ಸಂವಿಧಾನ ಬದುಕು ಕಟ್ಟಿಕೊಡುವ ಮಹಾನ್ ಗ್ರಂಥ

ಗಣರಾಜ್ಯೋತ್ಸವ ದಿನದಂದು ಧ್ವಜವಂದನೆ ಸ್ವೀಕಾರ ಮಾಡಿದ ಸಚಿವ ರಾಮಲಿಂಗಾರೆಡ್ಡಿ
ಗಣರಾಜ್ಯೋತ್ಸವ ದಿನದಂದು ಧ್ವಜವಂದನೆ ಸ್ವೀಕಾರ ಮಾಡಿದ ಸಚಿವ ರಾಮಲಿಂಗಾರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • 76ನೇ ಗಣರಾಜ್ಯೋತ್ಸವ ಧ್ವಜಾರೋಹಣ
  • ಧ್ವಜವಂದನೆ ಸ್ವೀಕರಿಸಿದ ಸಚಿವರು
  • ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ
ರಾಮನಗರ: ಸಂವಿಧಾನ ಸತ್ತವರ ಬಗ್ಗೆ ಬರೆದ ಚರಿತ್ರೆಯ ಪುಸ್ತಕವಲ್ಲ, ಅದು ಭಾರತೀಯರ ಬದುಕು ಕಟ್ಟಿಕೊಡುವ ಮಹಾನ್​ ಗ್ರಂಥ. ಇದರ ಅಡಿ ನಾವೆಲ್ಲರೂ ಸಮ ಮತ್ತು ಸಹ ಬಾಳ್ವೆಯನ್ನು ನಡೆಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. 1947ರ ಆಗಸ್ಟ್​ 15 ರಂದು ದೇಶವು ಸ್ವಾತಂತ್ರ್ಯ ಪಡೆದುಕೊಳ್ಳುವ ಮೂಲಕ ದಾಸ್ಯದ ಸಂಕೋಲೆಯನ್ನು ಕಳಚಿಕೊಂಡ ನಂತರ ಜನವರಿ 26, ಭಾರತೀಯರಿಗೆ ಮಹತ್ವದ ದಿನ. ಈ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಲಭ್ಯವಾಗುವ ಸಮ ಸಮಾಜ ನಿಮಾರ್ಣದ ದಾರಿಗಳನ್ನು ಬಲಪಡಿಸಲು ಚಿಂತಿಸಬೇಕು ಎಂದು ಕರೆ ನೀಡಿದರು.
ನಮ್ಮ ಜತೆಗೆ ಸ್ವಾತಂತ್ರ್ಯ ಪಡೆದುಕೊಂಡ ಹಲವಾರು ದೇಶಗಳು ಬಲಿಷ್ಠವಾದ ಸಂವಿಧಾನವನ್ನು ಹೊಂದಿರದ ಕಾರಣ ಅರಾಜಕತೆಯನ್ನು ಕಾಣುತ್ತಿದ್ದೇವೆ. ಆದರೆ ಸ್ವಾತಂತ್ರ್ಯ ಬಂದು 75 ವಸಂತಗಳು ಕಳೆದಿದ್ದರೂ ಭಾರತ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಾ ಸಾಗಿದೆ. ಇದಕ್ಕೆ ಮೂಲ ಕಾರಣ ಸಂವಿಧಾನ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು, ಆತನ ಏಳ್ಗೆಯೇ ಸರ್ಕಾರದ ಆದ್ಯ ಕರ್ತವ್ಯ. ಇಂತಹ ವ್ಯವಸ್ಥೆಯಲ್ಲಿ 76 ವರ್ಷಗಳ ಸುಧೀರ್ಘ ಕಾಲ ಸಾಗಿ ಬಂದಿರುವ ನಾವು, ನಮ್ಮ ದೇಶದ ಪ್ರಗತಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ ಕಾಣಿಕೆಯನ್ನು ಮರೆಯಲಾಗದು. ಚುನಾಯಿತ ಪ್ರತಿನಿಧಿ ರಾಷ್ಟ್ರದ ಮುಖ್ಯಸ್ಥನಾಗಿದ್ದರೆ ಅಂತಹ ವ್ಯವಸ್ಥೆಯನ್ನು ಗಣರಾಜ್ಯ ಎನ್ನುತ್ತೇವೆ ಎಂದರು.
ಭಾರತದ ಸಂವಿಧಾನವು ಸಾಮಾಜಿಕ ನ್ಯಾಯದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸುಭದ್ರತೆಯನ್ನು ಸಾಧಿಸಲು ಮಹತ್ವ ನೀಡಿದೆ. ವೈವಿದ್ಯತೆಯಲ್ಲಿ ಏಕತೆ ಸಾಧಿಸಿರುವ ದೇಶ ನಮ್ಮದು ನಮ್ಮ ಸರ್ಕಾರ ಸಂವಿಧಾನಕ್ಕೆ ಬದ್ಧವಾದ ಪ್ರತಿಯೊಬ್ಬರ ಮೂಲಭೂತ ಹಕ್ಕನ್ನು ಕಾಪಾಡುವಲ್ಲಿ ಕಟಿಬದ್ಧವಾಗಿದೆ.
ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ ಭಾವನೆ, ಸಹಬಾಳ್ವೆಯೊಂದಿಗೆ ಮುನ್ನಡೆಯೋಣ. ಇದು ಸರ್ವಜನಾಂಗದ ಶಾಂತಿಯ ತೋಟ. ಎಲ್ಲರೂ ಪರಸ್ಪರ ಪ್ರೀತಿ, ಸಹಬಾಳ್ವೆ, ಕೋಮು ಸೌಹಾರ್ದತೆ ಕಾಪಾಡುವುದರ ಜೊತೆಗೆ, ನವ ಭಾರತ ನಿರ್ಮಿಸೋಣ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಸಮರ್ಪಕ ಅನುಫಿ್ಠಾನಗೊಂಡಿದ್ದು, ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರಾಜ್ಯ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಎಚ್​.ಎನ್​. ನಾಗಮೋಹನದಾಸ್​ ಅವರು ವಿದ್ಯಾರ್ಥಿ ಮತ್ತು ಯುವ ಜನರಿಗಾಗಿ ಕನ್ನಡ ಭಾಷೆಯಲ್ಲಿ ಸಂವಿಧಾನ ಪುಸ್ತಕವನ್ನು ರಚಿಸಿದ್ದಾರೆ. ನಾವೆಲ್ಲರೂ ನಮ್ಮ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ ಅದರಂತೆ ನಡೆದುಕೊಂಡರೆ ಕೆಲವೇ ದಿನಗಳಲ್ಲಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಹಾಗೂ ಸವಾಲುಗಳನ್ನು ಹಿಮ್ಮೆಟ್ಟಿಸಬಹುದು. ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ವಿದ್ಯಾವಂತ ನಾಗರೀಕರು ಸಂವಿಧಾನ ಓದು ಪುಸ್ತಕವನ್ನು ಓದಿ ಸಂವಿಧಾನದ ಮಹತ್ವವನ್ನು ಅರ್ಥೈಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್​ ಇಲಾಖೆ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಾಂಸತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಥಸಂಚಲನ, ಸಾಂಸತಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು.
ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್​. ನಟರಾಜು ಗಾಣಕಲ್​, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ರಾಜು, ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸ್​ ಗೌಡ, ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್​ ಜೈನ್​, ಎಡಿಸಿ ಆರ್​. ಚಂದ್ರಯ್ಯ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net