2028ಕ್ಕೆ ಜಿಲ್ಲೆಯಲ್ಲಿ 6 ಕ್ಷೇತ್ರಗಳು?

ರಾಮನಗರ ಜಿಲ್ಲೆ ನಕ್ಷೆ
ರಾಮನಗರ ಜಿಲ್ಲೆ ನಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಪುನರ್ ವಿಂಗಡಣೆಯತ್ತ ಎಲ್ಲರ ಚಿತ್ತ
  • ಆರಂಭಗೊಂಡಿದೆ ಚರ್ಚೆಗಳು
ರಾಮನಗರ
ಎಲ್ಲೆಡೆ ಈಗ ಕ್ಷೇತ್ರ ಪುನರ್‌ವಿಂಗಡಣೆಯಣೆಯ ಚರ್ಚೆ. 2028ಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಏನಾಗಬಹುದು? ಯಾವ ಹೋಬಳಿ ಯಾವ ಕ್ಷೇತ್ರಕ್ಕೆ ಸೇರಲಿದೆ? ಎಷ್ಟು ಕ್ಷೇತ್ರಗಳು ರಚನೆ ಆಗಲಿವೆ? ಎನ್ನುವ ಪ್ರಶ್ನೆಗಳ ಸರಮಾಲೆಯೊಂದಿಗೆ ಚರ್ಚೆಗಳು ಆರಂಭಗೊಂಡು, ಯಾರ ಭವಿಷ್ಯ ಏನಾಗಲಿದೆ? ಎನ್ನುವ ವಿಶ್ಲೇಷಣೆಯೂ ಭರ್ಜರಿಯಾಗಿ ನಡೆಯುತ್ತಿದೆ.
ಸಾಮಾನ್ಯವಾಗಿ ಪ್ರತಿ 20 ವರ್ಷಗಳಿಗೊಮ್ಮೆ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ಆಗುತ್ತದೆ. 2008ರಲ್ಲಿ ನಡೆದ ಕ್ಷೇತ್ರಗಳ ಪುನರ್‌ವಿಂಗಡಣೆ ಅವಧಿ ಮುಗಿಯಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದೆ. ಆದರೆ, ಮುಂದೆನಾಗುವುದೋ ಎನ್ನುವ ಲೆಕ್ಕಾಚಾರಗಳು ಆರಂಭಗೊಂಡಿವೆ.

ಹಿಂದೆ ಕ್ಷೇತ್ರ ಬದಲಾಗಿದ್ದವು

2007ರಲ್ಲಿ ರಾಮನಗರ ಜಿಲ್ಲೆ ಉದಯವಾಯಿತು. ಇದಾದ ವರ್ಷಕ್ಕೆ ಸರಿಯಾಗಿ ನಡೆದ ವಿಧಾನಸಭೆ ಚುನಾವಣೆಯಲ್ಲಿಯೇ ಕ್ಷೇತ್ರಗಳ ಪುನರ್‌ವಿಂಗಡಣೆ ಆಯಿತು. ಇದರ ಭಾಗವಾಗಿ ರಾಮನಗರ ವಿಧಾನಸಭೆ ಕ್ಷೇತ್ರದ ಭಾಗವಿದ್ದ ಕೂಟಗಲ್ ಮತ್ತು ಬಿಡದಿ ಹೋಬಳಿಗಳು ಮಾಗಡಿಗೆ ಸೇರ್ಪಡೆಗೊಂಡವು. ಕನಕಪುರ ಕ್ಷೇತ್ರದ ಭಾಗವಾಗಿದ್ದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳು ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ ಸೇರ್ಪಡೆಗೊಂಡವು. ಇನ್ನು ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರವಾಗಿದ್ದ ಸಾತನೂರು ಕಣ್ಮರೆಯಾಗಿ ಕನಕಪುರಕ್ಕೆ ಸೇರ್ಪಡೆಗೊಂಡಿತು. ಕಣ್ಮರೆಯಾದ ಕ್ಷೇತ್ರದಲ್ಲಿದ್ದ ವಿರೂಪಾಕ್ಷಿಪುರ ಹೋಬಳಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಸೇರಿತು. ಹೀಗೆ ಕ್ಷೇತ್ರಗಳು, ಗಡಿಗಳು ಬದಲಾದವು.

6 ವಿಧಾನಸಭೆ ಕ್ಷೇತ್ರಗಳು?

ಲಭ್ಯ ಮಾಹಿತಿ ಪ್ರಕಾರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪ್ರಸ್ತುತ ಇರುವ 4 ವಿಧಾನಸಭೆ ಕ್ಷೇತ್ರಗಳು 6 ಕ್ಷೇತ್ರಗಳಾಗಲಿವೆ. ಪ್ರಸ್ತುತ ರಾಮನಗರ, ಕನಕಪುರ, ಮಾಗಡಿ ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳಿದ್ದು, 2008ರಲ್ಲಿ ಕಳೆದುಹೋಗಿದ್ದ ಸಾತನೂರು ಕ್ಷೇತ್ರ ಮರು ಹುಟ್ಟು ಪಡೆಯಲಿದೆ ಎಂದು ಹೇಳಲಾಗಿದೆ. ಇದರ ಜತೆಗೆ ಹಾರೋಹಳ್ಳಿ ಸಹ ಹೊಸ ಕ್ಷೇತ್ರವಾಗಿ ಜನ್ಮ ಪಡೆಯಲಿದೆ ಎನ್ನಲಾಗುತ್ತಿದೆ.

ಜನಸಂಖ್ಯೆ ಲೆಕ್ಕ

ಪ್ರಸ್ತುತ ಜಿಲ್ಲೆಯಲ್ಲಿ ಇರುವ ಮತದಾರರ ಸಂಖ್ಯೆ ಸುಮಾರು 11 ಲಕ್ಷ ದಾಟಿದೆ. 2027ರಲ್ಲಿ ನಡೆಯುವ ಜನಗಣತಿಯಲ್ಲಿ ಇದರ ಸಂಖ್ಯೆ ಹೆಚ್ಚಾಗಲಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ಮತದಾರರ ಪ್ರಮಾಣ 1.70 ಲಕ್ಷದಿಂದ 2 ಲಕ್ಷವರೆಗೆ ಇರುವಂತೆ, ಜನಸಂಖ್ಯೆ ಆಧಾರದಲ್ಲಿ ಜಿಲ್ಲೆಯಲ್ಲಿ 2 ಹೊಸ ಕ್ಷೇತ್ರಗಳ ರಚನೆ ಆಗಲಿದೆ.

ಹೋಬಳಿ ವಿಂಗಡಣೆ?

ಕಂದಾಯ ಜಿಲ್ಲೆಯ ಭಾಗವೇ ಆಗಿದ್ದ ಸೋಲೂರು ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರ್ಪಡೆಗೊಂಡಿದೆ. ಉಳಿದಂತೆ ಮಾಗಡಿ ವಿಧಾನಸಭೆ ಕ್ಷೇತ್ರ 2028ಕ್ಕೆ ತನ್ನ ವ್ಯಾಪ್ತಿಯ ಬಿಡದಿ, ಕೂಟಗಲ್, ಮಾಡಬಾಳ್ ಹೋಬಳಿಯನ್ನು ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇನ್ನು ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ ಕೂಟಗಲ್, ಮಾಗಡಿಯ ಮಾಡಬಾಳ ಹೋಬಳಿ ಕ್ಷೇತ್ರ ಸೇರಲಿದ್ದು, ಕೈಲಾಂಚ ಮತ್ತು ಹಾರೋಹಳ್ಳಿ ತಾಲೂಕನ್ನೂ ಸಂಪೂರ್ಣವಾಗಿ ಕಳೆದುಕೊಳ್ಳಲಿದೆ ಎನ್ನಲಾಗಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಸಹ ವಿರೂಪಾಕ್ಷಿಪುರ ಹೋಬಳಿಯನ್ನು ಕಳೆದುಕೊಳ್ಳಲಿದ್ದು, ಕಸಬಾ, ಮಳೂರು ಹೋಬಳಿಗಳನ್ನಷ್ಟೇ ಉಳಿಸಿಕೊಳ್ಳಲಿದೆ.

ಕನಕಪುರ ಇಬ್ಭಾಗ?

ಕನಕಪುರ ವಿಧಾನಸಭೆ ಕ್ಷೇತ್ರ ಇಬ್ಭಾಗವಾಗಲಿದೆ. ಸಾತನೂರು ಮತ್ತೆ ಜನ್ಮ ಪಡೆಯಲಿದ್ದು, ಇದಕ್ಕೆ ಹಿಂದಿನಂತೆ ಕೋಡಿಹಳ್ಳಿ, ಸಾತನೂರು ಮತ್ತು ಚನ್ನಪಟ್ಟಣದ ವಿರೂಪಾಕ್ಷಿಪುರ ಇರಲಿದೆ ಎಂದು ಹೇಳಲಾಗಿದೆ. ಕನಕಪುರ ಕ್ಷೇತ್ರಕ್ಕೆ ಉಯ್ಯಂಬಳ್ಳಿ, ಮತ್ತು ಕಸಬಾ ಹೋಬಳಿಗಳು ಉಳಿಯಲಿವೆ ಎಂದು ತಿಳಿದು ಬಂದಿದೆ.

ಹೊಸ ಕ್ಷೇತ್ರ?

ಜಿಲ್ಲೆಯಲ್ಲಿ ಹೊಸ ಕ್ಷೇತ್ರವೊಂದು ಹುಟ್ಟಿಕೊಳ್ಳುವ ಮುನ್ಸೂಚನೆಯೂ ದೊರೆತಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಹಾರೋಹಳ್ಳಿ ತಾಲೂಕು ಹಾಗೂ ಬಿಡದಿ ಹೋಬಳಿ ಈ ಕ್ಷೇತ್ರದಲ್ಲಿ ಇರಲಿವೆ ಎನ್ನಲಾಗಿದೆ. ಆದರೆ ಕ್ಷೇತ್ರದ ಕೇಂದ್ರಸ್ಥಾನ ಯಾವುದಾಗಿರಲಿದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ಮಹಿಳಾ ಮೀಸಲಾತಿ

ಜಿಲ್ಲೆಯಲ್ಲಿ ಕ್ಷೇತ್ರಗಳ ಮರುರಚನೆ ಪರಿಣಾಮ ಎರಡು ವಿಧಾನಸಭೆ ಕ್ಷೇತ್ರಗಳು ಮಹಿಳೆಯರ ಪಾಲಾಗಲಿವೆ. ಶೇ.33ರ ಮೀಸಲಾತಿ ಅಡಿಯಲ್ಲಿ ಮಹಿಳೆಯರಿಗೆ ಎರಡು ಕ್ಷೇತ್ರಗಳು ದೊರೆತರೆ, ಒಂದು ಸ್ಥಾನ ಎಸ್‌ಸಿ ಮೀಸಲು ಕ್ಷೇತ್ರವಾಗಿರಲಿದೆ.

ಕುತೂಹಲದ ಕಣ್ಣು

ಕ್ಷೇತ್ರಗಳ ಮರುರಚನೆ ವಿಚಾರವಾಗಿ ನಡೆಯುತ್ತಿರುವ ಚರ್ಚೆ ನಡುವೆಯೇ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆಗೆ ಸಮಿತಿ ರಚಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ. ಸಮಿತಿ ರಚನೆ ಸಂಬAಧ ಅತಿ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ. 2028ಕ್ಕೆ ಕ್ಷೇತ್ರ ಪುರ್ನವಿಗಂಡಣೆ ಆಗಲೇಬೇಕಿದ್ದು, ಒಂದು ವೇಳೆ ವಿಳಂಬವಾದರೆ 2029ರ ಲೋಕಸಭೆ ಚುನಾವಣೆ ವೇಳೆಗೆ ಎರಡೂ ಚುನಾವಣೆಗಳು ಒಟ್ಟಿಗೆ ನಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನುತ್ತಿವೆ ಮೂಲಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net