ಮಾವಿಗೆ ಹೂವೇ ಸಿಂಗಾರ

ಮೈ ತುಂಬಾ ಹೂ ಕಚ್ಚಿಕೊಂಡಿರುವ ಮಾವಿನ ಮರ.
ಮೈ ತುಂಬಾ ಹೂ ಕಚ್ಚಿಕೊಂಡಿರುವ ಮಾವಿನ ಮರ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಕ್ಕೆ ಮೊದಲು ಬರುವ ಬೆಳೆ
  • ಪ್ರಕೃತಿ ಮುನಿಯದಿದ್ದರೆ ಉತ್ತಮ ಫಸಲಿನ ನಿರೀಕ್ಷೆ
  • ಬೇಕಿದೆ ತೋಟದ ನಿರ್ವಹಣೆ
ರಾಮನಗರ: ಮತ್ತೆ ರೈತರಲ್ಲಿ ಲಾಭದ ನಿರೀಕ್ಷೆ ಮೂಡಿಸುವ ನಿಟ್ಟಿನಲ್ಲಿ ಮಾವು ಸಿದ್ದಗೊಂಡಿದ್ದು, ಈಗಾಗಲೇ ಜಿಲ್ಲೆಯ ಮಾವಿನ ತೋಟಗಳಲ್ಲಿ ಹೂವುಗಳು ನಳನಳಿಸುತ್ತಿವೆ.
ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾತಾವರಣದ ಕಣ್ಣಾಮುಚ್ಚಾಲೆ ಆಟದ ಪರಿಣಾಮ, ಕಚ್ಚಿದ ಹೂ ರೈತರಿಗೆ ಲಾಭ ತಂದುಕೊಡುವುದೇ ಎನ್ನುವ ಯಕ್ಷ ಪ್ರಶ್ನೆಯೂ ರೈತರದಲ್ಲಿ ಮೂಡಿದೆ. ತೋಟಗಾರಿಕೆ ಇಲಾಕೆ ನೀಡುವ ಮಾರ್ಗದರ್ಶನ ಪಾಲನೆ ಮಾಡಿದರೆ ಖಂಡಿತವಾಗಿ ಪ್ರಕೃತಿ ಮುನಿಯದಿದ್ದರೆ ರೈತರಿಗೆ ಒಂದಿಷ್ಟು ಲಾಭ ಈ ಬಾರಿ ನಿರೀಕ್ಷೆ ಮಾಡಬಹುದಾಗಿದೆ.

ರಾಜ್ಯಕ್ಕೆ ಮೊದಲು

ರಾಜ್ಯದಲ್ಲಿ ಮೊದಲು ಮಾವು ಉತ್ಪನ್ನ ಮಾರುಕಟ್ಟೆಗೆ ಬರುವುದು ರಾಮನಗರದಿಂದ. ಇಲ್ಲಿನ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣ ಬಾದಾಮಿ ಜಾತಿಯ ಕಾಯಿಯೇ ಆಗಿದ್ದು, ಜಿಲ್ಲೆಯ ವಿವಿಧ ತೋಟಗಳಲ್ಲಿ ಈಗಾಗಲೇ ಮಾವು ಹೂವು ಬಿಡಲು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಮುಂಜಾನೆ ತಣ್ಣನೆಯ ಇಬ್ಬನಿ ಹಾಗೂ ಹಗಲು ಹೊತ್ತಿನಲ್ಲಿ ಬಿಸಿಲು ಇದ್ದಷ್ಟು ಹೂವು ಹೆಚ್ಚಾಗಲಿದ್ದು, ಫಸಲು ಉತ್ತಮವಾಗಿರುತ್ತದೆ. ಅಕಾಲಿಕ ಮಳೆ ಮತ್ತು ವಾತಾವರಣದಲ್ಲಿ ಉಂಟಾದ ಶೀತಗಾಳಿ ರೈತರ ಲೆಕ್ಕಾಚಾರವನ್ನು ಸಂಪೂರ್ಣವಾಗಿ ತಲೆಕೆಳಗು ಮಾಡುತ್ತದೆ. ಕಳೆದ ಕೆಲವು ದಿನಗಳಲ್ಲಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ.

ಔಷಧ ಫಲ ನೀಡುತ್ತಿಲ್ಲ:

ಪ್ರತಿ ವರ್ಷ ಜಿಲ್ಲೆಯ ರೈತರಿಗೆ ಬಂಗಾಳ ಕೊಲ್ಲಿಯಲ್ಲಿ ಏಳುವ ಚಂಡ ಮಾರುತಗಳು ಹೊಡೆತ ನೀಡುತ್ತವೆ. ಅಕಾಲಿಕ ಮಳೆ, ಶೀತಗಾಳಿ ಮಾವಿನ ಹೂವು ಕಪ್ಪು ತಿರುಗುವಂತೆ ಮಾಡಿ ಬಿಡುತ್ತವೆ. ಬಹುತೇಕ ಎಲ್ಲಾ ಬೆಳೆಗಾರರು ತಮ್ಮ ತೋಟದಲ್ಲಿ ಬಂದಿರುವ ಹೂವು ರಕ್ಷಣೆ ಮಾಡಿಕೊಳ್ಳಲು ಸಾಕಷ್ಟು ಬಾರಿ ಔಷಧ ಸಿಂಡಪಣೆ ಮಾಡಿದರೂ ಇದರಿಂದ ಪ್ರಯೋಜ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನವರಿ ಅಂತ್ಯದವರೆಗು ಮಳೆ, ಶೀತಗಾಳಿ ಯಾವಾಗಬೇಕಾದರೂ ಬಂದು ಎರಗುವ ಸಾಧ್ಯತೆ ಇದೆ. ಇದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿ ಸಿಂಪಡಣೆ ಮಾಡಿದ ಔಷಧಿಗಳೂ ಸಹ ಕೈ ಹಿಡುವುದಿಲ್ಲ.


ಲಕ್ಷಾಂತರ ರೂ ನಷ್ಟ

ಮಾವು ಬೆಳೆ ಉಳಿಸಿಕೊಳ್ಳಲು ಬೂದಿ ರೋಗ ಮತ್ತು ಕೀಟ ಬಾದೆಯಿಂದ ರಕ್ಷಣೆ ಮಾಡಲು ಔಷಧ ಸಿಂಪಡಣೆ ಹಾಗೂ ತೋಟಕ್ಕೆ ಗೊಬ್ಬರ, ಅದರ ನಿರ್ವಹಣೆಗಾಗಿ ಪ್ರತಿ 10 ಎಕರೆ ಜಮೀನಿಗೆ ಸರಾಸರಿ 3 ಲಕ್ಷ ರೂ.ಗಳನ್ನು ಪ್ರತಿಯೊಬ್ಬ ರೈತರು ಖರ್ಚು ಮಾಡಬೇಕಿದೆ. ಕಳೆದ ಬಾರಿ ಜಿಗಿ ಮತ್ತು ಹೂಜಿ ನೊಣದ ಕಾಟದಿಂದ ರೈತರು ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗದರು. ಈಗ ಬಿಟ್ಟಿರುವ ಹೂವಿನಲ್ಲಿ ಶೇ.02ರಷ್ಟು ಪ್ರಮಾಣದ ಹೂವು ಕಾಯಾಗಿ, ರೋಗ ಬಾದೆ ಇಲ್ಲದೆ ಇದ್ದರೆ ರೈತರಿಗೆ ಲಾಭವಾಗಲಿದೆ. ಇಲ್ಲವಾದರೆ ನಿರೀಕ್ಷಿತ ಲಾಭವೂ ರೈತರಿಗೆ ದೊರೆಯುವುದಿಲ್ಲ.
ಇಲಾಖೆ ನಿರ್ದೇಶನ ಪಾಲಿಸಿ
ಪ್ರತಿ ವರ್ಷ ಮಾವಿನ ಕಟಾವಿನ ನಂತರ ತೋಟಗಳ ನಿರ್ವಹಣೆ ಮಾಡುವುದು ಮುಖ್ಯ. ಅಲ್ಲದೆ, ಬೆಳಕೇ ಬೀಳದಂತೆ ಮರಗಳು ಬೆಳೆದುಕೊಂಡಿರುವುತ್ತವೆ. ಇಲ್ಲಿ ಅನಗತ್ಯ ಭಾಗಗಳನ್ನು ತೆಗೆಯುವುದು, ಅಗತ್ಯ ಪೋಷಕಾಂಶಗಳನ್ನು ನೀಡುವುದು ಸೇರಿದಂತೆ ಹಲವಾರು ಕ್ರಮಗಳನ್ನು ಆರಂಭಿಕ ಹಂತದಲ್ಲಿಯೇ ತೆಗೆದುಕೊಳ್ಳಬೇಕು. ಇದರ ಜತೆಗೆ ತೋಟಗಾರಿಕೆ ಇಲಾಕೆ ಕಾಲ ಕಾಲಕ್ಕೆ ನೀಡುವ ಮಾರ್ಗದರ್ಶನ ಪಾಲಿಸಬೇಕಿದೆ. ಮತ್ತೊಂದು ಪ್ರಮುಖ ಅಂಶವAದರೆ ಕಡಿಮೆ ಬೆಲೆಗೆ ಸಿಗುವ ಔಷಧಗಳನ್ನು ಖರೀದಿ ಮಾಡಿ ಗಿಡಗಳಿಗೆ ಸಿಂಪಡಣೆ ಮಾಡುವ ಬದಲು, ಅಧಿಕೃತ ಮಾರಾಟಗಾರರಿಂದ ಖರೀದಿ ಮಾಡಿದರೆ ಪರಿಣಾಮಗಳು ಸಹ ಉತ್ತಮವಾಗಿಯೇ ಇರುತ್ತವೆ.
ಇರಲಿ ಎಚ್ಚರ
ಜಿಲ್ಲೆಯ ಮಾವಿನ ತೋಟಗಳಲ್ಲಿ ಈಗಾಗಲೇ ಹೂಗಳು ನಳನಳಿಸುತ್ತಿವೆ. ಜತೆಗೆ ವಾತಾವರಣವೂ ಕಣ್ಣಾಮುಚ್ಚಾಲೆ ಆಡುತ್ತಿದೆ. ಈಗ ಮಾವಿನ ಹೂಗಳು ರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕಿದೆ. ಈ ಸಂದರ್ಭದಲ್ಲಿ ಜಿಗಿಹುಳು, ಥ್ರಿಪ್ಸ್, ಬೂದಿರೋಗ, ಹೂತೆನೆ ಒಣಗುವ ರೋಗ ಬಾದಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ವೇಳೆ ತೋಟಗಾರಿಕೆ ಇಲಾಕೆ ಮಾರ್ಗದರ್ಶನವನ್ನು ಪಾಲಿಸಬೇಕಿದೆ.
ಈಗಾಗಲೇ ಜಿಲ್ಲೆಯಲ್ಲಿ ಮಾವಿನ ತೋಟಗಳಲ್ಲಿ ಹೂ ಬಿಡಲು ಆರಂಭವಾಗಿದೆ. ರೈತರ ನೆರವಿಗೆ ಇಲಾಕೆ ಸದಾಕಾಲ ಇದೆ. ಇಲಾಖೆ ನಿರ್ದೇಶನವನ್ನು ಪಾಲಿಸಿದರೆ ರೋಗ ನಿಯಂತ್ರಣ ಸಾಧ್ಯ.
ಡಿ. ಮಂಜುನಾಥ್,
ಜಂಟಿ ನಿದೇರ್ಶಕರು, ತೋಟಗಾರಿಕೆ ಇಲಾಕೆ, ಬೆಂ.ದಕ್ಷಿಣ ಜಿಲ್ಲೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net