ವಿ.ಬಿ ಜಿ ರಾಮ್​ ಜಿ ಕಾಯ್ದೆಯನ್ನು ಹಿಂಪಡೆಯಲು ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು.
Published on

ಪ್ರಮುಖ ಮುಖ್ಯಾಂಶಗಳು

  • ವಿ.ಬಿ ಜಿ ರಾಮ್​ ಜಿ ಕಾಯ್ದೆಯನ್ನು ಹಿಂಪಡೆಯಲು ಹೋರಾಟ
  • ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರಿಸಲುಪಟ್ಟು
  • ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ರಾಮನಗರ: ನೂತನವಾಗಿ ಜಾರಿಗೆ ತರಲು ಹೊರಟಿರುವ ವಿ.ಬಿ ಜಿ ರಾಮ್​ ಜಿ ಕಾಯ್ದೆಯನ್ನು ಹಿಂಪಡೆದು, ಹಿಂದಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರಿ ಜಾರಿಗೆ ತರಲು ಮುಂದಾಗಿರುವ ವಿ.ವಿ ಜಿ ರಾಮ್​ ಜಿ ಯೋಜನೆ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಿದೆ. ಇದು ವಲಸೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ 2025ರಲ್ಲಿ ಕೃಷಿ ಕೂಲಿಕಾರರಿಗೆ ಉದ್ಯೋಗ ಹಕ್ಕಿಗಾಗಿ ಕಾಯ್ದೆಯನ್ನು ಅನುಷ್ಠಾನ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದಿಂದ ನಗರದತ್ತ ಕೃಷಿ ಕೂಲಿ ಕಾರ್ಮಿಕರ ವಲಸೆ ತಡೆಯುವುದು, ಸಮಾನ ಕೂಲಿ, ಆರ್ಥಿಕ ಚೈತನ್ಯದಿಂದ ಗ್ರಾಮ ಸ್ವರಾಜ್ಯವನ್ನು ಕಾಣಲು ಸಾಧ್ಯವಾಗುತ್ತಿತ್ತು. ಸಾವಿರಾರು ಕೆರೆ ಕಟ್ಟೆಗಳು, ಕಾಲುವೆಗಳು ಅಭಿವೃದ್ಧಿಯಾಗಿದ್ದವು, ಕೃಷಿ ಚಟುವಟಿಕೆಗಳಿಗೂ ಕಾಯ್ದೆ ಅನುಕೂಲವಾಗಿತ್ತು. ಒಟ್ಟಾರೆ ಗ್ರಾಮೀಣಾಭಿವೃದ್ಧಿಯಲ್ಲಿ ನರೇಗಾ ಪ್ರಮುಖ ಪಾತ್ರ ವಹಿಸಿತ್ತು.
ಆದರೆ ಇದೀಗ ಜಾರಿಯಾಗುತ್ತಿರುವ ವಿ.ಬಿ. ಜಿ ರಾಮ್​ ಜಿ ಯೋಜನೆ ಎಂ.ಜಿ.ಎನ್​.ಆರ್​.ಇ.ಜಿ.ಎ ಆಶಯಗಳಿಗೆ ತದ್ವಿರುದ್ಧವಾಗಿದೆ. ಗುರ್ತಿಸಿದ ಪ್ರದೇಶಗಳಿಗಷ್ಟೇ ಅನುದಾನ ಮತ್ತು ಕೆಲಸ ದೊರೆಯುತ್ತಿದೆ. ಇದರಿಂದ ಕೆಲಸ ಕೇಳುವ ಹಕ್ಕು ಮತ್ತು ಬೇಡಿಕೆ ಸಂಪೂರ್ಣ ನಾಶವಾಗಲಿದೆ.
ಶೇ.60:40 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂಬ ನಿಯಮವನ್ನು ಸೇರಿಸಲಾಗಿದೆ. ಆರ್ಥಿಕ ಹಿನ್ನಡೆಯಲ್ಲಿರುವ ರಾಜ್ಯಗಳ ಬಳಿ ಶೇ.40 ರಷ್ಟು ಅನುದಾನವಿಲ್ಲದೆ, ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗುತ್ತದೆ. ಗ್ರಾಮೀಣಾಭಿವೃದ್ಧಿಯೂ ಕುಂಠಿತವಾಗಲಿದೆ. ಲಿಂಗ ಸಮಾನತೆ ಮತ್ತು ಸಮಾನ ಕೂಲಿಗೆ ದೊಡ್ಡ ಪೆಟ್ಟು ಬೀಳಲಿದೆ. ಗುತ್ತಿಗೆದಾರರಿಗೆ ನರೇಗಾ ಯೋಜನೆಯಲ್ಲಿ ನಿಷೇಧಿಸಲಾಗಿತ್ತು. ಆದರೆ ಈಗ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಲಾಗಿದ್ದು, ಉಳ್ಳವರಿಗೆ ಅನುಕೂಲ ಮಾಡುವ ಯೋಜನೆ ಇದಾಗಿದೆ ಎಂದರು.
ಜಿ ರಾಮ್​ ಜಿ ಮತ್ತೊಂದು ದುರ್ಬಳಕೆಯ ಯೋಜನೆಯಾಗಿದೆ. ಸ್ವರಾಜ್ಯದ ಕಸನನ್ನು ಕಂಡ ಮಹಾತ್ಮ ಗಾಂಧಿಯನ್ನು ಮರೆ ಮಾಚಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಯೋಜನೆಯನ್ನು ಹಿಂಪಡೆಯಲು ಸಂಸದರಾದ ಡಾ.ಸಿ.ಎನ್​.ಮಂಜುನಾಥ್​ ಅವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಹಿಂದಿನ ನರೇಗಾ ಯೋಜನೆಯನ್ನು ಉಳಿಸಿ ಅವುಗಳಲ್ಲಿನ ದೋಷಗಳನ್ನು ನಿವಾರಿಸಿ ಬಲಿಷ್ಠಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ವರ್ಷಕ್ಕೆ 200 ದಿನ ಕೂಲಿಯನ್ನು ನೀಡಬೇಕು ಹಾಗೂ ಪ್ರತಿ ದಿನದ ಕೂಲಿಯನ್ನು 600 ರೂ.ಗೆ ಏರಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ಈ ವೇಳೆ ಸಂಘಟನೆ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ರಾಜ್ಯ ಸಹಕಾರ್ಯದರ್ಶಿ ಬಿ.ಹನುಮೇಶ್​, ಮುಖಂಡರಾದ ಮಂಜುಳ, ಜಯಮ್ಮ, ಆನಂದ್​, ರಮೇಶ್​, ಜ್ಯೋತಿ, ಅರುಣ್​ ಕುಮಾರ್​, ಅನುಕುಮಾರ್​, ಲಕ್ಷಿ$್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net