್ಯೋಗಿ, ಗುಬ್ಬಿಯ ಶ್ರೀ ಚಿದಂಬರ ಸಂಶೋಧನಾ ಸಂಸ್ಥೆಯ ಗೌರವ ಸಂಶೋಧನಾ ನಿರ್ದೇಶಕರು, ಮಣಿಪಾಲ ಸಂವಹನ ಸಂಸ್ಥೆಯ ಮಾಜಿ ನಿರ್ದೇಶಕರು, ಬೆಂಗಳೂರಿನ ರಚಯಿತ ಟ್ರಸ್ಟಿನ ಸಹ-ಸಂಸ್ಥಾಪಕರು.

‘ಏಕ ಬಳಕೆಯ ಪ್ಲಾಸ್ಟಿಕ್’ ಕುರಿತು ಇರಲಿ ಎಚ್ಚರ! Single Use Plastic

ಭೂ ವoದನ-4: ಮನೆಗಳಲ್ಲಿನ ‘ವೈದ್ಯಕೀಯ ತ್ಯಾಜ್ಯ’ ಕುರಿತಿರಲಿ ಎಚ್ಚರ!

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…