ಕೇಂದ್ರ ಪಾಲಿಕೆಯು ಬೆಂಗಳೂರು ಮಹಾನಗರದ ಸಿಬಿಡಿ (ಕೇಂದ್ರ ವ್ಯಾಪಾರ ಪ್ರದೇಶ) ಭಾಗವನ್ನು ಒಳಗೊಂಡಿದೆ. ಈ ಪ್ರದೇಶದಲ್ಲೇ ಅತಿ ಹೆಚ್ಚಿನ ವ್ಯಾಪಾರ-ವಹಿವಾಟು ನಡೆಯುತ್ತಿದ್ದು, ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಇಲ್ಲೆಲ್ಲ ರಸ್ತೆ, ಫುಟ್‌ಪಾತ್ ಒತ್ತುವರಿಯಾಗಿದ್ದು, ಜನರು ಸರಾಗವಾಗಿ ನಡೆದಾಡಲು ಪರದಾಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ರಸ್ತೆ ಅಭಿವೃದ್ಧಿ, ಪಾದಚಾರಿಸ್ನೇಹಿ ಫುಟ್‌ಪಾತ್, ಸ್ಕೈವಾಕ್, ಶೌಚಾಲಯಗಳ ನಿರ್ಮಾಣ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ. ಜತೆಗೆ ಹಸಿರು ಹೆಚ್ಚಿಸುವ ಉಪಕ್ರಮಕ್ಕೆ ಮಣೆ ಹಾಕಲಾಗುತ್ತದೆ ಎಂದು ಹೇಳಲಾಗಿದೆ.