ಜಿಲ್ಲೆಯಲ್ಲಿ ಸೊರಗಿದ ಜೆಡಿಎಸ್

ಜೆಡಿಎಸ್ ಚಿಹ್ನೆ
ಜೆಡಿಎಸ್ ಚಿಹ್ನೆ
Published on

ಪ್ರಮುಖ ಮುಖ್ಯಾಂಶಗಳು

  • ಸೋಲುಗಳಿಂದ ಕಂಗೆಟ್ಟ ನಾಯಕರು
  • ತಬ್ಬಲಿಯಾದ ಕಾರ್ಯಕರ್ತರು
  • ರಾಮನಗರದತ್ತ ಮುಖ ಮಾಡದ ಎಚ್ ಡಿಕೆ, ಅನಿತಾ
ರಾಮನಗರ
ಜಾತ್ಯತೀತ ಜನತಾದಳದ ಶಕ್ತಿ ಕೇಂದ್ರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪಕ್ಷವು ದಿನೇದಿನೆ ಸಂಘಟನೆಯಲ್ಲಿ ಸೊರಗುತ್ತಿದ್ದು, ಪಕ್ಷನಿಷ್ಠ ಕಾರ್ಯಕರ್ತರು ಅತಂತ್ರರಾಗಿದ್ದಾರೆ. 
ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ರಾಜ್ಯ ಮತ್ತು ಜಿಲ್ಲೆಯ ಜೆಡಿಎಸ್ ನಾಯಕರು ಕಾಂಗ್ರೆಸ್ ಅಬ್ಬರದ ನಡುವೆ, ವಿರೋಧ ಪಕ್ಷವಾಗಿಯೂ ಬಲ ಕಳೆದುಕೊಳ್ಳುತ್ತಿರುವುದು ಕಾರ್ಯಕರ್ತರ ನಿದ್ದೆಗೆಡಿಸಿದೆ. ಸಂಘಟನೆ ವಿಚಾರದಲ್ಲಿ ಪಕ್ಷದ ವರಿಷ್ಠರ ಮನೆ ಬಾಗಿಲು ತಟ್ಟಿದರೆ ನಿಮ್ಮ ಜತೆ ನಾವಿರುತ್ತೇವೆ, ಬರುತ್ತೇವೆ ಹೋಗಿ ಎನ್ನುವ ಸಾಂತ್ವನದ ಮಾತುಗಳ ಹೊರತು ಬೇರೇನೂ ಕಾಣುತ್ತಿಲ್ಲ.

ಮೈತ್ರಿಯೂ ಚಾಲನೆಯಲ್ಲಿಲ್ಲ

ಜಿಲ್ಲೆಯ ಬಿಜೆಪಿಗೆ ಬಲವಿಲ್ಲ, ಸಂಸದ ಡಾ.ಸಿ.ಎನ್.ಮಂಜುನಾಥ್ ಬಿಜೆಪಿಯವರೇ ಆದರೂ ಅವರಿಗೆ ಅಭಿವೃದ್ಧಿ ಹೊರತಾದ ರಾಜಕಾರಣ ಗೊತ್ತಿಲ್ಲ. ಇದರಿಂದಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಿಲ್ಲೆಯಲ್ಲಿ ಇಂದಿಗೂ ಮೈತ್ರಿಯೇ ಏರ್ಪಟ್ಟಿಲ್ಲ ಎನ್ನುವುದು ವಾಸ್ತವ ಸತ್ಯ. ಜಿಲ್ಲೆಯಲ್ಲಿ ಸಂಸದರ ಕಾರ್ಯಕ್ರಮಗಳಿಗೆ ಕೆಲವೊಂದಿಷ್ಟು ಮಂದಿ ಜೆಡಿಎಸ್‌ನ ಪ್ರಮುಖರು ನಾಮ್ ಕೇ ವಾಸ್ತೆ ಹೋಗುತ್ತಾರೆ ಎನ್ನುವುದು ಬಿಟ್ಟರೆ ಉಳಿದಂತೆ ಮೈತ್ರಿ ದೊಡ್ಡಮಟ್ಟದಲ್ಲಿ ಉಳಿದುಕೊಂಡಿಲ್ಲ.

ನಾಯಕರ ಅಪರೂಪದ ಭೇಟಿ

ಜಿಲ್ಲೆಯ ಜೆಡಿಎಸ್ ಸಾರಥ್ಯವನ್ನು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಹೆಗಲಿಗೆೆ ಹಾಕಲಾಗಿದೆ. ಆದರೂ, ಅಧಿಕಾರ ಇಲ್ಲದ ಕಾರಣದಿಂದಾಗಿ ಪಕ್ಷ ಸಂಘಟನೆಯನ್ನು ಸಮರ್ಥವಾಗಿ ಮಾಡಲು ಅವರಿಗೂ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಎಚ್.ಡಿ.ದೇವೇಗೌಡರ ಕುಟುಂಬದ ಪಾಲಿಗೆ ರಾಮನಗರವೇ ಕರ್ಮ ಭೂಮಿಯಾಗಿದ್ದರೂ, ನಿಖಿಲ್ ಕುಮಾರಸ್ವಾಮಿ ಅವರ ಎರಡು ಸೋಲುಗಳಿಂದ ಇಡೀ ಕುಟುಂಬ ಇನ್ನೂ ಹೊರ ಬಂದಂತೆ ಕಾಣುತ್ತಿಲ್ಲ. ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ, ಕೇಂದ್ರ ಸಚಿವರಾದ ನಂತರವಂತೂ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಸಂಪೂರ್ಣವಾಗಿ ಮರೆತಂತಿದೆ. ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅಪರೂಪದ ಅತಿಥಿಯಾಗಿದ್ದಾರೆ. ರಾಮನಗರದಿಂದ ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ ಅವರೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿರುವುದು, ಸಂಘಟನೆ ವಿಚಾರದಲ್ಲಿ ಕಾರ್ಯಕರ್ತರಿಗೆ ಆಗಿರುವ ಗಾಯಕ್ಕೆ ಉಪ್ಪು ಸುರಿದಂತೆ ಆಗಿದೆ.

ಬಲಗೊಳ್ಳುತ್ತಿದೆ ಕಾಂಗ್ರೆಸ್ 

ಜಿಲ್ಲೆಯಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಬಲಿಷ್ಠ ಪ್ರತಿ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ಜೆಡಿಎಸ್ ಸಂಪೂರ್ಣವಾಗಿ ನಿದ್ದೆಗೆ ಜಾರಿದಂತಿದೆ. ಇದರ ಲಾಭವನ್ನು ಪಡೆದುಕೊಂಡು ಕಾಂಗ್ರೆಸ್ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ. ಎಂಪಿಸಿಎಸ್, ಪಿಎಸಿಎಸ್, ಬಿಡಿಸಿಸಿ ಚುನಾವಣೆಗಳಾದಿಯಾಗಿ ಯಾವುದೇ ಚುನಾವಣೆಗಳು ಎದುರಾದರೂ ಗಂಭೀರವಾಗಿ ಪರಿಗಣಿಸುವ ಕಾಂಗ್ರೆಸ್ ನಾಯಕರು, ಪಕ್ಷ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಬೇಕಾದ ನೆರವನ್ನು ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಜತ ಮಹೋತ್ಸವವೂ ಇಲ್ಲ

ಜೆಡಿಎಸ್ ಈಗ 25ರ ಸಂಭ್ರಮ. ಬೆಂಗಳೂರಿನ ಜೆಪಿ ಭವನದಲ್ಲಿ ಇತ್ತೀಚೆಗೆ ರಜತ ಸಂಭ್ರಮ ಅದ್ದೂರಿಯಾಗಿಯೇ ನಡೆದಿದೆ. ಆದರೆ, ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಇದರ ಸಂಭ್ರಮವೇ ಇಲ್ಲ. ಇದೂ ಸಹ ಪಕ್ಷ ಸಂಘಟನೆ ವಿಚಾರದಲ್ಲಿ ಹಿನ್ನಡೆಗೆ ಕಾರಣ ಎನ್ನುವುದು ಸ್ಥಳೀಯ ಕಾರ್ಯಕರ್ತರ ಬೇಸರ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ನಡೆ ಜೆಡಿಎಸ್ ಕಾರ್ಯಕರ್ತರಲ್ಲಿ ನಡುಕ ಹುಟ್ಟುವಂತೆ ಮಾಡಿದೆ. ಈಗಾಗಲೇ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ಸವಗಳನ್ನು ಆಯೋಜಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಜೆಡಿಎಸ್ ಸಂಘಟನೆ ವಿಚಾರದಲ್ಲಿ ಇದೇ ಮನಸ್ಥಿತಿಯಲ್ಲಿ ಮುಂದುವರಿದರೆ ಯುದ್ಧ ಕಾಲದಲ್ಲಿ ಶಸಾಭ್ಯಾಸ ಮಾಡಿ ಹೋರಾಟ ಮಾಡುವುದು ಕಷ್ಟ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.

ಚುನಾವಣೆ ಎದುರಾಗುತ್ತಿವೆ...

ಮುಂದಿನ ಫೆಬ್ರವರಿಗೆ ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಪೂರ್ಣಗೊಳ್ಳಲಿದೆ. ಇದರ ಜತೆಗೆ ತಾಪಂ, ಜಿಪಂ ಚುನಾವಣೆಗಳು ಸಹ ಎದುರಾಗುವ ಸಾಧ್ಯತೆ ಇದೆ. ಈಗಿನಿಂದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಂಡರಷ್ಟೇ ಹೋರಾಟ ನೀಡಲು ಸಾಧ್ಯ. ನಾಯಕರ ನಿರಾಸಕ್ತಿಯಿಂದಾಗಿಯೇ ಬಿಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆಗಳಲ್ಲಿ ಸ್ಪರ್ಧಿಸುವ ಶಕ್ತಿ ಇದ್ದರೂ ಪಕ್ಷದಿಂದ ಯಾರೂ ಕಣಕ್ಕೆ ಇಳಿಯುತ್ತಿಲ್ಲ. ಇಂತಹ ಸನ್ನಿವೇಶ ಮುಂದೆಯೂ ನಿರ್ಮಾಣವಾಗಬಹುದು ಎನ್ನುವುದು ಜೆಡಿಎಸ್ ಕಾರ್ಯಕರ್ತರ ಅಳಲು.
"

ನಾವು ಪಕ್ಷನಿಷ್ಠರಾಗಿಯೇ ಉಳಿದುಕೊಂಡಿದ್ದೇವೆ. ಜೆಡಿಎಸ್ ಹೊರತಾಗಿ ಬೇರೆ ಪಕ್ಷವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ನಾಯಕರು ನಮ್ಮನ್ನು ಕೈ ಬಿಟ್ಟಿದ್ದಾರೆ. ಕ್ಷೇತ್ರದಲ್ಲಿ ಸಂಘಟನೆಯಿಂದ ದೂರವೇ ಉಳಿದಿದ್ದಾರೆ. ಕೇಳಿಕೊಂಡರೂ ಬರುವ ಭರವಸೆ ನೀಡುತ್ತಾರೆ ವಿನಃ ಇತ್ತ ಸುಳಿಯುತ್ತಿಲ್ಲ. 

 ಹೆಸರು ಹೇಳಲಿಚ್ಛಿಸದ ಜೆಡಿಎಸ್ ಕಾಯಕರ್ತರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net