ಯಮಪುರಿಗೆ ರಹದಾರಿ ಈ ರಸ್ತೆ!

ನೀಲಕಂಠನಹಳ್ಳಿ ಗ್ರಾಮದ ರಸ್ತೆ
ನೀಲಕಂಠನಹಳ್ಳಿ ಗ್ರಾಮದ ರಸ್ತೆ
Published on

ಪ್ರಮುಖ ಮುಖ್ಯಾಂಶಗಳು

  • ನೀಲಕಂಠನಹಳ್ಳಿ ಗೇಟ್ ಬಳಿ ಸಮಸ್ಯೆ
  • ಕಿರಿದಾದ ರಸ್ತೆಯಲ್ಲಿ ಸಂಚಾರ ದುಸ್ತರ
  • ಅಪಘಾತಕ್ಕೆ ಆಹ್ವಾನಿಸುವ ಮಾರ್ಗ ಬದಿಯ ಗುಂಡಿ
ಚನ್ನಪಟ್ಟಣ
ಸರ್ಕಾರಗಳು ರಸ್ತೆ ಅಭಿವೃದ್ಧಿಗೆ ಎಷ್ಟೇ ಹಣ ವ್ಯಯಿಸಿದರೂ ಕಾಮಗಾರಿ ಅನುಷ್ಠಾನದಲ್ಲಿ ತೋರುವ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಎಲ್ಲವನ್ನೂ ವ್ಯರ್ಥ ಮಾಡುತ್ತವೆ ಎಂಬುದಕ್ಕೆ ತಾಲೂಕಿನ ಸಾತನೂರು ರಸ್ತೆಯಲ್ಲಿರುವ ನೀಲಕಂಠನಹಳ್ಳಿ ಗೇಟ್ ತಾಜಾ ನಿದರ್ಶನ.
ತಾಲೂಕಿನ ಪ್ರಮುಖ ರಸ್ತೆಯಾಗಿರುವ ಸಾತನೂರು ರಸ್ತೆಯಲ್ಲಿರುವ ನೀಲಕಂಠನಗಳ್ಳಿ ಕ್ರಾಸ್ ಬಳಿ ರಸ್ತೆ ತೀರಾ ಕಿರಿದಾಗಿದ್ದು, ವಾಹನ ಸವಾರರ ಪಾಲಿಗೆ ಯಮಪುರಿಗೆ ರಹದಾರಿಯಂತಿದೆ. ಕಣ್ವ ಬಡಾವಣೆಯ ಈಜುಕೊಳದ ಮುಂಭಾಗದ ಸುಣ್ಣಘಟ್ಟದಿಂದ ಚನ್ನಪಟ್ಟಣಕ್ಕೆ ಬರುವ ಈ ರಸ್ತೆಯ ಒಂದು ಇಕ್ಕೆಲದಲ್ಲಿ ಚರಂಡಿಯಿದ್ದರೆ, ಮತ್ತೊಂದು ಬದಿ ಹೈ ವೋಲ್ಟೇಜ್ ವಿದ್ಯುತ್ ಕಂಬಗಳಿವೆ. ಪರಿಣಾಮ ಮಾರ್ಗದಲ್ಲಿ ವಾಹನಗಳು ಸಂಚರಿಸುವುದೇ ದೊಡ್ಡ ಸಮಸ್ಯೆಯಾಗಿದೆ.
ಹೆದ್ದಾರಿಯಲ್ಲಿರುವ ಈ ಕಿರಿದಾದ ಜಾಗ ಕಂಡಿಲ್ಲವೇ?
ಈ ಮಾರ್ಗ ರಾಜ್ಯ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ ರಸ್ತೆ ಮಧ್ಯೆಯೇ ವಿದ್ಯುತ್ ಸರಬರಾಜಿನ ಬೃಹತ್ ಲೈನ್ ಹಾದುಹೋಗಿವೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಇರದಿದ್ದರೂ, ನೀಲಕಂಠನಹಳ್ಳಿ ಗೇಟ್ ಬಳಿ ಕಿರಿದಾದ ರಸ್ತೆ ಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆಯೇ ಲೋಕೋಪಯೋಗಿ ವಿಶೇಷ ವಿಭಾಗದಿಂದ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ ರಸ್ತೆಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನವಿದೆ ಎಂಬ ಕಾರಣಕ್ಕೆ ಈ ಜಾಗ ಹೊರತುಪಡಿಸಿ, ಕಾಮಗಾರಿ ನಡೆಸಲಾಗಿದೆ. ಜತೆಗೆ ಹಳೇ ದೇವಸ್ಥಾನ ತೆರವು ಮಾಡಿ, ಹೊಸ ದೇವಾಲಯ ನಿರ್ಮಿಸಲಾಗಿದೆ. ದೇವಾಲಯ ಉದ್ಘಾಟನೆಯಾಗಿ ವರ್ಷಗಳೇ ಉರುಳಿದರೂ ಈ ಕಿರಿದಾದ ಜಾಗಕ್ಕೆ ಮುಕ್ತಿ ದೊರಕಿಲ್ಲ. ಸಮಸ್ಯೆಗೆ ಈ ಹಿಂದೆ ಅಸ್ತಿತ್ವದಲ್ಲಿದ್ದ ಲೋಕೋಪಯೋಗಿ ಇಲಾಖೆಯ ವಿಶೇಷ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೇ ಕಾರಣ ಎನ್ನಲಾಗುತ್ತಿದೆ.
ಹೆಚ್ಚುತ್ತಿವೆ ಅಪಘಾತಗಳು
ಈ ಕಿರಿದಾದ ಜಾಗದಲ್ಲಿ ಕೆಲವರು ಕಟ್ಟಡಗಳ ಅವಶೇಷವನ್ನು ರಸ್ತೆ ಬದಿಗೆ ಸುರಿದಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಕಾರು, ಬಸ್ ಬಂದರೆ ಬೈಕ್‌ಗಳು ರಸ್ತೆಯ ಬದಿಗೆ ಬಂದು ಈ ಮಣ್ಣು ದಿಬ್ಬಕ್ಕೆ ಡಿಕ್ಕಿ ಹೊಡೆದು ಸವಾರರು ಅಪಘಾತದಲ್ಲಿ ಗಾಯಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಸುಣ್ಣಘಟ್ಟ ಮಾರ್ಗದಿಂದ ಚನ್ನಪಟ್ಟಣಕ್ಕೆ ತೆರಳುತ್ತಿದ್ದ ಮಲ್ಲೇಶ್ ಎಂಬುವವರು ಮಣ್ಣಿನ ಗುಡ್ಡೆಗೆ ಬೈಕ್ ಡಿಕ್ಕಿ ಹೊಡೆಸಿ, ಹಣೆ ಮತ್ತು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆಯನ್ನು ವಿಸ್ತರಣೆ ಮಾಡದಿದ್ದರೂ ಪರವಾಗಿಲ್ಲ, ದೇವಸ್ಥಾನ ತೆರವು ಮಾಡಿದ ಜಾಗದಲ್ಲಿದ್ದರೂ, ಡಾಂಬರೀಕರಣ ಮಾಡಿ ಮಾರ್ಗವನ್ನು ಅಭಿವೃದ್ಧಿಪಡಿಸಲಿ. ರಸ್ತೆಯ ಬದಿಯಲ್ಲಿನ ಗುಂಡಿ ಮುಚ್ಚಿದರೆ ಬೈಕ್ ಸವಾರರ ಸಂಚಾರಕ್ಕೆ ಅನುಕೂಲವಾಗಲಿದೆ.
ನೀಲಕಂಠನಹಳ್ಳಿ ಗೇಟ್ ಬಳಿ ರಸ್ತೆ ಕಿರಿದಾಗಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ಈ ಹಿಂದೆ ರಸ್ತೆ ಅಭಿವೃದ್ಧಿ ಮಾಡುವಾಗ ದೇವಸ್ಥಾನವಿದೆ ಎಂಬ ಕಾರಣಕ್ಕಾಗಿ ಈ ಜಾಗಕ್ಕೆ ಡಾಂಬರು ಹಾಕಲಿಲ್ಲ. ಆದರೆ, ದೇವಸ್ಥಾನ ತೆರವಾಗಿ ಹಲವು ವರ್ಷಗಳೇ ಕಳೆದರೂ ಇನ್ನೂ ರಸ್ತೆಯನ್ನು ಅಭಿವೃದ್ಧಿ ಮಾಡಿಲ್ಲ. ಸಂಬಂಧಿಸಿದವಂರು ಕೂಡಲೇ ಇತ್ತ ಗಮನ ಹರಿಸಬೇಕು.
| ಮೋಳೆದೊಡ್ಡಿ ಬಿಳಿಯಪ್ಪ,
ನೀಲಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ
ಈ ರಸ್ತೆ ಲೋಕೋಪಯೋಗಿ ವಿಶೇಷ ವಿಭಾಗದ ನಿರ್ವಹಣೆಯಲ್ಲಿತ್ತು. ಕಳೆದ ನವೆಂಬರ್‌ನಲ್ಲಿ ನಮ್ಮ ವ್ಯಾಪ್ತಿಗೆ ಬಂದಿದೆ. ಮಹದೇಶ್ವರ ನಗರದಿಂದ ಹೊಂಗನೂರು ಕೆರೆವರೆಗಿನ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಹಣ ಮಂಜೂರು ಪ್ರಸ್ತಾವನೆಯಲ್ಲಿದೆ. ಶೀಘ್ರವೇ ಅನುದಾನ ದೊರೆಯಲಿದೆ. ಅದಕ್ಕೂ ಮೊದಲು ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು.
| ಮಲ್ಲಿಕಾರ್ಜುನ್
ಲೋಕೋಪಯೋಗಿ ಎಇಇ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net