ಪ್ಲಾಸ್ಟಿಕ್ ಬಿಡ್ರಿ, ಬಟ್ಟೆ ಬ್ಯಾಗ್ ಹಿಡಿರಿ

ರಾಮನಗರ ನಗರಸಭೆ.
ರಾಮನಗರ ನಗರಸಭೆ.
Published on

ಪ್ರಮುಖ ಮುಖ್ಯಾಂಶಗಳು

  • ಹತ್ತು ರೂಪಾಯಿಗೆ ಸಿಗುತ್ತೆ ಕಾಟನ್ ಕೈ ಚೀಲ
  • ಸ್ವಚ್ಛ, ಸುಂದರ ರಾಮನಗರಕ್ಕಾಗಿ ನಗರಸಭೆ ವಿನೂತನ ಪ್ರಯತ್ನ
ರಾಮನಗರ
ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಮುಂದಾಗಿರುವ ನಗರಸಭೆ ಮೊದಲ ಪ್ರಯತ್ನವಾಗಿ ಬಟ್ಟೆ ಬ್ಯಾಗ್ ವಿತರಣಾ ಯಂತ್ರಗಳನ್ನು (ಎಟಿಎಂ ರೀತಿಯ ವೆಂಡಿAಗ್ ಮಷಿನ್) ಜನರಿಗೆ ಪರಿಚಯಿಸಲು ಮುಂದಾಗಿದೆ.
ಹೌದು. ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ನಗರಸಭೆ ಕಡಿವಾಣ ಹಾಕುತ್ತಿದ್ದರೂ ಸಂಪೂರ್ಣ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಹೊಸ ಪ್ರಯತ್ನಕ್ಕೆ ನಗರಸಭೆ ಮುಂದಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಜನರಿಗೆ ಸುಲಭವಾಗಿ ಬಟ್ಟೆ ಬ್ಯಾಗ್ ಸಿಗುವಂತಾಗಲು ವ್ಯಾಪಾರ ಹಾಗೂ ಜನನಿಬಿಡ ಸ್ಥಳಗಳಲ್ಲಿ ಎಟಿಎಂ ರೀತಿಯ ಯಂತ್ರಗಳನ್ನು ಪರಿಚಯಿಸುತ್ತಿದೆ. ಪ್ರಾಯೋಗಿಕ ಪ್ರಯತ್ನವಾಗಿ ರಾಮನಗರದ ಎಪಿಎಂಸಿ ಮಾರುಕಟ್ಟೆಯ ಒಂದು ಭಾಗದಲ್ಲಿ ಬ್ಯಾಗ್‌ನ ವೆಂಡಿAಗ್ ಮಷಿನ್ ಸ್ಥಾಪಿಸಲಾಗಿದ್ದು, ಮಾ.9ರಂದು ಚಾಲನೆ ನೀಡಲಾಗುತ್ತಿದೆ. ಇದರ ಕಾರ್ಯವೈಖರಿ ಹಾಗೂ ಬಳಕೆ ಬಗ್ಗೆ ಮಾಹಿತಿ ಪಡೆದು ಮತ್ತಷ್ಟು ಸ್ಥಳಗಳಲ್ಲಿ ಸ್ಥಾಪಿಸುವ ಯೋಜನೆಯನ್ನು ನಗರಸಭೆ ಹಾಕಿಕೊಂಡಿದೆ.

ಬ್ಯಾಗ್ ಪಡೆಯುವುದು ಹೇಗೆ?

ಬಟ್ಟೆ ಬ್ಯಾಗ್ ಸಿಗುವ ಎಟಿಎಂ ಯಂತ್ರದಲ್ಲಿ 10 ರೂ. ಪಾವತಿಸಿ ಬಟ್ಟೆ ಬ್ಯಾಗ್ ಪಡೆಯಬಹುದು. ಸ್ಕಾö್ಯನರ್ ಮೂಲಕವೂ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, 18 ಇಂಚು ಉದ್ದ, ಅಗಲವಿರುವ ಬ್ಯಾಗ್‌ನಲ್ಲಿ 15ರಿಂದ 20ಕೆಜಿ ವಸ್ತುಗಳನ್ನು ಹಾಕಬಹುದು. ಜತೆಗೆ 10ರಿಂದ 15 ಬಾರಿ ಮರು ಬಳಕೆ ಮಾಡಬಹುದು.

ಮಹಿಳಾ ಸಂಘಗಳಿಂದ ನಿರ್ವಹಣೆ

ಯಂತ್ರಗಳಲ್ಲಿ ಸಿಗುವ ಬಟ್ಟೆ ಬ್ಯಾಗ್ ಪೂರೈಕೆ ಹಾಗೂ ಯಂತ್ರ ನಿರ್ವಹಣೆಯನ್ನು ಸಂಪೂರ್ಣವಾಗಿ ನಗರದ ಮಹಿಳಾ ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ. ಇದರಿಂದ ನಗರಸಭೆಗೆ ಒಂದಷ್ಟು ಪ್ಲಾಸ್ಟಿಕ್ ಚಿಂತೆ ದೂರವಾಗುವ ಜತೆಗೆ ಮಹಿಳಾ ಸಂಘಗಳಿಗೆ ಆರ್ಥಿಕವಾಗಿ ನೆರವು ಸಿಗುತ್ತದೆ ಎಂಬುದು ನಗರಸಭೆ ಲೆಕ್ಕಾಚಾರ.

ಹೇಗಿದೆ ಮಷಿನ್?

ನಾಲ್ಕು ಅಡಿ ಉದ್ದ, ಅಗಲವಿರುವ ಮಷಿನ್ ಹಗುರವಾಗಿದ್ದು, ಚಿಕ್ಕ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ನೀಡಿ ಗೋಡೆಗೂ ನೇತು ಹಾಕಬಹುದು. ಇದರ ನಿರ್ವಹಣೆ ಮತ್ತು ಬಳಕೆ ಸುಲಭ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಯಾವ ಸ್ಥಳಗಳಲ್ಲಿ ಸ್ಥಾಪನೆ

ನಗರದ ಹಳೇ ಬಸ್ ನಿಲ್ದಾಣ, ಮುಖ್ಯರಸ್ತೆ, ಕೆಂಗಲ್ ಹನುಮಂತಯ್ಯ ಪ್ರತಿಮೆ ಸ್ಥಳ, ಎಂ.ಜಿ.ರಸ್ತೆ, ರೈಲು ನಿಲ್ದಾಣ, ಹುಣಸನಹಳ್ಳಿ ರಸ್ತೆ, ಐಜೂರು ಬಸ್ ನಿಲ್ದಾಣ ಸಮೀಪ, ಮಾಗಡಿ ರಸ್ತೆ, ರಾಯರದೊಡ್ಡಿ, ವಿವೇಕಾನಂದನಗರ ಸರ್ಕಲ್, ಕೆಂಪೇಗೌಡ ಸರ್ಕಲ್ ಸೇರಿದಂತೆ ವ್ಯಾಪಾರ ಸ್ಥಳಗಳಲ್ಲಿ ವೆಂಡಿAಗ್ ಮಷಿನ್ ಅಳವಡಿಸಲು ನಗರಸಭೆ ಮುಂದಾಗಿದೆ.

ಏಕೆ ಈ ಚಿಂತನೆ?

ಹಲವು ವರ್ಷಗಳಿಂದಲೂ ನಗರಸಭೆ ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ ಬಳಸುವಂತೆ ಮನವಿ ಮಾಡಿದರೂ ಜನ ಬಟ್ಟೆ ಬ್ಯಾಗ್ ಬಳಕೆಗೆ ಮುಂದಾಗುತ್ತಿಲ್ಲ. ಇತ್ತ ವ್ಯಾಪಾರಸ್ಥರೂ ನಗರಸಭೆ ದಂಡಕ್ಕೆ ಹೆದರದೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ನಗರಸಭೆ ಕಡಿಮೆ ದರದಲ್ಲಿ ಹಾಗೂ ಸುಲಭವಾಗಿ ಬಟ್ಟೆ ಬ್ಯಾಗ್ ವಿತರಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಅರ್ಕಾವತಿ ನದಿ ಸೇರುತ್ತಿದೆ ತ್ಯಾಜ್ಯ

ತರಕಾರಿ ಮತ್ತಿತರ ಪದಾರ್ಥ ತಂದ ಪ್ಲಾಸ್ಟಿಕ್ ಕವರ್‌ಗಳನ್ನು ಜನ ಮನಬಂದAತೆ ಎಸೆಯುವ ಕಾರಣ ಗಾಳಿಯಲ್ಲಿ ತೇಲುತ್ತ ಅವು ಚರಂಡಿ ಸೇರುತ್ತವೆ. ಅಲ್ಲದೆ ಅರ್ಕಾವತಿ ನದಿಗೂ ಸೇರುವ ಕಾರಣ ಗಲೀಜು ಉಂಟಾಗಿ ಉತ್ತಮ ವಾತಾವರಣವನ್ನು ಹದಗೆಡಿಸುತ್ತವೆ. ಈ ಕಾರಣಕ್ಕೆ ನಗರಸಭೆಯು ನದಿ ಹಾಗೂ ನಗರದಲ್ಲಿ ಶುಚಿತ್ವ ಕಾಪಾಡಲು, ಪರಿಸರ ಮಾರಕ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಯಂತ್ರಗಳ ಮೊರೆ ಹೋಗುತ್ತಿದೆ.

ದಂಡಕ್ಕೂ ಅಂಜದ ಜನ

ತರಕಾರಿ, ದಿನಸಿ ಅಂಗಡಿ, ಹೋಟೆಲ್, ಬೀದಿಬದಿ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಪ್ಲಾಸ್ಟಿಕ್ ಮಾರುವವರಿಗೆ ದಂಡ ವಿಧಿಸುತ್ತಾರೆ. ಕಳೆದ ವರ್ಷದಿಂದ 5 ಟನ್ ಪ್ಲಾಸ್ಟಿಕ್ ಜಪ್ತಿ ಮಾಡಿಕೊಂಡು, 95 ಸಾವಿರ ರೂ. ದಂಡ ವಿಧಿಸಿದ್ದಾರೆ. ಆದರೂ ಪೂರ್ಣ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಕೋಟ್
ಸುಂದರ ನಗರದ ಪರಿಕಲ್ಪನೆ ನಮ್ಮದಾಗಿದೆ. ನಗರಸಭೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದೆ ಈ ನಿಟ್ಟಿನಲ್ಲಿ ಜನರಲ್ಲಿ ಬಟ್ಟೆ ಬ್ಯಾಗ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಹೊಸ ಪ್ರಯತ್ನವಾಗಿ ನಗರದ ವ್ಯಾಪಾರ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್ ವೆಂಡಿAಗ್ ಮಷಿನ್ (ಎಟಿಎಂ) ಅಳವಡಿಸಲಾಗುತ್ತಿದೆ. ಇದರಿಂದ ನಮ್ಮ ಸುಂದರ, ಸ್ವಚ್ಛ ನಗರದ ಪರಿಕಲ್ಪನೆಗೆ ಒಂದು ಮೈಲಿಗಲ್ಲಾಗಲಿದೆ.
| ಕೆ.ಶೇಷಾದ್ರಿ
ಅಧ್ಯಕ್ಷ, ನಗರಸಭೆ, ರಾಮನಗರ
ಯಂತ್ರಗಳ ಮೂಲಕ ಸಾರ್ವಜನಿಕರು ಸುಲಭವಾಗಿ ಬಟ್ಟೆ ಬ್ಯಾಗ್‌ಗಳನ್ನು ಪಡೆಯಬಹುದು. ಯಂತ್ರದ ನಿರ್ವಹಣೆ ಸಹ ಸುಲಭವಾಗಿದ್ದು, ನಮ್ಮ ಒಟ್ಟಾರೆ ಪ್ರಯತ್ನ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕುವುದು. ಕಲುಷಿತವಾಗುವ ವಾತಾವರಣವನ್ನು ಸ್ವಚ್ಛವಾಗಿಸುವುದು. ಎಪಿಎಂಸಿ ಆವರಣದಲ್ಲಿ ಮೊದಲ ಪ್ರಯತ್ನವಾಗಿ ಯಂತ್ರಕ್ಕೆ ಇಂದು ಚಾಲನೆ ನೀಡಲಾಗುವುದು. ನಂತರ ಇತರ ಸ್ಥಳಗಳಲ್ಲಿ, ಜನರ ಬೇಡಿಕೆಗೆ ತಕ್ಕಂತೆ ಅಳವಡಿಸಲಾಗುವುದು.
| ಡಾ.ಜಯಣ್ಣ
ಆಯುಕ್ತರು ನಗರಸಭೆ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net