ವಾಸ ಸ್ಥಳದಿಂದ ಬೇರೆಡೆಗೆ ಸ್ಥಳಾಂತರ ಆಗಿದ್ದಾರೆ ಎಂದು ನೆಪ ತೋರಿಸಿ ಮತದಾರರ ಪಟ್ಟಿಯಿಂದ ಹಕ್ಕನ್ನು ರದ್ದುಗೊಳಿಸಲಾಗಿದೆ. ಮತ ಹಕ್ಕಿಗಾಗಿ ಭಿಕ್ಷೆ ಬೇಡುವಂತೆ ಮಾಡಿರುವುದು ಎಂತಹ ಪ್ರಜಾಪ್ರಭುತ್ವ ಎಂದು ಚಿತ್ರನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ (ಎಸ್ಐಆರ್) ಮತ ರದ್ದುಗೊಂಡಿರುವವರಿಗೆ ನಮೂನೆ ಸಲ್ಲಿಸಲು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದು ನನಗು ಗೊತ್ತಿದೆ ಎಂದರು. ನಾನು ನಟ ಆಗಿದ್ದರಿಂದ ವಿಚಾರವು ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಮತ ರದ್ದುಗೊಂಡಿರುವ ಸಾಮಾನ್ಯ ಜನರ ಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪರಿಷ್ಕರಣೆ ಪ್ರಕ್ರಿಯೆಯೂ ಆ.17ರತನಕ ನಡೆಯಲಿದ್ದು, ಅಷ್ಟರೊಳಗೆ ಫಾರಂ ನೀಡದಿದ್ದರೆ ನ್ಯಾಯಾಲಯದ ಮೋರೆ ಹೋಗಲಾಗುವುದು, ಜತೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ನನ್ನ ಮತ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಇತ್ತು, ಈಗಾಗಲೇ ತಮಿಳುನಾಡಿನಲ್ಲಿ ರದ್ದುಪಡಿಸಿ ಕರ್ನಾಟಕದಲ್ಲಿ ಮತಹಕ್ಕು ಪಡೆದುಕೊಳ್ಳಲಾಗಿದೆ. ಸ್ಥಳಾಂತರದ ನೆಪವೊಡ್ಡಿ ಎರಡೂ ಕಡೆ ರದ್ದುಪಡಿಸಿದ್ದಾರೆ. ದೇಶದ ಪ್ರಜೆಗಳನ್ನು ಮತದಾರರ ಪಟ್ಟಿಯಿಂದ ತೆಗೆಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಪಟ್ಟಿಯಿಂದ ಮತ ರದ್ದುಗೊಂಡಿರುವವರು ಫಾರಂ-6 ಸಲ್ಲಿಸಲು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಹಲವು ಬಾರಿ ಮತದಾನ ಮಾಡಿರುವವರಿಗೆ ಈ ಮಾಹಿತಿ ನೀಡುವಂತಿಲ್ಲ ಎಂಬ ಅಂಶ ಚುನಾವಣಾ ಆಯೋಗದ ಕೈಪಿಡಿಯಲ್ಲಿದೆ. ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿಲ್ಲ ಎಂಬ ಅನುಮಾನ ಕಾಡುತ್ತಿದೆ ಎಂದು ಅಪಾದಿಸಿದರು. ರಾಜ್ಯದಲ್ಲಿ 5.54 ಕೋಟಿ ಮತದಾರರ ಮಾಹಿತಿಯನ್ನು ಒಂದು ತಿಂಗಳಲ್ಲಿ ಪಡೆದುಕೊಳ್ಳಲು ಸಾಧ್ಯವೇ? ಬಿಎಲ್ಒಗಳ ಮೇಲೆ ಒತ್ತಡ ಹೇರಿ ತರಾತುರಿಯಲ್ಲಿ ಪರಿಷ್ಕರಣೆ ಮಾಡಿಸುವ ಅತುರತೆಯೇನಿತ್ತು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಎಸ್ಐಆರ್ ನಡೆಸಲಾಗುತ್ತದೆ ಎಂದು ಆರು ತಿಂಗಳ ಮುಂಚೆಯೇ ಯಾಕೆ ಮಾಹಿತಿ ನೀಡಿಲ್ಲ. ಅಭಿಯಾನ ನಡೆಸಿ ಸ್ಥಳಾಂತರಗೊಂಡಿದ್ದಾರೆ ಎಂದು ನೆಪ ತೋರಿಸಲಾಗಿದೆ. ಅವರ ಮತ ಯಾವ ಸ್ಥಳದಲ್ಲಿದೆ ಎಂದು ಖಚಿತಪಡಿಸಿಕೊಳ್ಳುವಂತಿಲ್ಲವೇ ಎಂದರು.