ಹೈವೇ ಎಂಟ್ರಿ, ಎಕ್ಸಿಟ್ ಅಸ್ತವ್ಯಸ್ತ

ಬೆಂಗಳೂರು ಮೈಸೂರು ದಶಪಥದ ಸರ್ವೀಸ್ ರಸ್ತೆ
ಬೆಂಗಳೂರು ಮೈಸೂರು ದಶಪಥದ ಸರ್ವೀಸ್ ರಸ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಯಮಲೋಕಕ್ಕೆ ರಹದಾರಿಯಾಗುತ್ತಿದೆ ಬೆಂ-ಮೈ ಹೆದ್ದಾರಿ
  • ಸಂಚಾರ ನಿಯಮ ಅನುಷ್ಠಾನಕ್ಕೆ ನಿರ್ಲಕ್ಷ್ಯ
*
ಚನ್ನಪಟ್ಟಣ
ಬೆಂಗಳೂರು-ಮೈಸೂರು ದಶಪಥ ಒಂದೆಡೆ ಶೀಘ್ರ ಸಂಚಾರಕ್ಕೆ ವರದಾನವಾದರೆ, ಮತ್ತೊಂದೆಡೆ ಕೆಲ ಸ್ಥಳಗಳಲ್ಲಿನ ಅವ್ಯವಸ್ಥೆಗಳು ಯಮಲೋಕಕ್ಕೆ ರಹದಾರಿಯಾಗಿವೆ.
ತಾಲೂಕಿನ ಬೈರಾಪಟ್ಟಣ ಗ್ರಾಮ ಬಳಿಯ ಎಂಟ್ರಿ ಹಾಗೂ ಎಕ್ಸಿಟ್ ಅವ್ಯವಸ್ಥೆಯ ಆಗರವಾಗಿದ್ದು, ಇದರಿಂದಾಗಿ ಸರ್ವೀಸ್ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಬೆಂಗಳೂರಿನಿಂದ ಬಂದವರು ನಗರಕ್ಕೆ ಎಂಟ್ರಿಯಾಗಲು ಹಾಗೂ ಮೈಸೂರಿನಿಂದ ಬರುವವರು ಎಕ್ಸಿಟ್ ಆಗಲು ಈ ಸ್ಥಳದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಜಾಗದಲ್ಲಿ ವಾಹನಗಳ ವೇಗ ತಗ್ಗಿಸುವ ವ್ಯವಸ್ಥೆ, ಮಾರ್ಗಸೂಚಿ ಇಲ್ಲದಿರುವುದು ಹಾಗೂ ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸಲು ನಿರ್ಬಂಧಿಸದಿರುವುದು ಸಮಸ್ಯೆಗೆ ಕಾರಣವಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಕಡೆ ಈ ಜಾಗದಲ್ಲಿ ರಸ್ತೆ ವಿಭಜಕವನ್ನು ಇಡುವ ಮೂಲಕ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಕಡೆಯಂತೂ ಯದ್ವಾತದ್ವಾ ಹೋಗಲು ಅನುವು ಮಾಡಿಕೊಟ್ಟಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ.

ಜೀವಭಯದಲ್ಲೇ ಸಂಚಾರ

ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಅದೇ ವೇಗದಲ್ಲಿ ಎಕ್ಸಿಟ್ ಆಗುವ ಕಾರಣ ಸ್ವಲ್ಪ ಯಾಮಾರಿದರೂ ಅನಾಹುತ ಖಚಿತ. ಈ ಜಾಗದಲ್ಲೂ ವಾಹನಗಳ ವೇಗ ನಿಯಂತ್ರಣಕ್ಕೆ ಸಂಬAಧಿಸಿದವರು ಕ್ರಮಕೈಗೊಳ್ಳಬೇಕಿದೆ.

ಅಡ್ಡಾದಿಡ್ಡಿ ವಾಹನ ನಿಲುಗಡೆ!

ಕೆಲ ವಾಹನ ಸವಾರರು ರಸ್ತೆಯಲ್ಲಿಯೇ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಾರೆ. ಪರಿಣಾಮ ಎಂಟ್ರಿ ಹಾಗೂ ಎಕ್ಸಿಟ್‌ಗಳಲ್ಲಿ ಸಂಚಾರ ಸಮಸ್ಯೆ ತಲೆದೋರುತ್ತಿದೆ. ಈ ಜಾಗದಲ್ಲಿ ಅವೈಜ್ಞಾನಿಕವಾಗಿ ವಾಹನ ನಿಲ್ಲಿಸಲಾಗುತ್ತಿದ್ದು, ಈ ವಿಚಾರದ ಬಗ್ಗೆ ಸಂಬಂಧಿಸಿದವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಇನ್ನು ಹೈವೇಯಿಂದ ಹೊರ ಹಾಗೂ ಒಳಹೋಗುವವರು ಈ ಜಾಗವನ್ನೇ ಬಳಸಬೇಕಿದೆ. ಆದರೆ, ಹೈವೇಯ ಈ ಎಂಟ್ರಿ ಹಾಗೂ ಎಕ್ಸಿಟ್ ಜಾಗದ ಎರಡೂ ಕಡೆಯ ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಅವ್ಯವಸ್ಥೆಗೆ ಕಾರಣವಾಗುತ್ತಿದೆ.
ಹೆದ್ದಾರಿಯ ಪ್ರಯಾಣಿಕರು ಟೀ, ಕಾಫಿ, ತಿಂಡಿಗಾಗಿ ಈ ಎಕ್ಸಿಟ್ ಜಾಗಗಳನ್ನೇ ಅವಲಂಬಿಸುವ ಅನಿವಾರ್ಯತೆ ಇದೆ. ಹಾಗಾಗಿ ಸಹಜವಾಗಿಯೇ ಹೆದ್ದಾರಿಗೆ ಸಂಪರ್ಕ ನೀಡುವ ಎಂಟ್ರಿ ಹಾಗೂ ಎಕ್ಸಿಟ್‌ಗಳ ಬಳಿ ಎರಡೂ ಕಡೆ ಹತ್ತಾರು ಹೋಟೆಲï ಹಾಗೂ ಇತರ ಅಂಗಡಿಗಳು ತಲೆಎತ್ತಿವೆ.
ಅದರಲ್ಲೂ ತಾಲೂಕಿನ ಬೈರಾಪಟ್ಟಣ ಮತ್ತು ಸಂಕಲಗೆರೆ ಗೇಟ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದ ಹೋಟೆಲ್‌ಗಳು ಆರಂಭವಾಗಿವೆ. ಈ ಜಾಗದಲ್ಲಿ ಹೈವೇಯಿಂದ ಸರ್ವೀಸ್ ರಸ್ತೆಗೆ ಬರುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಫಿ ಮತ್ತು ತಿಂಡಿಗಾಗಿ ಎಕ್ಸಿಟ್ ಸ್ಥಳಗಳಲ್ಲಿ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುವ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಪರಿಣಾಮ ಸದರಿ ಜಾಗಗಳಲ್ಲಿ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ. ಚಿಕ್ಕದಾಗಿರುವ ಸರ್ವೀಸ್ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳು ನಿಲ್ಲುವ ಕಾರಣದಿಂದ ಸರ್ವೀಸ್ ರಸ್ತೆಯ ಪ್ರಯಾಣಿಕರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ.
ಎಕ್ಸಿಟ್ ಬಳಿಯಲ್ಲಿರುವ ಅಂಗಡಿ ಮಾಲೀಕರು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಂಡಿಲ್ಲ. ಕೆಲ ಹೋಟೆಲï‌ಗಳಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ವಾಹನ ಚಾಲಕರಿಗೆ ಪಾರ್ಕಿಂಗ್ ಮಾಡುವ ವ್ಯವಧಾನ ಇಲ್ಲದಿರುವುದು ಸಮಸ್ಯೆಗೆ ಮತ್ತೊಂದು ಕಾರಣ ಎನ್ನಬಹುದು.
ಎಕ್ಸ್ಪ್ರೆಸ್ ವೇ ಎಂಟ್ರಿ ಹಾಗೂ ಎಕ್ಸಿಟ್ ಬಳಿ ವಾಹನಗಳ ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಜಾಗದಲ್ಲಿ ರಸ್ತೆ ವಿಭಜಕಗಳನ್ನು ಇಟ್ಟು ನಿಧಾನಗತಿಯ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಇದರೊಂದಿಗೆ, ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಜತೆಗೆ ಸರ್ವೀಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನ ಸಂಚಾರವೂ ಜೋರಾಗಿದೆ. ಪೊಲೀಸರು ಅಂಡರ್ ಪಾಸ್ ಕೆಳಗೆ ನಿಂತು ದಂಡ ವಿಧಿಸುವುದರೊಂದಿಗೆ ಈ ವಿಚಾರದ ಬಗ್ಗೆಯೂ ಗಮನಹರಿಸಿದರೆ ಒಳ್ಳೆಯದು.
| ಪ್ರದೀಪ್ ಕುಮಾರ್ ಬಿ.ಜಿ., ಬೈರಾಪಟ್ಟಣ ಗ್ರಾಮಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net