ಜೀಗೇನಹಳ್ಳಿ ಬಳಿ ನಿಮಾರ್ಣ ಮಾಡಿರುವ ಅರ್ಕಾವತಿ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ನಿವೇಶನದಾರರು ರಾಮನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರ್ ಜಯಣ್ಣ ಅವರಿಗೆ ಮನವಿ ಸಲ್ಲಿಸಿದರು. ನಿವೇಶನದಾರರಾದ ಎಂ.ಟಿ. ಶಿವಕುಮಾರ್, ಚೇತನ್ಕುಮಾರ್, ಬಸವಯ್ಯ, ರಾಮು ಮೊಗೇರ, ಲೀಲಾ, ರಮೇಶ್, ಹರೀಶ್, ರಾಮಕೃಷ್ಣಯ್ಯ ಮುಂತಾದವರಿದ್ದರು.
ನಗರದ ಜೀಗೇನಹಳ್ಳಿ ಬಳಿ ನಿಮಾರ್ಣ ಮಾಡಿರುವ ಅರ್ಕಾವತಿ ಬಡಾವಣೆಗೆ ಮೂಲ ಸೌಕರ್ಯಗಳನ್ನು ಒದಗಿಸಿ ಸಮಗ್ರವಾಗಿ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿ ಬಡಾವಣೆಯ ನಿವೇಶನದಾರು ಮತ್ತು ನಿವಾಸಿಗಳು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಅಧ್ಯಕ್ಷರು ತಹಸೀಲ್ದಾರ್ ಜಯಣ್ಣ ಅವರಿಗೆ ಮನವಿ ಸಲ್ಲಿಸಿದರು.
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಈ ಬಡಾವಣೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಮಂದಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಸುಮಾರು ಎರಡು ದಶಕಗಳು ಸಮೀಪಿಸುತ್ತಾ ಇದ್ದರೂ, ಬಡಾವಣೆಯಲ್ಲಿ ಯಾವುದೇ ನಾಗರಿಕ ಸೌಲಭ್ಯಗಳನ್ನು ಒದಗಿಸಿಲ್ಲ. ಇದರಿಂದ ಮನೆಗಳನ್ನು ನಿರ್ಮಿಸಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಇದರ ಹೊರತಾಗಿಯೂ ಕೆಲವರು ಮನೆ ಕಟ್ಟಿದ್ದು, ವಾಸಿಸುತ್ತಿದ್ದಾರೆ. ಇವರು ಮೂಲ ಸೌಲಭ್ಯಗಳಿಲ್ಲದ ಕಾರಣ ತೊಂದರೆ ಅನುಭವಿಸುವಂತಾಗಿದೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ 2025ರ ಮೇ ತಿಂಗಳಲ್ಲಿ ನಡೆದ ಸಭೆಯಲ್ಲಿ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಯೋಜನೆ ಅನುಷ್ಠಾನಕ್ಕೆ ನಿವೇಶನ ಮಾಲೀಕರಿಂದ ಪ್ರತಿ ಚದರ ಅಡಿಗೆ 200 ರೂ. ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ಆ ಹಣದಲ್ಲಿ ಆರು ತಿಂಗಳೊಳಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಬಡಾವಣೆ ಅಭಿವೃದ್ಧಿ ಮಾಡಲಾಗುವುದೆಂದು ಶಾಸಕರು ಮತ್ತು ಪ್ರಾಧಿಕಾರದ ಅಧ್ಯಕ್ಷರು ಭರವಸೆ ಕೂಡ ನೀಡಿದ್ದರು.
ನಿವೇಶನಗಳ ಮಾಲೀಕರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮಹಿಳೆಯರು, ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿ ಇರುವವರು ಇದ್ದಾರೆ. ತೀವ್ರ ಹಣಕಾಸಿನ ಮುಗ್ಗಟ್ಟಿನ ನಡುವೆಯೂ ಅಭಿವೃದ್ಧಿ ಉದ್ದೇಶಕ್ಕೆ ಸಹಕಾರ ನೀಡಬೇಕು ಎನ್ನುವ ಮಹಾತ್ವಾಕಂಕ್ಷೆಯಿಂದ ಹಣ ಹೊಂದಿಸಿ ಅಭಿವೃದ್ಧಿ ಶುಲ್ಕ ಪಾವತಿ ಸುಮಾರು ತಿಂಗಳಗಳು ಕಳೆದಿದ್ದರೂ, ಈವರೆಗೂ ಮೂಲ ಸೌಲಭ್ಯಗಳನ್ನು ಒದಗಿಸುವ ಯಾವುದೇ ಕಾರ್ಯಗಳು ಆರಂಭವಾಗಿಲ್ಲ ಎಂದು ಆರೋಪಿಸಿದರು.
ಪ್ರಮುಖ ಬೇಡಿಕೆಗಳೇನು?
* ಬಡಾವಣೆಗಳ ರಸ್ತೆಗೆ ಸೂಚನಾ ಲಕಗಳು ಮತ್ತು ನಿವೇಶನಗಳಿಗೆ ಸಂಖ್ಯಾ ಲಕ ಹಾಕುವುದು.
* ಸಂಪರ್ಕ ರಸ್ತೆ ಮತ್ತು ಎಲ್ಲ ಆಂತರಿಕ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಹಾಗೂ ಪಾದಚಾರಿ ಸುರಕ್ಷತೆಗಾಗಿ ಪಾದಚಾರಿ ಮಾರ್ಗಗಳ ನಿರ್ಮಾಣ.
* ರಸ್ತೆ ಬದಿಗಳಲ್ಲಿ ಮತ್ತು ತೆರೆದ ಪ್ರದೇಶಗಳಲ್ಲಿ ಸಸಿ ನೆಡುವಿಕೆ ಮತ್ತು ಅವುಗಳ ಪಾಲನೆ.
* ಸಮರ್ಪಕ ವಿದ್ಯುತ್ ಸರಬರಾಜು ಸಂಪರ್ಕ ಮತ್ತು ಬೀದಿ ದೀಪಗಳ ಅಳವಡಿಕೆ.
* ಸಮರ್ಪಕ ನೀರು ಸರಬರಾಜು ಜಾಲ, ಒಳಚರಂಡಿ ವ್ಯವಸ್ಥೆ ಮತ್ತು ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪನೆ.
ಬಡಾವಣೆಗೆ ಕಲ್ಪಿಸಿದ್ದ ವಿದ್ಯುತ್ ಕಂಬಗಳಿಂದ ತಂತಿಗಳನ್ನು ಮತ್ತು ಕಬ್ಬಿಣದ ಉಪಕರಣಗಳನ್ನು ಕಳವು ಮಾಡಲಾಗಿದೆ. ವಿದ್ಯುತ್ ಪರಿವರ್ತಕಗಳಿಂದ ತೈಲ ಕಳವು ಮಾಡಲಾಗಿದೆ. ವಿದ್ಯುತ್ ಪರಿವರ್ತಕಗಳನ್ನೇ ಕಂಬಗಳಿಂದ ಕೆಳಗೆ ಇಳಿಸಲಾಗಿದೆ. ಅಲ್ಲದೇ, ಉದ್ಯಾನವನಗಳು ಮತ್ತು ಇತರ ಸಿಎ ನಿವೇಶನಗಳಿಂದ ಕಬ್ಬಿಣದ ಬೇಲಿ ಇತ್ಯಾದಿಗಳನ್ನು ಕದ್ದೊಯ್ಯಲಾಗಿದೆ. ಹಲವೆಡೆ, ನಿವೇಶನಗಳಿಗೆ ಮಾಲೀಕರು ಹಾಕಿದ್ದ ಬೇಲಿಗಳಿಂದ ತಂತಿಗಳು ಮತ್ತು ಗೇಟ್ಗಳನ್ನೂ ಕಳವು ಮಾಡಲಾಗಿದೆ ಎಂದು ನಿವೇಶನದಾರರು ಬೇಸರ ವ್ಯಕ್ತಪಡಿಸಿದರು.