ಸೇನೆಗೆ ಶಕ್ತಿ ತುಂಬಲಿದೆ "ವಿರಾಟ್​' | new drone

ಟೆಕ್​ ಶೃಂಗಸಭೆಯ ಮಳಿಗೆಗಳಲ್ಲಿ ವಿರಾಟ್​ ಡ್ರೋನ್​
ಟೆಕ್​ ಶೃಂಗಸಭೆಯ ಮಳಿಗೆಗಳಲ್ಲಿ ವಿರಾಟ್​ ಡ್ರೋನ್​
Published on

ಪ್ರಮುಖ ಮುಖ್ಯಾಂಶಗಳು

  • ಕಾಮ್ರೇಡೋ ಏರೋಸ್ಪೇಸ್​'ನಿಂದ ವಿನೂತನ ಡ್ರೋನ್​ ಅಭಿವೃದ್ಧಿ
  • ಹೈಬ್ರಿಡ್​ ಡ್ರೋನ್​
  • ನಿರ್ಮಾಣಕ್ಕೆ ಕಡಿಮೆ ಭಾರದ ವಸ್ತುಗಳ ಬಳಕೆ
> ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ರಕ್ಷಣಾ ವಿಭಾಗದಲ್ಲಿ ತಂತ್ರಜ್ಞಾನಗಳ ಅಭಿವೃದ್ಧಿ ಯಾವಾಗಲೂ ಗೌಪ್ಯವೂ ನಿರಂತರವೂ ಆಗಿರುತ್ತದೆ. ಭಾರತೀಯ ಸೇನೆಯೂ ನೂತನ ತಂತ್ರಜ್ಞಾನಗಳ ಆವಿಷ್ಕಾರಗಳ ಜತೆಗೆ ಯುದ್ಧೋಪಕರಣಗಳ ಅಭಿವೃದ್ಧಿಯತ್ತವೂ ಚಿಂತನೆ ನಡೆಸುತ್ತಿರುತ್ತದೆ.
ಈ ಬಾರಿಯ ಟೆಕ್​ ಶೃಂಗಸಭೆಯ ಮಳಿಗೆಗಳಲ್ಲಿ ಮಿಲಿಟರಿ ಉಪಯೋಗಿ ವಸ್ತುಗಳು ಹೆಚ್ಚಾಗಿ ಗಮನ ಸೆಳೆದಿದ್ದು, ವಿದ್ಯಾರ್ಥಿಗಳು, ವಿದೇಶಿಯರು ಸೇರಿ ವೀಕ್ಷಕರು ಬಹಳ ಕುತೂಹಲದಿಂದ ನೋಡುತ್ತಿದ್ದುದು ಕಂಡುಬಂತು. ಅದರಲ್ಲಿ ಆರ್ಟ್​ಪಾರ್ಕ್​ ಸಂಸ್ಥೆಯ "ಕಾಮ್ರೇಡೋ ಏರೋಸ್ಪೇಸ್​'ನ ವಿರಾಟ್​ ಡ್ರೋನ್​ ಮಳಿಗೆಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿತ್ತು. ಸೇನಾ ಕಾರ್ಯಾಚರಣೆಗಳಿಗೆ ಹೈ ಆಲ್ಟಿಟ್ಯೂಡ್​ನಲ್ಲಿ ಬಳಕೆಯಾಗಬಹುದಾದ ಹೈಬ್ರಿಡ್​ ಡ್ರೋನ್​ ಇದಾಗಿದ್ದು, ಏರ್​ಡ್ರಾಪ್​, ಕಣ್ಗಾವಲಿಗೆ ಮುಖ್ಯವಾಗಿ ಬಳಕೆಯಾಗುತ್ತದೆ. ಇದರಲ್ಲೇ ವಿವಿಧ ಮಾದರಿಯ ಡ್ರೋನ್​ಗಳಿದ್ದು, ವಿರಾಟ್​ ಒಂದು ಮಿಡಿಯಂ ಕ್ಲಾಸಿಕಲ್​ ಡ್ರೋನ್​ ಆಗಿದೆ. ಒಟ್ಟು ಭಾರ ಸುಮಾರು 70&80 ಕೆಜಿ, ಅದರಲ್ಲಿ 20 ಕೆಜಿ ಹೊರುವ ಸಾಮರ್ಥ್ಯವನ್ನು ಹೊಂದಿದೆ. 500 ಕಿ.ಮೀ. ವ್ಯಾಪ್ತಿಯಲ್ಲಿ 6 ಸಾವಿರ ಮೀಟರ್​ ಎತ್ತರಕ್ಕೆ ಹಾರಬಲ್ಲದು. ಸತತ 6 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆಯನ್ನು ಮಾಡಬಹುದಾದ ಶಕ್ತಿಶಾಲಿ ಡ್ರೋನ್​ ಇದಾಗಿದೆ. ಸೇನೆಗೆ ಗುಡ್ಡಗಾಡುಗಳಲ್ಲಿ ಪರಿಕರಗಳನ್ನು ಸಾಗಿಸಲು ಕೂಡ ಅತ್ಯಂತ ಉಪಯೋಗಿ ಡ್ರೋನ್​ ಇದಾಗಿದೆ. ಡ್ರೋನ್​ ಪರೀಕ್ಷಾ ಹಂತದಲ್ಲಿದ್ದು 6 ತಿಂಗಳಲ್ಲಿ ಸೇನೆಯ ಕೈಸೇರುವ ಸಾಧ್ಯತೆ ಇದೆ.
ವರ್ಟಿಕಲ್​ ಟೇಕಾಫ್ ವಿಶೇಷ: ವಿರಾಟ್​ ಡ್ರೋನ್​ನ ಪ್ರಮುಖ ವಿಶೇಷತೆ ಎಂದರೆ, ವರ್ಟಿಕಲ್​ ಟೇಕಾಫ್ . ಯಾವುದೇ ಪ್ರದೇಶದಿಂದ ಬೇಕಾದರೂ ಟೇಕಾಫ್ ಮಾಡಬಹುದಾಗಿದೆ. ಏರ್​ಸ್ಟ್ರಿಪ್​, ರನ್​ವೇ ಅಥವಾ ಹೆಲಿಪ್ಯಾಡ್​ನಲ್ಲಿ ಲ್ಯಾಂಡಿಂಗ್​ ಸುಲಭವಾಗಿ ಆಗುತ್ತದೆ. ಹೈಬ್ರಿಡ್​ ಡ್ರೋನ್​ ಆಗಿರುವುದರಿಂದಲೇ ಪೆಟ್ರೋಲ್​ ಹಾಗೂ ಎಲೆಕ್ಟ್ರಿಕ್​ ಎರಡನ್ನೂ ಬಳಸಬಹುದು. ಆರ್ಟ್​ಪಾರ್ಕ್​ ಸಂಸ್ಥೆಯ "ಕಾಮ್ರೇಡೋ ಏರೋಸ್ಪೇಸ್​' ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​ಸಿ) ಬೆಂಬಲದಿಂದ ರೂಪುಗೊಂಡ ಡ್ರೋನ್​ ತಯಾರಿಕೆ ಮತ್ತು ಅಭಿವೃದ್ಧಿಯ ಸಂಸ್ಥೆಯಾಗಿದೆ. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಆರಂಭಿಕ ನಿಧಿ ಈ ಸಂಸ್ಥೆಗೆ ದೊಡ್ಡ ಬೆಂಬಲವನ್ನು ನೀಡಿದೆ. ಸಂಸ್ಥೆಯು ವಾಣಿಜ್ಯ ಹಾಗೂ ಸೇನೆ ಕಾರ್ಯತಂತ್ರ ಅಗತ್ಯಗಳಿಗೆ ತಕ್ಕಂತೆ, ವಿವಿಧ ಕ್ಷೇತ್ರಗಳಿಗೆ ಹೊಂದುವ ಆಧುನಿಕ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದೆ.
ಟೆಕ್​ಶೃಂಗದಲ್ಲಿ ವಿರಾಟ್​ ಹೊರತಾಗಿ, ವಿರೋಧಿಗಳ ಶಸ್ತ್ರಾಸ್ತ್ರ ಪತ್ತೆಗೆ ರಾಡರ್​, ಕೌಂಟರ್​ ಡ್ರೋನ್​ ಸಿಸ್ಟಂ ಇತ್ಯಾದಿ ವಿವಿಧ ಮಿಲಿಟರಿ ಸಂಬಂಧಿ ಪ್ರದರ್ಶನಗಳು ಕುತೂಹಲ ಕೆರಳಿಸಿತ್ತು.
ವಿರಾಟ್​ ವಿಶೇಷತೆ ಏನು?
* ಭಾರತೀಯ ಭೂ, ನೌಕಾ ಹಾಗೂ ವಾಯು ಸೇನೆಯು ಬಳಸಬಹುದು
* ವಿಭಿನ್ನವಾದ ವಿನ್ಯಾಸ
* ಕಡಿಮೆ ಭಾರವನ್ನು ಹೊಂದಿದೆ
* ನಿರ್ಮಾಣಕ್ಕೆ ಕಡಿಮೆ ಭಾರದ ವಸ್ತುಗಳ ಬಳಕೆ
* &20 ಡಿಗ್ರಿಯಿಂದ +55 ಡಿಗ್ರಿವರೆಗಿನ ವಾತಾವರಣದಲ್ಲಿ ಹಾರಾಟ ನಡೆಸಬಲ್ಲದು

ಕೃಷಿಗೆ ಪೂರಕ "ಭೂ ಪರೀಕ್ಷಕ್​'

ಕೇವಲ 90 ಸೆಕೆಂಡಿನಲ್ಲಿ ಮಣ್ಣು ಪರೀಕ್ಷೆಯನ್ನು ನಡೆಸುವ ವಿಭಿನ್ನ ಪರಿಕರ ಟೆಕ್​ಶೃಂಗದಲ್ಲಿ ಜನಾಕರ್ಷಣೆಗೆ ಪಾತ್ರವಾಗಿತ್ತು. "ಸ್ಕ್ಯಾನ್​ನೆಕ್ಸ್ಟ್​ ಭೂ ಪರಿಕ್ಷಕ್​' ವಿನೂತನ ಮಣ್ಣಿನ ಪರೀಕ್ಷಾ ಸಾಧನವಾಗಿದ್ದು, ಐಐಟಿ ಕಾನ್ಪುರ್​ ಅಭಿವೃದ್ಧಿಪಡಿಸಿದೆ. ಯಾವುದೇ ರಾಸಾಯನಿಕ ರಿಯಾಜೆಂಟ್​ಗಳನ್ನು ಬಳಸದೆ ಕೇವಲ 90 ಸೆಕೆಂಡ್​ಗಳಲ್ಲಿ ವೇಗ ಮತ್ತು ನಿಖರವಾದ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸುಧಾರಿತ ಇನ್​ಫ್ರಾರೆಡ್​ ಸ್ಪೆಕ್ಟ್ರೋಸ್ಕೋಪಿ, ಐಒಟಿ ತಂತ್ರಜ್ಞಾನ ಮತ್ತು ಎಐ/ಎಂಎಲ್​ ಆಲ್ಗೋರಿದಮ್​ಗಳ ಆಧಾರಿತವಾಗಿರುವ ಈ ಸಾಧನವು ಮಣ್ಣು ವಿಶ್ಲೇಷಣೆಗೆ ಆಧುನಿಕ ಮತ್ತು ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ. ಸುಮಾರು 325 ಗ್ರಾಂ ತೂಕ ಹೊಂದಿರುವ ಇದು ರೈತರು, ಕ್ಷೇತ್ರ ಅಧಿಕಾರಿಗಳು ಮತ್ತು ಕೃಷಿ ಸೇವಾ ಸಂಸ್ಥೆಗಳು ದೂರದ ಪ್ರದೇಶಗಳಲ್ಲಿಯೂ ಸುಲಭವಾಗಿ ತೆಗೆದುಕೊಂಡು ಹೋಗಿ ಬಳಸಿಕೊಳ್ಳುವಂತೆ ಮಾಡುತ್ತದೆ. ನೈಜ-ಕಾಲದ ಮಣ್ಣಿನ ಮಾಹಿತಿಯನ್ನು ಆಧರಿಸಿ ಬೆಳೆ- ರ್ನಿದಿಷ್ಟ ಸಲಹೆಗಳನ್ನು ನೀಡುವ ಸಾಮರ್ಥ್ಯ ಇದಕ್ಕೆ ವಿಶೇಷ ಬಲ ನೀಡುತ್ತದೆ. ಇದರಿಂದ ಉತ್ಪಾದಕತೆ ಹೆಚ್ಚಿಸಲು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಜತೆಗೆ, ಮಣ್ಣಿನ ಅಂಶಗಳನ್ನು ಸಂಗ್ರಹಿಸಲು ಮತ್ತು ವೀಕ್ಷಿಸಲು ಸಹಾಯ ಮಾಡುವ ಡಿಜಿಟಲ್​ ಡ್ಯಾಶ್​ಬೋರ್ಡ್​ ಕೂಡ ಇದರಲ್ಲಿ ಅಳವಡಿಸಲಾಗಿದೆ. ಮಣ್ಣಿಗೆ ತಕ್ಕ ಉತ್ಪನ್ನ ಮತ್ತು ಪೋಷಕಾಂಶ ಸೂಚನೆಗಳನ್ನು ನೀಡುವ ಸಾಮರ್ಥ್ಯದಿಂದ, ಭೂ -ಪರೀಕ್ಷಕ್​ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net