ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ಸಿಕ್ಕನ್ನು ಪರಿಹರಿಸಲು ಸರ್ಕಾರ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಸಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹೆಬ್ಬಾಳ ಕೆರೆಕೋಡಿಯಿಂದ ಪಶುವೈದ್ಯಕೀಯ ಕಾಲೇಜ್‌ವರೆಗೆ ಜೋಡಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಭಾನುವಾರ ಮಾತನಾಡಿದರು.
ಎರಡೂ ದಿಕ್ಕಿನಲ್ಲೂ ತಲಾ 3 ಪಥವುಳ್ಳ ಜೋಡಿ ಸುರಂಗ ಮಾರ್ಗವು 2.2 ಕಿ.ಮೀ. ಉದ್ದವಿರಲಿದೆ. ಈ ಟನಲ್ ಕಟ್ ಆ್ಯಂಡ್ ಕವರ್ ಮಾದರಿಯಲ್ಲಿದ್ದು, ಟೋಲ್ ಮುಕ್ತ ಆಗಿರಲಿದೆ. 18 ತಿಂಗಳಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಅವಕಾಶ ಸಿಕ್ಕಾಗ ಜನಪರ ಕೆಲಸ:
ಯಾರಿಗಾದರು ಅವಕಾಶ ಸಿಕ್ಕಾಗ ಜನಪರ ಕೆಲಸ ಮಾಡಬೇಕು. ನಾವ್ಯಾರು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಕೆಂಪೇಗೌಡರು ಇಲ್ಲದಿದ್ದರೂ, ಅವರ ಕೆಲಸಗಳು ಉಳಿದಿವೆ. ಎಸ್.ಎಂ. ಕೃಷ್ಣ ಅವರ ಹೆಸರಿನಲ್ಲಿ ದಶಪಥ ರಸ್ತೆ ಉದ್ಘಾಟಿಸಿದ್ದು, ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಅನ್ನು ಬೆಂಗಳೂರು ಬಿಜಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರನಾಮಕರಣ ಮಾಡಿ ಹೊಸ ಯೋಜನೆ ಕೈಗೆತ್ತಿಕೊಂಡಿದ್ದೇವೆ. 2006ರಲ್ಲಿಯೇ ಈ ಯೋಜನೆ ಮಾಡಿದ್ದರೆ 2-3 ಸಾವಿರ ಕೋಟಿಗೆ ಮುಗಿಯುತ್ತಿತ್ತು. ಈಗ 24 ಸಾವಿರ ಕೋಟಿ ರೂ.ಗೆ ಹಿಗ್ಗಿದೆ. ಯೋಜನೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಒಳ್ಳೆಯ ಪರಿಹಾರವಾಗಿ ಟಿಡಿಆರ್, ಎಫ್ಎಆರ್ ನೀಡಲಾಗಿದೆ. ಬಿಬಿಸಿ ರಸ್ತೆ 123 ಕಿ.ಮೀ. ಉದ್ದ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಜನರ ಸಮಯ ಉಳಿಸಬೇಕು:
ಹೆಬ್ಬಾಳದಿಂದ ರೇಷ್ಮೆ ಮಂಡಳಿವರೆಗೆ 17 ಕಿ.ಮೀ. ಉದ್ದದ ಟನಲ್ ಯೋಜನೆ ಕೈಗೆತ್ತಿಕೊಳ್ಳಲಿದ್ದು, 3-4 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಟನಲ್ ರಸ್ತೆಯಲ್ಲಿ ದುಡ್ಡು ಕೊಟ್ಟು ಹೋಗುವವರು ಹೋಗುತ್ತಾರೆ, ನಿಮಗೇನು ತೊಂದರೆ ಎಂದು ಕೇಳುವೆ. ಟನಲ್‌ನಿಂದ ಜನರ ಸಮಯ ಉಳಿಯುತ್ತದೆ. ಹಿಡಿದ ಕೆಲಸವನ್ನು ಮಾಡಬೇಕು. ಜನರ ಸಮಯ ಉಳಿಸುವುದು ಮುಖ್ಯ ಎಂದು ಸಿಎಂ ಅವರು ವಿರೋಧ ಪಕ್ಸದವರ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ತುಷಾರ್ ಗಿರಿನಾಥ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಆಯುಕ್ತ ಪಿ.ಮಣಿವಣ್ಣನ್, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಹಾಗೂ ಇತರರಿದ್ದರು.
ಟೀಕೆ ಮಾಡಿದಷ್ಟು ಎಚ್ಚರಿಕೆಯಿಂದ ಇರಬೇಕು:
ರಾಜಧಾನಿಯಲ್ಲಿ 1.40 ಕೋಟಿ ಜನಸಂಖ್ಯೆ ಇದ್ದಉ 1.35 ಕೋಟಿ ವಾಹನಗಳಿವೆ. ಇಡೀ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಕೂಡ ಇದೆ. ಅದನ್ನು ಬಗೆಹರಿಸುವ ಕೆಲಸವನ್ನು ಯಾರಾದರೂ ಮಾಡಿದ್ದರೇ? ನಾನು ಸಿಎಂ ಆದ ತಕ್ಷಣ ವಿರೋಧ ಪಕ್ಷದ ನಾಯಕರು 10 ಸಾವಿರ ಕೋಟಿ ಲಂಚ ಹೊಡೆದಿದ್ದೇನೆಂದು ಆರೋಪಿಸಿದರು. ಇನ್ನೂ ಟೆಂಡರ್ ಆಗಿಲ್ಲ, ಯಾವುದೂ ತೀರ್ಮಾನ ಆಗಿಲ್ಲ. ಯಂತ್ರೋಪಕರಣಗಳಿಗೆ 4-5 ಸಾವಿರ ಕೋಟಿ ಆಗಬಹುದು. ಆದರೆ 10 ಸಾವಿರ ಕೋಟಿ ಎಂದು ಟೀಕೆ ಮಾಡಿದರು. 10 ಸಾವಿರ ಕೋಟಿ ಇಡಲು 20 ದೊಡ್ಡ ಶೆಡ್ ಬೇಕಾಗಬಹುದೇನೋ. ವಿಪಕ್ಷದವರು ಟೀಕೆ ಮಾಡಿದಷ್ಟೂ ನಾವು ಎಚ್ಚರಿಕೆಯಿಂದ ಇರಬೇಕು. ಅವರ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಸುರಂಗ ಉದ್ದ: 2.22 ಕಿ.ಮೀ., ಎರಡೂ ದಿಕ್ಕಿನಲ್ಲಿ ತಲಾ 3 ಪಥ
ಯೋಜನೆ ವೆಚ್ಚ: 1,139 ಕೋಟಿ ರೂ.
ಕಾಮಗಾರಿ ಗಡುವು: 18 ತಿಂಗಳು
ಗುತ್ತಿಗೆ ಕಂಪನಿ: ಹೈದರಾಬಾದ್ ಮೂಲದ ರಿತ್ವಿಕ್ ಪ್ರಾಜೆಕ್ಟ್ಸ್ ಲಿ.
60 ಅಡಿ ಆಳದಲ್ಲಿ ಸುರಂಗ ಹಾದುಹೋಗಲಿದೆ
2ನೇ ಹಂತದ ಕಾಮಗಾರಿ:
ಪಶುವೈದ್ಯಕೀಯ ಕಾಲೇಜ್‌ನಿಂದ ಮೇಖ್ರಿ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣ
ಮೇಲ್ಸೇತುವೆ ಉದ್ದ: 1.5 ಕಿ.ಮೀ. (ಎರಡೂ ದಿಕ್ಕಿನಲ್ಲಿ ತಲಾ 3 ಪಥ)
ಯೋಜನಾ ವೆಚ್ಚ: 440 ಕೋಟಿ ರೂ.
ಹಣ ಹೂಡಿಕೆ: ಬಿಡಿಎ
"
ಬೆಂಗಳೂರಿನ ಆಡಳಿತದ ಮೇಲಿನ ಒತ್ತಡ ತಗ್ಗಿಸಲು 5 ಪಾಲಿಕೆಗಳನ್ನು ಮಾಡಿದ್ದು ನನ್ನ ಒಬ್ಬನ ತೀರ್ಮಾನ ಅಲ್ಲ. ವಿರೋಧ ಪಕ್ಷದವರ ಸಲಹೆ ಪಡೆದೇ ಮುಂದುವರಿದಿದ್ದೇವೆ. ಯಲಹಂಕ, ಕೆಂಗೇರಿ ಸೇರಿ ಇತರ ಟೌನ್‌ಶಿಪ್‌ಗಳನ್ನು ಅವರೇ ರೂಪಿಸಿದ್ದು, ಆದರೀಗ ನಾನು ಬೇರೆನೋ ಮಾಡುತ್ತಿದ್ದಾನೆಂದು ಹುಯಿಲೆಬ್ಬಿಸುತ್ತಿರುವುದು ಸರಿಯಲ್ಲ.