ಕುದೂರು: ಕುದೂರು ಮತ್ತು ಮಾಗಡಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಪಕ್ಷಿ ನವಿಲುಗಳು ಸಾಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ನವಿಲುಗಳ ಸಾವಿಗೆ ಹಕ್ಕಿ ಜ್ವರ ಕಾರಣವೆಂದು ಸ್ಪಷ್ಟಪಡಿಸಿದ್ದಾರೆ.
ಮಾಗಡಿ ಗಡಿಭಾಗದ ಕೆರೆ ಸುತ್ತಮುತ್ತ ಹಾಗೂ ಮಾಗಡಿ ವಲಯದ ವ್ಯಾಪ್ತಿಯಲ್ಲಿ ಹಲವು ನವಿಲುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಹಲವು ದಿನಗಳ ಹಿಂದೆ ಕೂಡ ನೆಲಮಂಗಲ, ತುಮಕೂರಿನಲ್ಲೂ ಕೂಡ ನವಿಲುಗಳ ಸಾವು ಪ್ರಕರಣ ದಾಖಲಾಗಿದ್ದು ಹಕ್ಕಿ ಜ್ವರದಿಂದ ಸಾವಾಗಿದೆ ಎಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಮಾಗಡಿ ವಲಯ ಅರಣ್ಯಾಧಿಕಾರಿ ಚೈತ್ರ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕರು 300ಕ್ಕೂ ಹೆಚ್ಚು ನವಿಲುಗಳು ಮೃತಪಟ್ಟಿವೆ ಎಂಬ ವದಂತಿಗಳು ಹರಡುತ್ತಿದ್ದು, ಸಾರ್ವಜನಿಕರು ಸುಳ್ಳು ಸುದ್ದಿ ಹಾಗೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಮಾಗಡಿ ವಲಯ ವ್ಯಾಪ್ತಿಯಲ್ಲಿ ಈವರೆಗೆ ಒಂದು ನವಿಲು ಮೃತಪಟ್ಟಿರುವುದು ಗಮನಕ್ಕೆ ಬಂದಿದ್ದು, ಮರಣೋತ್ತರ ಪರೀಕ್ಷೆಯಲ್ಲ ಹಕ್ಕಿ ಜ್ವರದಿಂದಲೇ ಸಾವು ಸಂಭವಿಸಿದೆ ಎಂದು ಧೃಡಪಟ್ಟಿದೆ. ಕುದೂರು ವ್ಯಾಪ್ತಿಯಲ್ಲಿ ಸುಮಾರು 7 ರಿಂದ 8 ನವಿಲುಗಳು ಮೃತಪಟ್ಟಿರುವ ಮಾಹಿತಿ ಇದೆ. ಆದರೆ ಸಾರ್ವಜನಿಕರು ಹೇಳುತ್ತಿರುವಂತೆ 300 ರಿಂದ 400 ನವಿಲುಗಳು ಸತ್ತಿವೆ ಎಂಬುದು ಸುಳ್ಳು ಮಾಹಿತಿಯಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಸಾಂಕ್ರಾಮಿಕ ಹರಡುವಿಕೆ: ಬೇರೆ ಬೇರೆ ಹಕ್ಕಿಗಳಿಂದ ಈ ವೈರಸ್ ನವಿಲುಗಳಿಗೆ ಹರಡುತ್ತಿದ್ದು, ಹಕ್ಕಿಗಳು ಇದ್ದಕ್ಕಿದ್ದಂತೆ ಮರದಿಂದ ಬಿದ್ದು ಮೃತಪಡುತ್ತಿವೆ.
ಕೋಳಿಗಳು ಹೆಚ್ಚಾಗಿ ಫಾರ್ಮ್‌ಗಳ ಒಳಗೆ ಇರುವುದರಿಂದ ನವಿಲುಗಳಿಂದ ಕೋಳಿಗಳಿಗೆ ಅಥವಾ ಇತರ ಸಾಕುಪ್ರಾಣಿಗಳಿಗೆ ವೈರಸ್ ತಕ್ಷಣವೇ ಹರಡುವ ಸಾಧ್ಯತೆ ಕಡಿಮೆ ಇದೆ. ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಎಲ್ಲಾದರೂ ನವಿಲು ಅಥವಾ ಇತರೆ ಪಕ್ಷಿಗಳು ಮೃತಪಟ್ಟಿರುವುದು ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ.