ಉದ್ಯೋಗ ಖಾತ್ರಿ ಸಮರ್ಪಕ ಜಾರಿಗಾಗಿ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ಪ್ರತಿಭಟನೆ
ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೆ ಪ್ರತಿಭಟನೆ
  • ಚನ್ನಪಟ್ಟಣ ತಾಲೂಕು ಕಚೇರಿ ಎದುರು ಪ್ರತಿಭಟನೆ
  • ಕೃಷಿ ಕಾರ್ಮಿಕರಿಂದ ಧರಣಿ
ಚನ್ನಪಟ್ಟಣ;
ಉದ್ಯೋಗ ಖಾತ್ರಿ ಕೆಲಸ ಸಮರ್ಪಕ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ಶನಿವಾರ ನಗರದ ತಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕಚೇರಿ ಮುಂಭಾಗ ಧರಣಿ ಕುಳಿತ ಸಂಘದ ಇಗ್ಗಲೂರು ಮತ್ತು ಸರಗೂರು ಗ್ರಾಮ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು, ನರೇಗಾ ಯೋಜನೆಯಡಿಯಲ್ಲಿ ಇಗ್ಗಲೂರು ಗ್ರಾಪಂ ಅಧಿಕಾರಿಗಳು ಸಮರ್ಪಕವಾಗಿ ಉದ್ಯೋಗ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದರೊಂದಿಗೆ ವಿವಿಧ ಭೇಡಿಕೆಗಳ ಈಡೇರಿಕೆಗೆ ತಾಪಂ ಇಒ ಸಂದೀಪ್ ರವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಸದಸ್ಯರು, ಕೆಲಸಕ್ಕಾಗಿ ಗ್ರಾಮೀಣ ಜನತೆ ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ, ೨೦೦೪ ರಲ್ಲಿ ಅಂದಿನ ಯುಪಿಎ ಸರ್ಕಾರ ನರೇಗಾ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆ ರಚನೆಯಾದ ಮೇಲೆ ವಾಸಿಸುವ ಸ್ಥಳದಲ್ಲೇ ಕೂಲಿ ಕೆಲಸ ಸಿಕ್ಕಿದ ಪರಿಣಾಮ ಗ್ರಾಮೀಣ ಭಾಗದ ಬಡ ಜನತೆಗೆ ಅರ್ಥಿಕ ಅಭಿವೃದ್ಧಿ ಜೊತೆಗೆ ಬದುಕುವ ಭರವಸೆ ಮೂಡಿಸಿತು. ಇದರ ಮಧ್ಯೆ ತಾಲೂಕಿನ ಇಗ್ಗಲೂರು ಗ್ರಾಪಂ ಅಧಿಕಾರಿಗಳು ಮಾತ್ರ, ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೇ ವಿನಾ ಕಾರಣ ಅಲೆದಾಡಿಸುತ್ತಿದ್ದಾರೆ. ಈ ಗ್ರಾಪಂನ ಕಾರ್ಯವೈಖರಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಬೇಡಿಕೆಗಳೇನು??

ಕೆಲಸ ಕೇಳಿ ನಮೂನೆ ೬ ರಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಕುಟುಂಬಗಳಿಗೂ ೧೦೦ ದಿನದ ಕೆಲಸ ನೀಡಬೇಕು, ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ಜೊತೆಗೆ ಮೂಲಭೂತ ಸವಲತ್ತುಗಳನ್ನು ಒದಗಿಸಬೇಕು, ಕಾಯಕ ಬಂಧುಗಳಿಗೆ ಗುರುತಿನ‌ ಚೀಟಿ ನೀಡುವ ಜೊತೆಗೆ ಅವರಿಗೂ ಪ್ರೋತ್ಸಾಹ ಧನ ನೀಡಬೇಕು, ಕೆಲಸ ಮುಗಿದ ಕೂಡಲೇ ಕಾರ್ಮಿಕರನ್ನು ಕಾಯಿಸದೇ, ಎನ್ ಎಮ್ ಎಮ್ ಎಸ್ ಹಾಜರಾತಿ ತೆಗೆಯಬೇಕು,
ಉದ್ದೇಶಪೂರ್ವಕವಾಗಿ ಕಾಯಿಸುವ ಕಾಯಕ ಬಂಧುಗಳ ವಿರುದ್ಧ ಕ್ರಮ ಜರುಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ತಾಪಂ ಇಒಗೆ ಮನವಿ ಸಲ್ಲಿಸಿದರು. ಪ್ರತಿಭಟನಾಕಾರರ ಮನವಿ ಆಲಿಸಿದ ಇಒ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಪುಟ್ಟಮಾದು, ಕೃಷ್ಣೇಗೌಡ, ಮಂಜುಳ, ಆನಂದ್, ಟಿ.ಪಿ‌.ಅರುಣ್ ಕುಮಾರ್, ಲಕ್ಷ್ಮಮ್ಮ, ಶಿವಮ್ಮ, ಸುನಂದ, ಜಯಮ್ಮ, ಬೋರೇಗೌಡ, ಸೌಮ್ಯ ಸೇರಿದಂತೆ ಹಲವರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net