ಸಾರಂಗಕ್ಕೆ ಅಪರಿಚಿತ ವಾಹನ ಡಿಕ್ಕಿ

 ಮಾಗಡಿಯ ಸೋಲೂರು ಸಮೀಪ ಅಪಘಾತಕ್ಕೆ ಒಳಗಾದ ಸಾರಂಗ.
ಮಾಗಡಿಯ ಸೋಲೂರು ಸಮೀಪ ಅಪಘಾತಕ್ಕೆ ಒಳಗಾದ ಸಾರಂಗ.
Published on

ಪ್ರಮುಖ ಮುಖ್ಯಾಂಶಗಳು

  • ಮಾಗಡಿಯ ಸೋಲೂರು ಬಳಿ ಘಟನೆ
  • ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಡಿಕ್ಕಿ
  • ಮುತ್ತಿಕೊಂಡ ಜನ ಗಾಬರಿಗೊಂಡ ಸಾರಂಗ
ಮಾಗಡಿ: ತಾಲೂಕಿನ ಸೋಲೂರು ಬಮೂಲ್​ ಶೀತಲೀಕರಣ ಕೇಂದ್ರದ ಬಳಿಯ ಬೆಂಗಳೂರು&-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಾರಂಗಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯೊಡೆದಿದೆ. 
ಸುಮಾರು 8 ವರ್ಷದ ಗಂಡು ಸಾರಂಗ, ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು, ಜನರನ್ನು ಕಂಡು ಪೊದೆಯೊಳಗೆ ಕಣ್ಮರೆಯಾಗಿದೆ. 
ಘಟನೆಯ ವಿವರ: ಶುಕ್ರವಾರ ಮುಂಜಾನೆ ರಸ್ತೆ ದಾಟುತ್ತಿದ್ದ ಸಾರಂಗಕ್ಕೆ  ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯಕಂಡು ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಜನರ ಸದ್ದು ಮತ್ತು ಜನದಟ್ಟಣೆಯನ್ನು ಕಂಡು ಭಯಭೀತಗೊಂಡ ಸಾರಂಗ ಕುಂಟುತ್ತಲೇ ಸಮೀಪದ ಪೊದೆಯೊಳಗೆ ಓಡಿ ಕಣ್ಮರೆಯಾಗಿದೆ.
ಅರಣ್ಯ ಅಧಿಕಾರಿಗಳ ಭೇಟಿ: ವಿಷಯ ತಿಳಿದ ಕೂಡಲೇ ವಲಯ ಅರಣ್ಯ ಅಧಿಕಾರಿ ಚೈತ್ರಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಶುಕ್ರವಾರ ಬೆಳಗಿನ ಜಾವ ಸಾರಂಗಕ್ಕೆ ವಾಹನ ಡಿಕ್ಕಿಯಾಗಿರುವುದು ದೃಢಪಟ್ಟಿದೆ. ಜನರನ್ನು ಕಂಡು ಗಾಬರಿಯಿಂದ ಓಡಿ ಹೋಗಿದೆ. ಅರಣ್ಯ ಇಲಾಖೆಯ ತಂಡವು ಜಿಂಕೆಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿದೆ. ಅದನ್ನು ಪತ್ತೆಹಚ್ಚಿ ಕೂಡಲೇ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು. 
ಸಾರ್ವಜನಿಕರಲ್ಲಿ ಮನವಿ: ಸಾರಂಗಗಳು ಸೌಮ್ಯ ಸ್ವಭಾವದವು, ಇವುಗಳ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಇದು ಯಾರ ಮೇಲೆಯೂ ದಾಳಿ ಮಾಡುವುದಿಲ್ಲ. ಗಾಯಗೊಂಡ ಜಿಂಕೆಯು ಎಲ್ಲಾದರೂ ಪ್ರತ್ಯಕ್ಷವಾದರೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಅದಕ್ಕೆ ಸಕಾಲದಲ್ಲಿ ವೈದ್ಯಕಿಯ ನೆರವು ನೀಡಲು ಸಾಧ್ಯವಾಗುತ್ತದೆ ಎಂದು ಅಧಿಕಾರಿ ಚೈತ್ರಾ  ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net