ಡಿಕೆಶಿ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಸಿಗುವುದೇ?

dks-cabinet
dks-cabinet
Published on

ಪ್ರಮುಖ ಮುಖ್ಯಾಂಶಗಳು

  • ಹ್ಯಾರಿಸ್, ಎಂ.ಕೃಷ್ಣಪ್ಪ, ರಿಜ್ವಾನ್ ಅರ್ಷದ್ ರೇಸ್‌ನಲ್ಲಿ
  • ಹಳಬರಲ್ಲಿ ಒಂದಿಬ್ಬರಿಗೆ ಮಂತ್ರಿ ಸ್ಥಾನ ಕೈತಪ್ಪುವ ಸಾಧ್ಯತೆ
ಬೆಂಗಳೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ ಕೈಗೊಳ್ಳಲು ಸಿದ್ಧತೆ ನಡೆಸಿರುವಾಗಲೇ, ಇತ್ತ ರಾಜಧಾನಿಯ ಕಾಂಗ್ರೆಸ್ ಶಾಸಕರು ಸಂಪುಟ ಸೇರಲು ತಮ್ಮ ಗಾಡ್‌ಾದರ್ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಈ ಬಾರಿ ಸಂಪುಟದಲ್ಲಿ ಹಳಬರ ಜತೆ ಹೊಸಬರಿಗೂ ಅವಕಾಶ ಸಿಗಲಿದೆಯೇ ಎಂಬ ಕುತೂಹಲ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ಪ್ರತಿ ಬಾರಿ ಸಂಪುಟ ರಚನೆ ಅಥವಾ ವಿಸ್ತರಣೆ ವೇಳೆ ಬೆಂಗಳೂರಿನ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿರುವ ಕಾರಣ ಸಚಿವ ಸ್ಥಾನಗಳಲ್ಲಿ ಸಿಂಹಪಾಲು ರಾಜಧಾನಿಗೆ ಸಿಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ಅಥವಾ ಬಿಜೆಪಿ ಹೊರತಾಗಿಲ್ಲ. ಸದ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಸುಗಮವಾಗಿ ನಡೆದಿರುವ ಕಾರಣ ಹೊಸ ಮುಖಗಳಿಗೆ ಮಂತ್ರಿಮಂಡಲ ಸೇರುವ ಅವಕಾಶ ಹೆಚ್ಚಿದೆ. ಇದನ್ನು ಅರಿತೇ ಯುವ ಶಾಸಕರು ಸಂಪುಟ ಸೇರಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಜತೆಗೆ ಕೈ ಕಮಾಂಡ್‌ನಲ್ಲೂ ಒಂದಿಬ್ಬರಿಗೆ ಅವಕಾಶ ನೀಡುವ ಮೂಲಕ ಯುವಕರನ್ನು ಸಚಿವರನ್ನಾಗಿಸಲು ಚಿಂತನೆ ನಡೆದಿದೆ. ಇದಕ್ಕೆ ದಿಲ್ಲಿ ನಾಯಕರು ಹಾಗೂ ನೂತನ ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದರೆ ಹೊಸಬರು ಸಚಿವರಾಗುವ ದಾರಿ ಸುಗಮವಾಗಲಿದೆ.
ಪ್ರಸ್ತುತ ಬೆಂಗಳೂರಿನ 28 ಶಾಸಕರ ಪೈಕಿ ಬಿಜೆಪಿ 16 ಹಾಗೂ ಕಾಂಗ್ರೆಸ್‌ನ 12 ಮಂದಿ ಇದ್ದಾರೆ. ನಿಕಟಪೂರ್ವ ಸಿದ್ದರಾಮಯ್ಯ ಸಂಪುಟದಲ್ಲಿ ನಗರ ಪ್ರತಿನಿಧಿಸುವ ಆರು ಶಾಸಕರು (ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಜಮೀರ್ ಅಹಮದ್ ಹಾಗೂ ಬೈರತಿ ಸುರೇಶ್) ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಲ್ಲಿ ಹಿರಿತನ ಹೊಂದಿರುವ ಐವರು ಮತ್ತೆ ಸಚಿವರಾಗುವ ಸಾಧ್ಯತೆ ಹೆಚ್ಚಿದೆ. ಹೊಸಬರಿಗೆ ಮಣೆ ಹಾಕಲು ಸಿದ್ದರಾಮಯ್ಯ ಸಂಪುಟದಲ್ಲಿದ್ದ ಒಂದಿಬ್ಬರು ತ್ಯಾಗ ಮಾಡಬೇಕಾಗುತ್ತದೆ. ಒಂದು ವೇಳೆ ಹಿಂದಿನವರನ್ನೂ ಒಳಗೊಂಡಂತೆ ಹೊಸಬರಿಗೂ ಅವಕಾಶ ಮಾಡಿಕೊಟ್ಟರೆ ರಾಜಧಾನಿ ಕೋಟಾದಿಂದ ಅತ್ಯಧಿಕ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದಂತಾಗುತ್ತದೆ.

ಹ್ಯಾರಿಸ್, ಕೃಷ್ಣಪ್ಪ ರೇಸ್‌ನಲ್ಲಿ ಮುಂದು:

ಹೊಸದಾಗಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪೈಕಿ ಎಂ.ಕೃಷ್ಣಪ್ಪ (ವಿಜಯನಗರ) ಮತ್ತು ಎನ್.ಎ. ಹ್ಯಾರಿಸ್ (ಶಾಂತಿನಗರ) ಮುಂದಿದ್ದಾರೆ. ಇವರಿಬ್ಬರ ಪೈಕಿ ಹ್ಯಾರಿಸ್ ಅವರು ಡಿಕೆಶಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಲಿ ಬಿಡಿಎ ಅಧ್ಯಕ್ಷರೂ ಆಗಿರುವ ಹ್ಯಾರಿಸ್‌ಗೆ ಡಿ.ಕೆ. ಶಿವಕುಮಾರ್ ಮಣೆ ಹಾಕಿದರೆ ಮೊದಲ ಬಾರಿಗೆ ಮಂತ್ರಿಯಾಗುವುದು ಖಚಿತ. ಇನ್ನು, ಎಂ.ಕೃಷ್ಣಪ್ಪ ಸಿದ್ದರಾಮಯ್ಯ ಸಂಪುಟ ಸೇರಲು ವಿಫಲರಾದ ಕಾರಣ ಈ ಬಾರಿ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ಲೆಕ್ಕಾಚಾರ ನಡೆಸಿದೆ. ಇವರಿಬ್ಬರ ಜತೆಗೆ ಯುವ ಶಾಸಕರಾಗಿರುವ ರಿಜ್ವಾನ್ ಅಹಮದ್ (ಶಿವಾಜಿನಗರ) ಕೂಡ ಮಂತ್ರಿಮಂಡಲ ಸೇರಲು ಕಾತರರಾಗಿದ್ದಾರೆ. ಅಲ್ಪಸಂಖ್ಯಾತರ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾದಲ್ಲಿ ಜಮೀರ್ ಅಹಮದ್ ಅಥವಾ ರಿಜ್ವಾನ್ ಇಬ್ಬರಲ್ಲಿ ಒಬ್ಬರು ಸಂಪುಟ ಸೇರಬಹುದು.

ದಲಿತ ಶಾಸಕರು ಮಂತ್ರಿಯಾಗುವರೇ?

ಇತ್ತೀಚಿಗೆ ಕಾಂಗ್ರೆಸ್‌ನಲ್ಲಿ ದಲಿತ ಸಿಂ ಕೂಗು ಜೋರಾಗಿತ್ತು. ಇದಕ್ಕೀಗ ಅವಕಾಶವಾಗದ ಕಾರಣ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲೂ ದಲಿತರೊಬ್ಬರು ಡಿಸಿಎಂ ಆಗಲಿದ್ದಾರೆ. ಆದರೆ, 2008ರ ನಂತರ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ನಗರದಲ್ಲಿ ಕಾಂಗ್ರೆಸ್‌ನಿಂದ ದಲಿತ ಶಾಸಕರಿಗೆ ಮಂತ್ರಿ ಸ್ಥಾನ ನೀಡಿಲ್ಲ ಎಂಬ ಆಕ್ಷೇಪ ಇದೆ. ಹಾಗಾಗಿ ದಲಿತ ಕೋಟಾದಿಂದ ಎ.ಸಿ. ಶ್ರೀನಿವಾಸ್ (ಪುಲಿಕೇಶಿನಗರ) ಹಾಗೂ ಬಿ.ಶಿವಣ್ಣ (ಆನೇಕಲ್) ಮಂತ್ರಿಯಾಗಲು ಪೈಪೋಟಿ ನಡೆಸಿದ್ದಾರೆ.

ಪರಿಷತ್ ಸದಸ್ಯರಿಗೆ ಮಂತ್ರಿಗಿರಿ ಅನುಮಾನ:

ಪ್ರಸ್ತುತ ರಾಜಧಾನಿಯ ಕಾಂಗ್ರೆಸ್ ಶಾಸಕರಲ್ಲಿ ಸಂಪುಟ ಸೇರಲು ಭಾರಿ ಪೈಪೋಟಿ ನಡೆದಿದೆ. ನಾಲ್ಕೈದು ಬಾರಿ ಎಂಎಲ್‌ಎ ಆಗಿರುವವರ ಪೈಕಿ ಹಿರಿತನ ಆಧರಿಸಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ವಿಧಾನ ಪರಿಷತ್ ಸದಸ್ಯರ ಕೋಟಾದಿಂದ ಸಚಿವರಾಗುವವರಿಗೆ ಸಚಿವ ಸ್ಥಾನದ ಮಾರ್ಗ ಕಠಿವಣವಾಗಲಿದೆ. ಆದರೂ, ಮೇಲ್ಮನೆ ಕೋಟಾದಿಂದ ಮಂತ್ರಿಯಾಗಲು ಪುಟ್ಟಣ್ಣ ಮುಂದಾಗಿದ್ದಾರೆ.

ರಾಮಲಿಂಗಾರೆಡ್ಡಿಗೆ ಬೆಂಗಳೂರು ಉಸ್ತುವಾರಿ?:

ಮಂತ್ರಿಮಂಡಲ ರಚನೆ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲು ಹಿರಿಯ ಶಾಸಕರ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಡಲಿದೆ. ಈ ಮಧ್ಯೆ ಮುಂದಿನ ದಿನಗಳಲ್ಲಿ ಜಿಬಿಎ ವ್ಯಾಪ್ತಿಯ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಯಲಿದ್ದು, ಐದೂ ಕಾರ್ಪೋರೇಷನ್ ಕೈವಶ ಮಾಡಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ವರ್ಷದಿಂದ ತಂತ್ರಗಾರಿಕೆ ರೂಪಿಸುವಲ್ಲಿ ನಿರತವಾಗಿದೆ. ಇದನ್ನು ಸಾಕಾರ ಮಾಡಿಕೊಳ್ಳಲು ನಗರದಲ್ಲಿ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ರಾಮಲಿಂಗಾರೆಡ್ಡಿ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ.
ನಿಕಟಪೂರ್ವ ಸಚಿವರು:
ಕೆ.ಜೆ. ಜಾರ್ಜ್ (ಸರ್ವಜ್ಞನಗರ)
ರಾಮಲಿಂಗಾರೆಡ್ಡಿ (ಬಿಟಿಎಂ ಬಡಾವಣೆ)
ದಿನೇಶ್ ಗುಂಡೂರಾವ್ (ಗಾಂಧಿನಗರ)
ಕೃಷ್ಣಬೈರೇಗೌಡ (ಬ್ಯಾಟರಾಯನಪುರ)
ಜಮೀರ್ ಅಹಮದ್ (ಚಾಮರಾಜಪೇಟೆ)
ಬೈರತಿ ಸುರೇಶ್ (ಹೆಬ್ಬಾಳ)
ಮಂತ್ರಿ ರೇಸ್‌ನಲ್ಲಿರುವ ಶಾಸಕರು:
ಎಂ.ಕೃಷ್ಣಪ್ಪ (ವಿಜಯನಗರ)
ಎನ್.ಎ. ಹ್ಯಾರಿಸ್ (ಶಾಂತಿನಗರ)
ರಿಜ್ವಾನ್ ಅಹಮದ್ (ಶಿವಾಜಿನಗರ)
ಎ.ಸಿ. ಶ್ರೀನಿವಾಸ್ (ಪುಲಿಕೇಶಿನಗರ)
ಬಿ.ಶಿವಣ್ಣ (ಆನೇಕಲ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net