ತಾಲೂಕಿನ ಹೊಂಗನೂರು ಕೆರೆ ಏರಿ ರಸ್ತೆ ಅಭಿವೃದ್ಧಿಗೆ ಗ್ರಹಣ ಹಿಡಿದಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಯಮದಾರಿಯಾಗಿ ಬದಲಾಗಿದೆ. ಕಿರಿದಾದ ಈ ರಸ್ತೆಗೆ ಮುಕ್ತಿ ಯಾವಾಗ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿತ್ಯ ಸಾವಿರಾರು ಮಂದಿ ಸಂಚರಿಸುವ ಕೆರೆ ಏರಿಯ ಸುಮಾರು 2 ಕಿಮೀ ರಸ್ತೆ ಸಂರ್ಪೂರ್ಣ ಕಿರಿದಾಗಿದ್ದು, ಉಬ್ಬುತಗ್ಗುಗಳಿಂದ ಕೂಡಿದೆ. ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿ ಟೆಂಡರ್ ಆಗಿದ್ದರೂ ಸಹ ಕಾಮಗಾರಿ ನಿಲ್ಲಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ರಸ್ತೆ ಅಭಿವೃದ್ಧಿಗೆ ಜತೆಗೆ ರಸ್ತೆಯ ವಿಸ್ತರಣೆಗೂ ಕ್ರಮ ಕೈಗೊಳ್ಳಬೇಕು ಎಂಬುದು ವಾಹನ ಸವಾರರ ಹಲವು ವರ್ಷಗಳ ಬೇಡಿಕೆ.
ತಾಲೂಕಿನಿಂದ ಹೊಂಗನೂರು, ಬಿ.ವಿ.ಹಳ್ಳಿ ಸೇರಿ ಪಕ್ಕದ ಸಾತನೂರು, ಕನಕಪುರ ಹಾಗೂ ಪ್ರಸಿದ್ಧ ಕಬ್ಬಾಳು ದೇವಸ್ಥಾನ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಕೆರೆ ಆರಂಭದಿಂದ ಅಂತ್ಯದ ಪಾಂಡುಪುರ ಗೇಟ್‌ವರೆಗೆ ಒಂದು ಬಸ್ ಮಾತ್ರ ಸಂಚರಿಸುವಷ್ಟು ರಸ್ತೆ ಕಿರಿದಾಗಿದ್ದು, ವಾಹನ ಸವಾರರು ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ, ಮಂಗಳವಾರ, ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ಸೇರಿದಂತೆ ವಿಶೇಷ ದಿನದಲ್ಲಿ ಕಬ್ಬಾಳು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವಾಹನ ಸಮಾರರು ಕೊಂಚ ಯಾಮಾರಿದರೂ ಅಪಘಾತ ಕಟ್ಟಿಟ್ಟಬುತ್ತಿ. ಈ ನಿಟ್ಟಿನಲ್ಲಿ ಶೀಘ್ರವೇ ರಸ್ತೆ ಅಭಿವೃದ್ಧಿ ಮಾಡಲಿ ಎಂಬುದು ಪತ್ರಿಕೆಯ ಆಶಯ.
ಈ ಹಿಂದೆ ಇದೇ ಕೆರೆ ಏರಿಗೆ ಬರುವ ಸಾತನೂರು ರಸ್ತೆ ಅಭಿವೃದ್ಧಿ ಕಾಮಗಾರಿ ಮುಕ್ತಾಯಗೊಂಡಿದೆ. ಇದರಲ್ಲಿ ರಸ್ತೆ ವಿಸ್ತರಣೆಯೂ ಸೇರಿದೆ. ಆದರೆ, ಕೆರೆ ಏರಿ ರಸ್ತೆ ವಿಸ್ತರಣೆಗೆ(ವೈಂಡಿಂಗ್ ಕಾಮಗಾರಿಗೆ) ಮಾತ್ರ ಟೆಂಡರ್ ಆಗಿತ್ತು. ಆದರೆ, ರಸ್ತೆಯ ಹಳೇ ರಸ್ತೆ ಹಾಳಾಗಿದ್ದು, ಕೆರೆ ಏರಿ ರಸ್ತೆ ಆಗಿರುವ ನಿಟ್ಟಿನಲ್ಲಿ ಪೂರ್ಣವಾಗಿ ಕೆಳಮಟ್ಟದಿಂದ ಕೆರೆ ರಸ್ತೆ ವಿಸ್ತರಣೆ ಜತೆಗೆ ರಸ್ತೆ ಅಭಿವೃದ್ಧಿ ಮಾಡಬೇಕಿದೆ.
ಈ ನಿಟ್ಟಿನಲ್ಲಿ ನೂತನ ಕ್ರಿಯಾ ಯೋಜನೆಯ ಅನುಮೋದನೆಗೆ ಕಳಿಸಲಾಗಿದ್ದು, ಅನುಮೋದನೆ ಸಿಕ್ಕ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಶೇ.80 ಕಾಮಗಾರಿ ಮಾಡಿದ್ದು, ಕೆರೆ ಏರಿ ರಸ್ತೆಗೆ ಹೊಸ ಕ್ರಿಯಾಯೋಜನೆಗೆ ಇಲಾಖೆ ಅದೇಶ ನೀಡಿದರೆ, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೆದಾರ ಜಿ.ಎಚ್.ನಾಗರಾಜು ಪತ್ರಿಕೆಗೆ ಮಾಹಿತಿ ನೀಡಿz್ದÁರೆ.
ಹೊಂಗನೂರು ಕೆರೆ ಏರಿ ರಸ್ತೆ ಈಗಾಗಲೆ ಅಗತ್ಯಕ್ಕಿಂತಲೂ ಎತ್ತರವಾಗಿದೆ. ಈ ನಿಟ್ಟಿನಲ್ಲಿ ಮತ್ತೆ ಇದೇ ರಸ್ತೆಯಲ್ಲಿ ಅಭಿವೃದ್ಧಿ ಮಾಡಿದರೆ ರಸ್ತೆ ಕೆರೆಯ ಸಮತಟ್ಟಿಗಿಂತ ಎತ್ತರವಾಗುವ ಜತೆಗೆ ಕಿರಿದಾಗುತ್ತದೆ. ಹಾಗಾಗಿ ಹಾಲಿ ರಸ್ತೆಯ ಎತ್ತರವನ್ನು ಕಡಿಮೆ ಮಾಡಿ ರಸ್ತೆ ಅಭಿವೃದ್ಧಿ ಮಾಡಿದರೆ ರಸ್ತೆ ಅಗಲವೂ ಆಗುತ್ತದೆ. ಇದರಿಂದ ವಾಹನ ಸವಾರರಿಗೆ ಅನುಕೂಲವಾಗಲಿದೆ. ಕ್ರಿಯಾಯೋಜನೆಗೆ ಇಲಾಖೆಗೆ ಕಳಿಸಲಾಗಿದ್ದು, ಕೇಲವೇ ದಿನಗಳಲ್ಲಿ ಆದೇಶ ಬರಲಿದೆ. | ಮಲ್ಲಿಕಾರ್ಜುನ್ ಎಇಇ, ಲೋಕೋಪಯೋಗಿ ಇಲಾಖೆ
ಕೆರೆ ಏರಿ ರಸ್ತೆಯಿಂದ ಕೋಡಿಪುರ ಗೇಟ್‌ವರೆಗಿನ ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿದೆ. ಜತೆಗೆ ರಸ್ತೆ ಕಿರಿದಾಗಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ರಸ್ತೆಯನ್ನು ಅಭಿವೃದ್ಧಿ ಮಾಡದಿದ್ದರೆ ಅಪಾಯ ಸಂಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸಬೇಕು. | ದೊರೆಸ್ವಾಮಿ(ಪಾಪಯ್ಯ) ಸಾರ್ವಜನಿಕ.