ಮಾಗಡಿಯಲ್ಲೊಂದು ಮಿನಿ ಮಲೆನಾಡು...

ಕಾಳು ಮೆಣಸಿನ ಗಿಡ..
ಕಾಳು ಮೆಣಸಿನ ಗಿಡ..
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಿದ್ದರಾಜು ತೋಟದಲ್ಲಿ ಹಲವು ಬೆಳೆ
  • ಸಮಗ್ರ ಕೃಷಿಯೇ ಅದಾಯದ ಸೆಲೆ
  • ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ
ಮಾಗಡಿ
ಬಯಲುಸೀಮೆ ಎಂಬ ಹಣೆಪಟ್ಟಿ. ಆದರೆ ಇಲ್ಲೊಂದು ತೋಟ ಮಿನಿ ಮಲೆನಾಡಿನಂತಿದೆ. ಶೀಗಂಧ, ಗೋಲ್ಡ್ ಟೀಕ್, ಸಿಲ್ವರ್, ತೇಗದ ಮರ, ವಿವಿಧ ಬಗೆಯ ಹಲಸು, ಮಾವು, ಕಿತ್ತಳೆ, ಬೆಣ್ಣೆ ಹಣ್ಣು, ಡ್ರ್ಯಾಗನ್ ಫ್ರೂಟ್, ನಿಂಬೆ, ನೇರಳೆ, ಜಂಬು ನೇರಳೆ, ಸೀಬೆ, ಸ್ಟಾರ್ ಫ್ರೂಟ್, ಪಪ್ಪಾಯಿ, ಸೀತಾಫಲ, ಐಸ್ ಬೀನ್ಸ್, ಸಪೋಟ, ಮರದ ಸೇಬು, ಬಾಳೆ, ಕೆಂಪು ಬಾಳೆ, ಪನ್ನೇರಳೆ. ದಾಳಿಂಬೆ, ಅಂಜುರ ಹೀಗೆ 20ಕ್ಕೂ ಬಗೆಬಗೆಯ ಹಣ್ಣು, ಗಿಡ-ಮರಗಳನ್ನು ಇಲ್ಲಿ ಕಾಣಬಹುದು. ಒಮ್ಮೆ ತೋಟದ ಒಳಹೊಕ್ಕರೆ ಮತ್ತೆ ಹೊರಗೆ ಹೋಗದಂತೆ ಇಲ್ಲಿನ ಹಚ್ಚಹಸಿರಿನಿಂದ ವಾತಾವರಣ ನಮ್ಮನ್ನು ಅಪ್ಪಿಕೊಳ್ಳುತ್ತದೆ.
ಹೌದು.... ಮಾಗಡಿ ಪಟ್ಟಣದಿಂದ ಕೇವಲ 6 ಕಿ.ಮೀ. ಅಂತರದಲ್ಲಿರುವ ಕಸಬಾ ಹೋಬಳಿಯ ಬಸವನಪಾಳ್ಯದ ಬಿ.ಆರ್.ಸಿದ್ದರಾಜು ಅವರ ತೋಟ ಮಿನಿಮಲೆನಾಡಿನಂತಿದೆ. ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರೂ ಕೃಷಿಯಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಸಿದ್ದರಾಜು ಸರ್ಕಾರಿ ನೌಕರನಂತೆ ವ್ಯವಸಾಯದಲ್ಲೇ ಆದಾಯ ಕಂಡುಕೊಂಡು, ಇತರರಿಗೆ ಸ್ಫೂರ್ತಿಯಾಗಿದ್ದಾರೆ.
7ನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿರುವ ಸಿದ್ದರಾಜು ವ್ಯವಸಾಯದ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಹೊಂದಿದ್ದವರು. ಜಿಕೆವಿಕೆ, ಕೆವಿಕೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆ ಮಾರ್ಗದರ್ಶನದಲ್ಲಿ 8 ಎಕರೆ ಜಮೀನಿನಲ್ಲಿ ಆಧುನಿಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು, ಖರ್ಚುವೆಚ್ಚ ಕಳೆದು ವಾರ್ಷಿಕ 15 ಲಕ್ಷ ರೂ. ವರೆಗೆ ಆದಾಯಗಳಿಸುತ್ತ ಇತರ ರೈತರಿಗೆ ಮಾದರಿಯಾಗಿದ್ದಾರೆ.

4 ಬೋರ್‌ವೆಲ್

ಸಿದ್ದರಾಜು ಅವರ ಜಮೀನಿನಲ್ಲಿ ಒಟ್ಟು 4 ಕೊಳವೆ ಬಾವಿಗಳಿದ್ದು, ಹನಿ ನೀರಾವರಿ ಮೂಲಕ ಬೆಳೆಗಳಿಗೆ ನೀರು ಹಾಯಿಸಲಾಗುತ್ತದೆ. ಖುದ್ದಾಗಿ ಸಿದ್ದರಾಜು ಅವರೇ ಪವರ್ ಟಿಲ್ಲರ್ ಬಳಸಿ ಜಮೀನನ್ನು ಉಳುಮೆ ಮಾಡುತ್ತಾರೆ. ಕಳೆ, ಬೆಳೆಗಳ ನಿರ್ವಹಣೆಗೆ ಪತ್ನಿ ಪಂಕಜಾ, ಪುತ್ರ ರಘುನಂದನ್, ಸೊಸೆ ಲಾವಣ್ಯ ಸೇರಿ ಇಡೀ ಕುಟುಂಬ ಸಾಥ್ ನೀಡಿದ್ದು, ಕೂಲಿಕಾರ್ಮಿಕರ ಅವಲಂಬನೆ ಕಡಿಮೆ. ಒಟ್ಟಾರೆ ಇಡೀ ಕುಟುಂಬ ಕೃಷಿಯಲ್ಲೇ ಖುಷಿ ಕಂಡಿದೆ. ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸಿದೆ.

ಜೇನು ಸಾಕಣೆ, ಮೇಳಕ್ಕೆ ಮಾವು

ಕಲ್ಕತ್ತ ಗೋಲ್ಡ್ ವೀಳ್ಯದೆಲೆ, ಕರಿಬೇವು, ನುಗ್ಗೆ, ಲವಂಗ, ಜಾಕಾಯಿ, ಚಕ್ಕೆ, ಕರಿ ಮೆಣಸು, ಕಾಫಿ, ಏಲಕ್ಕಿ, ಅರಿಶಿಣ, ಒಂದೆಲಗ, ದೊಡ್ಡಪತ್ರೆ ಸೇರಿದಂತೆ ಹತ್ತಾರು ಬಗೆಯ ಆಯುರ್ವೇದದ ಬೆಳೆಗಳೂ ಸಿದ್ಧರಾಜು ಅವರ ತೋಟದಲ್ಲಿವೆ. ಇದಲ್ಲದೇ ತೋಟ ಹಾಗೂ ಮನೆ ಬಳಿ ಜೇನು ಸಾಕಣೆಯನ್ನೂ ಮಾಡಿರುವ ಸಿದ್ದರಾಜು ಅವರು, ಜೇನುತುಪ್ಪವನ್ನು ಸಂಸ್ಕರಿಸಿ ಮನೆಗೆ ಉಪಯೋಗಿಸಿಕೊಳ್ಳುತ್ತಾರೆ. ಏಲಕ್ಕಿ, ಅಡಕೆಯನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಾರೆ.
ವಿಶೇಷವಾಗಿ ಮಾವಿನಹಣ್ಣನ್ನು ಸ್ಥಳೀಯ ಮಾರುಕಟ್ಟೆಗಿಂತ ಆನ್‌ಲೈನ್, ಇಲಾಖೆಗಳು ಹಮ್ಮಿಕೊಳ್ಳುವ ಮಾವಿನ ಮೇಳ ಸೇರಿದಂತೆ ದೊಡ್ಡದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚು ಆದಾಯಗಳಿಸುತ್ತಾರೆ.
ಚಿಕ್ಕದೊಂದು ನರ್ಸರಿ
ಸಿದ್ದರಾಜು ಅವರು ತೋಟದಲ್ಲೇ ಚಿಕ್ಕದೊಂದು ನರ್ಸರಿ ಆರಂಭಿಸಿದ್ದು, ಹೂವು, ಹಣ್ಣು, ತರಕಾರಿ, ಅಡಕೆ, ತೆಂಗು, ಬಾಳೆ ಸೇರಿ ವಿವಿಧ ಬಗೆಯ ನೂರಕ್ಕೂ ಹೆಚ್ಚು ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಾರೆ. ಇಲ್ಲಿನ ಸಸಿಗಳನ್ನು ಖರೀದಿಸಲು ಬರೀ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಅಷ್ಟೇ ಅಲ್ಲದೆ ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ, ಹಿರಿಯೂರು ಸೇರಿದಂತೆ ಶಿವಮೊಗ್ಗ, ಹಾಸನ, ಕೊಡಗು, ಉಡುಪಿ ಭಾಗದಿಂದಲೂ ಬರುತ್ತಾರೆ.

ಸಾವಯುವ ಗೊಬ್ಬರ

ಸಿದ್ದರಾಜು ಅವರು ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸದೆ ಸಮಗ್ರ ಕೃಷಿ ಪದ್ಧತಿಯಡಿ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ. ಮೇಕೆ, ಕುರಿ, ಹಸು ಗೊಬ್ಬರ, ಹಸಿರೆಲೆ ಗೊಬ್ಬರ, ಕೀಟ ನಿರ್ವಹಣೆಯಿಂದ ಬೆಳೆ ಸಮೃದ್ಧಿಯಾಗಿರುತ್ತದೆ ಎನ್ನುವುದು ಅವರ ಅನುಭವ.

ಪ್ರಾಣಿ, ಪಕ್ಷಿಗಳಿಗೆ ಪಾಲು!

ತೋಟದಲ್ಲಿ ವರ್ಷದ 12 ತಿಂಗಳೂ ಹಲಸಿನ ಹಣ್ಣುಗಳು ಸಿಗುತ್ತವೆ. ಪಪ್ಪಾಯಿ, ಸೀಬೆ ಹಣ್ಣು, ನಾಟಿ ಶುಂಠಿ, ನೆಲ್ಲಿ ಕಾಯಿ, ಸಪೋಟ, ಚಕ್ಕೊತ ಸೇರಿದಂತೆ ಹಲವಾರು ಹಣ್ಣುಗಳನ್ನು ಕೀಳದೆ, ತೋಟಕ್ಕೆ ಬಂದವರಿಗೆ ಮತ್ತು ಪ್ರಾಣಿ, ಪಕ್ಷಿಗಳಿಗೆ ಮೀಸಲಿಡುವುದು ವಿಶೇಷವಾಗಿದೆ.

ಪ್ರಶಸ್ತಿ, ಪುರಸ್ಕಾರ

ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಉತ್ತಮ ರೈತ ಪ್ರಶಸ್ತಿಗೆ ಸಿದ್ದರಾಜು ಆಯ್ಕೆಯಾಗಿದ್ದರು. ಅಲ್ಲದೆ ಮಾಗಡಿ ತಾಲೂಕು ಆಡಳಿತವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಿದ್ದರಾಜು ಅವರಿಗೆ ‘ಅತ್ಯುನ್ನತ ರೈತ ಪ್ರಶಸ್ತಿ’ ನೀಡಿ ಗೌರವಿಸಿದೆ.

ಮಾಹಿತಿಗೆ ಸಂಪರ್ಕಿಸಿ

ಸಿದ್ದರಾಜು ಅವರ ತೋಟದ ವೀಕ್ಷಣೆಗೆ ಪ್ರತಿ ದಿನ ಹಲವಾರು ಕಡೆಗಳಿಂದ ನೂರಾರು ರೈತರು ಬಂದು
ಮಾಹಿತಿ ಪಡೆಯುತ್ತಾರೆ. ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು, ತೋಟಕ್ಕೂ ಭೇಟಿ ನೀಡಿ, ಮಾಹಿತಿ ಪಡೆಯಬಹುದು. ದೂರವಾಣಿ ಸಂಖ್ಯೆ 78294-89372
"

ಮಲೆನಾಡಿನ ಬೆಳೆಗಳನ್ನು ಈ ಭಾಗದಲ್ಲಿ ಏಕೆ ಬೆಳೆದು ತೋರಿಸಬಾರದು ಎಂದು ಅಲ್ಲಿನ ಬೆಳೆಗಳನ್ನು ಇಲ್ಲಿ ಬೆಳೆದಿದ್ದೇನೆ. ರೈತರು ಸಮಗ್ರ ಕೃಷಿ ಅಳವಡಿಸಿಕೊಂಡರೆ ಹೆಚ್ಚು ಲಾಭಗಳಿಸಬಹುದು. ಯುವಕರು ಶ್ರದ್ಧೆಯಿಂದ ವ್ಯವಸಾಯದಲ್ಲಿ ತೊಡಗಿಸಿಕೊಂಡರೆ ಅಧಿಕ ಆದಾಯ ಪಡೆಯಬಹುದು. ಬೇರೆಯವರು ಕೊಡುವ ಸಂಬಳದ ಮೇಲೆ ಅವಲಂಬನೆಯ ಅಗತ್ಯವಿಲ್ಲ. ಕೃಷಿಯಿಂದ ನಿರುದ್ಯೋಗ ನಿವಾರಿಸಬಹುದಾಗಿದೆ.

ಬಿ.ಆರ್.ಸಿದ್ದರಾಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net