ಭೂ ವಂದನ - 12 : ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಇ - ತ್ಯಾಜ್ಯ! Bhoo Vandana 12

Bhoo Vandana 12
Published on

Bhoo Vandana 12 : ನೆನಪಿದೆಯೇ ಆ ದಿನಗಳು! ಒಂದೂರಿಂದ ಇನ್ನೊಂದೂರಿಗೆ ಮಾಹಿತಿ ಕಳುಹಿಸಲು ತೆಗೆದುಕೊಳ್ಳುತ್ತಿದ್ದ ಸಮಯ! ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಕ್ಷಿಪ್ರ ಬೆಳವಣಿಗೆಯ ಕಾರಣ ನಾವು ಮನೆಯಲ್ಲಿರುವ ಪ್ರತಿ ಸದಸ್ಯರ ಬಳಿಯೂ ಒಂದಕ್ಕಿ೦ತ ಹೆಚ್ಚು ಮೊಬೈಲ್ ಫೋನುಗಳನ್ನು ಹೊಂದಿರುವ ಕಾಲಕ್ಕೆ ಬಂದಿದ್ದೇವೆ.

Nandini Lakshmikanth

ದೂರದಲ್ಲೆಲ್ಲೋ ಇರುವವರ ಜೊತೆ ಮಾತನಾಡಲು, ಗೆಳೆತನ ಬೆಳಸಲು, ವ್ಯವಹಾರ ವೃದ್ಧಿಸಿಕೊಳ್ಳಲು, ತಂಡವಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ಇಂಟರ್ನೆಟ್ ಆಧಾರಿತ ಸಂವಹನದ ಉಪಕರಣಗಳ ಆವಿಷ್ಕಾರ ಮಾನವನಿಗೆ ವರದಾನವೇ. ತಂತ್ರಜ್ಞಾನ ಕ್ಷೇತ್ರದಲ್ಲಾಗಿರುವ ಇನ್ನೂ ಅನೇಕ ಬೆಳವಣಿಗೆಗಳು ನಮ್ಮ ಜೀವನ ಶೈಲಿಯನ್ನು ಸುಗಮಗೊಳಿಸಿವೆ. ಈ ಬೆಳವಣಿಗೆ ಚೆಂದವೇ- ಹಿತವೇ! ಆದರೆ, ಅತಿಯಾದರೆ ಅಮೃತವೂ ವಿಷವೆನ್ನುವಂತಾಗಿದೆ ನಮ್ಮಿಂದಿನ ಸ್ಥಿತಿ. ಕಾರಣ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅಳವಡಿಸಿಕೊಳ್ಳಲು ನಾವು ಕೊಳ್ಳುತ್ತಿರುವ ತಂತ್ರಜ್ಞಾನ ಆಧಾರಿತ ವಿವಿಧ ಉಪಕರಣಗಳು ಮತ್ತು ಆ ಕಾರಣಕ್ಕಾಗಿ ನಿರ್ಮಿಸುತ್ತಿರುವ ಇ-ತ್ಯಾಜ್ಯದ ಪ್ರಮಾಣ.

ಹೌದಲ್ಲ. ಪರಿಸರಕ್ಕೆ ಹಾನಿಮಾಡುವ ತ್ಯಾಜ್ಯಗಳನ್ನು ನಾವು ಘನ, ದ್ರವ, ವಾಯು, ಜೈವಿಕದ ಜೊತೆಗೆ ಇ-ತ್ಯಾಜ್ಯವನ್ನೂ ಗುರುತಿಸುತ್ತೇವೆ. ಬೇರೆ ತ್ಯಾಜ್ಯಗಳoತೆ ಇ-ತ್ಯಾಜ್ಯದ ವಿಲೇವಾರಿ ಸೂಕ್ತ ಹಾಗೂ ಕ್ರಮಬದ್ಧ ರೀತಿಯಲ್ಲಿ ನಡೆಯದಿದ್ದರೆ, ಅವು ಕೇವಲ ಪರಿಸರದ ನಾಶಕ್ಕೆ ಮಾತ್ರವಲ್ಲದೇ ನಮ್ಮ ಆರೋಗ್ಯಕ್ಕೂ ಸಮಸ್ಯೆಯನ್ನು ತಂದೊಡ್ಡುವುದೆಂದು ಸಂಶೋಧನೆಗಳು ತಿಳಿಸಿವೆ. ಅಂದರೆ ನಾವು ಬಳಸುವ ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬಲೆಟ್​ಗಳು, ಮೊಬೈಲ್ ಫೋನುಗಳು, ರೇಡಿಯೋ, ಟಿವಿ, ಹೆಡ್ ಫೋನ್​ಗಳು ಹಾಗೂ ಇನ್ನೂ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾದಾಗ ಅಥವಾ ನಮಗೆ ಬೇಡವಾದಾಗ ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಇ-ತ್ಯಾಜ್ಯವಾಗಿ ಮನೆಯಿಂದ ಹೊರಬೀಳುತ್ತವೆ ಮತ್ತು ಭೂಮಿಗೆ ಭಾರವಾಗುತ್ತವೆ.

ನಿಜ, ಘನ, ದ್ರವ ಮತ್ತು ವಾಯು ತ್ಯಾಜ್ಯಗಳಂತೆ ಇ-ತ್ಯಾಜ್ಯ ನಮ್ಮ ಮನೆಯಿಂದ ಪ್ರತಿದಿನ ಹೊರಬರಲಾರದು. ಆದರೆ, ಉತ್ಪಾದನೆಯಾಗುತ್ತಿರುವ ‘ಎಲೆಕ್ಟ್ರಾನಿಕ್’ ಕಸದ ಪ್ರಮಾಣವು, ದಾಖಲಾಗಿರುವ ಇ-ವೇಸ್ಟ್ ಮರುಬಳಕೆಗಿಂತ ಐದು ಪಟ್ಟು ವೇಗವಾಗಿ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ನಾಲ್ಕನೇ ಗ್ಲೋಬಲ್ ಇ-ವೇಸ್ಟ್ ಮಾನಿಟರ್ (GEM) ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿಯ ಪ್ರಕಾರ 2022ರಲ್ಲಿ ದಾಖಲೆಯ 62 ಮಿಲಿಯನ್ ಟನ್ (Mt) ಇ-ವೇಸ್ಟ್ ಉತ್ಪಾದನೆಯಾಗಿದ್ದು 2030 ರ ವೇಳೆಗೆ I - ತ್ಯಾಜ್ಯದ ಸoಖ್ಯೆಯಲ್ಲಿ ಇನ್ನೂ 32% ಹೆಚ್ಚಳವಾಗಿ 82 ಮಿಲಿಯನ್ ಟನ್ ತಲುಪಲಿದೆ. ಬದಲಾಗುತ್ತಿರುವ ತಂತ್ರಜ್ಞಾನದ ಕಾರಣ ಕೋಟ್ಯಂತರ ಡಾಲರ್ ಮೌಲ್ಯದ ತಂತ್ರಜ್ಞಾನಾತ್ಮಕ ಸಂಪನ್ಮೂಲಗಳು ವ್ಯರ್ಥವಾಗಿ ತ್ಯಜಿಸಲ್ಪಡುತ್ತಿವೆ ಎoದೂ ವರದಿ ತಿಳಿಸುತ್ತದೆ.

TU ಮತ್ತು UNITAR ವರದಿಯ ಪ್ರಕಾರ, 2022ರಲ್ಲಿ ಉತ್ಪಾದನೆಯಾದ 62 ಮಿಲಿಯನ್ ಟನ್ ಇ-ವೇಸ್ಟ್ ಅನ್ನು 1.55 ಮಿಲಿಯನ್ 40-ಟನ್ ಲಾರಿಗಳಲ್ಲಿ ತುಂಬಿ ಒಂದೇ ಸಾಲಿನಲ್ಲಿ ನಿಲ್ಲಿಸಿದರೆ ಭೂಮಧ್ಯ ರೇಖೆ ಸುತ್ತುವಷ್ಟು ದೂರದ ವಾಹನ ಸರಪಳಿಯನ್ನು ರೂಪಿಸಬಹುದಂತೆ. ಇ-ತ್ಯಾಜ್ಯದಿಂದ 62 ಬಿಲಿಯನ್ ಡಾಲರ್ ಮೌಲ್ಯದ ನೈಸರ್ಗಿಕ ಸಂಪನ್ಮೂಲಗಳು ಕಣ್ಮರೆಯಾಗಿದ್ದು, ಜಗತ್ತಿನ ಸಮುದಾಯಗಳಿಗೆ ಹೆಚ್ಚುವರಿ ಮಾಲಿನ್ಯ ಅಪಾಯವನ್ನುಂಟುಮಾಡಿದೆ. ಇ-ವೇಸ್ಟ್ ಅಂದರೆ ಪ್ಲಗ್ ಅಥವಾ ಬ್ಯಾಟರಿ ಆಧರಿಸಿ ಉಪಯೋಗಿಸುವ ಯಾವುದೇ ಉತ್ಪನ್ನ - ಕಂಪ್ಯೂಟರ್, ಮೊಬೈಲ್​ನಿಂದ ಹಿಡಿದು ಮಕ್ಕಳ ಆಟಿಕೆಗಳೂ ಸೇರಿದಂತೆ ಇ- ತ್ಯಾಜ್ಯದಲ್ಲಿ ಸೀಸ (Lead), ಪಾರದ (Mercury), ಕ್ಯಾಡ್ಮಿಯಂ (Cadmium), ಕ್ರೋಮಿಯಂ (Chromium) ಮುಂತಾದ ಅಪಾಯಕಾರಿ ಲೋಹಗಳ ಅಂಶಗಳಿವೆ. ಈ ರಾಸಾಯನಿಕಗಳು ಮಣ್ಣು, ನೀರು, ಗಾಳಿಯೊಂದಿಗೆ ಬೆರೆತಾಗ ಪರಿಸರವನ್ನು ವಿಷಮಯಗೊಳಿಸುತ್ತವೆ. ಮಣ್ಣಿನಲ್ಲಿ ಬೆರೆಯುವ ಈ ಲೋಹಗಳು ಬೆಳೆಯ ಗುಣಮಟ್ಟವದ ಮೇಲೆ ಪ್ರಭಾವ ಬೀರುತ್ತವಷ್ಟೇ ಅಲ್ಲದೆ, ಅಂತಹ ನೆಲದಲ್ಲಿ ಬೆಳೆ- ಹಣ್ಣುಗಳನ್ನು ಸೇವಿಸಿದಾಗ ಮಾನವನ ಮೆದುಳು, ನರಗಳು, ಶ್ವಾಸಕೋಶ, ಕಿಡ್ನಿ ಹಾಗೂ ಹೃದಯದ ಮೇಲೂ ತಮ್ಮ ಪ್ರಭಾವವನ್ನು ಬೀರುತ್ತದೆ ಎನ್ನುವ ಮಾಹಿತಿಯನ್ನು ಎಚ್ಚರಿಕೆಯೊಂದಿಗೆ ನೆನಪಿಟ್ಟುಕೊಳ್ಳಬೇಕು.

ಇ- ಉತ್ಪನ್ನಗಳು ಕಡಿಮೆ ಬೆಲೆಯದ್ದೇನಲ್ಲ. ಬೆಲೆ ಕೊಟ್ಟು ತರುವ ವಸ್ತುವನ್ನು ಯಾರೂ ಪ್ರತಿದಿನ ಬಿಸುಡುವುದಿಲ್ಲ. ಹೀಗಿದ್ದೂ ತ್ಯಾಜ್ಯ ಹೆಚ್ಚಾಗಲು ಕಾರಣವೇನು? ವಿಜ್ಞಾನ ಮತ್ತು ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಇಂದಿನ ಸಮಯದಲ್ಲಿ ಮನೆಗಳಲ್ಲಿ ಜೀವನವನ್ನು ಸುಲಭಗೊಳಿಸುವ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಮಾತ್ತು ಖರೀದಿ ಎರಡೂ ಹೆಚ್ಚಾಗಿದೆ. ಆದರೆ, ಹೊಸ ಉಪಕರಣಗಳು ಅಥವಾ ನಮ್ಮಲ್ಲಿಗಾಗಲೇ ಇರುವ ಉಪಕರಣಗಳು ಇನ್ನೂ ಹೆಚ್ಚಿನ 'ಫೀಚರ್' - ವಿ‍ಷೇಶತೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾದಂತೆ ನಮ್ಮಲ್ಲೀಗಾಗಲೇ ಇರುವ ವಸ್ತುಗಳ ತ್ಯಜಿಸಿ ಹೊಸ ಉಪಕರಣಗಳ ಕೊಳ್ಳುವ ಆತುರಕ್ಕೆ ನಾವು ಬಲಿಯಾಗುತ್ತಿರುವುದು ಹೆಚ್ಚುತ್ತಿರುವ ಇ- ತ್ಯಾಜ್ಯಕ್ಕೆ ಕಾರಣ.

ಉದಾಹರಣೆಗೆ ಹೊಸ ಫೀಚರ್​ಗಳನ್ನು ಹೊತ್ತ ಮೊಬೈಲ್ ಮಾರುಕಟ್ಟೆಗೆ ಬರುತ್ತಲೇ ಹೊಸ ತಂತ್ರಜ್ಞಾನದ ಉಪಕರಣ ತಮ್ಮ ಬಳಿಯಿರಬೇಕೆಂಬ ಅಪೇಕ್ಷೆಯವರು ತಾವು ಇನ್ನೂ ಬಳಸಬಹುದಾದ ಮೊಬೈಲ್ ಅನ್ನು ಬದಲಾಯಿಸಲು ಮುಂದಾಗುವ ಸಾಮಾನ್ಯ ದೃಶ್ಯ ಎಲ್ಲರ ಮುಂದಿದೆ. ಇನ್ನು ಮನೆಯೊಳಗಂತೂ ನಾವು ಬಳಸದಿರುವ ಇ ಉಪಕರಣಗಳು ಸಾಲಾಗಿ ನಿಂತು ನಮ್ಮನ್ನು ಸ್ವಾಗತಿಸುತ್ತವೆ. ವಸ್ತುವನ್ನು ಎಷ್ಟು ಮತ್ತು ಎಷ್ಟರ ಮಟ್ಟಿಗೆ ಬಳಸುತ್ತೇವೆ ಎನ್ನುವ ಪರಿಜ್ಞಾನ ಕೊಳ್ಳುವಾಗ ನಮಗಿರುವುದಿಲ್ಲ. ನಮ್ಮ ಬಳಿ ಈ ವಸ್ತುವಿಲ್ಲ ನಮಗಿದು ಬೇಕು ಅಷ್ಟೇ ಎನ್ನುವತ್ತ ಯೋಚಿಸುವ ಮನೋಭಾವವೇ ಇ - ತ್ಯಾಜ್ಯದ ಹೆಚ್ಚಳಕ್ಕೆ ಒಂದು ಕಾರಣವಾದರೆ. ಇ-ವಸ್ತುಗಳ ತ್ಯಾಜ್ಯ ಕುರಿತು ನಮಗಿರುವ ದಿವ್ಯ ನಿರ್ಲಕ್ಷ್ಯ.

ನೆನಪಿಡೋಣ. ಇ - ಉತ್ಪನ್ನಗಳ ಮರುಬಳಕೆ ತುಂಬ ಕಡಿಮೆ. ಉದಾಹರಣೆಗೆ ಇಂದಿನ ಲ್ಯಾಪ್​ಟಾಟ್​ಗಳಲ್ಲಿ ಸಿಡಿಗಳನ್ನು ಹಾಕುವ ವ್ಯವಸ್ಥೆ ಅಥವಾ ಅವುಗಳನ್ನು ಪ್ರೊಜೆಕ್ಟರ್​ಗೆ ಅಳವಡಿಸಲು ಬೇಕಾದ ವ್ಯವಸ್ಥೆ ಬೇರೆ ತರಹದ್ದಾಗಿರುವುದರಿಂದ ಹಳೆಯ ಉತ್ಪನ್ನವನ್ನು ದಾನವಾಗಿ ನೀಡಿದರೂ ಅವುಗಳನ್ನು ಸ್ವೀಕರಿಸುವವರು ಇರುವುದಿಲ್ಲ. ರಿಸೈಕಲ್ ವ್ಯವಸ್ಥೆಯಲ್ಲಿರುವ ಲಾಭಾಂಶವೂ ಅತಿ ಕಡಿಮೆ ಎಂದು ಇ ಮಾರುಕಟ್ಟೆ ಹೇಳುತ್ತದೆ. 2022ರಲ್ಲಿ ಉತ್ಪಾದನೆಯಾದ ಇ-ವೇಸ್ಟ್‌ನ ಕೇವಲ 22.3% ಮಾತ್ರ ಸರಿಯಾಗಿ ಸಂಗ್ರಹಿಸಿ ಮರುಬಳಕೆ ಮಾಡಲಾಗಿದೆ. ಇದರರ್ಥ ಬೇಡಿಕೆಯಲ್ಲಿ ಕೇವಲ 1% ಮಾತ್ರ ಇ-ವೇಸ್ಟ್ ಮರುಬಳಕೆಯಿಂದ ಪೂರೈಸಲ್ಪಡುತ್ತಿದೆ ಎಂದಾಯ್ತು.

ಹಾಗಾದರೆ ಇ ತ್ಯಾಜ್ಯದ ಭೀಕರತೆ ಭೂಮಿಗೆ ಕಡಿಮೆ ಮಾಡಲು ನಾವೇನು ಮಾಡಬಹುದು? ಸಾಧ್ಯವಾದಷ್ಟೂ ಹಳೆಯ ಉಪಕರಣಗಳನ್ನು ಸರಿಯಾಗಿಟ್ಟುಕೊಂಡು ಬಳಸೋಣ. ಹಳೆಯ ಉಪಕರಣಗಳ ಸುರಕ್ಷಿತ ವಿಲೇವಾರಿಯತ್ತ ಅಂದರೆ ಇ-ತ್ಯಾಜ್ಯವನ್ನು ಸಾಮಾನ್ಯ ಕಸದ ಜೊತೆ ಹಾಕದೆ, ವಿಶೇಷ ತ್ಯಾಜ್ಯ ಸಂಗ್ರಹ ಕೇಂದ್ರಕ್ಕೆ ಕೊಡುವುದು ಮತ್ತು ಉಪಯೋಗಕ್ಕೆ ಬಾರದ ಬ್ಯಾಟರಿ, ಸಿಡಿಗಳು, ಹೆಡ್ ಫೋನುಗಳು ಇತ್ಯಾದಿಗಳನ್ನು ಪ್ರತ್ಯೇಕಿಸಿದ ನಂತರ ಕಸಕ್ಕೆ ನೀಡುವುದು. ಇದಲ್ಲದಕ್ಕಿಂತ ಮುಖ್ಯವಾದ ಕೆಲಸವೆಂದರೆ ಇ-ತ್ಯಾಜ್ಯದ ಅಪಾಯಗಳ ಬಗ್ಗೆ ಅರಿವು ಮೂಡಿಸಿ ಸರಿಯಾದ ವಿಧಾನದಲ್ಲಿ ವಿಲೇವಾರಿ ಮಾಡಲು ಪ್ರೋತ್ಸಾಹಿಸುವುದು. ಮಾಡೋಣವೇ?

ಲೇಖಕರ ಪರಿಚಯ

ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net