ಮತಪತ್ರ ಬಳಸಲು ಕಾನೂನಿನಲ್ಲಿ ಅವಕಾಶ ಇದೆ. ಸುಪ್ರೀಂಕೋರ್ಟ್ ಕೂಡ ಬ್ಯಾಲೆಟ್ ಬಳಸಬಾರದು ಎಂದು ಆದೇಶ ನೀಡಿಲ್ಲ. ಈ ಅಂಶವನ್ನು ಬಳಸಿಕೊಂಡು ಚುನಾವಣೆ ನಡೆಸುವುದು ಆಯೋಗದ ವಿವೇಚನೆಗೆ ಬಿಡಲಾಗಿತ್ತು. ಆದರೆ, ಬ್ಯಾಲೆಟ್ ಬಳಕೆಯಾದಲ್ಲಿ ದಶಕಗಳ ಹಿಂದೆ ನಡೆಯುತ್ತಿದ್ದ ಮತಗಟ್ಟೆ ಅಪಹರಣ, ದಾಂಧಲೆ, ಮತಪತ್ರ ಕಸಿತ, ಒಬ್ಬರ ಮತವನ್ನು ಇನ್ನೊಬ್ಬರು ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕ ಇದೆ. ಮುಖ್ಯವಾಗಿ ಅಮಾಯಕ ಹಾಗೂ ಮುಗ್ಧ ಜನರ ಹಕ್ಕನ್ನು ಬಲವಂತದಿಂದ ಕಸಿಯುವ ಇಲ್ಲವೇ, ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೆಲ ನಾಗರಿಕ ಸಂಘಟನೆಗಳು ಪ್ರತಿಕ್ರಿಯಿಸಿವೆ.