ಯಕ್ಷಗಾನದ ಅಪರೂಪದ ಪೂರ್ಣರಾತ್ರಿ ತಾಳಮದ್ದಳೆಯ ಅರ್ಥವೈಭವಕ್ಕೆ ರಾಜಧಾನಿ ಬೆಂಗಳೂರು ಮತ್ತೊಮ್ಮೆ ಸಾಕ್ಷಿಯಾಗಲಿದ್ದು, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 25ರಂದು ರಾತ್ರಿ 10 ಗಂಟೆಯಿಂದ ಬೆಳಗಿನವರೆಗೆ 'ಯಕ್ಷಸಂಕ್ರಾಂತಿ' ಮೂರನೇ ವರ್ಷದ ವಿಶೇಷ ಕಾರ್ಯಕ್ರಮ ನಡೆಯಲಿದೆ.
ನಾಗರಾಜ್ ಶೆಟ್ಟಿ ನೈಕಂಬ್ಳಿ ಅವರ ಸಂಯೋಜನೆಯಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ವಿರಳವಾಗುತ್ತಿರುವ ಪೂರ್ಣರಾತ್ರಿ ತಾಳಮದ್ದಳೆ ಪರಂಪರೆಯನ್ನು ಜೀವಂತವಾಗಿಡುವ ಉದ್ದೇಶ ಹೊಂದಿದೆ. ಸಮಯದ ಮಿತಿಯೊಳಗೆ ನಡೆಯುವ ತಾಳಮದ್ದಳೆಗಳ ನಡುವೆ ಇಡೀ ರಾತ್ರಿ ಅರ್ಥವೈಭವವನ್ನು ಸವಿಯುವ ಅವಕಾಶ ಕಲಾರಸಿಕರಿಗೆ ಲಭ್ಯವಾಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಯಕ್ಷಗಾನಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದಿರುವ 'ಯಕ್ಷಸಂಕ್ರಾಂತಿ' ಇದೀಗ ತಾಳಮದ್ದಳೆ ಪ್ರಿಯರ ವಾರ್ಷಿಕ ಸಾಂಸ್ಕೃತಿಕ ಹಬ್ಬವಾಗಿ ಗುರುತಿಸಿಕೊಂಡಿದೆ.
ಕಾರ್ಯಕ್ರಮದಲ್ಲಿ ಮೊದಲ ಪ್ರಸಂಗವಾಗಿ ಪಾರ್ತಿಸುಬ್ಬ ವಿರಚಿತ 'ವಾಲಿವಧೆ', ಎರಡನೇ ಪ್ರಸಂಗವಾಗಿ ಡಿ.ಎಸ್. ಶ್ರೀಧರ ರಚಿತ 'ಭೃಗುಶಾಪ' ಪ್ರದರ್ಶನಗೊಳ್ಳಲಿವೆ.
'ವಾಲಿವಧೆ' ಪ್ರಸಂಗದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಶ್ರೀರಾಮ, ಮಧೂರು ವಾಸುದೇವ ರಂಗಾಭಟ್ಟರು ವಾಲಿ ಹಾಗೂ ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟರು ಸುಗ್ರೀವ ಪಾತ್ರಗಳಲ್ಲಿ ಅರ್ಥವೈಭವ ಮೂಡಿಸಲಿದ್ದಾರೆ.
'ಭೃಗುಶಾಪ' ಪ್ರಸಂಗದಲ್ಲಿ ಸಂಪಾಜೆ ಜಬ್ಬಾರ್ ಸಮೊರರು ತಮಾಸುರ, ಗಣೇಶ ಶೆಟ್ಟಿ ಕನ್ನಡಿಕಟ್ಟೆ ದೇವೇಂದ್ರ, ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟರು ಖ್ಯಾತಿ, ಸುನಿಲ್ ಕುಮಾರ್ ಹೊಲಾಡು ಭೃಗು, ಸುರೇಶ್ ಶೆಟ್ಟಿ ನಂದ್ರೊಳ್ಳಿ ವಿಷ್ಣು ಹಾಗೂ ಮನು ಹಂದಾಡಿ ಬೃಹಸ್ಪತಿ ಪಾತ್ರಗಳಿಗೆ ಜೀವ ತುಂಬಲಿದ್ದಾರೆ.
ಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಹಿಲ್ಲೂರು ರಾಮಕೃಷ್ಣ ಹೆಗಡೆ ಅವರ ಭಾಗವತಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎ.ಪಿ. ಪಾಠಕ್, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ, ಶ್ರೀನಿವಾಸ ಪ್ರಭು ಹಾಗೂ ಪ್ರಜ್ವಲ್ ಮುಂಡಾಡಿ ಮದ್ದಳೆ ಸಹಕಾರ ನೀಡಲಿದ್ದಾರೆ.
ಇಡೀ ರಾತ್ರಿ ನಡೆಯಲಿರುವ ಈ ಅಪರೂಪದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಯಕ್ಷಗಾನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅರ್ಥವೈಭವದ ಶ್ರವಣಾನುಭವವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಯೋಜಕರಾದ ನಾಗರಾಜ್ ಶೆಟ್ಟಿ ನೈಕಂಬ್ಳಿ ಮನವಿ ಮಾಡಿದ್ದಾರೆ