ಅಧ್ಯಯನವಿಲ್ಲದ ಸಂಶೋಧನೆಗಳಲ್ಲಿ ಸತ್ವ ಇಲ್ಲ

ರಾಮನಗರದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಉದ್ಘಾಟಿಸಿದರು. ಜನಪದ ಹಾಡುಗಾರ ಡಾ.ಮಳವಳ್ಳಿ ಮಹದೇವಸ್ವಾಮಿ, ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.
ರಾಮನಗರದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಉದ್ಘಾಟಿಸಿದರು. ಜನಪದ ಹಾಡುಗಾರ ಡಾ.ಮಳವಳ್ಳಿ ಮಹದೇವಸ್ವಾಮಿ, ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾನಪದ ವಿದ್ವಾಂಸ ಡಾ.ಬೈರಮಂಗಲ ರಾಮೇಗೌಡ ಅಭಿಪ್ರಾಯ
  • ಕ್ಷೇತ್ರ ಅಧ್ಯಯನದಿಂದ ವಿಸ್ತಾರದ ಅರಿವು

ರಾಮನಗರ

ಜಾನಪದ ಅಧ್ಯಯನ ಮತ್ತು ಸಂಶೋಧನೆ ಇತ್ತೀಚಿನ ಸತ್ವ ಕಳೆದುಕೊಂಡಿದ್ದು, ಕ್ಷೇತ್ರ ಕಾರ್ಯದ ಬದಲು ಮೇಜಿನ ಮುಂದೆ ಕುಳಿತು ಬರೆಯುವ ಸಂಶೋಧನಾ ಗ್ರಂಥಗಳಾಗಿವೆ ಎಂದು ಜಾನಪದ ವಿದ್ವಾಂಸ ಡಾ.ಬೈರಮಂಗಲ ರಾಮೇಗೌಡ ವಿಷಾದಿಸಿದರು.

ಜಾನಪದ ಲೋಕದ ಸರಸ್ವತಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಾನಪದ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ಮತ್ತು ಸಂಶೋಧನೆ ಎಷ್ಟರ ಮಟ್ಟಿಗೆ ಜನಮಾನಸವಾಗಿದೆ ಎಂಬುದು ಮುಖ್ಯ. ಜಾನಪದ ಮತ್ತು ಜನಪದವನ್ನು ಹಲವರು ತಮ್ಮಿಷ್ಟಕ್ಕೆ ತಕ್ಕಂತೆ ನಿರೂಪಣೆ ಮಾಡುತ್ತ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಸಂಶೋಧನೆಗಳಲ್ಲಿ ಸತ್ವವೇ ಉಳಿದಿಲ್ಲ. ಕ್ಷೇತ್ರ ಕಾರ್ಯ ನೆಪಕ್ಕಷ್ಟೇ ಆಗಿದೆ. ಈಗಾಗಲೇ ಬಂದಿರುವ ಸಂಶೋಧನಾ ಗ್ರಂಥಗಳಲ್ಲಿನ ಅಂಶಗಳನ್ನು ಕದ್ದು ಅದನ್ನೇ ತಮ್ಮ ಅಧ್ಯಯನಕ್ಕೆ ಅಳವಡಿಸುವುದು ಸಾಮಾನ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಾನಪದ ಮತ್ತು ಜನಪದವನ್ನು ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ಬಳಸುವ ಅಗತ್ಯವಿದೆ. ಕ್ಷೇತ್ರ ಅಧ್ಯಯನ ಮಾಡಿದಾಗ ಮಾತ್ರ ಅದನ್ನು ವಿಸ್ತಾರವಾಗಿ ಕಾಣಲು ಸಾಧ್ಯ. ಜಾನಪದ ಸತ್ವ ಅಥವಾ ಸಾರವನ್ನು ಮೊದಲು ಸಂಗ್ರಹಿಸಿ ಬಳಿಕ ಅರ್ಥೈಸಿಕೊಂಡು ಅಧ್ಯಯನ ಮಾಡಿ ಬರೆಯಿರಿ ಎಂದು ಕಿವಿಮಾತು ಹೇಳಿದರು.

ಜಾನಪದಕ್ಕೆ ತಳಹದಿ:

ವಿಲಿಯಂ ಜಾಮ್ ಥಾಮ್ಸ್ ಫೋಕ್‌ಲೋರ್ ಪದ ಬಳಕೆಗೆ ಇಂದಿಗೆ 180 ವರ್ಷಗಳು ಕಳೆದಿವೆ. ಜಾನಪದ ಇದಕ್ಕಿಂತಲೂ ಹಿಂದಿನದು. ಕ್ರಿ.ಪೂ.3ನೇ ಶತಮಾನದಲ್ಲಿಯೇ ಜನಪದದ ಉಲ್ಲೇಖವಿದೆ. ನಿಜವಾಗಿಯು ಆಚರಣೆ ಮಾಡಬೇಕಾದರೆ ಕವಿರಾಜ ಮಾರ್ಗದಲ್ಲೇ ಉಲ್ಲೇಖವಾಗಿರುವ ಜಾನಪದವನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಥಾಮ್ಸ್ ವಿಶ್ವ ಜಾನಪದಕ್ಕೆ ಮಹತ್ವದ ತಳಹದಿ ಹಾಕಿ ಕೊಟ್ಟಿದ್ದಾರೆ ಎಂದರು.

ಕರ್ನಾಟಕದ ಮಟ್ಟಿಗೆ ಜಿ.ಶಂ.ಪರಮಶಿವಯ್ಯ, ದೇಜಗೌ ಸೇರಿ ಹಲವರು ಜಾನಪದ ಕ್ಷೇತ್ರದಲ್ಲಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಹಿ.ಚಿ.ಬೋರಲಿಂಗಯ್ಯ ಅವರು ಬುಡಕಟ್ಟು ಸಮುದಾಯಗಳ ಜಾನಪದ ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿದ್ದಾರೆ. ಎಲ್ಲ ಕಡೆ ಬುಡಕಟ್ಟು ಜನರಿದ್ದಾರೆ. ಆದರೆ, ಈಗ ಅವರ ಬಗ್ಗೆ ಅಧ್ಯಯನ ನಡೆಯುತ್ತಿಲ್ಲ. ಈಗಾಗಲೇ ನಡೆದಿರುವ ಅಧ್ಯಯನಗಳನ್ನು ಅವಲಂಬಿಸಲಾಗಿದೆ ಎಂದರು.

ಖ್ಯಾತ ಜನಪದ ಹಾಡುಗಾರ ಡಾ.ಮಳವಳ್ಳಿ ಮಹದೇವ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಪರಿಷತ್‌ನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮಾತನಾಡಿದರು. ಜಾನಪದ ಲೋಕದ ಕಾರ್ಯನಿರ್ವಾಹಕ ಅಧಿಕಾರಿ ಸರಸವಾಣಿ ಸ್ವಾಗತಿಸಿದರು. ಕ್ಯುರೇಟರ್ ಯು.ಎಂ.ರವಿ, ಜಾನಪದ ಸಂಶೋಧನಾ ಕೇಂದ್ರದ ಸಂಯೋಜಕ ಸಂದೀಪ್, ಗಾಯಕ ಹೊನ್ನಿಗನಹಳ್ಳಿ ಸಿದ್ದರಾಜು, ಪ್ರೊ.ಎಂ. ನಾಗರಾಜು, ಸಿಬ್ಬಂದಿ ಇದ್ದರು.

ಹಲವರಿಂದ ವಿಶ್ವ ಮನ್ನಣೆ

ಯುರೋಪ್‌ನ ವಸಾಹತುಗಳಲ್ಲಿ ಕೆಲಸ ಮಾಡುತ್ತಿದ್ದ ಕಲೆ ಮತ್ತು ಸಂಸ್ಕೃತಿಯ ವಿದ್ವಾಂಸರು ಈ ಸಾಂಪ್ರದಾಯಿಕ ಕಲೆಗಳಿಗೆ ಒಂದು ಹೆಸರು ಕೊಡಬೇಕೆಂದು ನಿರ್ಧರಿಸಿ ಫೋಕ್ಲೋರ್ ಎಂದು ಹೆಸರು ಕೊಡುತ್ತಾರೆ. ಅಂದಿನಿAದ ಈ ಪದ ಪ್ರಚಲಿತಕ್ಕೆ ಬರುತ್ತದೆ. ಜತೆಗೆ ಆ ದಿನವನ್ನೇ ಜಾನಪದ ದಿನಾಚರಣೆ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಜಾನಪದದ ಸರ್ವಸ್ವವನ್ನೂ ಒಳಗೊಂಡಿರುವುದೇ ಜಾನಪದ. ನಿರ್ದಿಷ್ಟ ಕಲೆಯನ್ನು ಜನಪದ ಎಂದು ಖ್ಯಾತ ವಿಮರ್ಶಕ ಹಾ.ಮಾ. ನಾಯಕ ವಿಶ್ಲೇಷಣೆ ಮಾಡಿದರು. ಕ್ರಿ.ಪೂ. ಮೂರನೇ ಶತಮಾನದ ಸಂಗA ಕೃತಿಯಲ್ಲಿ ಗಂಗರ ಕಾಲದ ಕಲೆ, ಸಾಹಿತ್ಯ ಸೇರಿ ಜಾನಪದ ಸಾಹಿತ್ಯದ ಉಲ್ಲೇಖವಿದೆ. ಅಂದರೆ ಜಾನಪದವು ಅಷ್ಟು ಹಳೆಯದಾಗಿದೆ. ಜಾನಪದವು ನಿರಂತರವಾಗಿ ಹರಿಯುವ ನೀರಿನಂತೆ. ಅದಕ್ಕೆ ಹಲವರು ವಿಶ್ವ ಮನ್ನಣೆ ತಂದು ಕೊಟ್ಟಿದ್ದಾರೆ ಎಂದು ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.

ನಮ್ಮ ನೆಲದ ಸಾಂಸ್ಕೃತಿಕ ಇತಿಹಾಸವನ್ನು ಮರು ರಚಿಸುವ ಕೆಲಸವನ್ನು ಜಾನಪದ ಲೋಕ ಮಾಡುತ್ತಿದೆ. ಜಾನಪದ ಕಲೆಗಳನ್ನು ಗುರುತಿಸಿ ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಚ್.ಎಲ್. ನಾಗೇಗೌಡ ಅವರ ಕಾಲದಿಂದ ಈಗಿನ ಬೋರಲಿಂಗಯ್ಯ ಅವರವರೆಗೆ ನಡೆದುಕೊಂಡು ಬಂದಿದೆ. ಈಗ ಜಾನಪದವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಕೆಲಸ ಆಗಬೇಕಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಾನಪದ ಲೋಕವನ್ನು ಒಮ್ಮೆ ಸುತ್ತು ಹಾಕಿದರೆ ಖಂಡಿತ ಈ ಕೆಲಸ ಮಾಡುತ್ತಾರೆ.

| ಡಾ.ಬೈರಮಂಗಲ,

ರಾಮೇಗೌಡ, ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net