ಬಹೋಪಯೋಗಿ "ಕ್ವಾಡ್​ ಬೈಕ್​' | Quad bike

ಫಾರ್ಮ್​ ಲ್ಯಾಂಡ್​ ಕ್ವಾಡ್ ಬೈಕ್​
ಫಾರ್ಮ್​ ಲ್ಯಾಂಡ್​ ಕ್ವಾಡ್ ಬೈಕ್​
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಕೆಲಸಗಳಿಗೆ ಬಳಕೆಯಾಗಬಲ್ಲ ವಾಹನ
  • ಫಾರ್ಮ್​ ಲ್ಯಾಂಡ್​ ಇಂಡಸ್ಟ್ರೀಸ್​ನ ಆವಿಷ್ಕಾರ
  • ಫಾರ್ಮ ಲ್ಯಾಂಡ್​ ಇಂಡಸ್ಟ್ರೀಸ್​ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ್ ಮಾಹಿತಿ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಮೂರರಿಂದ ನಾಲ್ಕು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಸಣ್ಣ ರೈತರಿಗೆ ಸರಕು ಸಾಗಣೆಗಾಗಿ 6-7 ಲಕ್ಷ ರೂ. ಬಂಡವಾಳ ಹಾಕಿ ಟ್ರಾ$್ಯಕ್ಟರ್​ ಖರೀದಿಸುವುದು ತುಂಬ ಕಷ್ಟ. ಅದಕ್ಕೆ ಪರ್ಯಾಯವಾಗಿ ಬಳಸಬಲ್ಲ, ಸಾಗಣೆಯ ಜತೆಗೆ ಔಷಧ ಸಿಂಪಡಣೆ, ಕಳೆ ಕೀಳುವ ಕೆಲಸ ಇತ್ಯಾದಿ ಬಹೋಪಯೋಗಿ ವಿನೂತನ ಆವಿಷ್ಕಾರದ ವಾಹನ (ಬೈಕ್​ ಮಾದರಿ ಮತ್ತು ಟ್ರಾಲಿ) "ಫಾಮ್​ರ್ ಲ್ಯಾಂಡ್​ ಕ್ವಾಡ್​ ಬೈಕ್​' ಕೃಷಿಮೇಳದಲ್ಲಿ ರೈತರ ಗಮನ ಸೆಳೆಯಿತು.
ಈ ವಿಶೇಷ ವಾಹನವನ್ನು 5&6 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ್ದು, ಇದೀಗ ಜನಪ್ರಿಯತೆ ಪಡೆಯುತ್ತಿದೆ. ಅಡಿಕೆ, ತೆಂಗು, ಮಾವು, ಬಾಳೆ ಸೇರಿ ತೋಟಗಾರಿಕೆ ಬೆಳೆಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ ಎಂದು ಫಾರ್ಮ್ ಲ್ಯಾಂಡ್​ ಇಂಡಸ್ಟ್ರೀಸ್​ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ್​ (ಶಿವಮೊಗ್ಗ) ತಿಳಿಸಿದ್ದಾರೆ.
ನಾಲ್ಕು ಚಕ್ರದ ಬೈಕ್​!: ಸುಮಾರು 600ರಿಂದ 800 ಕೆ.ಜಿ. ಭಾರ ಹೊರಬಲ್ಲ ಟ್ರಾಲಿಯನ್ನು ನಾಲ್ಕು ಚಕ್ರಗಳ ಬೈಕ್​ ಎಳೆಯುತ್ತದೆ. ಟಿವಿಎಸ್​ ಇಂಜಿನ್​ ಒಂದು ಬಿಟ್ಟರೆ, ಮಿಕ್ಕುಳಿದ ಎಲ್ಲ ಬಿಡಿಭಾಗಗಳನ್ನು ಸಂಸ್ಥೆಯೇ ನಿರ್ಮಿಸುತ್ತಿದೆ. ಮಣ್ಣು, ಸರಕು ಸಾಗಣೆಗೆ ಟ್ರಾಲಿ, ಕಳೆ ಕೀಳುವ ವ್ಯವಸ್ಥೆ, ಕೀಟನಾಶಕ ಸಿಂಪಡಣೆಗೂ ಈ ವಾಹನ ಉಪಯೋಗಿಸಬಹುದು.
ಕೈಗೆಟುಕುವ ಬೆಲೆ: ಸಾಮಾನ್ಯ ಬೈಕ್​ ಖರೀದಿಸಲೇ 1-2 ಲಕ್ಷ ರೂ. ಬೇಕು. ಅಂತಹದ್ದರಲ್ಲಿ ಕೃಷಿ ಚಟುವಟಿಕೆಗಳಿಗೆ ಆಧಾರವಾಗುವ, ಸಣ್ಣ ಕೃಷಿಕನಿಗೂ ಲಾಭದಾಯಕವಾಗುವ ಉದ್ದೇಶದಿಂದ ಆವಿಷ್ಕರಿಸಲಾದ ಈ ವಾಹನಕ್ಕೆ 2.3 ಲಕ್ಷ ರೂ. ಬೆಲೆ ಇದೆ. ಈ ಕಾರಣದಿಂದ ಮೇಳದಲ್ಲಿ ಭಾಗವಹಿಸಿದ ಅನೇಕ ರೈತರು ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ. ಅಲ್ಲದೆ ವಾಹನದ ಬಗೆಗಿನ ಚರ್ಚೆಗಳು ಜೋರಾಗಿತ್ತು.
ಯಾರು ಬೇಕಾದರೂ ಓಡಿಸಬಹುದು:
ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಳಸಲು ತರಬೇತಿ ಇರುವವರೇ ಬೇಕು. ಆದರೆ, ಈ ವಾಹನವನ್ನು ಯಾರು ಬೇಕಾದರೂ ಧೈರ್ಯದಿಂದ ಚಲಾಯಿಸಬಹುದು. ಅಲ್ಲದೆ, ವಾಹನದಲ್ಲಿ ಏನಾದರೂ ಸಮಸ್ಯೆಯಾದರೆ, ಹತ್ತಿರದ ಮೆಕಾನಿಕ್​ನಿಂದಲೇ ಸರಿಪಡಿಸಿಕೊಳ್ಳಬಹುದು.

ಇಂಜಿನಿಯರಿಂಗ್​ ಹಿನ್ನೆಲೆಯುಳ್ಳ ನಾನು ಸೇನೆಯ ಉನ್ನತ ಹುದ್ದೆಗೂ ಆಯ್ಕೆಯಾಗಿದ್ದೆ. ಆದರೆ, ಕೃಷಿಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ತವಕದಿಂದ ಈ ಆವಿಷ್ಕಾರ ಮಾಡಿದೆ. ಸಾಮಾಜಿಕ ಜಾಲತಾಣದ ಮೂಲಕ ವಾಹನ ಸದ್ದು ಮಾಡುತ್ತಿದೆ. ಸದ್ಯ ರಾಜ್ಯಾದ್ಯಂತ ಸುಮಾರು 150 ವಾಹನಗಳು ಮಾರಾಟವಾಗಿವೆ. ಆಂಧ್ರಪ್ರದೇಶ ಭಾಗದಲ್ಲೂ ಬೇಡಿಕೆ ಹೆಚ್ಚುತ್ತಿದೆ. 3&4 ವರ್ಷದಿಂದ ವಾಹನದ ಬಗ್ಗೆ ಯಾವುದೇ ಸಮಸ್ಯೆಗಳು ಕೇಳಿಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net