ಮೌಂಟ್ ಎವರೆಸ್ಟ್ ಏರಿದ ಸಾಧಕರಿಗೆ ಗೌರವ

mount-everest
mount-everest
Published on

ಪ್ರಮುಖ ಮುಖ್ಯಾಂಶಗಳು

  • ಸಹಕಾರನಗರದಲ್ಲಿ ಸಂತೋಷ್, ಡಾ. ಚಿನ್ಮಯಿಗೆ ಅದ್ಧೂರಿ ಸ್ವಾಗತ
ಬೆಂಗಳೂರು: ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಭಾರತದ ಧ್ವಜ ಹಾಗೂ ಕರ್ನಾಟಕದ ಲಾಂಛನವನ್ನು ಶಿಖರದ ತುತ್ತತುದಿಯಲ್ಲಿ ನೆಟ್ಟು ಕೀರ್ತಿ ಪತಾಕೆ ಹಾರಿಸಿ, ತಾಯ್ನಡಿಗೆ ವಾಪಸಾದ ಕನ್ನಡಿಗ ಸಂತೋಷ್ ದೇವರಾಜಪ್ಪ ಹಾಗೂ ಡಾ. ಚಿನ್ಮಯಿ ಜೆ.ತ್ರಿಶೂಲಮೂರ್ತಿ ಅವರಿಗೆ ಸಹಕಾರನಗರದಲ್ಲಿ ಅದ್ಧೂರಿ ಸ್ವಾಗತ ನೀಡಿ ಅಭಿನಂದಿಸಲಾಯಿತು.
ಬ್ಯಾಟರಾಯನಪುರದ ಕೊಡಿಗೇಹಳ್ಳಿ ಗೇಟ್ ಸಮೀಪದ ಶ್ರೀ ಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ಬುಧವಾರ ಸ್ಥಳೀಯರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಂತೋಷ್ ಹಾಗೂ ಡಾ. ಚಿನ್ಮಯಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಲಮುರಿ ಗಣೇಶ ದೇವಸ್ಥಾನದವರೆಗೆ ಕರೆದೊಯ್ಯಲಾಯಿತು. ಈ ವೇಳೆ ಡೊಳ್ಳುಕುಣಿತ, ವೀರಗಾಸೆ, ಚಂಡೆವಾದನ ಸೇರಿ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ:

ಈ ವೇಳೆ ಮಾತನಾಡಿದ ಸಂತೋಷ್ ದೇವರಾಜಪ್ಪ, ಕರ್ನಾಟಕ ಮೌಂಟನೇಯರಿಂಗ್ ಅಸೋಸಿಯೇಷನ್‌ನ ವಜ್ರಮಹೋತ್ಸವದ ಅಂಗವಾಗಿ ಸಂಘದವರು ನಮ್ಮ ಪ್ರತಿಭೆ ಮತ್ತು ಅರ್ಹತೆಯನ್ನು ಗುರುತಿಸಿ, ಅಗತ್ಯ ಸಹಕಾರ ನೀಡಿದ್ದರಿಂದ ಈ ಅವಕಾಶ ದೊರೆಯಿತು. ಇದಕ್ಕಾಗಿ ಕಳೆದ 8 ತಿಂಗಳಿನಿಂದ ಕಠಿಣ ತರಬೇತಿ ಹಾಗೂ ಸಿದ್ಧತೆ ನಡೆಸಿದ್ದೆ. ಪರ್ವತ ಏರಿದ ಸಂದರ್ಭದಲ್ಲಿ ಹವಾಮಾನ ಅತ್ಯಂತ ಕಠಿಣವಾಗಿತ್ತು. ಅದನ್ನು ಎದುರಿಸಿ, ದೇವರ ಕೃಪೆಯಿಂದ ಸುರಕ್ಷಿತವಾಗಿ ಏರಿಳಿಯಲು ಸಾಧ್ಯವಾಯಿತು. ಒಳ್ಳೆಯ ಮನಸ್ಸು ಹಾಗೂ ಪರಿಶ್ರಮದಿಂದ ಪ್ರಯತ್ನಿಸಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಎನ್. ಶ್ರೀನಿವಾಸಯ್ಯ, ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಂ. ದೇವರಾಜಪ್ಪ, ಕಾರ್ಯದರ್ಶಿ ಎನ್.ಸಿ. ಇಂದಿರಾ, ಸ್ಥಳೀಯ ಮುಖಂಡರಾದ ನಾಗರಾಜ್, ಕೆ.ಮಂಜುನಾಥ್, ಗುರುಪ್ರಸಾದ್ ರೈ, ಆರ್.ಬಾಲರಾಜ್, ಎ.ಶಿವರಾಮಶೆಟ್ಟಿ ಮತ್ತಿತರರು ಹಾಜರಿದ್ದರು.
"

ಭಾರತವು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿದ್ದರೂ, ಇತರ ದೇಶಗಳವರು ಹೆಚ್ಚಿನ ಸಂಖ್ಯೆಯಲ್ಲಿ ಪರ್ವತಾರೋಹಣ ಮಾಡುತ್ತಾರೆ. ನಮ್ಮ ದೇಶದವರೂ ಹೆಚ್ಚಿನ ಸಂಖ್ಯೆಯಲ್ಲಿ ಪರ್ವತಾರೋಹಣ ಮಾಡುವ ಮೂಲಕ ದೇಶದ ಘನತೆಯನ್ನು ಹೆಚ್ಚಿಸಬೇಕು. ಕನ್ನಡಿಗರು ಹಾಗೂ ಭಾರತೀಯರು ಪರ್ವತಾರೋಹಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು.

- ಸಂತೋಷ್ ಹಾಗೂ ಡಾ. ಚಿನ್ಮಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net