ಭಾರತ್ ಜೋಡೋದಲ್ಲಿ ಐಕ್ಯತಾ ರಾಷ್ಟ್ರ ಸಂಕಲ್ಪ; ಭದ್ರತೆ ದಾಟಿ ಬಂದು ಮಕ್ಕಳ ಮುದ್ದಾಡಿದ ರಾಹುಲ್ ಗಾಂಧಿ

BJY
Published on

| ಜಗನ್ನಾಥ್/ಶ್ರೀಹರ್ಷ ಚಿಕ್ಕನಾಯಕನಹಳ್ಳಿ, ತುಮಕೂರು

ಕಲ್ಪತರು ನಾಡಿನಲ್ಲಿ ಎರಡನೇ ದಿನದ ಭಾರತ್ ಜೋಡೋ ಯಾತ್ರೆ ಹಲವು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಭದ್ರತೆಯ ಬೇಲಿ ದಾಟಿ ರಸ್ತೆಬದಿಯಲ್ಲಿ ನಿಂತಿದ್ದ ಮಕ್ಕಳನ್ನು ಎತ್ತುಕೊಂಡು ಮುದ್ದಾಡಿದ ರಾಹುಲ್ ಗಾಂಧಿ ನಡೆ ಅಚ್ಚರಿ ಎನಿಸಿತಾದರೂ ಪ್ರೀತಿ ಮೂಲಕ ‘ಐಕ್ಯತಾ ರಾಷ್ಟ್ರ ಕಟ್ಟೋಣ’ ಎಂಬ ಸಂದೇಶವನ್ನು ಸಾರುವಂತಿತ್ತು. ತಿಪಟೂರು ತಾಲೂಕು ಕೆ.ಬಿ.ಕ್ರಾಸ್​ನಿಂದ ಭಾನುವಾರ ಬೆಳಗ್ಗೆ 6.30ಕ್ಕೆ ಆರಂಭಗೊಂಡ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಬಿಳಿಗೆರೆಯ ಮಹಿಳಾ ಕಾರ್ಯಕರ್ತರು ಪೂರ್ಣಕುಂಭ ಸ್ವಾಗತ ಕೋರಿದರು.

ಜನಪದ ಕಲಾತಂಡಗಳು ಯಾತ್ರೆಗೆ ಮತ್ತಷ್ಟು ಮೆರಗು ನೀಡಿದವು. ಯಾತ್ರೆ ಆರಂಭದಲ್ಲಿ ರಾಹುಲ್ ಬಿರುಸಿನ ನಡಿಗೆಯ ಜತೆಗೆ ಹೆಜ್ಜೆ ಹಾಕಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಸೇರಿ ಸ್ಥಳೀಯ ನಾಯಕರು ಹೈರಾಣಾದಂತೆ ಕಂಡುಬಂದರು. ಅನತಿ ದೂರದಲ್ಲಿ ಸಾಗುತ್ತಿದ್ದ ಯಾತ್ರೆ ಕೂಡಿಕೊಳ್ಳಲು ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಅರ್ಧ ಕಿ.ಮೀ., ಸಾಗಿದರೂ ರಾಹುಲ್ ಬೆನ್ನಟ್ಟಲಾಗಲಿಲ್ಲ. ಕೊನೆಗೆ ಕಾರು ಏರಿ ಪಾದಯಾತ್ರಿಗಳನ್ನು ಕೂಡಿಕೊಂಡರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಯಾತ್ರೆ 3 ಕಿ.ಮೀ. ದೂರ ಸಾಗಿದ್ದಾಗ ಮಾರ್ಗಮಧ್ಯೆ ಸೇರಿಕೊಂಡು ರಾಹುಲ್ ಜತೆ ಹೆಜ್ಜೆ ಹಾಕಿದರು.

ರಾಗಾ ಜತೆಗೆ ಹೆಜ್ಜೆ ಅವಕಾಶ: ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಹಷೋದ್ಘಾರಗಳೊಂದಿಗೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ರಾಹುಲ್ ಗಾಂಧಿಗೆ ಯುವ ಕಾಂಗ್ರೆಸ್ ಮುಖಂಡರನ್ನು ಪರಿಚಯಿಸಿ ಅವರೊಟ್ಟಿಗೆ ನಡೆಯಲು ಅವಕಾಶ ಕಲ್ಪಿಸಲಾಯಿತು. ಕೆ.ಬಿ.ಕ್ರಾಸ್​ನಿಂದ ಚಿಕ್ಕನಾಯಕನಹಳ್ಳಿ ತಾಲೂಕು ಗಡಿ ಪ್ರವೇಶಿಸಿದ ಯಾತ್ರೆಗೆ ಮಾರ್ಗಮಧ್ಯೆ ಸಿಗುವ ಹಳ್ಳಿಗಳಲ್ಲಿ ರಾಹುಲ್ ನೋಡಲು ಕಾದು ನಿಂತಿದ್ದ ಜನರತ್ತ ಪ್ರೀತಿಯ ನಗೆ ಬೀರಿ ಕೈ ಬೀಸುತ್ತಾ ಹೆಜ್ಜೆ ಹಾಕುತ್ತಿದ್ದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹುಟ್ಟೂರು ಜೆ.ಸಿ.ಪುರದವರೆಗೆ 7 ಕಿ.ಮೀ., ಎಲ್ಲಿಯೂ ಬ್ರೇಕ್ ನೀಡದೆ ಹೆಜ್ಜೆ ಹಾಕಿದ ರಾಹುಲ್ ಸಾವಯವ ಕೃಷಿಕ ಬಾಳೆಕಾಯಿ ಶಿವನಂಜಯ್ಯ ನಿವಾಸದಲ್ಲಿ ಸ್ವಲ್ಪಹೊತ್ತು ವಿಶ್ರಾಂತಿ ಪಡೆದರು. ಈ ವೇಳೆ ಚಹಾ, ಲಘು ಉಪಹಾರ ಸೇವಿಸಿದರು.

ಗಮನ ಸೆಳೆದ ಬೀದಿ ನಾಟಕ

ಬಳಿಕ ಪಾದಯಾತ್ರೆ ಮುಂದುವರಿಸಿದ ರಾಹುಲ್ ಗಾಂಧಿ ಅವರನ್ನು ಎದುರುಗೊಂಡ ಬೆಂಗಳೂರಿನ ಅಶ್ಮಿ ಥಿಯೇಟರ್ ಫೋರಂ ಯುವ ಕಲಾವಿದರು ಭಾರತ ಐಕ್ಯತಾ ಯಾತ್ರೆಯ ಪರಿಕಲ್ಪನೆಯನ್ನಿಟ್ಟುಕೊಂಡು ಅಭಿನಯಿಸಿದ ಬೀದಿನಾಟಕವು ಗಮನಸೆಳೆಯಿತು. ರಾಹುಲ್ ಮೊಬೈಲ್​ನಲ್ಲಿ ನಾಟಕದ ದೃಶ್ಯಗಳನ್ನು ಸೆರೆಹಿಡಿದರಲ್ಲದೆ, ಪ್ರಶಂಸೆ ವ್ಯಕ್ತಪಡಿಸಿದರು.

ತೆಂಗಿನ ಸಸಿ ಉಡುಗೊರೆ: ಐತಿಹಾಸಿಕ ಯಾತ್ರೆಯ ನೆನಪಿಗಾಗಿ ತೆಂಗುಬೆಳೆಗಾರ ಆಣೆಕಟ್ಟೆ ವಿಶ್ವನಾಥ್ ತೆಂಗಿನ ಸಸಿಯನ್ನು ನೀಡಿ ರಾಹುಲ್​ಗಾಂಧಿಗೆ ಶುಭಕೋರಿದರು. ಈ ವೇಳೆ ತೆಂಗುಬೆಳೆಗಾರರ ಸಮಸ್ಯೆಗಳಿಗೆ ರಾಗಾ ಕಿವಿಯಾದರು. ಭಾರತ್ ಮಾತಾ ವೇಷ ಧರಿಸಿದ್ದ ಪುಟ್ಟ ಬಾಲಕಿ ಕಂಡ ರಾಗಾ ಪ್ರೀತಿಯಿಂದ ಆಕೆಯೊಡನೆ ಸ್ವಲ್ಪ ದೂರು ಕೈಹಿಡಿದು ಹೆಜ್ಜೆಹಾಕಿದರು. ಯಾತ್ರೆ ನೋಡಲು ನಿಂತಿದ್ದ ಮಕ್ಕಳನ್ನು ಕಂಡ ತಕ್ಷಣವೇ ಕೈಬೀಸಿ ಕರೆದು ಪ್ರೀತಿಯಿಂದ ಮಾತನಾಡಿಸುತ್ತಿದ್ದ ದೃಶ್ಯ ವಿಶೇಷವೆನಿಸುತ್ತಿತ್ತು. ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ನೆಹರು ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಹುಲ್ ಕನಕಭವನದ ಬಳಿ ಬೆಳಗಿನ ಅವಧಿಯ ಯಾತ್ರೆ ಮುಕ್ತಾಯಗೊಳಿಸಿದರು. ಈ ವೇಳೆ ಕುರುಬರ ಸಂಘದ ಪದಾಧಿಕಾರಿಗಳು ರಾಹುಲ್​ರನ್ನು ಅಭಿನಂದಿಸಿದರು.

ರಾಜ್ಯದಲ್ಲಿ ಅರ್ಧ ಹಾದಿ ಸವೆಸಿದ ಯಾತ್ರೆ

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ರಾಜ್ಯ ಪ್ರವೇಶಿಸಿ 10 ದಿನ ಕಳೆದಿದ್ದು, ಬಹುತೇಕ ರಾಜ್ಯದೊಳಗಿನ ಯಾತ್ರೆ ಅರ್ಧಹಾದಿ ಸವೆಸಿದೆ. ಪಕ್ಷದ ಹೈಕಮಾಂಡ್​ಗೆ ತೃಪ್ತಿಯಾಗುವಂತೆ ಯಾತ್ರೆಯುದ್ಧಕ್ಕೂ ಜನ ಸೇರಿಸುವಲ್ಲಿ ರಾಜ್ಯ ನಾಯಕರು ಸಫಲರಾಗಿದ್ದು, ಸದ್ಯಕ್ಕೆ ಪರಿಣಾಮಗಳ ಅವಲೋಕನ ಶುರುವಾಗಿದೆ.

ಕಾಂಗ್ರೆಸ್ ಪರವಾದ ದೊಡ್ಡ ಅಲೆ ಎಬ್ಬಿಸುವ ಮಹದೋದ್ದೇಶ ಈಡೇರಿದೆ ಎಂದು ಕೈ ನಾಯಕರು ಬೀಗುತ್ತಿದ್ದಾರೆ. ಪ್ರಮುಖವಾಗಿ ಕರ್ನಾಟಕದಲ್ಲಿ ಇನ್ನು ಆರು ತಿಂಗಳ ಬಳಿಕ ನಮ್ಮದೇ ಸರ್ಕಾರ ಎಂದು ರಾಹುಲ್ ಗಾಂಧಿಯಾಗಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅತಿಯಾದ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಆರಂಭವಾದ ಯಾತ್ರೆಯುದ್ಧಕ್ಕೂ ಜನರ ಕೊರತೆ ಆಗದಂತೆ ವ್ಯವಸ್ಥಿತ ಕಾರ್ಯತಂತ್ರ ರೂಪಿಸಿದ್ದು, ನಕಾರಾತ್ಮಕ ಪ್ರಚಾರಕ್ಕೆ ಅವಕಾಶ ಕೊಡದೆ ಎಚ್ಚರಿಕೆ ವಹಿಸಲಾಗಿದೆ. ಈ ಪ್ರಯತ್ನ ಫಲಕೊಟ್ಟಿದೆ. ಸದಾ ವೇದಿಕೆಯಲ್ಲಿ ನಿಂತು ಭಾಷಣ ಮಾಡುತ್ತಿದ್ದ ರಾಹುಲ್ ರಸ್ತೆಯಲ್ಲಿ ಪಕ್ಷದ ಮುಖಂಡರ ಜತೆ ಹೆಜ್ಜೆ ಹಾಕುತ್ತ, ಮಹಿಳೆಯರು, ಮಕ್ಕಳ ಕೈಕುಲುಕುತ್ತಾ, ಸಣ್ಣ ಪುಟ್ಟ ಉಡುಗೊರೆ ಸ್ವೀಕರಿಸುತ್ತಾ ಗಮನ ಸೆಳೆಯುತ್ತಿದ್ದು, ಜನರ ಕಣ್ಣಲ್ಲಿ ತಮ್ಮ ಇಮೇಜ್ ಬದಲಾಗುತ್ತಿರುವ ಖುಷಿಯಲ್ಲಿದ್ದಾರೆ.

ಹಾಗೆಯೇ, ಚುನಾವಣೆಗೆ ಮುನ್ನ ಪಕ್ಷದ ಪಾಲಿಗೆ ಇದೊಂದು ದೊಡ್ಡ ಈವೆಂಟ್ ಎನಿಸಿಕೊಂಡಿದೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಕಾವು ಜೋರಾಗಿದೆ ಎಂಬ ಭಾವನೆ ಬಿತ್ತುವ ಉದ್ದೇಶ ಪಕ್ಷದಲ್ಲಿ ಸ್ಪಷ್ಟವಾಗಿದ್ದು, ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ ಎಂದೇ ನಾಯಕರು ಭಾವಿಸಿಕೊಂಡಿದ್ದಾರೆ. ಯಾತ್ರೆಯುದ್ಧಕ್ಕೂ ರಾಹುಲ್ ಗಾಂಧಿ ಸುಮ್ಮನೆ ಹೆಜ್ಜೆ ಹಾಕುತ್ತಿಲ್ಲ, ಬದಲಿಗೆ ಅವಕಾಶ ಸಿಕ್ಕಾಗಲೆಲ್ಲ ಕರ್ನಾಟಕದ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರೊಟ್ಟಿಗೆ ಚುನಾವಣೆ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಮುಂದೆ ಉರುಳಿಸಬೇಕಾದ ದಾಳಗಳ ಬಗ್ಗೆ ವಿಚಾರ ವಿನಿಮಯ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾವ ಅಂಶಗಳ ಮೂಲಕ ಜನರ ಮನ ಮುಟ್ಟಬಹುದು, ಈ ಮೂಲಕ ಬಿಜೆಪಿಯನ್ನು ಕಟ್ಟಿಹಾಕಬಹುದೆಂಬ ಬಗ್ಗೆ ಮಾಹಿತಿ ಸಂಗ್ರಹವೂ ನಡೆದಿದೆ. ಬಳ್ಳಾರಿಯಲ್ಲಿ ನಡೆಯುವ ಐದು ಲಕ್ಷ ಜನರ ಸಮಾವೇಶದಲ್ಲಿ ಶಕ್ತಿ ಪ್ರದರ್ಶನದ ಜತೆಗೆ ರಾಜ್ಯಕ್ಕೊಂದು ಸಂದೇಶ ಕಳಿಸುವ ಪ್ರಯತ್ನ ಮಾಡಲೂ ಸಹ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಜೋಡೋ ಮುಂದಿನ ಹಾದಿ

ಯಾತ್ರೆಯು ಚಿತ್ರದುರ್ಗ ಜಿಲ್ಲೆಯ ಮೂಲಕ ಬಳ್ಳಾರಿಯತ್ತ ಸಾಗಲಿದೆ. ಬಳಿಕ ಆಂಧ್ರಕ್ಕೆ ಪ್ರವೇಶ ನೀಡಲಿದ್ದು, ಪುನಃ ರಾಯಚೂರು ಮೂಲಕ ತೆಲಂಗಾಣಕ್ಕೆ ತೆರಳಲಿದೆ. ಇಷ್ಟರ ನಡುವೆ ಒಂದು ದಿನ ಎಐಸಿಸಿ ಚುನಾವಣೆ ಉದ್ದೇಶಕ್ಕೆ ಯಾತ್ರೆಗೆ ವಿರಾಮ ಇರಲಿದೆ.

ಯಾತ್ರೆಗೆ ಪೋಸ್ಟರ್ ಬಿಸಿ

ಕಾಂಗ್ರೆಸ್ ಜೋಡೋ ಯಾತ್ರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಪೋಸ್ಟರ್ ಬಿಸಿ ಕೂಡ ತಟ್ಟಿತು. ಸಿದ್ದರಾಮಯ್ಯನವರೇ, ನಾನು ರಾಜು ಕಾಂಗ್ರೆಸ್​ನಿಂದಲೇ ನನ್ನ ಕೊಲೆ ಆಗಿದ್ದು ಪಿಎಫ್​ಐ, ಎಸ್​ಡಿಪಿಐ ಮೇಲಿನ ನಿಮ್ಮ ಪ್ರೀತಿಗೆ, ಅವರ ಮೇಲಿನ ಪ್ರಕರಣಗಳನ್ನ ಕೈಬಿಟ್ಟಿದ್ದಕ್ಕೆ ನಾನು ಕೊಲೆಯಾದೆ ಎಂಬ ಅನಾಮಿಕರು ಅಂಟಿಸಿದ್ದ ಪೋಸ್ಟರ್​ಗಳು ಮುಜುಗರ ಉಂಟುಮಾಡಿತು. ತರಬೇನಹಳ್ಳಿಯಲ್ಲಿ ವಿಶ್ರಾಂತಿ ಬಳಿಕ ಸಂಜೆ ಮತ್ತೆ ಪಟ್ಟಣದಿಂದ ಆರಂಭಗೊಂಡ ಯಾತ್ರೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೂಡಿಕೊಂಡರು. ಸಾಲ್ಕಟ್ಟೆ ಕ್ರಾಸ್​ನಲ್ಲಿನ ರೈತ ರಾಮಣ್ಣನ ಮನೆಗೆ ಅನೀರಿಕ್ಷಿತ ಭೇಟಿ ನೀಡಿದ ರಾಹುಲ್ ಅವರೊಡನೆ ಕುಶಲೋಪರಿ ಮಾತುಗಳನ್ನಾಡಿದರು. ಮಾಳಿಗೇಹಳ್ಳಿಯಲ್ಲಿ ಪಾದಯಾತ್ರೆ ಅಂತ್ಯಗೊಂಡಿತು. ಸಂಜೆಗತ್ತಲಿನಲ್ಲಿಯು ರಾಹುಲ್ ಹೆಜ್ಜೆ ಹಾಕಿ ನಿಗದಿತ ಸ್ಥಳ ತಲುಪಿಕೊಂಡರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಯೂರ ಜಯಕುಮಾರ್, ಬಿ.ಕೆ.ಹರಿಪ್ರಸಾದ್, ಆರ್.ರಾಜೇಂದ್ರ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಕೆ.ಎನ್.ರಾಜಣ್ಣ, ಎಂ.ಆರ್.ಸೀತರಾಂ, ಮುಖಂಡರಾದ ಲೋಕೇಶ್ವರ್, ಕೆ.ಟಿ.ಶಾಂತಕುಮಾರ್, ಮಾಜಿ ಎಂಎಲ್ಸಿಸಿ ರಮೇಶ್​ಬಾಬು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಸೇರಿ ಹಲವರು ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net