ಭೂ ವಂದನ - 10 : ನಿಮ್ಮ ಟೂಥ್ ಬ್ರಷ್ ಹಸಿರಾಗಿದೆಯೇ..!? Bhoo Vandana 10

Bhoo Vandana 10
Published on

Bhoo Vandana 10 : "ನಿಮ್ಮ ಟೂಥ್ ಬ್ರಷ್ ಇದ್ದಿಲಿನ ಅಂಶವನ್ನು ಒಳಗೊಂಡಿದೆಯೇ" ಎನ್ನುವ ಜಾಹೀರಾತು ನೋಡುತ್ತಿದ್ದಂತೆ, ಒಂದು ಕಾಲದಲ್ಲಿ ಇದ್ದಿಲು ದಂತಗಳಿಗೆ ಘಾಸಿ ಮಾಡುತ್ತವೆ ಹೀಗಾಗಿ ನಯವಾದ ನೈಲಾನ್ ಕೂದಲನ್ನೊಳಗೊಂಡ, ನಮ್ಮ ಬಾಯಿಯಲ್ಲಿರುವ ಪ್ರತಿದಂತವನ್ನೂ ಸ್ವಚ್ಛಗೊಳಿಸಲು ಅನುಕೂಲಕರವಾದ ಹಿಡಿಕೆಯುಳ್ಳ.... ಈ ಕಂಪನಿಯ 'ಟೂಥ್ ಬ್ರಷ್'ಗಳನ್ನು ಬಳಸಿ ಎಂದು ಬಹಳ ಹಿಂದೆ ಮೂಡಿ ಬರುತ್ತಿದ್ದ ಜಾಹೀರಾತು ನೆನಪಿಗೆ ಬರುತ್ತದೆ.

ಪ್ರತಿದಿನ ಸುಪ್ರಭಾತವಾದ ನಂತರದ ನಮ್ಮ ದಿನಚರಿಯ ಮೊದಲ ಕೆಲಸವೇ ಹಲ್ಲುಜ್ಜುವುದು. ಕಣ್ಣಿಗೆ ಹಿತವೆನಿಸುವ ಬಣ್ಣದ, ನೋಡಲು ಮೃದುವೆನಿಸುವ ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆನ್ನಲಾದ ಈ ಟೂಥ್ ಬ್ರಷ್​​ಗಳನ್ನು ತಯಾರಿಸಲು ದೊಡ್ಡ ಕoಪನಿಗಳು ಸ್ಪರ್ಧೆಗಿಳಿದಿವೆ. ವರ್ಷಕ್ಕೆ ಸುಮಾರಾಗಿ ಮೂರು ಬಾರಿ ಬದಲಾಯಿಸುವ, ದಂತಗಳನ್ನು ಸ್ವಚ್ಛಗೊಳಿಸುವ ಈ ಉತ್ಪನ್ನ ಬಹಳವೆಂದರೆ ಭೂಮಿಗೆ ತ್ಯಾಜ್ಯ ರೂಪದಲ್ಲಿ ಸೇರಬಹುದು ಹಾಗೂ ಅದರ ಪರಿಣಾಮ ನಗಣ್ಯ ಎಂದು ನಾವೆಂದುಕೊಳ್ಳುವುದು ಸ್ವಾಭಾವಿಕ. ಆದರೆ, ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಲೇಖನವೊಂದನ್ನು ಉಲ್ಲೇಖಿಸುವುದಾದರೆ, ಅತ್ಯಂತ ಸ್ವಚ್ಛವೆಂದು ಪರಿಗಣಿಸಲಾಗುವ 'ಹವಾಯಿ ದ್ವೀಪ'ಗಳ ಸಮುದ್ರ ತೀರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿದ್ದವರಿಗೆ ವರ್ಷಗಳ ಹಿಂದೆ ಅಪರೂಪಕ್ಕೆ ಕಾಣಿಸುತ್ತಿದ್ದ ಟೂಥ್ ಬ್ರಷ್ ಇದೀಗ ನೂರಕ್ಕೂ ಹೆಚ್ಚು ಪ್ರತಿ ಬಾರಿಯ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಸಿಗುತ್ತಿವೆಯಂತೆ. ಹೊಳೆಯುವ ಪ್ಲಾಸ್ಟಿಕ್ಕಿನ ಕೈಹಿಡಿಯ ಕೊನೆಯಲ್ಲಿ ನಮ್ಮ ದವಡೆಗೆ ಒಂದಿಷ್ಟ ನೋವು ಮಾಡದ ನುಣಪಿನ ಪ್ಲಾಸ್ಟಿಕ್ ಕೊದಲುಗಳುಳ್ಳ ತೂಥ್ ಬ್ರಷ್​ಗಳು ಸಮುದ್ರ ತಟವನ್ನು ಸೇರಿದ್ದಾದರೂ ಹೇಗೆ? ಆಲೋಚಿಸಬೇಕಿದೆ.

Nandini Lakshmikanth

ದಂತಗಳ ಕುರಿತ ಕಾಳಜಿ ಮನಷ್ಯನಿಗೇನೂ ಹೊಸದಲ್ಲ. ಗೌತಮ ಬುದ್ದ ತನ್ನ ಹಲ್ಲುಗಳ ಸ್ವಚ್ಛತೆಗಾಗಿ ಮೃದುವಾದ ಕಡ್ಡಿಗಳನ್ನು ಅಗೆದು ಅದನ್ನು ಇಂದಿನ ಹಗರಾದ ಬ್ರಷ್​ಗಳ ಮಾದರಿಯಲ್ಲಿ ಬಳಸುತ್ತಿದ್ದ ಎನ್ನುವ ಮಾಹಿತಿ ನಮಗೆ ದೊರಕುತ್ತದೆ. ಈಜಿಪ್ಟ್​ನ ಉತ್ಖನನದಲ್ಲಿ ಹಲ್ಲಿನ ಕಡ್ಡಿಗಳು ದೊರಕಿದ್ದು ದಂತಗಳ ಸ್ವಚ್ಛತೆಗೆ ಜನರು ಬಹಳ ಹಿಂದಿನಿಂದಲೂ ಪ್ರಾಮುಖ್ಯತೆ ನೀಡುತ್ತಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ. ಅದೇ ರೀತಿ ರೋಮನ್ನರೂ ಮತ್ತು ಬೆಬಿಲೋನಿಯನ್​ರೂ ದಂತ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿದ್ದರ ಬಗ್ಗೆ ದಾಖಲೆಗಳು ದೊರಕಿವೆ. ಭಾರತದ ಇತಿಹಾಸದ ಪುಟಗಳಲ್ಲಿ ವೈಯುಕ್ತಿಕ ಸ್ವಚ್ಛತೆಗೆ ಇದ್ದ ಪ್ರಾಮುಖ್ಯತೆಯ ಕುರಿತು ಸಿಂಧೂ ನದಿಯ ನಾಗರಿಕತೆ ನಮಗೆ ತಿಳಿಸುತ್ತದೆ. ಮೊಹೆಂಜೋದಾರೋ ಮತ್ತು ಹರಪ್ಪಗಳ ಉತ್ಖನನಗಳು ಉತ್ತಮ ಒಳಚರಂಡಿ ಮತ್ತು ಸ್ನಾನ ಗೃಹದ ವ್ಯವಸ್ಥೆಯ ಬಗ್ಗೆ ಮಾತ್ರವಲ್ಲದೇ ದೊರತ ತಲೆ ಬುರಡೆಗಳಲ್ಲಿ ಉತ್ತಮ ದಂತಗಳಿದ್ದು ಮತ್ತು ಅತಿ ಕಡಿಮೆ ಹಲ್ಲಿನ ಕುಳಿಗಳಿದ್ದ ಬಗ್ಗೆಯೂ ತಿಳಿಸುತ್ತವೆ. ಅಂದಿನ ಜನರು ಬಳಸುತ್ತಿದ್ದ ಅಗೆಯುವ ಕಡ್ಡಿಗಳೂ ದಂತ ಸಂರಕ್ಷಣೆಯ ಬಗ್ಗೆಯಿದ್ದ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತದೆ. ಅಥರ್ವವೇದದಲ್ಲಿ ದಂತಗಳ ಸ್ವಚ್ಛತೆಯ ಬಗ್ಗೆ ಸಾಕಷ್ಟು ಮಾಹಿತಿ ನಮಗೆ ದೊರಕುತ್ತದೆ. ಚರಕ ಮತ್ತು ಸುಶೃತ ಸಂಹಿತಗಳಲ್ಲಿ ದಂತಧವನ ಪ್ರತಿ ನಿತ್ಯದ ಭಾಗವಾಗುವ ಬಗ್ಗೆ ವಿವರಣೆ ನೀಡುತ್ತವೆ. ಬೇವು ಅಥವಾ ಕರಿ ಜಾಲಿ (babool) ಮರಗಳ ಎಳೆಯ ರಂಬೆಗಳನ್ನು ಅಗೆಯುವುದರಿಂದ ಕೇವಲ ಹಲ್ಲುಗಳು ಸ್ವಚ್ಛವಾಗುವುದಲ್ಲದೇ ಬಾಯಿಯ ಆರೋಗ್ಯವನ್ನು ಕಾಪಾಡುವ (antibacterial) ಔಷದೀಯ ಗುಣಗಳನ್ನೂ ಹೊಂದಿವೆ ಎನ್ನುವ ಮಾಹಿತಿಯೂ ಲಭ್ಯವಿದೆ. ಅದರಲ್ಲೂ ಬಬೂಲ್ ಮರದ ಕೊಂಬೆಗಳ ಎಳೆ ಭಾಗವನ್ನು ಕಚ್ಚಿದರೆ ಅವು ಮೃದುವಾದ ಬ್ರಷ್ ನಂತೆ ಕೆಲಸ ಮಾಡುತ್ತವೆ ಎಂಬ ವಿವರಣೆಯೂ ಇದೆ. ಈ ಪದ್ಧತಿ ಇಂದಿಗೂ ಹಲವಡೆ ಚಾಲ್ತಿಯಲ್ಲಿದೆ. ಬಾಯಿಯ ಆರೋಗ್ಯ ಕೇವಲ ವೈದ್ಯಕೀಯವಾಗಿ ಮಾತ್ರವಲ್ಲದೇ ಧಾರ್ಮಿಕ ಮತ್ತು ಸಾಮಾಜಿಕ ಮಹತ್ವವನ್ನೂ ಪಡೆದಿವೆ ಎನ್ನುವುದನ್ನು ನಾವು ನಮ್ಮ ಹಿರಿಯರ ಆಚರಣೆಗಳಲ್ಲಿ ಗಮನಿಸಿರುತ್ತೇವೆ. ಹಲ್ಲು ಮತ್ತು ಬಾಯಿಯ ಅಶುಚಿತ್ವವನ್ನು ಬಹಳ ಗಂಭೀರವಾಗಿಯೇ ಗಮನಿಸುತ್ತಿದ್ದ ಇತಿಹಾಸ ನಮ್ಮದು.

ನಿಸರ್ಗ ಸ್ನೇಹಿಯಾದ 'ಹಲ್ಲುಕಡ್ಡಿ' ಗಳನ್ನು (ಟೂಥ್ ಬ್ರಷ್​ಗಳ) ಬಳಸುವುದು ಶ್ರೀಮಂತಿಕೆಯ ಸಂಕೇತವಾದಂತೆ, ಹಲ್ಲು ಪುಡಿಗಳ ಆಗಮನವಾಯಿತು. ಜನರು ಬಹುಸಂಖ್ಯೆಯಲ್ಲಿ ತಮ್ಮ ಕೈ ಬೆರಳುಗಳನ್ನು ಬಳಸಿ ಹಲ್ಲುಪುಡಿಗಳಿಂದ ಸ್ವಚ್ಛಗೊಳಿಸಿಕೊಳ್ಳುವುದು ಸಾಮಾನ್ಯವಾಯಿತು. ಜಾಗತಿಕ ಯುದ್ಧದ ಸಮಯದಲ್ಲಿ ಸೈನಿಕರ ದಂತದ ಆರೋಗ್ಯ ಕಳವಳಕಾರಿ ಪರಿಸ್ಥಿತಿಯನ್ನು ತಂದೊಡ್ಡಿತು. ಸುಮಾರು 1930ರ ವೇಳೆಗೆ ಪರಿಸ್ಥಿತಿ ಬದಲಾಗಿ, ನೈಲಾನ್ ಮತ್ತು ಇನ್ನಿತರ ಪ್ಲಾಸ್ಟಿಕ್ ಬಳಸಿ ಸಿದ್ಧಪಡಿಸಿದ ಟೂಥ್ ಬ್ರಷ್​ಗಳು ಎಲ್ಲರಿಗೂ ಲಭ್ಯವಾಗುವಂತಾಯ್ತು. ಎಲ್ಲರಿಗೂ ಬೇಕಾದ ಹೊಸದೊಂದು ಉತ್ಪನ್ನದ ಅವಿಷ್ಕಾರವಾಗಿತ್ತು. ತನ್ನ ಆಗಮನದ ದಿನದಿಂದ ಇoದಿನವರೆಗೂ ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳದೇ, ದೊಡ್ಡ ದೊಡ್ಡ ಕಂಪನಿಗಳೂ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಏಕೈಕ ಉತ್ಪನ್ನವೆನ್ನುವ ಹೆಗ್ಗಳಿಗೆ ಟೂಥ್ ಬ್ರಷ್​ನದ್ದು.

ಯಾರಿಗೆ ತಾನೇ ಸ್ವಚ್ಛ ಹಲ್ಲುಗಳನ್ನು ಹೊಂದಲು ಇಷ್ಟವಾಗುವುದಿಲ್ಲ? ಇಂದಿನ ದಿನಗಳಲ್ಲಂತೂ ಟೂಥ್ ಬ್ರಷ್ ಮುಟ್ಟದೇ ಯಾರ ದಿನವೂ ಆರಂಭವಾಗುವುದಿಲ್ಲ. ಮನೆಯ ಪ್ರತಿಯೊಬ್ಬರಿಗೆ ಅವರ ದಂತದ ಹಾಗೂ ವಸಡಿನ ಸೂಕ್ಷ್ಮತೆಗನುಸಾರ ಸಿದ್ಧಪಡಿಸಿದ 'ಬ್ರಷ್' ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಮನುಷ್ಯ ತನ್ನ ಜೀವನಕ್ಕೆ ಅತೀ ಮುಖ್ಯವೆಂದು ಭಾವಿಸುವ ಅನೇಕ ವಸ್ತುಗಳ ಕುರಿತಾಗಿ ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯ MIT, 2003ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ಜನ ಕಾರು, ಲ್ಯಾಪ್ ಟಾಪ್ ಅಥವಾ ಮೊಬೈಲ್​ಗಳಿಗೂ ಮುನ್ನದ ಪ್ರಾಶಸ್ತ್ಯವನ್ನು ಟೂಥ್ ಬ್ರಷ್​ಗೆ ನೀಡಿದ್ದರು. ಆದರೆ, ನಮ್ಮ ದೇಹದ ಅತ್ಯಂತ ಮುಖ್ಯ ಭಾಗದ ಸ್ವಚ್ಛತೆಗೆ ಅಗತ್ಯವಾದ ಈ ಟೂಥ್ ಬ್ರಷ್​ಗಳು ತ್ಯಾಜ್ಯವಾದಾಗ ಅವು ಭೂಮಿಯಲ್ಲಿ ಸೇರುವುದೇ ಹೆಚ್ಚು. ಪಾಲಿಪ್ರೊಪಿಲೀನ್ (ಪ್ಲಾಸ್ಟಿಕ್) ಹಿಡಿ ಹಾಗೂ ನೈಲಾನ್ ಹಲ್ಲುಕೂದಲಿನಿಂದ (bristles) ಹೊಂದಿರುವ ಅಂದರೆ ಪಾಲಿಮರ್ ಆಧಾರಿತವಾದ ಈ ಉತ್ಪನ್ನ, ನೈಲಾನ್ ಮತ್ತು ಪ್ಲಾಸ್ಟಿಕ್‌ಗಳ ಮಿಶ್ರಣದಿಂದ ತಯಾರಾಗಿರುತ್ತವಾದ್ದರಿಂದ ಪುನರ್ ಬಳಕೆಯಾಗುವುದು ಬಹಳ ಕಡಿಮೆ. ಭೂಮಿಯಲ್ಲಿದು ಕರಗುವುದೂ ಇಲ್ಲ. ಈ 'ಬ್ರಷ್' ಗಳನ್ನು ಪ್ರತಿ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಬದಲಾಯಿಸಲು ದಂತವೈದ್ಯರೇ ಸಲಹೆ ಮಾಡುತ್ತಾರೆ. ಅಲ್ಲಿಗೆ ನಾವು ವೈಯುಕ್ತಿಕವಾಗಿ ವರ್ಷಕ್ಕೆ ಸರಿಸುಮಾರು ಮೂರು ಬ್ರಷ್​ಗಳನ್ನು ಬಿಸಾಡಬಹುದು. ಒಟ್ಟು ಜನಸಂಖ್ಯೆಯನ್ನು ಮನದಲ್ಲಿಟ್ಟುಕೊಂಡು ಇಲ್ಲಿಂದ ಮುಂದಿನ ಲೆಕ್ಕವನ್ನು ನೀವೇ ಮಾಡಿಕೊಳ್ಳಿ. ತ್ಯಾಜ್ಯವೊಂದು ಭೂಮಿಯಿಂದ ನದಿ, ನದಿಯಿಂದ ಸಾಗರ ತಲುಪಲು ಸಮಯ ಹಿಡಿಯುವುದಿಲ್ಲ.

ಪ್ರಪಂಚದಾದ್ಯಂತ ಕೋಟ್ಯಂತರ ಪ್ಲಾಸ್ಟಿಕ್ ದಂತಬ್ರಷ್‌ಗಳನ್ನು ತಯಾರಿಸಿ ತ್ಯಜಿಸಲಾಗುತ್ತಿದೆ. ನಿಜ ಬೇರೆಲ್ಲ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಹೋಲಿಸಿದರೆ ಈ ಸಂಖ್ಯೆ ಅತಿ ಕಡಿಮೆ. ಆದರೆ ಪರಿಸರ ರಕ್ಷಣೆಯತ್ತ ನಾವಿಡುವ ಪ್ರತಿ ಹೆಜ್ಜೆಯೂ ಮುಖ್ಯವಾದ್ದದ್ದು. ನಾವು ಉಪಯೋಗಿಸುವ ಟೂಥ್ ಬ್ರಷ್ ಅನ್ನು ಕೊಳ್ಳುವಾಗ ಬೆಂಬೂ ಬಳಸಿರುವುದನ್ನು ನೋಡಿ ಕೊಳ್ಳಬಹುದೇ ? ಅಥವಾ ನಾವು ನಿಷ್ಠರಾಗಿರುವ ಕಂಪನಿಗೆ ಇನ್ನು ಮುoದೆ ಬೆಂಬೂ ಅಥವಾ ಇನ್ನಾವುದಾದರೂ ಪರಿಸರ ಸ್ನೇಹಿ ಹಿಡಿಕೆಯನ್ನು ಅಳವಡಿಸುವ ಕುರಿತು ಸಂಶೋಧಿಸಲು ತಮ್ಮ ರಿಸರ್ಚ್​ ಮತ್ತು ಡೆವಲೆಪ್ಮೆಂಟ್​ ವಿಭಾಗಕ್ಕೆ ಸಲಹೆ ನೀಡಬಹುದೇ ಯೋಚಿಸಿ. ಎಷ್ಟಾದರೂ ಗ್ರಾಹಕರೇ ದೇವರು ಎನ್ನುವ ಕಾಲವಿದು. ಗ್ರಾಹಕ ದೇವರು ಜಾಗೃತರಾಗಿರಬೇಕು ಅಲ್ಲವೇ?

ಲೇಖಕರ ಪರಿಚಯ

ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net