ರಾಮನಗರ: ಕಳೆದ ಮೂರು ತಲೆಮಾರುಗಳಿಂದ ಉಳುಮೆ ಮಾಡಿ ಕೃಷಿ ಮಾಡಿಕೊಂಡು ಬರುತ್ತಿರುವ ಜಮೀನನ್ನು ತಮ್ಮದು ಎಂದು ವ್ಯಕ್ತಿಯೊಬ್ಬರು ಮಾನಸಿಕ ಮತ್ತು ದೈಹಿಕವಾಗಿ ಹಿಂದೆ ನೀಡುತ್ತಿದ್ದು, ನ್ಯಾಯ ಕೊಡಿಸುವಲ್ಲಿ ಅಧಿಕಾರಿಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ದಯಾಮರಣ ನೀಡುವಂತೆ 16 ರೈತರು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ ಎಂದು ರೈತ ಸಂಘದ ಮುಖಂಡ ನಲ್ಲಹಳ್ಳಿ ಶ್ರೀನಿವಾಸ ಹೇಳಿದರು.
ನಗರದ ಎಪಿಎಂಸಿ ರೈತ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ತಾಲೂಕಿನ ಮಂಗಳವಾರಪೇಟೆಯಲ್ಲಿ 17.24 ಎಕರೆ ಜಮೀನನ್ನು 19 ರೈತರಿಗೆ ಉಳುವವನೇ ಭೂಮಿಯ ಒಡೆಯ ಯೋಜನೆ ಜಾರಿಗೆ ಬಂದ ವೇಳೆ ಮೊದಲಿಗೆ ಮಂಜೂರು ಮಾಡಿಕೊಡಲಾಗಿದೆ. ಆದರೆ ತದ ನಂತರ ತಾಲೂಕಿನ ಮಾಜಿ ಸಚಿವರೊಬ್ಬರು ತಮ್ಮ ಸಂಬಂಧಿಯೊಬ್ಬರಿಗೆ ಇದನ್ನು ಮರು ಮಂಜೂರು ಮಾಡಿಸಿಕೊಟ್ಟಿದ್ದಾರೆ. 19 ಕುಟುಂಬಗಳಲ್ಲಿ 16 ಕುಟುಂಬಗಳಿಗೆ 2018ರಿಂದಲೂ ತೊಂದರೆ ಕೊಡುತ್ತಲೇ ಬಂದಿದ್ದಾರೆ. ಈ ಸಂಬಂಧ ಕಾನೂನು ಹೋರಾಟ ಸಹ ಚನ್ನಪಟ್ಟಣದಲ್ಲಿ ನ್ಯಾಯಾಲಯದಲ್ಲಿ ನಡೆದಿದೆ. ಈ ನಡುವೆ ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಕೋಯ್ಲು ಮಾಡಲು ಹೋದಾಗ ಈಗ ಜಮೀನು ತಮ್ಮದು ಎಂದು ಹೇಳಿಕೊಂಡಿರುವ ವ್ಯಕ್ತಿ ಕಡೆಯವರು ಬಂದು ಬತ್ತ ಕೋಯ್ಲು ಮಾಡಲು ಅವಕಾಶ ನೀಡದೆ ತೊಂದರೆ ನೀಡಿದ್ದಾರೆ.
ಬತ್ತ ಕೋಯ್ಲು ಮಾಡಲು ಮಧ್ಯಸ್ತಿಕೆ ಮಾಡುವುದಾಗಿ ಹೇಳಿಕೊಂಡು ಬಂದ ಪೊಲಿಸರು ಸಹ, ರೈತರಿಗೆ ಸಹಕಾರ ನೀಡಿಲ್ಲ. ಬತ್ತ ಭೂಮಿ ಸೇರುತ್ತಿದೆ. ಇದರಿಂದ ನೊಂದ ರೈತ ವಿಶ್ವನಾಥ್ ಎನ್ನುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಶ್ರೀನಿವಾಸ್ ದೂರಿದರು.
ಈ ರೈತರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚನ್ನಪಟ್ಟಣ ತಹಸೀಲ್ದಾರ್‌ಗೆ ದೂರು ನೀಡಿದರೂ ಏನೂ ಪ್ರಯೋಜವಾಗುತ್ತಿಲ್ಲ. ಈಗ ಜಮೀನು ತಮ್ಮದು ಎಂದು ಹೇಳಿಕೊಂಡು ಬಂದಿರುವ ವ್ಯಕ್ತಿ ಪ್ರಭಾವಿ ಆಗಿರುವ ಕಾರಣ ರಾಜಕಾರಣಿಗಳೂ ಸಹ ರೈತರ ನೆರವಿಗೆ ಬರುತ್ತಿಲ್ಲ. ಭೂಮಿ ಹೊರತಾಗಿ ಯಾವುದೇ ಜೀವನಾಧಾರ ಇಲ್ಲದ ಕಾರಣ ತಮಗೆ ದಯಾ ಮರಣ ನೀಡಬೇಕು ಎಂದು ರಾಷ್ಟ್ರಪತಿಗೆ ರೈತರು ಮನವಿ ಮಾಡಿದ್ದು, ಸ್ಪೀಡ್ ಪೋಸ್ಟ್ ಮೂಲಕ ರವಾನೆ ಮಾಡಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.
ಹಿರಿಯ ರೈತ ನಾಯಕಿ ಅನಸೂಯಮ್ಮ ಮಾತನಾಡಿ, ಮಂಗಳವಾರಪೇಟೆಯಲ್ಲಿ ಈಗ ಭೂಮಿಯ ಬೆಲೆ ಹೆಚ್ಚಳವಾಗಿದೆ. ಎಕರೆಗೆ 4-5 ಕೋಟಿ ರೂ. ಇದ್ದು, ಈ ಹಿನ್ನೆಲೆಯಲ್ಲಿ ಜಮೀನಿಗೆ ಈ ರೀತಿಯ ಕೃತ್ಯ ನಡೆದಿದೆ. ಬತ್ತ ಕೋಯ್ಲು ಮಾಡಲು ಪೊಲೀಸರು ಸಹ ಸಹಕಾರ ನೀಡದ ಕಾರಣ ಡಿವೈಎಸ್‌ಪಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕಾರ ಮಾಡಲಿಲ್ಲ. ಸಾಮಾನ್ಯ ಜನರ ನೋವಿಗೆ ಸ್ಪಂದಿಸದ ಅಧಿಕಾರಿ ಏಕೆ ಬೇಕು ಎಂದು ಪ್ರಶ್ನಿಸಿದರು. ಮಂಜೂರಾಗಿ, ಕೃಷಿ ಮಾಡುತ್ತಿರುವ ರೈತರ ಜಮೀನನ್ನು ಮರು ಮಂಜೂರು ಮಾಡಲು ಸಾಧ್ಯವಿದೆಯೇ? ರೈತರ ಜಮೀನನ್ನು ಕಸಿದು ಕೊಳ್ಳಲು ಮುಂದಾಗುವ ಮೂಲಕ ಜೀವನ ಮಾಡುವ ಹಕ್ಕನ್ನೇ ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಟೀಕಿಸಿದರು. ಜಮೀನಿಗೆ ರಾತ್ರೋರಾತ್ರಿ ಬೇಲಿ ಹಾಕುವ ಕೆಲಸ ಮಾಡಿದ್ದಾರೆ. ನಾವು ಪೊಲೀಸರನ್ನೇ ಬುಕ್ ಮಾಡಿಕೊಂಡಿದ್ದೇವೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ದರ್ಪದ ಮಾತುಗಳನ್ನು ಆಡುತ್ತಾರೆ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ನೊಂದ 16 ಕುಟುಂಬದ ಸದಸ್ಯರು ರೈತ ಸಂಘದ ಮುಖಂಡರಾ ರಾಜು, ಕೃಷ್ಣಪ್ಪ, ದೇವರಾಜು, ರಮೇಶ್, ಪ್ಯಾರು, ಶಿವರಾಜ್ ಮುಂತಾದವರು ಇದ್ದರು.