ರಾಜಧಾನಿಯಲ್ಲಿ ವರುಣನ ರೌದ್ರವತಾರ! ರಸ್ತೆಗಳು ಜಲಾವೃತ, ತಪ್ಪದ ವಾಹನ ಸವಾರರ ಪರದಾಟ

ವಿಜಯವಾಣಿ - 2024-08-12T154554.971
Published on

ಬೆಂಗಳೂರು: ಇಂದು ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಾಜಧಾನಿಯ ಹಲವು ಪ್ರದೇಶಗಳು ಮಳೆಯಿಂದ ಜಲಾವೃತಗೊಂಡಿವೆ. ರಸ್ತೆ ಪೂರ ಮಳೆ ನೀರು ತುಂಬಿದ ಕಾರಣ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ವಾಹನ ಸವಾರರ ಗೋಳಾಟ ಮುಂದುವರೆದಿದೆ.

ನಿನ್ನೆಯವರೆಗೂ ಬೆಂಗಳೂರಿನಲ್ಲಿ ಮಳೆಯ ಮುನ್ಸೂಚನೆಯೇ ಇರಲಿಲ್ಲ. ಆದ್ರೆ, ಇಂದು ಬೆಳಗ್ಗೆ ನಿರಂತವಾಗಿ ಸುರಿದ ಗುಡುಗು ಸಹಿತ ಮಳೆ, ಸುಮಾರು ಮೂರ್ನಾಲ್ಕು ಗಂಟೆ ಎಡಬಿಡದೆ ಸುರಿದಿದೆ. ಇದರ ಪರಿಣಾಮ ರಾಜಧಾನಿಯಲ್ಲಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಕೆ.ಆರ್.ಮಾರುಕಟ್ಟೆ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಜಕ್ಕೂರು ಅಂಡರ್ ಪಾಸ್ ನೀರಿನಿಂದ ಮುಳುಗಡೆಯಾಗಿದೆ. ನಾಗಾವಾರ ಜಂಕ್ಷನ್​, ವರ್ತೂರು, ಹೆಬ್ಬಾಳ ನಡುವಿನ ಹೊರ ವರ್ತುಲ ರಸ್ತೆಯಲ್ಲಿ ಭಾರಿ ನೀರು ನಿಂತಿದ್ದು, ಎರಡೂ ಕಡೆ ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿದೆ. ಸಂಚಾರಿ ಪೊಲೀಸರು ನೀರು ನಿಂತ ಸ್ಥಳದಲ್ಲಿ ವಾಹನ ಸವಾರರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ.

ಇನ್ನು ಮಳೆಯ ಆರ್ಭಟಕ್ಕೆ ತತ್ತರಿಸಿರುವ ಸಿಲಿಕಾನ್ ಸಿಟಿ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದು, ಒಳಚರಂಡಿ ವ್ಯವಸ್ಥೆಗಳು ಏನಾಗಿದೆ? ನೀರು ನಿಲ್ಲುವಂತ ಪರಿಸ್ಥಿತಿ ಏಕೆ? ಎಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಎಲೆಕ್ಟ್ರಾನಿಕ್​ ಸಿಟಿಯ ಫ್ಲೈಓವರ್​ ಮಳೆ ನೀರಿನಿಂದ ಮುಚ್ಚಿಹೋಗಿದ್ದು, ಸದ್ಯ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹವಾಮಾನ ವರದಿಯ ಪ್ರಕಾರ, ಇನ್ನು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net