ಭೂ ವಂದನ - 13 : ಬೆಳಕಿನ ಹಬ್ಬ ದೀಪಾವಳಿ ತರಲಿ ಭುವಿಗೆ ಸಂತಸ! Bhoo Vandana 13

Bhoo Vandana 13
Published on

Bhoo Vandana 13 : ಬೆಳಕಿನ ಹಬ್ಬ ದೀಪಾವಳಿ. ಮನೆಯಲ್ಲಿ ಹಚ್ಚುವ ದೀಪಗಳ ಸಾಲಿನಿಂದ ಕತ್ತಲನ್ನು ಬಡಿದೋಡಿಸುವ ಹಬ್ಬ. 'ಕತ್ತಲು' ಇದರ ಭಾವವನ್ನು ಕೇವಲ ವ್ಯವಹಾರಿಕ ಅಥವಾ ಪ್ರಾಕೃತಿಕ ಅರ್ಥದಲ್ಲಿ ಮಾತ್ರವಲ್ಲದೇ, ಆಧ್ಯಾತ್ಮಿಕವಾಗಿಯೂ ನೋಡಿದಾಗ, ಹಬ್ಬದ ಆಚರಣೆ ಮನದ ಕತ್ತಲನ್ನು ಬಡಿದೋಡಿಸಲಿ ಎನ್ನುವ ಭಾವವಲ್ಲಿ ಸ್ಪಷ್ಠ. ಅದರಲ್ಲೂ ದೀಪಾವಳಿ ಹಬ್ಬವೆಂದೊಡನೆ ಎಣ್ಣೆ ಸ್ನಾನ, ಹೊಸ ಬಟ್ಟೆ, ಸಿಹಿಯೂಟದ ಜೊತೆಗೆ ಮನೆಯ ಮುಂದೆ ಪಟಾಕಿ ಸಿಡಿಸಿ, ಸಾಲು ದೀಪ ಹಚ್ಚಿ, ಆಕಾಶ ಬುಟ್ಟಿ ಕಟ್ಟುವುದು, ಅಲ್ಲವೇ? ಉತ್ತರ ಕರ್ನಾಟದಲ್ಲಿ 'ದೀಪಾವಳಿ ಫಳಾರ' ಎಲ್ಲರ ಮನೆಯ ಆಕರ್ಷಣೆ. ಇನ್ನೇನು ಆಗಮಸಲಿರುವ ಈ ವಷ೯ದ ಹಬ್ಬದ ಸ್ವಾಗತದ ತಯಾರಿಯಲ್ಲಿರುವ ನಾವು, ಹಬ್ಬವನ್ನು ಆಚರಿಸುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡು ಭೂಮಿಗೆ ಭಾರವಾಗದಿರುವಂತೆ ಹಬ್ಬವನ್ನು ಆಚರಿಸಬಹುದೇ? ಚಿಂತನ ಮಾಡೋಣ.

Nandini Lakshmikanth

"ದೀಪಾವಳಿಯ ದಿನ ಪಟಾಕಿ ಹೊಡೆದಾಗ ಅದರಿಂದ ಹೊರ ಚಿಮ್ಮುವ ಹೊಗೆ ಉಸಿರಾಟದ ಸಮಸ್ಯೆಯಿರುವ ನನ್ನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ" ಎನ್ನುವ ಹೇಳಿಕೆಗಳನ್ನು ನೀಡಿ, ತಮ್ಮ ಮದುವೆಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ ನಟೀಮಣಿಯರ ದ್ವಂದ್ವ ವ್ಯಕ್ತಿತ್ವವಾಗಲೀ, ಅವರಿರವರನ್ನು ಟೀಕಿಸುವ, ಬೇರೆಯವರತ್ತ ಬೆರಳು ತೋರಿಸುವ ಸ್ವಭಾವ ನಮಗೆ ಬೇಡ . ಇಂದಿನ ಪರಿಸರ ಪರಿಸ್ಥಿತಿಯಲ್ಲಿ ನಾವೇನು ಮಾಡಬಹುದು ಎನ್ನುವತ್ತ ಮಾತ್ರ ನಮ್ಮ ಗಮನ ನಮ್ಮನ್ನು ಸುಧಾರಿಸಿಕೊಳ್ಳುವತ್ತ ನಮ್ಮ ಪ್ರಯತ್ನ.

ಬಲಿಚಕ್ರವತಿ೯ ಭೂಮಿಗೆ ಬರುವ, ಶ್ರೀ ಕೃಷ್ಣ ನರಕಾಸುರನ ಕೊಂದ ಸಂಭ್ರಮ ಹೀಗೆ ಹಲವಾರು ಧಾರ್ಮಿಕ ಹಿನ್ನಲೆಗಳನ್ನು ಕಾರಣವನ್ನಾಗಿಸಿ ಪಟಾಕಿಗಳನ್ನು ಸಿಡಿಸಲು ಮುಂದಡಿಯಿಡುವ ನಾವು, ನಮ್ಮ ಮನದ ಆನಂದಕ್ಕಾಗಿ ನಾವು ಪಟಾಕಿಗಳನ್ನು ಸಿಡಿಸುತ್ತೇವೆ ಎನ್ನುವ ವಿಷಯವನ್ನು ಹಿಂದಿಕ್ಕಲು ಪ್ರಯತ್ನಿಸುತ್ತೇವೆ. ಕಾರಣ ಪಟಾಕಿಗಳನ್ನು ಸಿಡಿಸಿದಾಗ ಪರಿಸರಕ್ಕಾಗುವ ಹಾನಿಯ ಬಗ್ಗೆ ನಮಗೆ ಸಾಕಷ್ಟು ಅರಿವಿದೆ. ಪಟಾಕಿಗಳನ್ನು ಸಿಡಿಸಿದಾಗ ಅದರಿಂದ ಪರಿಸರಕ್ಕೆ ಹಾನಿ ಮಾಡುವ ಸಲ್ಫರ್ ಡೈ ಆಕ್ಸ್ ಡ್ (SO 2 ) ಮತ್ತು ನೈಟ್ರಿಕ್ ಆಕ್ಸೈಡ್ (NO) ನ್ನೊಳಗೊಂಡು ಹೊರಹೊಮ್ಮುವ ದಟ್ಟ ಹೊಗೆ, ಆ ಸಮಯದಲ್ಲಿಯೇ ಸುರಿವ ಮಳೆಯಲ್ಲಿ ಸೇರಿ 'ಆಸಿಡ್ ಮಳೆ'ಯಾಗಿ ಪರಿವರ್ತನಗೊಳ್ಳುತ್ತದೆ. ಆಸಿಡ್ ಮಳೆ ಚರ್ಮ ರೋಗಕ್ಕೆ ಕಾರಣ. ಇದಲ್ಲದೇ, ಪಟಾಕಿಯ ತಯಾರಿಕೆಯೊಂದು ರಾಸಾಯನಿಕ ಮಿಶ್ರಣದ ಸಿಡಿಯುವಿಕೆ. ಪಟಾಕಿ ಸಿಡಿಸಿದಾಗ ಮೂಡುವ ಬಣ್ಣಗಳಿಗೆ ಬೇರಿಲಿಯಮ್( Be), ಸ್ಟ್ರೋನ್ಟಿಯಮ್ (Sr) ಮತ್ತು ಕಾಪರ್ (Cu)ಗಳನ್ನು ಬಳಸಿರುತ್ತಾರೆ. ಈ ರಸಾಯನಿಕ ಪ್ರಕ್ರಿಯೆಯ ನಂತರದ ಹೊಗೆಯೊಂದಿಗೆ PM2.5 ಮತ್ತು PM10 ಸೂಕ್ಷ್ಮ ಕಣಗಳು ಉತ್ಪತ್ತಿಯಾಗಿ ಅವೆಲ್ಲವೂ ಗಾಳಿಯಲ್ಲಿ ಸೇರಿ, ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರುತ್ತವೆ. ಉಸಿರಾಟದ ಪ್ರಕ್ರಿಯೆಯ ಕಾರಣ ರಕ್ತನಾಳಗಳಲ್ಲಿ ಬೆರೆತು ಶ್ವಾಸಕೋಶ ಮತ್ತು ಹೃದಯ ಸಂಬಂಧೀ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಾಸಾಯನಿಕಗಳು ಭೂ ಮತ್ತು ಜಲದ ಮಾಲಿನ್ಯಕ್ಕೂ ಕಾರಣವಾದರೆ, ಪಟಾಕಿ ಸಿಡಿಸಿದಾಗ ಉಂಟಾಗುವ ಶಬ್ಧಮಾಲಿನ್ಯದ ಪ್ರಭಾವನ್ನೂ ಅಲ್ಲಗಳೆಯುವಂತಿಲ್ಲ.

ನಾವು ದೀಪ ಹಚ್ಚುವ ಹಣತೆಗಳತ್ತ ಗಮನ ಹರಿಸಿದರೆ. ಮೇಣದ ದೀಪಗಳನ್ನು ಪಕ್ಕಕ್ಕಿಟ್ಟು ಸಾಂಪ್ರದಾಯಿಕವಾಗಿಯೇ ಎಣ್ಣೆ, ಹತ್ತಿಯ ಬತ್ತಿ ಬಳಸಿ ಉರಿವ ದೀಪದ ಹಣತೆಯೂ ಬಹುತೇಕ ಟೆರಾಕೋಟಾದಿಂದ ಮಾಡಿದವಾಗಿರುತ್ತವೆ. ಈ ಹಣತೆಗಳು ಹೇಗೆ ಪರಿಸರ ಸ್ನೇಹಿ? ತಯಾರಿಸಿದ್ದು ಮಣ್ಣಿನಿoದಲೇ ಆದರೂ ಈ ಹಣತೆಗಳನ್ನು 1000°C ಕ್ಕೂ ಮೀರಿದ ಉಷ್ಣಾಂಶದಲ್ಲಿ ಸುಡುವ ಪ್ರಕ್ರಿಯೆಲ್ಲಿ ಮಣ್ಣು ತನ್ನ ಸಹಜಗುಣಗಳನ್ನು ಕಳೆದುಕೊoಡಿರುತ್ತದಲ್ಲವೇ? ನಿಜ ಬಳಸಲಾಗದ ಟರ್ರಾಕೋಟಾ ವಸ್ತುಗಳನ್ನು ಪುಡಿಮಾಡಿದ ಮಣ್ಣನ್ನು ಮೂಲರೂಪದಲ್ಲಿ ಅಲ್ಲದಿದ್ದರೂ ಬೇರೆ ರೀತಿಯಲ್ಲಿ ಭೂಮಿಗೆ ಭಾರವಾಗದ ಹಾಗೆ ಪುರ್ನಬಳಕೆ ಮಾಡಬಹುದು ಎನ್ನುವುದು ಒಪ್ಪುವ ಮಾತಾದರೂ ಮಣ್ಣು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿರುತ್ತದೆ.

ಹಾಗಾದರೆ ನಮ್ಮ ಚಿಕ್ಕಂದಿನಿ೦ದ ಮಾಡಿಕೊಂಡು ಬಂದ ವ್ಯವಸ್ಥೆಗಳಲ್ಲೆವೂ ತಪ್ಪೇ? ಹಬ್ಬದಲ್ಲಿ ನಾವು ಪಟಾಕಿ ಹೊಡೆಯಬಾರದೇ? ಮನೆಯ ಅಂಗಳವನ್ನೆಲ್ಲ ದೀಪದಿಂದ ಬೆಳಗಿಸಿ ಸಂಭ್ರಮಿಸಬಾರದೇ? ಭಾರತೀಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಲೋಪ ಹುಡುಕುವುದು ಸರಿಯೇ? ಎನ್ನುವ ಪ್ರಶ್ನೆ ಸ್ವಾಭಾವಿಕವಾದ್ದದ್ದು. ಬೆಳೆಯುತ್ತಿರುವ ನಗರ ಪ್ರದೇಶ, ಹೆಚ್ಚುತ್ತಿರುವ ಜನಸಂಖ್ಯೆ, ಸ್ವಾರ್ಥಕ್ಕಾಗಿ ಪರಿಸರವನ್ನು ಬಲಿಕೊಡುವ ಮನೋಭಾವದವರೇ ಹೆಚ್ಚಾಗುತ್ತಿರುವಾಗ, "ಕುರಿಯ ಮಂದೆ" ಯoತೆ ಸಾಗದೇ ಪರಿಸರ ಸ್ನೇಹಿಯಾದ ಪರ್ಯಾಯ ಉತ್ಪನ್ನದ ಲಭಿಸೀತೇ/ ದೊರಕೀತೇ ಎಂದು ನಾವು ಹುಡುಕಿದರೆ ತಪ್ಪೇ ಹೇಳಿ? ಉದಾಹರಣೆಗೆ ಟೆರ್ರಾಕೋಟಾದಿಂದ ಮಾಡಿದ ಹಣತೆಯ ಬದಲಿಗೆ "ಗೋವಿನ ಸಗಣಿ" ಯಿoದ ತಯಾರಾದ ಹಣತೆಗಳನ್ನು ಬಳಸಿದರೆ ಹೇಗೆ?

'ಗೋಮಯ' ದಲ್ಲಿ ಜೀವಾಣುನಾಶಕ (anti-bacterial) ಗುಣಗಳಿವೆ ಎಂದು ಸಂಶೋಧನೆ ತಿಳಿಸಿವೆ. ಮನೆಯ ಶುದ್ಧೀಕರಣಕ್ಕಾಗಿ ಪುಣ್ಯಾಹ ಮಾಡುವಾಗ ನಾವು ಗೋಮಯ ಬಳಸುವುದಿಲ್ಲವೇ? ಅಲ್ಲದೇ ಗೋಮಯದಿoದ ತಯಾರಿಸಲಾದ ದೀಪಗಳು ಸುಟ್ಟಾಗ ಹೊರ ಹೊಮ್ಮುವ ಹೊಗೆ ಯಾವುದೇ ರೀತಿಯಲ್ಲೂ ಪರಿಸರಕ್ಕೆ ಹಾನಿಯುoಟುಮಾಡುವುದಿಲ್ಲ. ಹಬ್ಬದ ನಂತರ ಮನೆಯಲ್ಲಿ ತೋಟವಿದ್ದರೆ ಗೊಬ್ಬರವಾಗಿಸಿ ಗಿಡಗಳಿಗೆ ನೀಡಬಹುದು, ಇಲ್ಲವೇ ಭೂಮಿಗೆ ಸುರಿದರೂ ನಷ್ಟವಿಲ್ಲ. ಈಗಾಗಲೇ ಹೇಳಿದ ಹಾಗೆ ಇವು ಪುನಃ ಬಳಕೆಗೆ ಬಾರದಿದ್ದರೂ, ನೈಸರ್ಗಿಕವಾಗಿ ಮಣ್ಣಿನಲ್ಲಿ ಕರಗಿಹೋಗುತ್ತವೆ. "ನೀನಾರಿಗಾದೆಯೋ ಎಲೆ ಮಾನವ" ಹಾಡನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳೋಣ. ಭಾರತದಲ್ಲಿ ಪೂಜ್ಯವೆಂದು ಭಾವಿಸುವ ಭಾರತೀಯ ತಳಿಗಳ ಗೋವನ್ನು ರಕ್ಷಿಸಲು ಅದೆಷ್ಟೋ ಗೋ ಶಾಲೆಗಳನ್ನು ನಿರ್ಮಿಸಲಾಗಿದೆ. ನಾವು ಗೋಮಯದಿಂದ ಮಾಡಿದ ದೀಪಗಳನ್ನು ಬಳಸಿದರೆ ಅವುಗಳಿಗೂ ಆದಾಯದ ಒಂದು ವ್ಯವಸ್ಥೆಯಾದೀತು ಅಲ್ಲವೇ? ಇದರೊಂದಿಗೆ ಮನೆಯಲ್ಲಿ ಹೈನುಗಾರಿಕೆಯಲ್ಲಿ ನಿರತ ಮಹಿಳೆಯರಿಗೆ ಉದ್ಯೋಗಾವಕಾಶವೂ ದೊರಯುತ್ತದೆ. ಗೋಮಯದ ದೀಪಗಳನ್ನು ತಯಾರಿಸುವ ಪ್ರಕ್ರಿಯೆಯೂ ಅತ್ಯಂತ ಸರಳ. ಹಸುವಿನ ಗೋಮಯಕ್ಕೆ ತುಪ್ಪ ಅಥವಾ ನೈಸರ್ಗಿಕ ತೈಲ ಮಿಶ್ರಣ ಮಾಡಿ ಅವುಗಳನ್ನು ಹಣತೆಯ ರೂಪಕ್ಕೆ ತಂದು ಒಣಗಿಸಿಡಬಹುದು. ಗೋಮಯದ ದೀಪಗಳ ಬಳಕೆ ಪರಿಸರ ರಕ್ಷಣೆಯ ಜೊತೆಗೆ ಗ್ರಾಮೀಣ ಆರ್ಥಿಕತೆಯ ಬಲವರ್ಧನಕ್ಕೂ ಕಾರಣವಾಗಿದೆ. ಇತ್ತೀಚೆಗೆ ಅನೇಕ ಗೋಶಾಲೆಗಳು ಮತ್ತು ಸ್ವಸಹಾಯ ಸಂಘಗಳು ಈ ರೀತಿಯ ಗೋಮಯ ದೀಪಗಳ ತಯಾರಿಕೆಯನ್ನು ಕೈಗೊಂಡಿವೆ. ಈ ಕುರಿತು ಒಂದಿಬ್ಬರಿಗಾದರೂ ಹಬ್ಬದ ನೆಪದಲ್ಲಿ ಜಾಗೃತಿ ಮೂಡಿಸೋಣವೇ?

ಈ ಬಾರಿಯ ದೀಪಾವಳಿಗೆ ನಾವು ಪ್ರಕೃತಿಯೊಂದಿಗೆ ಹೆಜ್ಜೆಹಾಕುವ ಪ್ರಯತ್ನ ಮಾಡೋಣ. ಪಟಾಕಿ ಸಿಡಿಸುವ ನಮ್ಮ ಸಂಭ್ರಮ ಇತಿ-ಮಿತಿಯಲ್ಲಿದ್ದರೆ ಚೆಂದ. ಅಥವಾ ಅದೇ ಹಣದಲ್ಲಿ ನಮ್ಮ ಮನೆಯ ಕೆಲಸದವಳ ಅಥವಾ ಇನ್ನಾವುದೋ ಅಸಹಾಯಕ ಮಗುವಿಗೆ ಹೊಸ ಬಟ್ಟೆಯನ್ನು ಹಬ್ಬಕ್ಕಾಗಿ ನಾವು ಕೊಡಿಸಿ ಸಂಭ್ರಮಿಸಬಹುದೇ. ಇನ್ನೊಂದು ಜೀವಕ್ಕೆ ಬೆಳಕಾಗುವ ಮೂಲಕ ಪ್ರಕೃತಿ- ಪುರುಷರ ನಡುವಿನ ಬಾಂಧವ್ಯಕ್ಕೆ ಹೊಸ ಮುನ್ನಡಿ ಬರೆಯುವತ್ತ ಆತ್ಮಾವಲೋಕನ ಮಾಡಿಕೊಂಡ ಸಂಯೋಜನೆ ನಮ್ಮ ಹಬ್ಬದ ಸೌಂದರ್ಯವನ್ನು ಮತ್ತಷ್ಟು ಬೆಳಗಿಸಲಿ.

ಲೇಖಕರ ಪರಿಚಯ

ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net