ಗುಲಬರ್ಗಾ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಲಿಂಗರಾಜಅಪ್ಪ, ತಿವಾರಿ, ದಸ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

GUK PHOTO 2 Doctorate
Published on


ಕಲಬುರಗಿ : ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗಣನೀಯ ಸಾಧನೆಗೈದ ನ್ಯಾಯವಾದಿ ಅರ್ಚನಾ ಪ್ರದೀಪ ತಿವಾರಿ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಕೃಷಿ ತಜ್ಞ ಮತ್ತು ಶಿಕ್ಷಣ ಉದ್ಯಮಿ ಲಿಂಗರಾಜ ಬಸವರಾಜಪ್ಪ ಅಪ್ಪ ಅವರಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಮ‌ ಕುಲಾಧಿಪತಿಗಳಾಗಿರುವ ಡಾ.ಎಂ.ಸಿ.ಸುಧಾಕರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

*74 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ:*

ಘಟಿಕೋತ್ಸವದಲ್ಲಿ ವಿವಿಧ ವಿಭಾಗದಲ್ಕಿ ಹೆಚ್ಚಿನ ಅಂಕ ಗಳಿಸಿದ 74 ಅಭ್ಯರ್ಥಿಗಳಿಗೆ 168 ಚಿನ್ನದ ಪದಕ ಪ್ರದಾನ ಮಾಡಲಾಯಿತು. 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕನ್ನಡ ಅಧ್ಯಯನ‌ ಸಂಸ್ಥೆಯ ವಿದ್ಯಾರ್ಥಿನಿ ಆನಂದಮ್ಮ ಅವರು 13 ಚಿನ್ನದ ಪದಕ ಪಡೆದು ಘಟಿಕೋತ್ಸವದಲ್ಲಿ ಹೆಚ್ಚಿನ ಪದಕ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮಿದರು.

*113 ಅಭ್ಯರ್ಥಿಗಳಿಗೆ ಪಿ.ಎಚ್.ಡಿ ಪದವಿ:*

ಕಲಾ ನಿಕಾಯದ 38, ಸಮಾಜ ವಿಜ್ಞಾನ ನಿಕಾಯದ 29, ವಿಜ್ಞಾನ ಮತ್ತು ತಮತ್ರಜ್ಞಾನ ನಿಕಾಯದ 26, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ 11 ಹಾಗೂ ಶಿಕ್ಷಣ ನಿಕಾಯದ 9 ಜನ ಸೇರಿದಂತೆ 113 ಅಭ್ಯರ್ಥಿಗಳಿಗೆ ಗಣ್ಯರು ಪಿ.ಎಚ್.ಡಿ.ಪದವಿ ಪ್ರದಾನ ಮಾಡಿದರು. ಇದರಲ್ಲಿ 67 ಪುರುಷ ಮತ್ತು 46 ಮಹಿಳಾ‌ ಸಂಶೋಧನಾ ಅಭ್ಯರ್ಥಿಗಳಿದ್ದಾರೆ. ಘಟಿಕೋತ್ಸವ ಅಂಗವಾಗಿ ಒಟ್ಟಾರೆ 29,307 ಅಭ್ಯರ್ಥಿಗಳು ಪದವಿ ಹಾಗೂ ಸ್ನಾತಕ್ಕೋತ್ತರ ಪದವಿ ಪಡೆದರು.

ಗುಲಬರ್ಗಾ ವಿ.ವಿ.ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ಸರ್ವರನ್ನು ಸ್ವಾಗತಿಸಿ ವಿಶ್ವವಿದ್ಯಾಲಯವು ಕಳೆದ ಒಂದು ವರ್ಷದಲ್ಲಿ ಸಾಧಿಸಿದ ಪ್ರಗತಿಯನ್ನು ಮಂಡಿಸುತ್ತಾ, ವಿ.ವಿ. ವ್ಯಾಪ್ತಿಯಲ್ಲಿ 175 ಕಾಲೇಜುಗಳಿದ್ದು, 45 ಸಾವಿರ ಯು.ಜಿ, 2500 ಪಿ.ಜಿ. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿ.ವಿ. ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ವಿ.ವಿ. ಸರ್ವಾಂಗೀಣ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ 100 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಬೇಕೆಂದು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಂಡರು.

ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜನಾಳ್ಕರ ಲಕ್ಷ್ಮಣ, ವಿತ್ತಾಧಿಕಾರಿ ಗಾಯತ್ರಿ ಸೇರಿದಂತೆ ವಿದ್ಯಾ ವಿಷಯಕ್, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯದ ಡೀನರು, ಬೋಧಕ-ಬೋಧಕೇತರ ವೃಂದ ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net