- ಚನ್ನಪಟ್ಟಣ ತಾಲೂಕು ದೇವರಹಳ್ಳಿಯಲ್ಲಿ ಘಟನೆ
- ಕಿಡಿಗೇಡಿಗಳಿಂದ ಕೃತ್ಯ
- ಸಮೂದಾಯದಿಂದ ಪ್ರತಿಭಟನೆ, ಗ್ರಾಮ ಉದ್ವಿಗ್ನ
ನಾಡಪ್ರಭು ಕೆಂಪೇಗೌಡರ ಪ್ಲೆಕ್ಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಯನ್ನು ಖಂಡಿಸಿ, ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಸೋಮವಾರ
ಗ್ರಾಮಸ್ಥರು ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಇದೇ 27 ರಂದು ಕೆಂಪೇಗೌಡರ ಜಯಂತಿ ಅಂಗವಾಗಿ ಗ್ರಾಮದಲ್ಲಿ ಅದ್ದೂರಿಯಾಗಿ ಜಯಂತಿ ಆಚರಿಸಲಾಗಿತ್ತು. ಈ ವೇಳೆ ಗ್ರಾಮದ ಒಂದು ವೃತ್ತದಲ್ಲಿ ಕೆಂಪೇಗೌಡರ ಬೃಹತ್ ಬ್ಯಾನರ್ ಅನ್ನು ಸಹ ಅಳವಡಿಸಲಾಗಿತ್ತು. ಈ ಬ್ಯಾನರ್ ಗೆ ಭಾನುವಾರ ಮಧ್ಯರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸೋಮವಾರ ಇದನ್ನು ನೋಡಿದ ಕೂಡಲೇ ಗ್ರಾಮಸ್ಥರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ವಿಚಾರ ವಿವಾದಕ್ಕೆ ಹೋಗುವುದನ್ನು ಅರಿತ ಪೊಲೀಸರು ಕೂಡಲೇ ಗ್ರಾಮಕ್ಕೆ ಭೇಟಿನೀಡಿ, ಬೆಂಕಿಯಿಂದ ಅರ್ಧ ಬೆಂದ ಬ್ಯಾನರ್ ತೆರವುಗೊಳಿಸಲು ಮುಂದಾದರು. ಆದರೆ, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮಹನೀಯರಿಗೆ
ಅವಮಾನವಾಗಿದೆ, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ, ಶಿಕ್ಷೆಕೊಡಬೇಕು ಎಂದು ಪಟ್ಟು ಹಿಡಿದರು.
ಕೊನೆಗೂ ಸುಟ್ಟ ಬ್ಯಾನರ್ ಅನ್ನು ಪೋಲಿಸರು ತೆಗೆಸಿದರು.
ಪ್ರತಿಭಟನೆ ನಡೆಸಿ ಆಕ್ರೋಶ!!!
ಈ ವಿಚಾರ ತಿಳಿಯುತ್ತಲೇ ಗ್ರಾಮಕ್ಕೆ ಪಕ್ಷಾತೀತವಾಗಿ ಆಗಮಿಸಿದ ಒಕ್ಕಲಿಗ ಸಮಾಜ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಇದರೊಂದಿಗೆ, ಸ್ಥಳದಲ್ಲಿಯೇ ಶಾಮಿಯಾನ ಹಾಕಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ ಸೇರಿದಂತೆ ಸಂಘದ ಒಕ್ಕಲಿಗರ ಸಂಘದ ಎಂಪ್ಲಾಯ್ ಅಶೋಶಿಯನ್ ಸದಸ್ಯರು ಸಾಥ್ ನೀಡಿದರು. ಈ ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ನಾಡಪ್ರಭು ಕೆಂಪೇಗೌಡರು ಸರ್ವ ಧರ್ಮ ಹಾಗೂ ಸರ್ವಜನಾಂಗದ ಅಭಿವೃದ್ಧಿ ಬಯಸಿದ ಪುಣ್ಯಾತ್ಮ. ಇಂತಹ ಮಹನೀಯರ ಭಾವಚಿತ್ರಕ್ಕೆ ಮಾಡಿರುವ ಕೃತ್ಯ ಖಂಡನೀಯ. ಇದೊಂದು ಬಹಳ ಸೂಕ್ಷ್ಮದ ವಿಚಾರ. ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ, ಹೋರಾಟದ ದಿಕ್ಕು ತೀವ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.
ಕೇವಲ ಕೆಂಪೇಗೌಡರಷ್ಟೇ ಅಲ್ಲ ಯಾವ ಮಹನೀಯರಿಗೂ ಇಂತಹ ಅಪಮಾನವಾಗಬಾರದು. ಪೊಲೀಸರು ಇಂತಹ ಹೇಯ ಮನಸ್ಥಿತಿಯವರಿಗೆ ಎಡೆಮೂರಿಕಟ್ಟುವ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆಯ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ,
ಬೆಂಕಿಯಿಟ್ಟ ಸ್ಥಳದಲ್ಲಿಯೇ ಕೆಂಪೇಗೌಡರ ಪ್ರತಿಮೆಗೆ ತಾ.ಪಂ ಇಒ ಸಂದೀಪ್, ಡಿವೈಎಸ್ಪಿ ಗಿರೀಶ್ ಸಮ್ಮುಖದಲ್ಲಿಯೇ ಗುದ್ದಲಿಪೂಜೆ ಮಾಡಿದ ಮುಖಂಡರು, ಕೂಡಲೇ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇನ್ನೊಂದು ತಿಂಗಳಲ್ಲಿ ಈ ಜಾಗದಲ್ಲಿ ಶಾಶ್ವತ ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂದು ಘೋಷಿಸಿದರು. ಜೊತೆಗೆ, ತಾತ್ಕಾಲಿಕವಾಗಿ ಕೆಂಪೇಗೌಡರ ಕಟೌಟ್ ನಿಲ್ಲಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಮುನ್ನೆಚ್ಚರಿಕೆಯಿಂದ ಬೆಳಿಗ್ಗೆಯಿಂದಲೇ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನಾಕಾರರನ್ನು ಮನವೊಲಿಸಿದ ಡಿವೈಎಸ್ಪಿ ಕೆ.ಸಿ.ಗಿರಿ, ಸಿಪಿಐ ಪ್ರಕಾಶ್, ಪಿಎಸ್ಐಗಳಾದ ಸಹನಾ ಪಾಟೀಲ್, ಮನೋಹರ್ ಸೇರಿದಂತೆ ತಾಪಂ ಇಒ ಸಂದೀಪ್, ಇಂತಹ ಘಟನೆಯನ್ನು ಇಲಾಖೆ ಸಹ ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಕಿಡಿಗೇಡಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಆರಂಭಿಸಿದ್ದೇವೆ. ಇನ್ನೂ ಮೂರು ದಿನದೊಳಗೆ ಆರೋಪಗಳನ್ನು ಬಂಧಿಸುವ ಭರವಸೆ ನೀಡಿದರು.
ಎಂ ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವ ಆಶ್ವಾಸನೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್, ಕಾಂಗ್ರೆಸ್ ಮುಖಂಡರಾದ ಪಿ.ಡಿ.ರಾಜು, ಚೇತನ್ ಕೀಕರ್, ಬಿಜೆಪಿ ಮುಖಂಡರಾದ ಎಲೆಕೇರಿ ರವೀಶ್, ಮಾಳಗಾಳು ರಾಜಪ್ಪ, ಚೇತನ್, ಮುಖಂಡರಾದ ರಮೇಶ್ ಗೌಡ, ಧರಣೇಶ್ ರಾಂಪುರ, ಬೈರಾಪಟ್ಟಣ ರವಿ, ರಮೇಶ್, ಹರಿದಾಸ್, ವೆಂಕಟೇಶ್, ಮಂಕುಂದ ನಂದೀಶ್, ಆಣಿಗೆರೆ ಬಿಳಿಯಪ್ಪ, ಮನೋಹರ್, ರೇಖಾಉಮಾಶಂಕರ್, ಮಹೇಶ್, ಬೇವೂರು ಯೋಗೀಶ್ ಸೇರಿದಂತೆ ಹಲವರು ಇದ್ದರು.