ಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಿ ರುದ್ರಮುನಿ ಸ್ವಾಮೀಜಿ

ಕುದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಸ್ವಾಮೀಜಿ ಅಭಿನಂದಿಸಿದರು.
ಕುದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಸ್ವಾಮೀಜಿ ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕುದೂರಿನಲ್ಲಿ ಕಾರ್ಯಕ್ರಮ
  • ಶಿಕ್ಷಣವೇ ಶಕ್ತಿ ಎಂಬ ಅರಿವಿರಲಿ
  • ತಪ್ಪದೇ ಶಿಕ್ಷಣ ಕೊಡಿಸಲು ಶ್ರೀಗಳ ಸಲಹೆ
ಕುದೂರು: ಶಿಕ್ಷಣದಿಂದ ಮಾತ್ರ ಮಗುವಿನ ಸರ್ವತೋಮುಖ ಅಭಿವೃದ್ದಿ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಶಿವಗಂಗೆಯ ಹೊನ್ನಮ್ಮದೇವಿ ಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹೋಬಳಿಯ ಹುಲಿಕಲ್ ಗ್ರಾಮದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮಾನಸ ಗಂಗೋತ್ರಿ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಕೇವಲ ಪುಸ್ತಕದ ಜ್ಞಾನವಲ್ಲ. ಅದು ಮಾನವನೊಳಗಿನ ದೈವಿಕತೆಯನ್ನು ಹೊರತರುವ ಶಕ್ತಿ. ಪ್ರತಿಯೊಬ್ಬ ಮನುಷ್ಯನಲ್ಲೂ ಅನಂತ ಶಕ್ತಿ ಇದೆ, ಅಪಾರ ಬುದ್ಧಿ ಇದೆ. ಶಿಕ್ಷಣವು ಆ ಶಕ್ತಿಯನ್ನು ಜಾಗೃತಗೊಳಿಸಬೇಕು ಎಂದರು.
ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ. ಗುರುಲಿಂಗಸ್ವಾಮಿ ಮಾತನಾಡಿ, ಶಿಕ್ಷಣವು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವಾಗಬಾರದು. ಅದು ದೇಶಸೇವೆ, ಮಾನವಸೇವೆ, ಮತ್ತು ಆತ್ಮವಿಕಾಸಕ್ಕೆ ದಾರಿ ಮಾಡಬೇಕು. ವಿದ್ಯಾವಂತರಾದ ನೀವು ಸಮಾಜದ ನಾಯಕರಾಗಬೇಕು, ಅನುಯಾಯಿಗಳಾಗಬಾರದು ಎಂದರು.
ಕಾರ್ಯಕ್ರಮದಲ್ಲಿ 2024 - 25ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಠ್ಯ, ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ನೆಲಮಂಗಲದ ಮ್ಯಾಕೋ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಸಿಇಒ ಮಹೇಶ್ ಜಿ.ಆರ್, ಕೆಪಿಟಿಸಿಎಲ್ ನಿವೃತ್ತ ಅಧೀಕ್ಷಕ ದೊಡ್ಡಬಸಪ್ಪ, ಸಿಆರ್‌ಪಿ ಶಿವಕುಮಾರ್, ಮರಳಸಿದ್ದೇಶ್ವರ, ಪ್ರಭುದೇವ್, ಪ್ರಾಂಶುಪಾಲ ಸಂತೋಷ್, ಡಾ.ಸುರೇಶ್, ವೀರೇಶ್ ಸೇರಿದಂತೆ ಶಿಕ್ಷಕರು, ಮಕ್ಕಳು, ಪೋಷಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net