ಮ್ಯಾನ್​ಹೋಲ್​ ಮುಚ್ಚೋರ್ಯಾರು...?

ಮಾಗಡಿಯಲ್ಲಿ ತೆರೆದುಕೊಂಡಿರುವ ಮ್ಯಾನ್ ಹೋಲ್
ಮಾಗಡಿಯಲ್ಲಿ ತೆರೆದುಕೊಂಡಿರುವ ಮ್ಯಾನ್ ಹೋಲ್
Published on

ಪ್ರಮುಖ ಮುಖ್ಯಾಂಶಗಳು

  • ಕಾಂಕ್ರೀಟ್​ ರಸ್ತೆ ನಿರ್ಮಾಣ ನೆಪದಲ್ಲಿ ಮುಚ್ಚಳ ಓಪನ್​
  • ಲೋಕೋಪಯೋಗಿ, ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ
ಮಾಗಡಿ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂದಾದ ರಾಮಮಂದಿರ ರಸ್ತೆಯ ಕಾಮಗಾರಿ ವಿಳಂಬದಿಂದ ಈಗಾಗಲೇ ಪಟ್ಟಣವಾಸಿಗಳು ಗೋಳಾಡುತ್ತಿದ್ದು, ಈ ನಡುವೆ ರಸ್ತೆಮಧ್ಯದಲ್ಲಿರುವ ಒಳಚರಂಡಿ (ಯುಜಿಡಿ) ಮ್ಯಾನ್​ಹೋಲ್​ಗಳನ್ನು ಕಾಮಗಾರಿಗಾಗಿ ತೆರೆದು, ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿದೆ.
ಕಾಮಗಾರಿ ಬಳಿಕ ಮ್ಯಾನ್​ಹೋಲ್​ಗಳನ್ನು ಮುಚ್ಚದೆ ಇರುವುದಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ನಾಗರಿಕರುಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತಕ್ಕೆ ಆಹ್ವಾನ

ಕಳೆದ ಕೆಲ ದಿನಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆಯಾದರೂ, ವೈಜ್ಞಾನಿಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆಯ ಮಟ್ಟಕ್ಕಿಂತ ಮ್ಯಾನ್​ಹೋಲ್​ಗಳು ಎತ್ತರಕ್ಕೆ ಇವೆ ಅಥವಾ ಸರಿಯಾದ ಮುಚ್ಚಳಗಳಿಲ್ಲದೆ ತೆರೆದ ಸ್ಥಿತಿಯಲ್ಲಿವೆ. ರಾತ್ರಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಕಾಣಿಸದೆ ಅನೇಕರು ಬಿದ್ದು ಗಾಯಗೊಂಡಿರುವುದು ಉಂಟು.

ಗುಣಮಟ್ಟದ ಕೊರತೆ

ಖಾಸಗಿ ಬಸ್​ ನಿಲ್ದಾಣದಿಂದ ಗೌರಮ್ಮನ ಕೆರೆಯವರೆಗೂ ಕಾಮಗಾರಿ ಆರಂಭವಾಗಿ ಹಲವು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುತ್ತಿದ್ದಾರೆ. ಎನ್​ಇಎಸ್​ ಬಡಾವಣೆ, ತಿರುಮಲೆ ಸೇರಿದಂತೆ ಅನೇಕ ಗ್ರಾಮಗಳಿಗೆ ಈ ಮಾರ್ಗದ ಮೂಲಕವೇ ಸಾಗಬೇಕು. ಆದರೆ ಆಮೆಗತಿ ಕಾಮಗಾರಿಯಿಂದಾಗಿ ಕಿರಿದಾದ ರಸ್ತೆಯಲ್ಲಿ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ ನಿತ್ಯ ಜಗಳ ಕಾಯಬೇಕಿದೆ.

ಎಚ್ಚರಿಕೆ ಫಲಕಗಳಿಲ್ಲ

ಅಪಾಯಕಾರಿ ಮ್ಯಾನ್​ಹೋಲ್​ಗಳ ಸುತ್ತ ಯಾವುದೇ ಮುನ್ನೆಚ್ಚರಿಕೆ ಫಲಕ ಅಥವಾ ಬ್ಯಾರಿಕೇಡ್​ ಅಳವಡಿಸಿಲ್ಲ.ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ ಧೂಳಿನಿಂದಾಗಿ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಲ್ಲಿ ಧೂಳು ಆವರಿಸಿದೆ.ಇಲ್ಲಿನ ನಿವಾಸಿಗಳು ಶ್ವಾಸಕೋಶದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಅಧಿಕಾರಿಗಳ ಗೈರು

ಕಾಮಗಾರಿ ನಡೆಯುವ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್​ಗಳು ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತಿಲ್ಲ. ಅಧಿಕಾರಿಗಳು ಭೇಟಿ ನೀಡಿದರೆ ಕಾಮಗಾರಿ ಚುರುಕುಗೊಳ್ಳುತ್ತಿತ್ತು. ಕೆಲಸಗಾರರು ಮಂದಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನರು ನಿತ್ಯ ಪರದಾಡುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪ್ರತಿಭಟನೆ ಎಚ್ಚರಿಕೆ

ರಾಮಮಂದಿರ ರಸ್ತೆ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ಶಾಲೆ, ಕಾಲೇಜು, ಕೃಷಿ ಇಲಾಖೆ, ತಾಪಂ, ಜಿಪಂ ಇಂಜಿನಿಯರಿಂಗ್​ ಕಚೇರಿ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ ಇಲಾಖೆಗೆ ಹೋಗುವ ನಾಗರಿಕರು, ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ತೆರೆದ ಮ್ಯಾನ್​ಹೋಲ್​ಗಳಿಂದಾಗಿ ಯಾವಾಗ ಬೇಕಾದರೂ ಅನಾಹುತ ಸಂಭವಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ರಸ್ತೆ ಕಾಮಗಾರಿಯನ್ನು ಶ್ರೀ ಮುಗಿಸದಿದ್ದರೆ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಪಟ್ಟಣವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಕಾಂಕ್ರೀಟ್​ ರಸ್ತೆ ನಿರ್ಮಾಣಕ್ಕಾಗಿ ಮ್ಯಾನ್​ಹೋಲ್​ ತೆಗೆಯಲಾಗಿದೆ. ಸರಿಪಡಿಸಲಾಗುವುದು. ಅದನ್ನು ಮುಚ್ಚುವುದು ಪುರಸಭೆಯವರ ಜವಾಬ್ದಾರಿ.
> ಪುಟ್ಟಹನುಮಂತರಾಜು
ಎಇಇ, ಲೋಕೋಪಯೋಗಿ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net