ಎನ್ಡಿಡಿಬಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಆಟೋಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಿಸ್ಟಮ್ (ಎಎಂಸಿಎಸ್) ಅನ್ನು ಒಕ್ಕೂಟ 2,298 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಳವಡಿಸಿದೆ. ಎಂಪಿಸಿಎಸ್ಗಳಿಗೆ ರೈತರು ಹಾಲು ಸರಬರಾಜು ಮಾಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಎಎಂಸಿಎಸ್ ತಂತ್ರಾಂಶದ ಮೂಲಕ ಹಾಲಿನ ಅಳತೆ ಮತ್ತು ಗುಣಮಟ್ಟ ಪರಿಶೀಲಿಸುತ್ತಾರೆ. ಪರೀಕ್ಷೆ ಪೂರ್ಣಗೊಳಿಸುತ್ತಿದ್ದಂತೆ ಒಂದೇ ನಿಮಿಷದಲ್ಲಿ ಹಾಲು ಸಬರಾಜು ಮಾಡಿದ ರೈತರ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ಗೆ ವಿವರಗಳು ಅಪ್ಡೇಟ್ ಆಗುತ್ತವೆ. ಆ್ಯಪ್ನಲ್ಲಿ ಯಾವ ದಿನಾಂಕ, ಯಾವ ಸಮಯಕ್ಕೆ ಎಷ್ಟು ಲೀಟರ್ ಹಾಲು ಸರಬರಾಜು ಮಾಡಿದ್ದಾರೆ. ಹಾಲಿನ ಗುಣಮಟ್ಟ, ಕೊಬ್ಬಿನಾಂಶದ ವಿವರ, ಪ್ರತಿ ಲೀಟರ್ಗೆ ರೈತರಿಗೆ ನೀಡುವ ಬೆಲೆ, ಒಟ್ಟು ಮೊತ್ತ ಹಾಗೂ ಇದುವರೆಗೆ ಹಾಲು ಪೂರೈಕೆ ಮಾಡಿದ್ದಕ್ಕೆ ಎಷ್ಟು ಹಣ ಪಾವತಿಸಲಾಗಿದೆ ಎಂಬ ವಿವರ ಲಭ್ಯವಾಗುತ್ತದೆ.