ರಾಮನಗರ ಜೈಲಿನ ಮೇಲೆ ಪೊಲೀಸರ ದಿಢೀರ್ ದಾಳಿ.. ಕಾರಣವೇನು?

ರಾಮನಗರ ಜಿಲ್ಲಾ ಕಾರಾಗೃಹ
ರಾಮನಗರ ಜಿಲ್ಲಾ ಕಾರಾಗೃಹ
Published on

ಪ್ರಮುಖ ಮುಖ್ಯಾಂಶಗಳು

  • ರಾಮನಗರ ಕಾರಾಗೃಹದ ಮೇಲೆ ಪೊಲೀಸರ ದಾಳಿ
  • ಎರಡು ಗಂಟೆಗೂ ಹೆಚ್ಚು ಕಾಲ ತಪಾಸಣೆ
  • ಎಎಸ್ಪಿ ರಾಜೇಂದ್ರ ನೇತೃತ್ವದಲ್ಲಿ ದಾಳಿ
ರಾಮನಗರ:  ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿರುವ ಪ್ರಕರಣ ಬೆಳಕಿಗೆ ಬಂದ  ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾರಾಗೃಹದ ಮೇಲೆ ಬುಧವಾರ ರಾತ್ರಿ ಜಿಲ್ಲಾ ಅಪರ ಪೊಲೀಸ್​ ವರೀಷ್ಟಾಧಿಕಾರಿ ರಾಜೇಂದ್ರ ಮತ್ತು ಡಿವೈಎಸ್ಪಿ ಶ್ರೀನಿವಾಸ್​ ನೇತೃತ್ವದಲ್ಲಿ ಪೊಲೀಸರು ದಿಢೀರ್​ ದಾಳಿ ನಡೆಸಿ ತಪಾಸಣೆ ನಡೆಸಿದರು.  
ಇಬ್ಬರು ಇನ್ಸ್​ಪೆಕ್ಟರ್​, 4ಮಂದಿ ಪಿಎಸ್​ಐ ಸೇರಿದಂತೆ ಹತ್ತಾರು ಮಂದಿ ಪೊಲೀಸ್​ ಸಿಬ್ಬಂದಿ  ದಾಳಿಮಾಡಿದ್ದು, ಪ್ರತಿ ಬ್ಯಾರಕ್​ನಲ್ಲೂ ಪರಿಶೀಲನೆ  ನಡೆಸಿದರು. ಸುಮಾರು ಎರಡು ತಾಸುಗಳಿಗೂ ಹೆಚ್ಚುಕಾಲ ಎಲ್ಲವನ್ನೂ ಜಾಲಾಡಿದ್ದಾರೆ. 
ಜೈಲಿನಲ್ಲಿ ಮೊಬೈಲ್​ ಬಳಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳು ಜೈಲಿನಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್​ ದಾಳಿ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ದಾಳಿಯಲ್ಲಿ ಏನೆಲ್ಲಾ ಪತ್ತೆಯಾಗಿದೆ ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರಕಾರಾಗೃಹದ ಖೈದಿಗಳು ಡ್ಯಾನ್ಸ್​ ವಿಡಿಯೋ ವೈರಲ್​ ಆಗಿದ್ದ ಪ್ರಕರಣದ ಆರೋಪಿ ರೇಣುಕಾಪ್ರಸಾದ್​(ಕುದುರೆ) ಎಂಬ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ರಾಮನಗರದ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. 
ಡ್ಯಾನ್ಸ್​ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರಿನ ಪೊಲೀಸರು ನ್ಯಾಯಾಲಯದಿಂದ ಬಂಧನದ ಆದೇಶ ಪಡೆದು ಮಂಗಳವಾರ ಸಂಜೆ ಜಿಲ್ಲಾ ಕಾರಾಗೃಹದಿಂದ ಈತನನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಈ ಬೆನ್ನಲ್ಲೇ ಜಿಲ್ಲಾ ಪೊಲೀಸರು ಕಾರಾಗೃಹದ ಮೇಲೆ ದಿಢೀರ್​ ದಾಳಿನಡೆಸಲಾಗಿದೆ, ಇದು ಕುತೂಹಲಕ್ಕೆ ಕಾರಣವಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net