ರಾಮನಗರದಲ್ಲಿ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯ
ಬೆಂಗಳೂರು - ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ
ರಾಮನಗರ : ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಹಾಗೂ ರಾಜ್ಯ ಸರ್ಕಾರ ಕನ್ನಡಿಗರಿಗೆ ಮೋಸ ಮಾಡುತ್ತಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜು ಆಗ್ರಹಿಸಿದರು.
ನಗರದ ಐಜೂರು ವೃತ್ತದಲ್ಲಿ ಶುಕ್ರವಾರ ವಾಟಾಳ್ ನಾಗರಾಜು ಮತ್ತು ಕನ್ನಡಪರ ಸಂಘಟನೆ ಮುಖಂಡರುಗಳು ರಸ್ತೆಯಲ್ಲಿ ಖಾಲಿ ಬಿಂದಿಗೆ ಇಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಸುದ್ಧಿಗಾರರ ಜೊತೆ ಮಾತನಾಡಿದರು.
ಮೇಕೆದಾಟು ಜಾರಿ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ, ಇಟ್ಟಿರುವ ಹಣ, ನೀಲನಕ್ಷೆ ಏನ್ ಸಿದ್ಧ ಮಾಡಿದ್ದಾರಾ, ಮತ್ತು ಮೇಕೆದಾಟು ಸ್ಥಳ ಗುರುತಿಸಿರುವ ಕುರಿತು ಮಾಹಿತಿ ಬಹಿರಂಗ ಪಡೆಸಬೇಕು.
ಕುಡಿಯುವ ನೀರಿಗೆ ಅಡ್ಡಿಪಡಿಸಬಾರದು, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಗೆ ವಿರೋಧ ಮಾಡಬಾರದು. ಮೇಕೆದಾಟು ಯೋಜನೆಯಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಲಭಿಸಲಿದೆ. ಮೇಕೆದಾಟು ವಿಚಾರದಲ್ಲಿ ಯಾರು ಜಗಳವಾಡಬಾರದು ಹಾಗೂ ರಾಜಕೀಯ ಮಾಡಬಾರದು ಎಂದು ಆಗ್ರಹಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಬಂದರೆ, ಮುಳುಗುವ ಪ್ರದೇಶ, ಪ್ರಾಣಿಗಳಿಗೆ ಆಗುವ ಅನುಕೂಲ ಎಲ್ಲವನ್ನು ರಾಜ್ಯ ಸರ್ಕಾರ ಗಮನಿಸಿ, ಯಾರಿಗೂ ಅನ್ಯಾಯವಾಗದಂತೆ ಅರಣ್ಯ ನಷ್ಟವಾಗದಂತೆ ಮೇಕೆದಾಟು ಜಾರಿ ಮಾಡಬೇಕು. ಮೇಕೆದಾಟು ಜಾರಿ ಸಂಬಂಧ ಕನ್ನಡ ಪರ ಸಂಘಟನೆಗಳು ಸುಮ್ಮನೆ ಕೂರುವ ಮಾತೇ ಇಲ್ಲ. ತಮಿಳುನಾಡು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಡದಿ ರೈತರ ಹೋರಾಟಕ್ಕೆ ಸಂಪೂರ್ಣ ನಮ್ಮ ಬೆಂಬಲ ಇದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಬಿಡದಿ ಟೌನ್‌ಶಿಪ್ ಅನ್ನು ಜಾರಿಗೆ ಮಾಡಬಾರದು. ಜೆಸಿಬಿ ಸಂಸ್ಕöÈತಿಯ ದರ್ಬಾರು, ಸರ್ವಾಧಿಕಾರ ಹಾಗೂ ಸಾಮಾನ್ಯ ಜನರ ಮೇಲೆ ನಡೆಯುತ್ತಿರುವ ದರ್ಪ ನಿಲ್ಲಬೇಕು ಎಂದು ಆಗ್ರಹಿಸಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಎಂ. ಜಗದೀಶ್, ಮುಖಂಡರಾದ ಗಂಗಾಧರ್, ಸಿ.ಎಸ್. ಜಯಕುಮಾರ್, ಪುಷ್ಪಲತಾ, ಕೆ. ಜಯರಾಮು, ಕೆಂಪರಾಜು, ಕುಮಾರ್, ಸಿ.ಎಂ. ವಿಜಯಕುಮಾರ್, ಪಿ. ಸುರೇಶ್, ಪಾರ್ಥಸಾರಥಿ ಇದ್ದರು.