ಶಿಥಿಲಾವಸ್ಥೆಯ ಓವರ್ ಹೆಡ್ ಟ್ಯಾಂಕ್ ತೆರವಿಗೆ ನಿರ್ಲಕ್ಷ್ಯ

ದೇವರ ಹೊಸಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್
ದೇವರ ಹೊಸಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್
Published on

ಪ್ರಮುಖ ಮುಖ್ಯಾಂಶಗಳು

  • ಚನ್ನಪಟ್ಟಣ ತಾಲೂಕು ದೇವರಹೊಸಳ್ಳಿಯಲ್ಲಿನ ಸಮಸ್ಯೆ
  • ಪರಿಹಾರಕ್ಕೆ ಮುಂದಾಗದ ಅಧಿಕಾರಿಗಳು
  • ತೆವು ಮಾಡಲು ಮುಂದಾಗುವಂತೆ ಗ್ರಾಮಸ್ಥರ ಆಗ್ರಹ
ಚನ್ನಪಟ್ಟಣ;

ಪುರಾಣ ಪ್ರಸಿದ್ಧ ಸಂಜೀವರಾಯಸ್ವಾಮಿ ನೆಲೆವೀಡಾದ ತಾಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿರುವ ಶಿಥಿಲಾವಸ್ಥೆಯ ನೀರು ಸಂಗ್ರಹಣ ತೊಟ್ಟಿ(ಓವರ್ ಹೆಡ್ ಟ್ಯಾಂಕ್) ಜನರ ಆತಂಕಕ್ಕೆ ಕಾರಣವಾಗಿದೆ. ಏನಾದರೂ ಅವಘಡ ಸಂಭವಿಸುವ ಮುನ್ನ ಸಂಬಂಧಿಸಿದವರು ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಗ್ರಾಮದ ಜನರು ಆಗ್ರಹಿಸುತ್ತಿದ್ದಾರೆ.

ಹೌದು.., ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಸಂಜೀವರಾಯಸ್ವಾಮಿ ದೇವಸ್ಥಾನದ ಅನತಿ ದೂರದಲ್ಲಿರುವ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಯ ಪರಮೋಚ್ಛ ಸ್ಥಾನ ತಲುಪಿದೆ.‌ ಆದರೂ, ಇದೇ ಟ್ಯಾಂಕ್‌ಗೆ ನೀರು ತುಂಬಿಸಿ ಗ್ರಾಮದ ವಿವಿಧ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿದೆ.‌ ಶಿಥಿಲಾವಸ್ಥೆಯಿಂದಾಗಿ ಟ್ಯಾಂಕ್ ಸಂಪೂರ್ಣವಾಗಿ ಹಾಳಾಗಿದ್ದು ಏನಾದರೂ ಅವಘಡ ಸಂಭವಿಸಿದರೆ ಸಾಕಷ್ಟು ಅನಾಹುತ ನಡೆಯುವ ಸಾಧ್ಯತೆ ಇದೆ ಎಂದರೆ ತಪ್ಪಾಗಲಾರದು.

ಮಕ್ಕಳು ಓಡಾಡುವ ಜಾಗ!!!


ಟ್ಯಾಂಕ್ ಬಳಿ ಅಂಗನವಾಡಿ ಹಾಗೂ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು ಈ ಟ್ಯಾಂಕ್ ಬಳಿಯೇ ಓಡಾಟ ನಡೆಸುತ್ತಾರೆ. ಇದರೊಂದಿಗೆ, ಟ್ಯಾಂಕ್ ಗೆ ಹೊಂದಿಕೊಂಡಂತೆ ಮನೆಗಳ ಸಹಯಿದ್ದು, ಟ್ಯಾಂಕ್ ನ ಸ್ಥಿತಿಯಿಂದಾಗಿ ಎಲ್ಲರೂ ಆತಂಕದಲ್ಲಿಯೇ ಓಡಾಟ ನಡೆಸುತ್ತಿದ್ದಾರೆ. ಶಿಥಿಲಗೊಂಡಿರುವ ಟ್ಯಾಂಕ್ ನೆಲಕಚ್ಚಿ ಜೀವಗಳಿಗೆ ಹಾನಿಯಾಗುವ ಮುನ್ನ ಮುಂಜಾಗ್ರತಾ ಕ್ರಮ ವಹಿಸುವ ಅಗತ್ಯವಿದೆ. ಆದರೆ, ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

ಓವರ್ ಹೆಡ್ ಟ್ಯಾಂಕ್ ನ ಪಿಲ್ಲರ್‌ಗಳು ಹಾಳಾಗಿದ್ದು, ಟ್ಯಾಂಕ್ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿರುವುದು ಟ್ಯಾಂಕ್ ನ ಅವ್ಯವಸ್ಥೆಯನ್ನು ಸಾರಿ ಹೇಳುತ್ತಿವೆ. ಕಬ್ಬಿಣ ತುಕ್ಕು ಹಿಡಿದು ಬೀಳುವ ಹಂತದಲ್ಲಿದೆ. ನೀರು ಸರಬರಾಜು ಮಾಡಲು ಬದಲಿ ವ್ಯವಸ್ಥೆ ಮಾಡಿ, ಹಾಳಾಗಿರುವ ಟ್ಯಾಂಕ್ ನೆಲಸಮ ಮಾಡುವ‌ ಕೆಲಸ ತುರ್ತಾಗಿದೆ. ಅಧಿಕಾರಿಗಳು ಗಮನ ಹರಿಸದಿದ್ದರೆ, ಮುಂದಾಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಜೆಜೆಎಂ ಗೋಮ್ ಮಾಲ್ ನಡೆದಿರುವುದೇ?


ಗ್ರಾಮದಲ್ಲಿ ೩೦೦ಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮದಲ್ಲಿರುವ ಎಲ್ಲಾ‌ ಮನೆಗಳಿಂದ ೩೦ ವರ್ಷಕ್ಕೂ ಹಳೆಯದಾದ ಈ ಟ್ಯಾಂಕ್ ನಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ನಡೆಸಿದ್ದು, ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅವಕಾಶಯಿದ್ದರೂ ಸಹ, ಟ್ಯಾಂಕ್ ನಿರ್ಮಾಣ ಮಾಡದೇ ಈ ಟ್ಯಾಂಕ್ ಗೆ ಸಂಪರ್ಕ ನೀಡಿರುವುದು ಯಾಕೆ ಎಂಬುದು ಸಹ ಹಲವು ಅನುಮಾನಗಳಿಗೂ ಸಹ ಕಾರಣವಾಗಿದೆ. ಟ್ಯಾಂಕ್ ನಿರ್ಮಿಸದೇ ಏನಾದರೂ ಗೋಲ್ ಮಾಲ್ ಮಾಡಿರುವವರೇ ಅಥವಾ ಶಿಥಿಲಾವಸ್ಥೆಯಾಗಿದ್ದರೂ ಸಹ ಅಧಿಕಾರಿಗಳು ಇದೇ ಟ್ಯಾಂಕ್ ಗೆ ಸಂಪರ್ಕ ಕಲ್ಪಿಸಿರುವುದು ಯಾಕೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಕೂಡಲೇ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಿಥಿಲಾವಸ್ಥೆಯ ಟ್ಯಾಂಕ್ ಗೆ ಮುಕ್ತಿ ಕೊಡಿಸಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.



ಗ್ರಾಮದಲ್ಲಿರುವ ಟ್ಯಾಂಕ್ ಸಂಪೂರ್ಣವಾಗಿ ಹಾಳಾಗಿದೆ. ಈ ಟ್ಯಾಂಕ್ ನೆಲಸಮಗೊಳಿಸುವಂತೆ‌ ಜನತಾದರ್ಶನ ಸೇರಿದಂತೆ ಹಲವಾರು ಬಾರಿ ನಾನು ಸಹ ಖುದ್ದಾಗಿ ದೂರು ಸಲ್ಲಿಸಿದ್ದೇನೆ. ದೂರಿಗೆ ಪ್ರತಿಯಾಗಿ ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಸಹ ಪತ್ರ ನೀಡಿದ್ದಾರೆಯೇ ವಿನಹ, ಇದುವರೆಗೂ ಯಾರು ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ. ಅಧಿಕಾರಿಗಳು ಈ ವಿಚಾರದಲ್ಲೂ ಬೇಜವಾಬ್ದಾರಿತನ ತೋರುತ್ತಿರುವುದು ಒಳ್ಳೆಯದಲ್ಲ.
- ಪವನ್, ದೂರುದಾರರು.


ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಮೂರು ದಶಕಗಳ ಹಳೆಯದಾಗಿದೆ. ಶಿಥಿಲವಾಗಿರುವ ಟ್ಯಾಂಕ್ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ. ಟ್ಯಾಂಕ್ ಪಕ್ಕದಲ್ಲೇ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳು ಓಡಾಟ ನಡೆಸುವುದು ಸಹ ಭಯಕ್ಕೆ ಕಾರಣವಾಗಿದೆ. ಈ ಬಗ್ಗೆ ಎಷ್ಟೇ ಮನವಿ ಸಲ್ಲಿಸಿದರೂ ಯಾರು ಕ್ಯಾರೇ ಎನ್ನುತ್ತಿಲ್ಲ. ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ.
- ಡಿ.ಬಿ.ಚೇತನ್ ಕುಮಾರ್, ಗ್ರಾಮಸ್ಥ.


ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ, ಪರಿಶೀಲನೆ ನಡೆಸುವಂತೆ ನಮ್ಮ ಇಂಜಿನಿಯರ್ ಗೆ ಸೂಚಿಸಿದ್ದೇನೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ.

- ಇಂಪುಕುಮಾರಿ, ಎಇಇ,ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ಚನ್ನಪಟ್ಟಣ ಉಪವಿಭಾಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net