ನಗರದಲ್ಲಿ ಮತ್ತೆ ಶುರುವಾಗಲಿದೆ ಟೋಯಿಂಗ್​ | TOING

ಟೋಯಿಂಗ್​
ಟೋಯಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ವರ್ಷಾಂತ್ಯದೊಳಗೆ ಕಾರ್ಯಾಚರಣೆ
  • ಪ್ರತಿ ಪಾಲಿಕೆಗೂ ಎರಡು ವಾಹನ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ಸಂಚಾರಸಿಕ್ಕು, ಪಾರ್ಕಿಂಗ್​ ಸಮಸ್ಯೆ ದಿನದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರದಲ್ಲಿ ಮತ್ತೆ ಟೋಯಿಂಗ್​ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದು, ವರ್ಷಾಂತ್ಯದೊಳಗೆ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆ ಇದೆ.
ತಿಂಗಳುಟ್ಟಲೆ ವಾಹನಗಳನ್ನು ರಸ್ತೆಬದಿ, ಬೀದಿಬದಿಗಳಲ್ಲಿ ಪಾರ್ಕ್​ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರ ಪೊಲೀಸರ ಸಹಯೋಗದಲ್ಲಿ ಜಿಬಿಎ ಟೋಯಿಂಗ್​ ಮಾಡುವುದಕ್ಕೆ ತಯಾರಿ ನಡೆಸುತ್ತಿದೆ.
ಬೀದಿಬದಿ, ಮನೆ ಮುಂಭಾಗ ಫುಟ್​ಪಾತ್​ಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್​ ಮಾಡಿ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗಿವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೆ ಒಂದು ಟೋಯಿಂಗ್​ ವಾಹನ ಜಿಬಿಎ ವ್ಯಾಪ್ತಿಯಲ್ಲಿದ್ದು, ಉಳಿದ ನಾಲ್ಕು ಪಾಲಿಕೆಗಳಲ್ಲಿ ಶೀಘ್ರವೇ ವಾಹನಗಳು ಬರಲಿದೆ. ಪ್ರತಿ ಪಾಲಿಕೆಗೂ 2 ಟೋಯಿಂಗ್​ ವಾಹನ ಖರೀದಿಸಿ, ಶ್ರೀ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.
ಜಿಬಿಎ ವ್ಯಾಪ್ತಿಯಲ್ಲಿರುವ ನಿಗಮಗಳು ಟೋಯಿಂಗ್​ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಟೆಂಡರ್​ಗಳನ್ನು ಆಹ್ವಾನಿಸಿದ್ದು, ಮೊದಲ ಹಂತದಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗೆ ಹಾಗೂ ಹೊರವರ್ತುಲ ರಸ್ತೆ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಪ್ರತಿ ವಿಭಾಗ ಮಟ್ಟದಲ್ಲಿ ಟೆಂಡರ್​ಗಳನ್ನು ಆಹ್ವಾನಿಸಲಾಗಿದ್ದು, ವಾಹನ, ಇಂಧನ, ಚಾಲಕ ಹಾಗೂ ಸಂಪೂರ್ಣ ನಿರ್ವಹಣೆಯನ್ನು ಒಳಗೊಂಡಂತೆ ಪ್ರತಿ ಸೆಟ್​ಗೆ ಅಂದಾಜು 14.52 ಲಕ್ಷ ರೂ. ವೆಚ್ಚವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾರ್ಡ್​ ಕೊರತೆ

ಬಿಟ್ಟುಹೋಗಿರುವ ವಾಹನಗಳು ಮತ್ತು ನೋ -ಪಾರ್ಕಿಂಗ್​ ವಲಯಗಳಿಂದ ಎತ್ತಿ ತರಲಾಗುವ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗ ಗುರುತಿಸುವುದು ದೊಡ್ಡ ಸವಾಲಾಗಿದೆ. ಪ್ರಸ್ತುತ ಇಂತಹ ವಾಹನಗಳನ್ನು ಇರಿಸಲು ಕೇಂದ್ರೀಕೃತ ಯಾರ್ಡ್​ ಇಲ್ಲದಿರುವುದು, ಈ ಯೋಜನೆ ಜಾರಿಗೆ ವೇಗ ನೀಡಲು ಅಡ್ಡಿಯಾಗುತ್ತಿದೆ. ಟೋಯಿಂಗ್​ ಶುಲ್ಕ ನಿಗದಿ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಮೊತ್ತವನ್ನು ಜಿಬಿಎಗೆ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಲ್ಕ ಎಷ್ಟು?

ಒಂದು ವಾಹನವನ್ನು ಎತ್ತಿದರೆ ಸಾವಿರ ರೂ. ಶುಲ್ಕ ನಿಗದಿಪಡಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದ್ದು, ಇದರಿಂದ ಕಾರ್ಯಾಚರಣಾ ವೆಚ್ಚಗಳನ್ನು ಭರಿಸಿ, ಆದಾಯ ಮೂಲವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿದೆ. ನಗರದಾದ್ಯಂತ ಟೋಯಿಂಗ್​ ಯಂತ್ರಗಳನ್ನು ಹಂಚುವ ಬದಲು, ಹೆಚ್ಚಿನ ವಾಹನದಟ್ಟಣೆ ಇರುವ ಮಾರ್ಗಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ದಂಡ

ಟೋಯಿಂಗ್​ ವಾಹನಗಳನ್ನು ಡಿಸೆಂಬರ್​ ಅಂತ್ಯದೊಳಗೆ ಸಂಚಾರ ಪೊಲೀಸರಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಹಲವು ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳ ಜತೆಗೆ ಶಾಲಾ ವ್ಯಾನ್​ಗಳು ಹಾಗೂ ಬಸ್​ಗಳೂ ಪಾರ್ಕಿಂಗ್​ ನಿಯಮ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಪಾರ್ಕಿಂಗ್​ ನಿಯಮ ಉಲ್ಲಂಘಿಸುವ ದ್ವಿಚಕ್ರ ವಾಹನಗಳಿಗೆ ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇದರಲ್ಲಿ ಮೋಟಾರು ವಾಹನ ಕಾಯ್ದೆ&1988ರ ಅಡಿಯಲ್ಲಿ 500 ರೂ. ಹಾಗೂ ಗ್ರೇಟರ್​ ಬೆಂಗಳೂರು ಗವರ್ನೆನ್ಸ್​ ಕಾಯ್ದೆ& 2024ರ ಅಡಿಯಲ್ಲಿ 500 ರೂ. ಸೇರಿದೆ. ಕಾರುಗಳು ಮತ್ತು ಇತರ ವಾಹನಗಳಿಗೆ ಗರಿಷ್ಠ 1,500 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಇದರಲ್ಲಿ ಎಂವಿ ಕಾಯ್ದೆಯಡಿ 500 ರೂ. ಹಾಗೂ ಜಿಬಿಜಿ ಕಾಯ್ದೆಯಡಿ ಸಾವಿರ ರೂ.ದಂಡ ಸೇರಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net